ರಾಮನ ಲೆಕ್ಕ ಕೃಷ್ಣನ ಲೆಕ್ಕ - ಕಂಪೆನಿ ಪುಸ್ಕ!

ರಾಮನ ಲೆಕ್ಕ ಕೃಷ್ಣನ ಲೆಕ್ಕ - ಕಂಪೆನಿ ಪುಸ್ಕ!

ಬರಹ

ಸತ್ಯಂ ಗುಳೇ ಎದ್ದಿದೆ - ಲಕ್ಷಾಂತರ ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತಿದ್ದಾರೆ. ಆದರೆ ಅದರ ಮಾಲಿಕರು ಕೈ ಎತ್ತಿದ್ದಾರೆ! ಪ್ರಾಮಾಣಿಕತೆ, ನೈತಿಕತೆ ಬಿಟ್ಟರೆ ಒಂದಲ್ಲ ಒಂದು ದಿನ ಆಗುವುದು ಹೀಗೆಯೇ ಎನ್ನುವುದಕ್ಕೆ ಸತ್ಯಂ ಸಾಕ್ಷಿ. ಅವರು ಹೋದರೆ ಹೋಗಲಿ - ಆ ಕಂಪೆನಿಯಲ್ಲಿ ಹಣ ತೊಡಗಿಸಿಕೊಂಡವರ ಗತಿ ಏನು? "ಶೇರು ಪೇಟೆಯ ಉಸಾಬಾರಿ ನಮಗಿಲ್ಲ - ಹಾಗಾಗಿ ನಾವು ಇಂಥದ್ದೆಲ್ಲದರಿಂದ ದೂರ ಮಾರಯರೇ" ಎಂದರೆ ಅದೂ ಸಾಧ್ಯವಾಗದು. ಏಕೆಂದರೆ ನಾವು ತೊಡಗಿಸಿದ ಬ್ಯಾಂಕು, ಜೀವವಿಮೆಗಳು ಕೂಡ ಇಂಥ "ನಿಷ್ಟೆಯ" ಮುಂಚೂಣಿಯ ಕಂಪೆನಿಯಲ್ಲಿ ಹಣ ತೊಡಗಿಸಿ ಒಂದಷ್ಟನ್ನು ನಮಗೆ ಕೊಡುತ್ತವೆ. ನನಗೆ ಬ್ಯಾಂಕಿನ ವ್ಯವಹಾರವೇ ಇಲ್ಲ ಎನ್ನುವವರು ವರ್ತಮಾನ ಲೋಕದಲ್ಲಿ ಯಾರೂ ಇರಲಾರರು.
ಕಂಪೆನಿಗಳು ಎಷ್ಟೊಂದು ದಗಲ್ಬಾಜಿಗಳಾಗುತ್ತಿವೆ! ಒಂದು ಕಡೆ ಕೃಷ್ಣನ ಲೆಕ್ಕ. ಮತ್ತೊಂದೆಡೆ ರಾಮನ ಲೆಕ್ಕ. ಈ ಲೆಕ್ಕಗಳ ಮಧ್ಯೆ ಕಂಪೆನಿ ಪುಸ್ಕ ! ಸತ್ಯಂ ಆದದ್ದು ಹೀಗೆಯೇ. ಒಂದು ಸಮಾಧಾನ - ಏಳು ವರ್ಷಗಳಿಂದ ಸುಳ್ಳು ಲೆಕ್ಕ ಕೊಟ್ಟು ರೊಕ್ಕ ಎಗರಿಸಿದ್ದೇನೆಂದು ಸತ್ಯಂ ಮಾಲಿಕರು ಸತ್ಯ ಹೇಳಿದ್ದಾರೆ! ಬಿಸೆನೆಸ್ ಮ್ಯಾನೇಜ್ಮೆಂಟ್ ಹೆಹ್ಚು ಕಲಿತದ್ದರಿಂದ ಇದು ಸಾಧ್ಯವಾಗಿರಬಹುದೇ? ಖೋತಾ ಬಜೆಟ್ ಇದ್ದರೂ ಆದಾಯವಿದೆ ಎನ್ನುತ್ತ ಬಂದ ಸತ್ಯಂ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಯಿತು. ಹೂಡಿಕೆ ದಾರರಿಗೆ ಖುಷಿ. ಶೇರು ಪೇಟೆಯಲ್ಲಿ ಶೇರು ಬೆಲೆ ಏರಿದ್ದೇ ಏರಿದ್ದು. ನೀರ ಮೇಲಣ ಗುಳ್ಳೆ - ನಿಜವಲ್ಲೋ ಹರಿಯೇ? ಎನ್ನುವುದು ಮತ್ತೆ ಸತ್ಯವಾಗುತ್ತಿದೆ.
ಇದು ನೂರಕ್ಕೆ ನೂರು ಸತ್ಯಂ ಒಂದೇ ಕಂಪೆನಿಯ ಕಥೆಯಲ್ಲ. ಇಂಥ ಮಹಾ ಮೋಸಗಾರ ತಿಮಿಂಗಿಲಗಳು ಎಷ್ಟಿವೆಯೋ? ವಿಶ್ವಾಸಕ್ಕೆ ಪಾತ್ರವಾದ ಬ್ಯಾಂಕುಗಳ ನಿಜ ಲೆಕ್ಕಪತ್ರ ಗುಪ್ತವಾಗಿದ್ದು - ರಂಗುರಂಗಿನ ಲೆಕ್ಕ ಪತ್ರಗಳು ಮಂಡನೆಯಾಗುತ್ತಿರಬಹುದು ಎನ್ನುವ ಗುಮಾನಿ ಬಂದರೆ ನಮ್ಮ ಸ್ವಾಸ್ಥ್ಯ ಸರಿ ಇದೆ ಎಂದೇ ಅರ್ಥ. ಹಾಗಾಗಿಯೇ ಹೇಳಿದ್ದು "ಅವರಿವರ ನಂಬುಗೆಯ ಮೇಲೆ ಬಾಳ ನೌಕೆ ಕಟ್ಟಬೇಡ" ಆದರೂ ಎಲ್ಲೋ ಒಂದು ಕಡೆ ಇಂಥ ನಂಬಿಕೆ ಬೇಕಾಗುತ್ತದೆ. ಅದು ಗೊತ್ತು - ಇಂಥ ಕಪಟಿಗಳಿಗೆ, ಮೋಸಗಾರ ಮಂದಿಗಳಿಗೆ.