ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
ಬರಹ
ನಾ ದೇವನಲ್ಲದೆ ನೀ ದೇವನೇ
ನೀ ದೇವರಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ
ನಾನೇ ದೇವರೇ ಹೊರತು ನೀನು ದೇವರಲ್ಲ. ನೀನು ದೇವರಾದರೆ ನನ್ನನ್ನು ಯಾಕೆ ಸಲಹುವುದಿಲ್ಲ? ನಿನಗೆ ಒಂದಿಷ್ಟು ನೀರೆರೆದು ಪ್ರೀತಿಯಿಂದ ಸ್ನಾನ ಮಾಡಿಸುವವನು ನಾನು, ಹಸಿವಾದಾಗ ನಿನಗೆ ತುತ್ತು ಅನ್ನ ನೀಡುವವನು ನಾನು. ನಾನೇ ದೇವರು.
ಈ ವಚನವನ್ನು ನಾಲ್ಕು ಥರದಲ್ಲಿ ಅರ್ಥಮಾಡಿಕೊಳ್ಳಬಹುದು ಅನ್ನಿಸುತ್ತದೆ. “ಹೋಗಯ್ಯಾ, ನೀನೆಂಥ ದೇವರು, ನಿನ್ನನ್ನು ನಾನು ಸಲಹುತ್ತಿದ್ದೇನೆಯೇ ಹೊರತು ನೀನು ನನ್ನನ್ನು ಸಲಹುತ್ತಿಲ್ಲ” ಅನ್ನುವ ಧೋರಣೆ ಇದ್ದೀತು.
ಅಥವಾ “ನಿನ್ನನ್ನು ನಾನೇ ಕಾಪಾಡಬೇಕಾಗಿ ಬಂದಿದೆಯಲ್ಲ, ನನ್ನನ್ನು ಕಾಪಾಡದ ನೀನು ದೇವರೇ?” ಅನ್ನುವ ಛಾಲೆಂಜ್ ಇರಬಹುದು.
ಅಥವಾ ಎರಡು ಮತ್ತು ಮೂರನೆಯ ಸಾಲುಗಳನ್ನು ಗಮನಿಸಿದರೆ ಯಾರಿಗೆ ಹಸಿವಾದರೆ, ಯಾರಿಗೆ ಬೇಕಾದರೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ನನಗೆ ಬೇಕೆಂದು ನಿನಗೆ ಸ್ನಾನ ಮಾಡಿಸುವೆ, ನನಗೆ ಹಸಿವಾದರೆ ನಿನಗೆ ಉಣಬಡಿಸಿ ನಾನು ಉಣುವೆ ಅನ್ನುವ ಅರ್ಥ ಇದ್ದೀತೆ ಅನ್ನಿಸಿ ದೇವರ ಕಲ್ಪನೆ ಮನುಷ್ಯನ ಮನಸ್ಸಿನಲ್ಲಿ ಮೂಡಿದ್ದು, ಆದ್ದರಿಂದ ದೇವರ ಕಲ್ಪನೆಯನ್ನು ಮೂಡಿಸಿಕೊಂಡ ಮನುಷ್ಯನೇ ದೇವರಿಗಿಂತ ಮಿಗಿಲು ಅನ್ನುವ ಅರ್ಥ ಹೊಳೆದೀತು.
ಇನ್ನೂ ಒಂದು ಸಾಧ್ಯತೆ ಎಂದರೆ ನಾನು ಕಲ್ಪಿಸಿಕೊಂಡ, ಆದ್ದರಿಂದಲೇ ನನ್ನೊಳಗಿರುವ ದೇವರು ಮತ್ತು ಹಾಗೆ ಕಲ್ಪಿಸಿಕೊಂಡ ನಾನು ಬೇರೆ ಬೇರೆ ಅಲ್ಲವೇ ಅಲ್ಲ ಅನ್ನುವ ಅರ್ಥವೂ ಇದ್ದೀತು.
ನೀನು ದೇವರೇ ಅನ್ನುವ ಅರ್ಥವಾದರೆ ಮನುಷ್ಯನ ಆತ್ಮವಿಶ್ವಾಸದ ಮಾತಾಗಿ ಕೇಳುತ್ತದೆ. ಛಾಲೆಂಜ್ ಅಂದುಕೊಂಡರೆ ಮನುಷ್ಯನ ವಿಶ್ವಾಸದ ಅತಿರೇಕವಾಗಿ ಕಾಣುವುದೂ ಉಂಟು. ನನಗೆ ಬೇಕೆಂದು ನಿನಗೆ ಉಣಿಸುವೆ ಇತ್ಯಾದಿಯಾಗಿ ಅರ್ಥಮಾಡಿಕೊಂಡರೆ ದೇವರ ಕಲ್ಪನೆ ಮನುಷ್ಯನಿಗೆ ಅನಿವಾರ್ಯ ಅನ್ನಿಸೀತು. ಇನ್ನು ನಾಲ್ಕನೆಯ ಅರ್ಥವೇ ಸರಿ ಎಂದುಕೊಂಡರೆ ಪ್ರತಿಯೊಬ್ಬರೊಳಗೂ ಇರುವ ದೈವತ್ವವನ್ನು ಕುರಿತ ಮಾತು ಅನ್ನಿಸೀತು.