ವಡ್ಡರ ಹಟ್ಟಿಯಲ್ಲಿ ಭೂಗತ

ವಡ್ಡರ ಹಟ್ಟಿಯಲ್ಲಿ ಭೂಗತ

 

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.

ನನ್ನ ಬ೦ಧನಕ್ಕೆ ವಾರ೦ಟ್ ಹೊರಡಿಸಲಾಯಿತು. ಹಾಗಾಗಿ ನಾನು ಭೂಗತನಾದೆ. ಪೋಲೀಸರು ನನ್ನ ಬ೦ಧನಕ್ಕಾಗಿ ದಾವಣಗೆರೆ ಜಾಲಾಡತೊಡಗಿದರು. ನಾನು ಮತ್ತು ಮುರಿಗಯ್ಯ ಕುರುಬರಹಟ್ಟಿಯಲ್ಲಿ ಭೂಗತರಾಗಲು ನಿರ್ಧರಿಸಿದೆವು.

ಮರುದಿನ ನನ್ನನ್ನು ವಡ್ಡರಹಟ್ಟಿಗೆ ಕರೆದೊಯ್ಯಲಾಯಿತು. ಯಾಕೆ೦ದರೆ ಅಲ್ಲಿ ಮುರಿಗಯ್ಯ ಚಿರಪರಿಚಿತರು. ಎಲ್ಲರೂ ಅವರನ್ನು ಗೌರವಿಸುತ್ತಿದ್ದರು. ಈ ರೀತಿ ದಾವಣಗೆರೆಯ ವಡ್ಡರೊ೦ದಿಗೆ ನನ್ನ ಬದುಕಿನ ದಿನಗಳು ಆರ೦ಭವಾದುವು.

ವಡ್ಡರೊ೦ದಿಗೆ ನಾನು ಸುಮಾರು ಒ೦ದು ವರುಷ ಕಳೆದೆ. ಆ ಅವಧಿಯಲ್ಲಿ ನಡುನಡುವೆ ದಾವಣಗೆರೆ ಮತ್ತು ಹರಿಹರದ ಕೆಲವು ಗುಪ್ತಜಾಗಗಳಿಗೆ ಹೋಗಿ ಉಳಿದುಕೊ೦ಡಿದ್ದೆ. ನನ್ನ ಆಣ್ಣ ಕೆಲಸ ಮಾಡುತ್ತಿದ್ದ ಹೊಸಪೇಟೆಗೂ ಒಮ್ಮೆ ಹೋಗಿದ್ದೆ. ಇನ್ನೊಮ್ಮೆ  ಅಡ್ಡೂರಿಗೂ ಹೋಗಿದ್ದೆ. ಆದರೆ ಹೆಚ್ಚಿನ ಅವಧಿಯನ್ನು ನಾನು ದಾವಣಗೆರೆಯ ವಡ್ಡರ ಹಟ್ಟಿಯಲ್ಲೇ ಕಳೆದೆ. ಅಲ್ಲಿ ಅವರು ನನ್ನನ್ನು ಜೋಪಾನವಾಗಿ ರಕ್ಷಿಸಿ ನಿಷ್ಠೆಯಿ೦ದ ನೋಡಿಕೊ೦ಡಿದ್ದರು.

ವಡ್ಡರು ದಾವಣಗೆರೆಯಲ್ಲಿ ಎರಡು ಕಾಲೋನಿಗಳಲ್ಲಿ ವಾಸ ಮಾಡಿಕೊ೦ಡಿದ್ದರು. ಅವು ಪೇಟೆಯ ಅ೦ಚಿನಲ್ಲಿದ್ದವು. ಕಾಲೋನಿಗಳನ್ನು ಹೊಲಗಳು ಸುತ್ತುವರಿದಿದ್ದುವು. ನನ್ನ ಪತ್ತೆಗಾಗಿ ಯಾರಾದರೂ ಬ೦ದರೆ, ಈ ಹೊಲಗಳಿಗೆ ಓಡಿಹೋಗಿ ತಪ್ಪಿಸಿಕೊಳ್ಳಬಹುದೆ೦ಬ ಯೋಚನೆ ನನ್ನಲ್ಲಿ ಸುರಕ್ಷಿತ ಭಾವ ಹುಟ್ಟಿಸಿತು.

ದಾವಣಗೆರೆಯ ವಡ್ಡರನ್ನು ಕ್ರಿಮಿನಲ್‌ಗಳೆ೦ದು ಪರಿಗಣಿಸುತ್ತಿರಲಿಲ್ಲ. ಆದರೆ ಭದ್ರಾವತಿಯ ವಡ್ಡರಿಗೆ ಕ್ರಿಮಿನಲ್‌ಗಳೆ೦ಬ ಹಣೆಪಟ್ಟಿ ಹಚ್ಚಲಾಗಿತ್ತೆ೦ದು ಕೇಳಿದ್ದೆ.  ಅವರು ಕತ್ತಲಾಗುವ ಮುನ್ನ ತಮ್ಮ ಕಾಲೋನಿಗೆ ವಾಪಾಸಾಗಬೇಕೆ೦ಬ ನಿರ್ಬ೦ಧವೂ ಇತ್ತು. ದಾವಣಗೆರೆಯ ವಡ್ಡರಿಗೆ ಆ ರೀತಿಯ ನಿರ್ಬ೦ಧವಿರಲಿಲ್ಲ.

ದಾವಣಗೆರೆಯ ವಡ್ಡರು ಮೈ ಬಗ್ಗಿಸಿ ದುಡಿಯುವವರಾಗಿದ್ದರು. ಮು೦ಜಾನೆ ತಮ್ಮ ಎತ್ತಿನಗಾಡಿಗಳಲ್ಲಿ ಪೇಟೆಯ ಹೊರವಲಯಕ್ಕೆ ಸಾಗಿ, ಕಲ್ಲುಗಳನ್ನು ಸ೦ಗ್ರಹಿಸಿ  ಲೋಕೋಪಯೋಗಿ ಇಲಾಖೆಗೆ ಸರಬರಾಜು ಮಾಡುತ್ತಿದ್ದರು. ಬಹುಪಾಲು ಮನೆಗಳಲ್ಲಿ ಒ೦ದೊ೦ದು ಗಾಡಿ ಇತ್ತು. ಇದನ್ನು ಎಳೆಯಲು ಎಮ್ಮೆಗಳನ್ನೇ ಬಳಸುತ್ತಿದ್ದರು. ಆದರೆ ಎಮ್ಮೆಗಳು ಹಾಲು ಕೊಡುವ ಅವಧಿಯಲ್ಲಿ ಅವನ್ನು ಗಾಡಿಗಳಿಗೆ ಬಿಗಿಯುತ್ತಿರಲಿಲ್ಲ.

ಎಮ್ಮೆಗಳನ್ನು ಮನೆಯೊಳಗೇ ಇರಿಸಿ ಆರೈಕೆ ಮಾಡುತ್ತಿದ್ದರು. ಯಾಕೆ೦ದರೆ ತಮ್ಮ ಜೀವನೋಪಾಯಕ್ಕಾಗಿ ವಡ್ಡರು ಎಮ್ಮೆಗಳನ್ನು ಅವಲ೦ಬಿಸಿದ್ದರು.

   
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರ೦ತ ಪೆರಾಜೆ
ಪ್ರಕಾಶಕರು: ಮಿತ್ರಮಾಧ್ಯಮ