ವರಮಹಾಲಕ್ಷ್ಮಿ ವ್ರತ..
ವರಮಹಾಲಕ್ಷ್ಮಿ ವ್ರತ
ಮಾಡುವ ಬಾ ನಮಿಸುತ
ಬೆಳ್ಳಿ ಬಂಗಾರದ ಗುಡಿ ಕಲಶವಿಟ್ಟು
ಕಾಸಿನಹಾರ ಧರಿಸಿ ಮಾವಿನೆಲೆ ತೊಟ್ಟು ||
ತೋರಿಬಿಡೆಲ್ಲಾ ಸಂಪದ
ಐಶ್ವರ್ಯಗಳೆಲ್ಲಾ ಸರಹದ್ದ
ಬೆಕ್ಕಸ ಬೆರಗಾಗುವಂತೆ ಅತಿಥಿ
ಬೆಚ್ಚಿ ಬೀಳಿಸುವಂತಿರಬೇಕೆಂತೆ ಪ್ರತೀತಿ ||
ಬರುವಳೇನು ಲಕುಮಿ ?
ಕಣ್ಕಾಣಿಸಿಕೊಳುವಳೆ ಮಾಮಿ ?
ಹೇರಲಿ ಬಿಡಲಿ ಜನ ಒಡವೆ ಗಿಡವೆ
ಸಿರಿವಂತೆಯವಳಿಗ್ಯಾವುದರದೆ ಗೊಡವೆ ? ||
ಹುಚ್ಚು ಜನರ ತತ್ವ
ಸಿರಿಯೆಂತಲ್ಲಿ ಮಹತ್ವ ?
ಕೊಟ್ಟವಳಿಗೆ ಕೊಟ್ಟು ಅಮಿಷ
ಹೆಚ್ಚೆಚ್ಚು ಬೇಡುವ ಖದೀಮ ನಶಾ ||
ನಿರಾಡಂಬರ ಪೂಜೆ
ಊದುಬತ್ತಿ ಕರ್ಪೂರ ಸಜ್ಜೆ
ಹೂವೆರಡೆಸಳು ಭಕ್ತಿ ನೊಸಲು
ಜತೆಗಿದ್ದರೆ ಸಾಕು ತಾಯಿ ಹರಸಲು ||
-------------------------------------------------------------------------------------
ನಾಗೇಶ ಮೈಸೂರು
-------------------------------------------------------------------------------------
Comments
ಉ: ವರಮಹಾಲಕ್ಷ್ಮಿ ವ್ರತ..
ನಮಸ್ಕಾರಗಳು ಸರ್,
ಮನದೊಳಗಿನ ಭಕ್ತಿಯ ಪೂಜೆಗೆ ಮನಶ್ಶುದ್ಧಿ ಇದ್ದರೆ ಸಾಕು, ದೇವರು ನಮ್ಮ ಬೇಡಿಕೆಗಳನ್ನು ತಾನಾಗಿಯೇ ಈಡೇರಿಸುತ್ತಾನೆ ಅದಕ್ಕೆ ಆಡಂಬರದ ಪೂಜೆಯ ಅವಶ್ಯಕತೆ ಇಲ್ಲ ಎಂದು ನನ್ನ ಅನಿಸಿಕೆ.
ವರಮಹಾಲಕ್ಷ್ಮಿ ಹಬ್ಬದ ಶುಭಾಷಯಗಳು.
ಧನ್ಯವಾದಗಳು
In reply to ಉ: ವರಮಹಾಲಕ್ಷ್ಮಿ ವ್ರತ.. by ravindra n angadi
ಉ: ವರಮಹಾಲಕ್ಷ್ಮಿ ವ್ರತ..
ರವೀಂದ್ರರೆ ನಮಸ್ಕಾರ ಮತ್ತು ಧನ್ಯವಾದಗಳು. ವರಲಕ್ಷ್ಮಿ ವ್ರತದ ಶುಭಾಶಯಗಳು.. .. ನಿಮ್ಮ ಮಾತು ನಿಜ.. ಸಂಪತ್ತಿಗೊಡೆಯಳಾದ ಲಕ್ಷ್ಮಿದೇವಿಯನ್ನು ನಶ್ವರವಾದ ಭೌತಿಕ ಐಶ್ವರ್ಯಕ್ಕಿಂತ ಸರಳವಾದ ಶ್ರದ್ಧೆಭಕ್ತಿಯೊಲುಮೆಗಳ ಐಶ್ವರ್ಯದಿಂದ ಒಲಿಸಿಕೊಳ್ಳಲೆತ್ನಿಸುವುದು ಸಮಂಜಸ. ಆದರೆ ದೇವರ ಮನಸ್ಸನ್ನು ತಮ್ಮ ಮನಸಿನಂತೆಯೆ ಪರಿಗಣಿಸಿ ನಡೆದುಕೊಳ್ಳುವ ಜನರಿಗೆ ಆ ಅರಿವು ಇರಬೇಕಲ್ಲ?
ಉ: ವರಮಹಾಲಕ್ಷ್ಮಿ ವ್ರತ..
ನಾಗೇಶರೆ,
ನಾನು ಸಹ ನಿಮ್ಮ ಹಾಗೇ ನಿರಾಡಂಬರ ಪೂಜೆ ಮಾಡುತ್ತಾ ಇದ್ದೆ,ಇದ್ದೇನೆ..... ಇದೆಲ್ಲಾ ಥಿಯರಿ. ಪ್ರಾಕ್ಟಿಕಲ್ ಬೇರೆಯೇ... :)
ಹಾಗೇ ಲಕ್ಷ್ಮಿ ಬಗ್ಗೆ ನಮ್ಮ"ಸಪ್ತಗಿರಿ ಬರೆದ ಕವನ" ನೀವು ನೋಡಿರಲಿಕ್ಕಿಲ್ಲ- ನೋಡಿ ಆನಂದಿಸಿ- http://bit.ly/1UftFUp
In reply to ಉ: ವರಮಹಾಲಕ್ಷ್ಮಿ ವ್ರತ.. by ಗಣೇಶ
ಉ: ವರಮಹಾಲಕ್ಷ್ಮಿ ವ್ರತ..
ಗಣೇಶ್ ಜಿ ನಮಸ್ಕಾರ.. ನಮ್ಮ ಥಿಯರಿ ಎಷ್ಟೆ ಇದ್ದರು ಪ್ರಾಕ್ಟಿಕಲ್ಲಾಗಿ ನಡೆಸೋದು "ಗೃಹ ಲಕ್ಷ್ಮಿ" ಯರ ಮರ್ಜಿಯನುಸಾರವೆ ಬಿಡಿ. ನಾವಂದುಕೊಂಡ ಹಾಗೆ ಆಚರಿಸಿದೆವು (ಬರಿ ನಾವು ಮಾತ್ರ) ಅಂತ ಮನದಲ್ಲಿಯೆ ಅಂದುಕೊಂಡು ಖುಷಿ ಪಡೋದಷ್ಟೆ ನಮ್ಮ ಪಾಲಿಗೆ :-)
ಅಂದ ಹಾಗೆ ಸಪ್ತಗಿರಿಗಳ ಬರಹದ ಲಿಂಕ್ ಯಾಕೊ ಕೆಲಸ ಮಾಡುತ್ತಿಲ್ಲ.. ಆ ಬರಹದ ಹೆಸರು ಕೊಡಿ ಸಂಪದದ ಸರ್ಚಿನಲ್ಲಿ ಹುಡುಕಿ ನೋಡುತ್ತೇನೆ..
ಉ: ವರಮಹಾಲಕ್ಷ್ಮಿ ವ್ರತ..
ಪ್ರತಿಕ್ರಿಯೆಗಳು, ಸಪ್ತಗಿರಿಯವರ ಕವನ ನಿಮ್ಮ ಬರಹಕ್ಕೆ ಪೂರಕವಾಗಿವೆ, ಮೆರುಗು ಹೆಚ್ಚಿಸಿವೆ. ಧನ್ಯವಾದಗಳು.
ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ|| (ಯಜು.೪೦.೧೬.)
ಭಾವಾರ್ಥ:
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಶತ ವಂದನೆ ||
In reply to ಉ: ವರಮಹಾಲಕ್ಷ್ಮಿ ವ್ರತ.. by kavinagaraj
ಉ: ವರಮಹಾಲಕ್ಷ್ಮಿ ವ್ರತ..
ಕವಿಗಳೆ ನಮಸ್ಕಾರ ಮತ್ತು ತಮ್ಮ ಪಾಂಡಿತ್ಯ ಪೂರ್ಣ ಪ್ರತಿಕ್ರಿಯೆ ಹಾಗು ಭಾವಾರ್ಥ ಸಹಿತದ ಅರ್ಥಗರ್ಭಿತ ಶ್ಲೋಕದ ಸಾಲುಗಳಿಗೆ ಅನಂತ ಧನ್ಯವಾದಗಳು. ತನ್ಮೂಲಕ ವಿದ್ಯಾಲಕ್ಷ್ಮಿಯ ಸ್ವರೂಪಳೂ ಆದ ಮಹಾಲಕ್ಷ್ಮಿಗೆ ಇದೊಂದು ರೀತಿಯ ಸೇವೆ, ಪೂಜೆ ಮಾಡಿದ ಹಾಗೆಯೆ ಲೆಕ್ಕ!
ಉ: ವರಮಹಾಲಕ್ಷ್ಮಿ ವ್ರತ..
ನಾಗೇಶ ಮೈಸೂರುರವರಿಗೆ ವಂದನೆಗಳು
ವರಮಹಾಲಕ್ಷ್ಮೀ ಕವನ ಒಂದು ಸಕಾಲಿಕ ರಚನೆ, ನಿಮ್ಮ ಕವನ ನನ್ನನ್ನು ನನ್ನ ಬಾಲ್ಯಕ್ಕೆ ಎಳೆದೊಯ್ದಿತು, ಗ್ರಾಮದಲ್ಲಿ
ಎಲ್ಲ ಹೆಂಗಳೆಯರು ಒಂದೆಡೆ ಸೇರಿ ಆಚರಿಸುತ್ತಿದ್ದ ನೆನಪು ಬಂತು ಕವನದ ಕೊನೆಯ ನುಡಿ ಮನ ಮುಟ್ಟುವಂತಿದೆ, ಒಳ್ಳೆಯ ಕವನ ನೀಡಿದ್ದೀರಿ ಧನ್ಯವಾದಗಳು.
In reply to ಉ: ವರಮಹಾಲಕ್ಷ್ಮಿ ವ್ರತ.. by H A Patil
ಉ: ವರಮಹಾಲಕ್ಷ್ಮಿ ವ್ರತ..
ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ಪೂಜೆ ಯಾವ ದೇವರಿಗೆ ಆದರು ಈ ತತ್ವ ಸಹಜವಾಗಿಯೆ ಅನ್ವಯವಾಗುವಂತದ್ದಲ್ಲವೆ ? ಆಡಂಬರ, ತೋರಿಕೆಗಳೆಲ್ಲ ನಮ್ಮ ಸಮಾಧಾನ, ತೃಪ್ತಿಗೆ. ಗಟ್ಟಿ ಮನದ ಭಕ್ತಿ ಧ್ಯಾನ ಮುಖ್ಯ. ಇರದಿದ್ದರೆ ಚಿತ್ತವಿಲ್ಲದೆ ಗುಡಿಯ ಸುತ್ತಿದಂತೆ ಲೆಕ್ಕ :-)