ವರ್ಷಧಾರೆ
ಕವನ
ನವ ವರ್ಷಧಾರೆ ಬಾರೆ ನೀ ಬಾರೆ
ನಿನಗಾಗಿ ಕಾಯುತಿಹೆ ನಾ ಮನಸಾರೆ
ಕೆಕ್ಕರಿಸಿ ನೋಡುತ ಸುಡುತಲಿಹನಾದಿತ್ಯ
ತಾಪದಲಿ ಬೆಂದಿಹುದು ಈ ಧರೆಯು ನಿತ್ಯ
ಎಂದು ಬರುವೆಯೊ ನೀನು ಕಾಯಲಾರೆನು ನಾನು
ನೀ ಬರುವ ಸಂಭ್ರಮಕೆ ಸಾಕ್ಷಿ ಹೇಳದೆ ಬಾನು?
ಸೂರ್ಯ ಕಿರಣಕೆ ಮೇಘ ಮಿಂಚಿದರೆ ಸಾಕೇನು
ಧರೆಯ ಮುಟ್ಟಲು ಮೊದಲು ಕಪ್ಪಾಗು ನೀನು
ಎನಿತು ನಾ ವರ್ಣಿಸಲಿ ನೀ ಬರುವ ಪರ್ವವ
ಹೇಗೆ ಮರೆಯಲಿ ಗುಡುಗು ಮಿಂಚುಗಳ ಗರ್ವವ
ಆದರೂ ಎಂತು ತಡೆಯಲಿ ಕಾಯುತಿಹ ಈ ಮನವ
ಮನ ಮಾಡೆ ನೀನು ಧರೆಗೆ ಬರುವ
ಮಣ್ಣಿನೊಂದಿಗೆ ಬೆರೆತು ನೀ ಕೊಡುವ ಘಮವು
ಮಣ್ಣು ನಿನ್ನಲಿ ಬೆರೆತು ನೀ ಪಡೆವ ಬಣ್ಣವು
ಮನೆಯ ಸೂರನು ತಾಕಿ ನೀ ಕೊಡುವ ಶಬ್ದವು
ಒಳಗೆ ಬೆಚ್ಚಗೆ ಕುಳಿತು ಸವಿಯುವುದೆ ಚಂದವು
ಮಾಡ ಬಯಸುವೆ ನಾನು ಕಾಗದದ ದೋಣಿಯನು
ತೇಲಿ ಬಿಡಬೇಕಿದೆ ನನ್ನೆದೆಯ ದುಃಖವನು
ತೊಳೆಯ ಬೇಕಿದೆ ನೀನು ನನ್ನೊಡಲ ಕೊಳೆಯನ್ನು
ತುಂಬಬೇಕಿದೆ ಅಲ್ಲಿ ಹೊಸತನವನು
ನವ ವರ್ಷಧಾರೆ ಬಾರೆ ನೀ ಬಾರೆ
ನಿನಗಾಗಿ ಕಾಯುತಿಹೆ ನಾ ಮನಸಾರೆ