ವಿಧವೆಯ ಅಳಲು
ಕಟ್ಟಿಕೊಂಡ ಗಂಡನೆಂಬ ಜೀವವೇ
ನೀನೇಕೆ ಪ್ರತಿನಿತ್ಯ
ಕಂಠಪೂರ್ತಿ ಕುಡಿದು
ಕೂಗಾಡುವ ಕುಡುಕನಾಗಲಿಲ್ಲ??
ಕೈ ಹಿಡಿದ ಹೆಂಡತಿಗೆ
ಮೂಕ ಎತ್ತಿನಂತೆ ಬಡಿದು
ನೋಯಿಸುವ ಕಟುಕನಂತೆ
ನೀನೇಕೆ ನನ್ನ ಬಡಿಯಲಿಲ್ಲ??
ತುಂಬು ಯೌವ್ವನದ ಹರೆಯದ
ಹೆಂಡತಿ ಮನೆಯೊಳಿದ್ದರೂ
ಸೆರಗು ಹಾಸಿ ಕರೆಯುವವರ ಹಿಂದೆ ಹೋಗುವ ನೀಚರಂತೆ
ನೀನೇಕೆ ಯಾರನರಸಿಯೂ ಹೋಗಲಿಲ್ಲ???
ತಂದಷ್ಟು ಕೊಟ್ಟಷ್ಟು ಸಾಲಲಿಲ್ಲವೆಂದು
ಮತ್ತಷ್ಟು ಬೇಕೆಂದು ಕೂಗಿ
ಹಿಂಸೆ ನೀಡಿ ಹೊರದೂಡುವ
ವರದಕ್ಷಿಣೆ ಲಾಲಸೆಯ ಕ್ರೂರಗಂಡ ನೀನೇಕೆ
ಆಗಲಿಲ್ಲ???
ಹೇಳು, ಈ ಕೆಟ್ಟವರ ನಡುವೆ
ನೀನೇಕೆ ಹೀಗಾದೆ??
ದುಡಿದು ನೀ ಮನೆಗೆ ಬಂದರೆ
ನಿನ್ನ ಅಂಗೈಯಲ್ಲೊಂದು ಮೊಳ ಮಲ್ಲಿಗೆ
ಬಾಚಿ ಕಟ್ಟಿದ ತುರುಬಿಗೆ
ಇಡುತಿದ್ದೆ ನೀ ಮೆಲ್ಲಗೆ
ಕಣ್ಣ ಕಾಡಿಗೆಯನ್ನೇ ತೆಗೆದು
ಚುಕ್ಕಿ ಬರೆಯುತಿದ್ದೆ ತಿಳಿಗಪ್ಪು ಕೆನ್ನೆಗೆ
ಬಡತನದಲ್ಲಿಯೂ
ನೆಮ್ಮದಿಯ ತಂದವನೇ
ಕಷ್ಟದಲ್ಲಿಯೂ ಕನಸು
ಬಿತ್ತಿದವನೇ
ಕೈ ಹಿಡಿದು ಜನುಮಪೂರ್ತಿ
ನಡೆಯುತ್ತೇನೆ ಎಂದವನೇ
ಹೀಗೇಕೆ ನನ್ನ ಪ್ರೀತಿಸಿದೆ??
ಮತ್ತೇಕೆ ನಡುದಾರಿಯಲ್ಲಿ ಕೈ
ಬಿಟ್ಟು ನಡೆದೆ??
ನೀ ಕುಡುಕನಾಗಿದ್ದರೆ , ನೀ ಕಟುಕನಾಗಿದ್ದರೆ , ನೀ ಮೃಗವಾಗಿದ್ದರೆ ಇಂದು ನೀ
ಸತ್ತಾಗ ನಾಲ್ಕು ಹನಿ ಕಣ್ಣೀರುದುರಿಸಿ
ನಾ ಸಮಾಧಾನಿಯಾಗುತ್ತಿದ್ದೆ
ಆದರೆ ಇಂದೇನು ಮಾಡಲಿ??
ನೀನಿರದೆ ನಾ ಹೇಗೆ ಬಾಳಲಿ??
ನಾನಿನ್ನೂ ಹರೆಯದ ಹೆಂಗಸು
ಅಲ್ಲಲ್ಲ... ಹರೆಯದ ವಿಧವೆ
ಕೆನ್ನೆ ನಾಚಿಕೆ ಮರೆತಿಲ್ಲ
ಅಧರ ಅದುರುವುದು ನಿಂತಿಲ್ಲ
ತುರುಬು ನಿತ್ಯ ಮಲ್ಲಿಗೆ ಬೇಡುವುದು
ಕಣ್ಣು ನಿನ್ನನ್ನೇ ಹುಡುಕುವುದು
ಆದರೆ ನೀನಿಲ್ಲ..
ಹುಡುಕಿದರೂ ನಿನ್ನ ಸುಳಿವಿಲ್ಲ..
ನೀ ಕ್ರೂರಿಯಾಗಲಿಲ್ಲ ನೀ ಕಟುಕನಾಗಲಿಲ್ಲ
ಕಾಲನ ಕರೆಗೆ ಓಗೊಟ್ಟು
ನನ್ನ ಇಲ್ಲೇ ಬಿಟ್ಟು ಹೊರಟು
ಒಂಟಿಯಾಗಿಸಿದೆಯಲ್ಲಾ
ಜೋಡಿ ಮಕ್ಕಳ ಹಿಡಿದು
ಹೇಗೆ ಬದುಕಲಿ ಇನ್ನು
ನಿನ್ನ ನಿರಂತರ ಗೈರಿನಲ್ಲಿ?????
( ಇದು ನಾನು ಕಂಡ ವಿಧವೆಯೊಬ್ಬರ ಅಳಲು. ಅವರಿಗಿನ್ನೂ ಇಪ್ಪತ್ನಾಲ್ಕೇ ವರ್ಷ. ಅವರ ಇಬ್ಬರು ಪುಟ್ಟ ಮಕ್ಕಳು ನನ್ನ ವಿದ್ಯಾರ್ಥಿಗಳು. ಕಾಲನ ಮುಂದೆ ಯಾರು ತಾನೇ ವಿಜಯಿಯಾಗಲು ಸಾಧ್ಯ ??)
-ರೇಷ್ಮಾ ಹೊನ್ನಾವರ
ಚಿತ್ರ ಕೃಪೆ: ಇಂಟರ್ನೆಟ್ ತಾಣ