ವಿಮಾನ ನಿಲ್ದಾಣದಲ್ಲಿ ಯೋಗಾಸನ!
ನಿಜ, ಎರಡು ಗಂಟೆಗಳ ವಿಮಾನ ಪ್ರಯಾಣವನ್ನು ಮುಗಿಸಿ, ಅದರ ಸದ್ದಿನ ಗುಂಗಿನೊಂದಿಗೆ ನಮ್ಮ ಬ್ಯಾಗನ್ನು ನಾವೇ ಎಳೆದುಕೊಳ್ಳುತ್ತಾ, ವಿಶಾಲವಾದ ಹಜಾರದಲ್ಲಿ ನಡೆಯುತ್ತಾ, ಹೊರಬರಲು ಅನುವಾದಾಗ, ಯೋಗಾಸನದ ಪ್ರದರ್ಶನವನ್ನು ಕಂಡು ನನಗೆ ನಿಜಕ್ಕೂ ಅಚ್ಚರಿ! ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ವಿವಿಧ ಭಂಗಿಗಳ ಯೋಗಾಸನಗಳ ಪ್ರದರ್ಶನವನ್ನು ನೋಡಿ ಸಂಭ್ರಮ, ಸಂತಸ, ಅಚ್ಚರಿ ಎಲ್ಲವೂ ಒಟ್ಟಿಗೇ ಆಯಿತು. ಸೂರ್ಯ ನಮಸ್ಕಾರದ 12 ಆಸನಗಳನ್ನು ಒಂದಾದರೊಂದರ ಮೇಲೆ ಒಂದರಂತೆ ಪ್ರದರ್ಶಿಸಿದ ಅಲ್ಲಿನ ಪರಿ ಅನನ್ಯ! ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿರುವ ನವದೆಹಲಿಯ ಅಂತರಾಷ್ಟ್ರೀಯ ವಿಮಾನನಿಲ್ದಾಣದ 3ನೆಯ ಟರ್ಮಿನಲ್ ನಲ್ಲಿ ಎಲ್ಲಾ ಪ್ರಯಾಣಿಕರ ಗಮನ ಸೆಳೆಯುವಂತೆ ಎದುರಿನಲ್ಲೇ ಸೂರ್ಯ ನಮಸ್ಕಾರದ ಭಂಗಿಗಳನ್ನು ಪ್ರದರ್ಶಿಸಿz ರೀತಿಯನ್ನು, ಅಪರೂಪದ ಒಂದು ಪ್ರಕ್ರಿಯೆ ಎಂದೇ ಗುರುತಿಸಬಹುದು.
2010 – 11 ನೆಯ ಸಾಲಿನಲ್ಲಿ ವಿಮಾನನಿಲ್ದಾಣದಲ್ಲಿ ಹಲವಾರು ಕಲಾಕೃತಿಗಳನ್ನು ರಚಿಸಲಾಯಿತು. ಅವುಗಳ ಪೈಕಿ, ನಿಖಿಲ್ ಭಂಡಾರಿ ಎಂಬ ಕಲಾವಿದರು ರಚಿಸಿದ ಆಳೆತ್ತರದ ಈ ಕಲಾಕೃತಿಯು ತಕ್ಷಣ ಗಮನ ಸೆಳೆಯುತ್ತದೆ. ಅಲ್ಯುಮಿನಿಯಂ ಬಳಸಿ ರಚಿಸಿದ ಈ ಯೋಗಾಸನ ಭಂಗಿಗಳಿಗೆ ತಾಮ್ರದ ಲೇಪವನ್ನು ನೀಡಲಾಗಿದ್ದು, ಹನ್ನೆರಡು ತಾಮ್ರ ವರ್ಣದ ವ್ಯಕ್ತಿಗಳು ಸೂರ್ಯ ನಮಸ್ಕಾರದ ವಿವಿಧ ಆಸನಗಳನ್ನು ಪರಿಪೂರ್ಣ ರೂಪದಲ್ಲಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ.
ಸುಮಾರು 5 ಅಡಿ ಎತ್ತರವಿರುವ ಈ ತಾಮ್ರ ವರ್ಣದ ಮನುಷ್ಯರನ್ನು ಓರೆ ಕೋರೆಯಾಗಿ ಸಾಗುವ ಒಂದು ಸಮತಲದ ಮೇಲೆ ನಿರ್ಮಿಸಲಾಗಿದ್ದು, ಅದರ ಸುತ್ತಲೂ ಕಲಾಕೃತಿಗೆ ಅನುಗುಣವಾದ ವಿನ್ಯಾಸವನ್ನು ರೂಪಿಸಲಾಗಿದೆ. ಅಲ್ಯುಮಿನಿಯಂ ಮತ್ತು ತಾಮ್ರ ಬಳಸಿ ನಿರ್ಮಿಸಿದ ಆಳೆತ್ತರದ ಈ ಮನುಷ್ಯಾಕೃತಿಯು, ಶುದ್ಧ ಭಾರತೀಯ ವಸ್ತ್ರ ವಿನ್ಯಾಸವಾದ ಕಚ್ಚೆಪಂಚೆಯನ್ನು ಉಟ್ಟಿದ್ದು, (ಉಳಿದಂತೆ ಬರಿಮೈ), ಸತತವಾಗಿ ಯೋಗಾಸನ ಮಾಡಿದರೆ ದೊರೆಯಬಹುದಾದ ಲಘು ಮೈಕಟ್ಟನ್ನು ಹೊಂದಿದೆ. ಓರೆ ಕೋರೆಯಾಗಿ ಸಾಗಿ ಹೋಗುವ ಸಮತಲದ ಮೇಲೆ, ಸೂರ್ಯನಮಸ್ಕಾರದ ವಿವಿಧ ಆಸನಗಳನ್ನು ಒಂದಾದ ನಂತರ ಒಂದರಂತೆ ನಿರ್ಮಿಸಿ, ಅನುಕ್ರಮವಾಗಿ ನಿರ್ಮಿಸಲಾಗಿದೆ. ಆ ವಿವಿಧ ಆಸನಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಿರು ಅಧ್ಯಯನ ಮಾಡಿದರೆ, ಹೊಸದಾಗಿ ಯೋಗಾಭ್ಯಾಸವನ್ನು ಕಲಿಯುವವರು, ಸೂರ್ಯನಮಸ್ಕಾರವನ್ನು ಮನನ ಮಾಡಿಕೊಳ್ಳಬಹುದು, ಎಂಬಷ್ಟು ಸ್ಪಷ್ಟವಾಗಿದೆ ಆ ಸರಣಿ ಯೋಗಾಸನ ಕಲಾಕೃತಿ.
ಸೂರ್ಯನಿಗೆ ನಮಸ್ಕರಿಸುವ ಮೊದಲನೆಯ ಆಸನವಾದ ಪ್ರಣಾಮಾಸನವನ್ನು ಪ್ರದರ್ಶಿಸುವ ಮೊದಲನೆಯ ಮನುಷ್ಯಾಕೃತಿಯು, ಆ ಸಮತಲದಲ್ಲಿ ಅತಿ ಕೆಳಭಾಗದಲ್ಲಿ ಇದೆ ಮತ್ತು ಅದರ ಒಂದು ಪ್ರತಿಕೃತಿ ಎತ್ತರದ ಸ್ಥಾನದಲ್ಲಿದೆ. ಅಂದರೆ, ಪ್ರಣಾಮಾಸನದೊಂದಿಗೆ ಆರಂಭವಾಗುವ ಸೂರ್ಯ ನಮಸ್ಕಾರವು, ಉಳಿದೆಲ್ಲಾ ಆಸನಗಳನ್ನು ದಾಟಿ ಬಂದು, ಕೊನೆಯಲ್ಲಿ ಮತ್ತೆ ಪ್ರಣಾಮಾಸನದಲ್ಲೇ ಕೊನೆಗೊಳ್ಳುವ ಪ್ರಕ್ರಿಯೆಯ ರಚನೆ. ಓರೆಕೋರೆಯಾಗಿರುವ ಸಮತಲವು, ಕ್ರಮೇಣ ಮೇಲಕ್ಕೇರಿದಂತೆಲ್ಲಾ, ಈ ಸರಪಣಿಯ ಮುಂದಿನ ಆಸನಗಳಾದ ಊಧ್ರ್ವ ಹಸ್ತಾಸನ ಅಥವಾ ಅರ್ಧ ಚಕ್ರಾಸನ, ಉತ್ಥಾನಾಸನ, ಅರ್ಧ ಉತ್ಥಾನಾಸನ, ವಾನರಾಸನ, ಅಧೋಮುಖ ದಂಡಾಸನ, ಅಷ್ಟಾಂಗ ನಮಸ್ಕಾರ, ಸರ್ಪಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ವಾನರಾಸನ, ಉತ್ಥಾನಾಸನ, ಊಧ್ರ್ವ ಹಸ್ತಾಸನ ಅಥವಾ ಅರ್ಧ ಚಕ್ರಾಸನ, ಪ್ರಣಾಮಾಸನ ಇವುಗಳ ಭಂಗಿಗಳನ್ನು ಪ್ರದರ್ಶಿಸುವ ತಾಮ್ರವರ್ಣದ ವಿಗ್ರಹಗಳು ಒಂದರ ಪಕ್ಕ ಒಂದರಂತೆ ನಿಂತಿವೆ. ಓರೆಕೋರೆಯಾಗಿರುವ ಸಮತಲವು, ಕ್ರಮೇಣ ಮೇಲಕ್ಕೇರಿದಂತೆಲ್ಲಾ, ಸೂರ್ಯನಮಸ್ಕಾರದ ವಿವಿಧ ಹಂತದ ಆಸನಗಳು ಕಂಡುಬರುತ್ತಿದ್ದು, ಅವುಗಳ ಅನುಕ್ರಮಣಿಕೆಯು ನಿಜಕ್ಕೂ ಮನತಟ್ಟುತ್ತದೆ.
ದೇಶದ ರಾಜಧಾನಿಯಾದ ದೆಹಲಿಯಲ್ಲಿ, ನಮ್ಮ ದೇಶದ ಸಂಸ್ಕøತಿಯನ್ನು ಬಿಂಬಿಸುವ ಪ್ರತಿನಿಧಿಯ ರೂಪದಲ್ಲಿ ಈ ಸರ್ಯನಮಸ್ಕಾರದ ಭಂಗಿಗಳನ್ನು ಕಟೆದುನಿಲ್ಲಿಸಲಾಗಿದೆ. ಈ ಕಲಾಕೃತಿಯನ್ನು ನಿರ್ಮಿಸಿದ ಕಲಾಕಾರ ಜೈಪುರದ ಶ್ರೀ ನಿಖಿಲ್ ಭಂಡಾರಿ. ಮೊದಲಿಗೆ ಛಾಯಾಚಿತ್ರಗಳಲ್ಲಿ ವಿವಿಧ ಪ್ರಯೋಗಗಳನ್ನು ನಡೆಸಿದ ಭಂಡಾರಿಯವರು, ನಂತರ ಲೋಹದಲ್ಲಿ ಕಲಾಕೃತಿಗಳನ್ನು ರಚಿಸಲು ಕೈಹಾಕಿ, ತಕ್ಕ ಮಟ್ಟಿನ ಯಶಸನ್ನು ಗಳಿಸಿದರು. ಯೋಗಾಸನದ ಭಂಗಿಗಳ ಈ ಕಲಾಕೃತಿಯ ಜೊತೆಗೆ, ಮುದ್ರೆಗಳ ಬೃಹತ್ ಪ್ರತಿಕೃತಿಗಳನ್ನು ಒಳಗೊಂಡ ಕಲಾಕೃತಿಯನ್ನು ಇದೇ ವಿಮಾನ ನಿಲ್ದಾಣದಲ್ಲಿ ನಿರ್ಮಿಸುವಲ್ಲಿ ಸಹಾ ನಿಖಿಲ್ ಕೈಜೋಡಿಸಿದ್ದಾರೆ. ನವದೆಹಲಿಯ ವಿಮಾನ ನಿಲ್ದಾಣದ ಭಾರೀ ವಿಶಾಲವಾದ ಹಜಾರದಲ್ಲಿ, ವಿವಿಧ ವಿಮಾನಗಳಿಂದ ಜನರು ಇಳಿದು ಬರುವ ದಾರಿಯ ಮಧ್ಯೆ, ಮೂರನೆಯ ಟರ್ಮಿನಲ್ ಎದುರು ನಿರ್ಮಿಸಲಾದ ಈ ಕಲಾಕೃತಿಗಳು, ಅಲ್ಲಿ ಸಾಗುವ ಪ್ರವಾಸಿಗರ ಗಮನ ಸೆಳೆಯುವುದು ವಿಶೇಷ. ಅದಕ್ಕಿಂತಲೂ ವಿಶೇಷವೆಂದರೆ, ನಮ್ಮ ದೇಶದ ಸಂಸ್ಕøತಿ ಮತ್ತು ಪರಂಪರೆಯನ್ನು ಬಿಂಬಿಸುವ ಸೂರ್ಯನಮಸ್ಕಾರದ ಆಳೆತ್ತರದ 13 ಕಲಾಕೃತಿಗಳು, ತಮ್ಮ ಭಂಗಿ, ಯೋಗಾಸನವನ್ನು ತೋರಿಸುವ ರೀತಿ, ಆ ಮನುಷ್ಯನ ವಸ್ತ್ರ ವಿನ್ಯಾಸ ಇವೆಲ್ಲವೂ ಅಚ್ಚ ದೇಸೀತನವನ್ನು ಹೊಂದಿದೆ. ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಅಪರೂಪದ ಕಲಾಕೃತಿಯನ್ನು ರಚಿಸಲು ಅವಕಾಶ ಮಾಡಿ ಕೊಟ್ಟ ಅಂದಿನ ಅಧಿಕಾರಶಾಹಿ ಮತ್ತು ಶಿಲ್ಪಿ ಇಬ್ಬರೂ ಅಭಿನಂದನಾರ್ಹರು. (ಚಿತ್ರಗಳು ಲೇಖಕರವು) -ಎಂ. ಶಶಿಧರ ಹೆಬ್ಬಾರ್
Comments
ಉ: ವಿಮಾನ ನಿಲ್ದಾಣದಲ್ಲಿ ಯೋಗಾಸನ!
ಸಂತೋಷವಾಯಿತು.