ವಿಷ್ಣು ಪ್ರಿಯೆ

ವಿಷ್ಣು ಪ್ರಿಯೆ

ಕವನ

ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ

ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/

ಧಾರಿಣೀ ದೇವಿ ಒಲಿದು ಬಾರಮ್ಮ

ಪದುಮನಾಭನ ಹೃದಯವೇಣಿ ಬಾರಮ್ಮ//

 

ಖೂಳ ಖಳ ಜಲಂಧರನ ಮಡದಿ

ಪರಮ ಪತಿವ್ರತೆ ವೃಂದಾ ದೇವಿಯಮ್ಮ/

ಕಾರ್ತಿಕ ಮಾಸದಿ ಪೂಜೆ ಮಾಡ್ವರಮ್ಮ

ಪುರುಷೋತ್ತಮನ ವರಿಸಿ ಧನ್ಯಳಾದೆಯಮ್ಮ//

 

ಕ್ಷೀರ ಸಾಗರ ಮಥನದಿ ಉದ್ಭವಿಸಿದೆ

ಅಮೃತ ಕಲಶದೊಳಗೆ ದೇವ ಬಿಂದುವಾದೆ/

ತುಳಸಿ ನಾಮಾಂಕಿತಳು ಧನ್ಯಳೋ ನೀನು

ಲಕ್ಷ್ಮೀ ನಾರಾಯಣನಿಂದ ಮಾನ್ಯಳೋ ನೀನು//

 

ಏಕದಳ ತುಳಸಿಯಲಿ ರುಕ್ಮಿಣಿಗೆ ಒಲಿದವಳು

ಸತ್ಯಭಾಮೆಯ ಗರ್ವವನು ಮುರಿದವಳು/

ತುಳಸಿ ಎಂದರೆ ಗುಣಭರಿತ ಸ್ವರೂಪಳು

ರಾಗ ದ್ವೇಷಗಳ ಕಿತ್ತು ಬಿಸುಡುವಳು//

 

ಉತ್ಥಾನ ದ್ವಾದಶಿಗೆ ಕಟ್ಟೆಯನು ಸಿಂಗರಿಸಿ

ನೆಲ್ಲಿ ಕೊಂಬೆಯ ನೆಟ್ಟು ಸಂಭ್ರಮಿಪರು/

ಸಾಲಿಗ್ರಾಮವ ಪಿಡಿದು ಭಕುತಿಯಲಿ ನಮಿಸಿ

ವಿವಾಹ  ಮಹೋತ್ಸವ ಮಾಡುವರು ಜನಪದರು//

 

ನೈವೇದ್ಯ ದೀಪ ಧೂಪಗಳಾರತಿಯೆತ್ತಿ

ಷೋಡಶೋಪಚಾರಗಳ  ಅರ್ಪಿಸಿ ನಮಿಪರು/

ಸರ್ವ ಪಾಪಂಗಳ ಪರಿಹರಿಸಿ ಪೊರೆಯಮ್ಮ

ಆರೋಗ್ಯದಾಯಕಿ ರತ್ನ ರೂಪಿಣಿಯೇ//

ಈ ಉತ್ಥಾನ ದ್ವಾದಶಿಯಂದು ತುಳಸಿ ಮಾತೆ ಎಲ್ಲರಿಗೂ ಸಂತೋಷವನ್ನು,ಆರೋಗ್ಯವನ್ನು ನೀಡಿ ಹರಸಲಿ

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್