ಶುಭನುಡಿ - ಬದುಕಿನ ಸವಿ
ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಂ/
ಮೌನಿನಃ ಕಲಹೋ ನಾಸ್ತಿ ನ ಭಯಂ ಜಾಸ್ತಿ ಜಾಗೃತಃ//
ಓದುವವನಿಗೆ ಜ್ಞಾನಕ್ಕೆ ಕೊರತೆಯಿಲ್ಲ. ಒಳ್ಳೆಯ ವಿಚಾರಗಳನ್ನು ಅವನು ಮನನಮಾಡಿಕೊಳ್ಳುವನು. ಮೂರ್ಖತನ ತನ್ನ ಬಳಿ ಸುಳಿಯದಂತೆ ಎಚ್ಚರ ವಹಿಸುವನು. ದೇವರ ಜಪತಪ, ಧ್ಯಾನ ಮಾಡುವವನೂ ತಾನು ಮಾಡಿದ, ಮಾಡುವ ಪಾಪ ಕರ್ಮಗಳನ್ನು ಹೋಗಲಾಡಿಸುವಲ್ಲಿ ಪ್ರಯತ್ನಿಸುವನು. ಮಾತಿಗಿಂತ ಮೌನವೇ ಲೇಸು ಎಂಬ ತತ್ವವನ್ನು ಸಮಯ ಸಂದರ್ಭ ನೋಡಿ ಜ್ಞಾನಿಯು ಬಳಸುವನು. ಯಾವುದು ತಪ್ಪು, ಯಾವುದು ಸರಿ ಎಂಬ ವಿವೇಚನೆಯಿಂದ ಕೆಲಸ ಮಾಡಿದರೆ ಆಪತ್ತಿಲ್ಲ. ಅವನಿಗೆ ಭಯವೂ ಇಲ್ಲ.
ನಾವು ಸಹ ನಮ್ಮ ಬದುಕಿನ ಹಾದಿಯಲ್ಲಿ ಕೆಲವೊಂದು ಸಲ ಇದ್ದೂ ಇಲ್ಲದಂತಿರಬೇಕು. ನಮ್ಮ ಜೀವನವೆನ್ನುವುದು ಒಂದು ರೀತಿಯ ಉಣ್ಣುವ ಊಟದಂತೆ. ಹೇಗೆ ಊಟದಲ್ಲಿ ಸಿಹಿ, ಖಾರ, ಉಪ್ಪು, ಹುಳಿ, ಒಗರು ಇರುವುದೋ, ಹಾಗೆಯೇ ನಮ್ಮ ಬದುಕು ಸಹ. ಸಮರಸಗಳ ಸಂಗಮವಲ್ಲವೇ?
ಚೆನ್ನಾಗಿ ಬೆವರಿಳಿಸಿ ಕಷ್ಟ ಪಟ್ಟು, ಉಂಬವಗೆ ತಾನು ಉಣ್ಣುವ ಅನ್ನದಲ್ಲೇ ಪಾಯಸ ಕಾಣಬಹುದು. ಆಲಸಿಗೆ, ಸೋಮಾರಿಗೆ, ಇನ್ನೊಬ್ಬರ ಅನ್ನವನ್ನು ಕಸಿದು ಉಂಬವಗೆ, ಒಳ್ಳೆಯ ಪಾಯಸ ಸಹ ರುಚಿಸದು.
ಒಂದು ಗಾದೆ ಮಾತಿದೆ--ಬರಿಗೈಯಲ್ಲಿ ನೆಕ್ಕಿದಂತೆ, ಊಟ ಮುಗಿದರೂ, ಬೆರಳುಗಳನ್ನು ನೆಕ್ಕುತ್ತಾ ಕೂರುವುದು ಶೋಭೆಯಲ್ಲ, ಅದು ಅಸಹ್ಯ ಮತ್ತು ಆರೋಗ್ಯವೂ ಅಲ್ಲ.
ರೀತಿ ನೀತಿಗಳಿಲ್ಲದ ನಡತೆ, ಅಲ್ಪಬುದ್ಧಿ, ಅಲ್ಪಾರಂಭ, ನೀಚರ ಸಹವಾಸ, ಆರಂಭ ಶೂರತ್ವ, ಸಾಲ, ದುರ್ಜನರ ಸಹವಾಸ--ಇವೆಲ್ಲವೂ ಬರಿಗೈಯನ್ನು ನೆಕ್ಕಿದಂತೆ ಎಂದು ತನ್ನ ಸೋಮೇಶ್ವರ ಶತಕದಲ್ಲಿ ಕವಿ ಸೋಮನಾಥನು ಬರಿಗೈಯಂ ಸುರಿದಂತೆಲೈ ಹರಹರಾ ಶ್ರೀ ಚೆನ್ನ ಸೋಮೇಶ್ವರ ಅಂತ ಬರೆದಿದ್ದಾನೆ.
ಬದುಕಿನಲ್ಲಿ ಚೆನ್ನಾಗಿ ದುಡಿದು ಊಣ್ಣೋಣ. ಉಣ್ಣುವ ಅನ್ನವನ್ನು ಪರಮಾನ್ನವಾಗಿ ಸ್ವೀಕರಿಸೋಣ. ಬದುಕಿನ ಸವಿ ಎಲ್ಲರಿಗೂ ಸಿಗಲೆಂದು ಹಾರೈಸೋಣ.
-ರತ್ನಾ ಭಟ್ ತಲಂಜೇರಿ