ಸತ್ಯಕಾಮರ ಕಿಡಿನುಡಿಗಳು
ಸತ್ಯಕಾಮರು ಇಪ್ಪತ್ತನೆಯ ಶತಮಾನ ಕಂಡ ಅಪರೂಪದ ಅವಧೂತರು. ತಾಂತ್ರಿಕ ವಿದ್ಯೆಯಲ್ಲಿ ಪಳಗಿದವರು. ಅವರಿಗೆ ವಾಕ್ ಸಿದ್ಧಿ ಲಭಿಸಿತ್ತು ಎನ್ನುತ್ತಾರೆ. ತಾಂತ್ರಿಕ ಸಾಧನೆಯಲ್ಲಿ ಗಳಿಸಿದ ಸಿಧ್ಧಿಯನ್ನೆಲ್ಲ ಕಪ್ಪತಗುಡ್ಡ ಎಂಬ ಊರಿನಲ್ಲಿ ತ್ಯಜಿಸಿ ಸಾತ್ವಿಕ ಜೀವನ ನಡೆಸಿದವರು. ಗಾಂಧೀಜಿಯ ಅನುಯಾಯಿ. ಅವರ ಬೋಧನೆಗಳನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅನುಷ್ಟಾನಕ್ಕೆ ತಂದವರು. ದೈಹಿಕ ಶ್ರಮದಿಂದ ಕೂಳನ್ನು ಗಳಿಸಬೇಕೆಂಬ ತತ್ವವನ್ನು ಕಡೆಯವರೆಗೂ ಪಾಲಿಸಿದರು. ಬರಡಾಗಿದ್ದ ಜಮಖಂಡಿಯ ಬಳಿಯ ನೆಲವನ್ನು ತಮ್ಮ ದೈಹಿಕ ಶ್ರಮದಿಂದ ಹಸಿರುಗೊಳಿಸಿ ಆಶ್ರಮವನ್ನು ನೆಲೆಗೊಳಿಸಿ ಅದಕ್ಕೆ ""ಸುಮ್ಮನೆ" ಎಂದು ಹೆಸರಿಟ್ಟರು. ಎರಡು ಕಿಮೀ ದೂರದಿಂದ ಎರಡೂ ಕೈಗಳಲ್ಲಿ, ಹೆಗಲ ಮೇಲೆ ಕೊಡಗಳ ತುಂಬಾ ನೀರನ್ನು ಹೊತ್ತುತಂದು ಗಿಡಗಳನ್ನು ಬೆಳೆಸಿದರು. ಅವರ ಆಶ್ರಮ "ಸುಮ್ಮನೆ" ಈಗಲೂ ಕಲ್ಲಳ್ಳಿಯಲ್ಲಿದೆ. ಅಲ್ಲಿ ಅವರ ಮಾನಸಪುತ್ರಿ ವೀಣಾ ಬನ್ನಂಜೆ ಸತ್ಯಕಾಮರದೊಂದು ಮೂರ್ತಿಯನ್ನು ಸ್ಥಾಪಿಸಿದ್ದಾರೆ.
ಕೆಲ ಕಂತುಗಳಲ್ಲಿ ಸಾಗರದಷ್ಟು ವಿಶಾಲವಾದ ಸತ್ಯಕಾಮರ ವ್ಯಕ್ತಿತ್ವ ಹಾಗೂ ಜೀವನದ ಬಗ್ಗೆ ಮತ್ತು ಅವರ ನುಡಿಗಳ ಬಗ್ಗೆ ನನ್ನ ಯೊಗ್ಯತೆಗೆ ತಕ್ಕಷ್ಟು ಎಲ್ಲರೊಂದಿಗೆ ಹಂಚಿಕೊಳ್ಳುವ ಹಂಬಲ ನನ್ನದು.
ಸತ್ಯಕಾಮರ ಒಂದು ಹೊತ್ತಗೆ "ಸ್ವತಂತ್ರ". ಈ ಹೊತ್ತಗೆಯ "ಶರೀರ ಕಣ್ಣು ಸೂರ್ಯ" ಅಧ್ಯಾಯದಲ್ಲಿರುವ ಕೆಲವು ಸತ್ಯಕಾಮರ ಕಿಡಿನುಡಿಗಳು,
ಕಣ್ಣು ನೊಡುತ್ತದೆ. ತನ್ನಿಂದ ದೂರ ಇರುವುದನ್ನು ಅದು ಕಾಣುತ್ತದೆ. ಆದರೆ ಅದು ತನ್ನನ್ನೇ ನೋಡಿಕೊಳ್ಳಲು ಅಶಕ್ತವಾಗಿರುತ್ತದೆ. ತನ್ನ ಒಳಗಿನ ಪದಾರ್ಥಗಳಂತೂ ಅದಕ್ಕೆ ಕಾಣುವುದೇ ಇಲ್ಲ.
ಹಾಗೆಯೇ ಕಿವಿ. ತನ್ನ ಪಟಲಕ್ಕೆ ತಾಗಿದ್ದು ಹತ್ತಿರವಿರಲಿ ದೂರವಿರಲಿ ಕೇಳಿಸಿಕೊಳ್ಳುತ್ತದೆ.
ಅಲ್ಲೇ ಎದೆಯಲ್ಲಿ ಮಾತಿನ ಗಲಭೆಯಿದೆ. ಬೇಕಾದ ಬೇಡವಾದ ಇತರ ಸದ್ದು ಸಪ್ಪಳಗಳಿವೆ. ಅದು ಬಹುಬೇಗ ಕೇಳುತ್ತದೆ. ಈ ಸದ್ದು ಗದ್ದಲಗಳಿಗೆ ಅಭಿವ್ಯಕ್ತಿ ಇಲ್ಲ. ಬೇರೆ ಬಹು ತೀಕ್ಷ್ನ ಸಂವೇದಿಯಾದ ಕಿವಿಗಳನ್ನು ಎದೆಗೆ ಆನಿಸಿದರೂ ಅದಕ್ಕೆ ಇದು ಕೇಳಿಸುವುದೇ ಇಲ್ಲ.
"ಜ್ಯೋತಿಷ್ಯದ ಬೆಳಕು" ಅಧ್ಯಾಯದ ಕೆಲ ಕೊನೆಯ ಸಾಲುಗಳು,
ಋಷಿಗಳು ಓದದೆಯೇ ಬರೆದರು. ನಮಗೆ ಓದಿಯೂ ಬರೆಯಲು ಬರಲಿಕ್ಕಿಲ್ಲ. ನಮ್ಮ ಅರ್ಹತೆಯನ್ನು ನೋಡದೇ ಜ್ಞಾನದ ಹೊಳೆಗೆ ಇಳಿದೆವು. ನೀರು ಇನ್ನೂ ಮಂದೆ ಇದೆ. ಇದೇ ಜಲವೆಂದು ಅಲ್ಲಿ ಸ್ನಾನ ಮಾಡಿದರೆ ಮೈಕೆಸರಾಗುವುದೇ ಹೊರತು ನಿರ್ಮಲವಾಗುವುದಿಲ್ಲ. ನನ್ನ ಪೂಜ್ಯರಾದ ಜ್ಯೋತಿಷಿಗಳು, ಮೊದಲು ನಿಮ್ಮೊಳಗಿನದು ನಿಮಗೆ ತಿಳಿಯಲಿ. ಆ ಬಳಿಕ ಜಗತ್ತಿಗೆ ಉಪಕಾರ ಮಾಡಿ. ನನ್ನ ನೋವುಗೊಂಡ ಬಂಧುಗಳೇ, ನೀವು ತೊಂದರೆಯಲ್ಲಿದ್ದೀರಿ. ಹೆಚ್ಚು ಭರವಸೆ ಬಯಸಿದ್ದೀರಿ. ಈ ತಮ್ಮದು ತಮಗೇ ತಿಳಿಯದ ದೈವಜ್ಞನನ್ನು ಕಾಣಬೇಡಿರಿ. ನಿಮಗೆ ದೇವರ ಮೇಲೆ ವಿಶ್ವಾಸವಿದ್ದರೆ ಅವನ ಹತ್ತಿರ ಹೋಗಿ, ಇಲ್ಲ ಪ್ರಯತ್ನ ಕೌಶಲ್ಯದ ಮೇಲೆ ನಂಬಿಕೆಯಿಟ್ಟು ನಡೆಯಿರಿ.