ಸರ್ಪರೂಪಿ ಯಕ್ಷಿಣಿ ಮತ್ತು ರಾಜ
ರಾಜ ಅಗ್ನಿಸಖ ಒಂದು ದಿನ ಕಾಡಿನಲ್ಲಿ ಬೇಟೆಯಾಡುತ್ತಿದ್ದ. ಆಗ ಕಂಡಿತು ಅವನಿಗೆ ಅತ್ಯಂತ ಸುಂದರವಾದ ಒಂದು ಜಿಂಕೆ. ಅದರೆ ಕುತ್ತಿಗೆಯಲ್ಲಿ ಹೂವಿನ ಹಾರ ಮತ್ತು ತಲೆಯಲ್ಲಿ ಚಿನ್ನದ ಮುಕುಟವಿದ್ದವು.
ಆಗಲೇ ರಾಜನಿಗೆ ಆ ಜಿಂಕೆಯ ಮೇಲೆ ಮೋಹ ಉಂಟಾಯಿತು. ಆತ ಬಿಲ್ಲುಬಾಣಗಳನ್ನು ಕಳಚಿಟ್ಟು ಆ ಜಿಂಕೆಯ ಬೆನ್ನು ಹತ್ತಿದ. ಬಹಳ ವೇಗವಾಗಿ ಜಿಂಕೆಯನ್ನು ಅಟ್ಟಿಸಿಕೊಂಡು ಹೋದರೂ ಆ ಜಿಂಕೆ ಗಾಳಿಯ ವೇಗದಲ್ಲಿ ಓಡಿ ಕಣ್ಮರೆಯಾಯಿತು.
ಆ ಜಿಂಕೆ ಪುನಃ ಕಾಣಲು ಸಿಗಬಹುದೆಂದು ಸಂಜೆಯ ತನಕವೂ ರಾಜ ಅಗ್ನಿಸಖ ಹುಡುಕಿದ್ದೇ ಹುಡುಕಿದ್ದು. ಆಗ ನದಿಯೊಂದರ ದಡ ತಲಪಿದ್ದ ರಾಜ ಪೂರಾ ದಣಿದಿದ್ದ. ಅಲ್ಲೇ ಮಲಗಬೇಕೆನ್ನುವಷ್ಟರಲ್ಲಿ ಅವನಿಗೆ ನೀರಿನೊಳಗಿನಿಂದ ಸಂದೇಶ ಕೇಳಿಸಿತು; “ರಾಜ ಅಗ್ನಿಸಖ, ನೀರಿನೊಳಗೆ ಧುಮುಕು."
ರಾಜ ತಿಳಿಯಾಗಿದ್ದ ನೀರಿನೊಳಗೆ ಇಣುಕಿದಾಗ ಅವನಿಗೆ ನೀರಿನ ಆಳದಲ್ಲಿ ಮೇಲೆ ನೋಡುತ್ತಿದ್ದ ಜಿಂಕೆಯ ಆಕೃತಿ ಅಸ್ಪಷ್ಟವಾಗಿ ಕಾಣಿಸಿತು. “ರಾಜ ಅಗ್ನಿಸಖ, ನೀರಿನೊಳಗೆ ಧುಮುಕು. ನಾನು ಹೇಳಿದಂತೆಯೇ ಮಾಡು. ನಿನಗೇನಾದರೂ ತೊಂದರೆ ಆದೀತೆಂದು ನೀನು ಹೆದರಬೇಕಾಗಿಲ್ಲ” ಎಂಬ ಸಂದೇಶ ರಾಜನಿಗೆ ಪುನಃ ಕೇಳಿ ಬಂತು.
“ಅದಕ್ಕೆ ನನ್ನ ಹೆಸರು ಗೊತ್ತಿದೆಯಲ್ಲಾ” ಎಂದು ಯೋಚಿಸುತ್ತಾ ರಾಜ ಅಗ್ನಿಸಖ ನದಿಯ ನೀರಿಗೆ ಧುಮುಕಿ, ಆಳಕ್ಕೆ ಈಜ ತೊಡಗಿದ. ಅಲ್ಲಿ ಅವನಿಗೆ ಕಾಣಿಸಿತೊಂದು ಭವ್ಯ ಗಾಜಿನ ಅರಮನೆ! ಅರಮನೆಯೊಳಗೆ ಪ್ರವೇಶಿಸಿದ ರಾಜ ಅಗ್ನಿಸಖ. ಬಂಗಾರದ ಹಾಸುಗಂಬಳಿ ಹಾಸಿದ್ದ ದೊಡ್ಡ ಕೋಣೆಯೊಂದನ್ನು ದಾಟಿ, ಒಳಕೋಣೆಯೊಂದಕ್ಕೆ ಹೋದ ರಾಜ. ಯುವತಿಯರಿಂದ ಸುತ್ತುವರಿದಿದ್ದ ಅದ್ಛುತ ರೂಪವತಿ ತರುಣಿಯೊಬ್ಬಳು ಅಲ್ಲಿದ್ದಳು.
ಅವಳ ಸೌಂದರ್ಯಕ್ಕೆ ಮನಸೋತ ರಾಜ ಅಗ್ನಿಸಖ ತನ್ನನ್ನು ಮದುವೆಯಾಗ ಬೇಕೆಂದು ಅವಳನ್ನು ಕೇಳಿದ. “ಆಗಲಿ, ನಿನ್ನನ್ನು ಮದುವೆಯಾಗುವೆ. ಆದರೆ ನನ್ನಂದೊಂದು ಷರತ್ತಿದೆ” ಎಂದಳು ಸುರಸುಂದರಿ ಎಂಬ ಹೆಸರಿನ ಆ ಯಕ್ಷಿಣಿ.
“ಏನೇ ಆದರೂ ನಾನು ಯಾರೆಂದು ಅಥವಾ ನನ್ನ ಬಗ್ಗೆ ಏನನ್ನಾದರೂ ತಿಳಿಯಲು ನೀನು ಪ್ರಯತ್ನಿಸಬಾರದು. ಹಾಗಂತ ಭಾಷೆ ಕೊಡು” ಎಂದಳು ಸುರಸುಂದರಿ. "ನಾನು ಹಾಗೆ ಭಾಷೆ ಕೊಡುತ್ತೇನೆ” ಎಂದ ರಾಜ ಅಗ್ನಿಸಖ.
ಒಡನೆಯೇ ಅವರು ಮದುವೆಯಾದರು. ವರುಷಗಳು ದಾಟಿದವು. ಅವರಿಗೆ ಇಬ್ಬರು ಚಂದದ ಮಕ್ಕಳು ಹುಟ್ಟಿದರು. ಅವರಿಬ್ಬರ ಸಂತೋಷಕ್ಕೆ ಯಾವ ಅಡ್ಡಿಯೂ ಇರಲಿಲ್ಲ - ಸುರಸುಂದರಿಯ ಬಗ್ಗೆ ಹೆಚ್ಚುತ್ತಿದ್ದ ರಾಜ ಅಗ್ನಿಸಖನ ಕುತೂಹಲದ ಹೊರತಾಗಿ.
ಆ ಕುತೂಹಲ ತಡೆಯಲಾಗದೆ ಅದೊಂದು ದಿನ ರಾಜ ಅಗ್ನಿಸಖನು ಸುರಸುಂದರಿ ಇಲ್ಲದಿದ್ದಾಗ ಅವಳ ಕೋಣೆಯಲ್ಲಿ ಹುಡುಕಾಡಿದ. ಅವನಿಗೆ ಅಲ್ಲಿ ಏನಾದರೂ ಸಿಗುವ ಮುಂಚೆ ಅಲ್ಲಿಗೆ ಸುರಸುಂದರಿ ಬಂದು ಬಿಟ್ಟಳು.
“ನೀನು ನನಗೆ ಕೊಟ್ಟ ಭಾಷೆ ಮುರಿದೆ. ಆದ್ದರಿಂದ ನಾನು ನಿನ್ನ ಜೊತೆ ಇರಲಾರೆ. ಈಗ ನೀನು ಕೆಲವು ಕಠಿಣ ಪರೀಕ್ಷೆ ಎದುರಿಸ ಬೇಕಾಗುತ್ತದೆ. ಆಗ ನೀನೇನಾದರೂ ನನ್ನನ್ನು ಶಪಿಸಿದರೆ, ಶಾಶ್ವತವಾಗಿ ನನ್ನನ್ನು ಕಳೆದುಕೊಳ್ಳುತ್ತಿ” ಎಂದಳು ಸುರಸುಂದರಿ. ಫಕ್ಕನೆ ಅಲ್ಲಿ ಒಂದು ಸುಳಿ ಕಾಣಿಸಿತು ಮತ್ತು ಸುರಸುಂದರಿ ಹಾಗೂ ಮಕ್ಕಳಿಬ್ಬರು ಅದರೊಳಗೆ ಕಣ್ಮರೆಯಾದರು. ಅಷ್ಟಾಗುವಾಗ, ರಾಜ ಅಗ್ನಿಸಖ ಒಂದು ಮರುಭೂಮಿಯ ನಡುವೆ ನಿಂತಿದ್ದ. ಆತ ಬೊಬ್ಬೆ ಹಾಕಿದರೂ ಕೇಳುವವರಿರಲಿಲ್ಲ.
ತನ್ನ ಬಗ್ಗೆಯೇ ನಾಚಿಕೆಪಟ್ಟುಕೊಂಡ ರಾಜ ಅಗ್ನಿಸಖ, ಹಲವಾರು ದಿನಗಳು ಆಹಾರವಿಲ್ಲದೆ, ವಿಶ್ರಾಂತಿಯಿಲ್ಲದೆ, ಯಾರ ಸಂಪರ್ಕವೂ ಇಲ್ಲದೆ ಅಲೆದಾಡಿದ. “ಸುರಸುಂದರಿ ಮತ್ತು ನನ್ನ ಮಕ್ಕಳು ಪುನಃ ನನ್ನ ಜೊತೆ ಸೇರಿದರೆ, ನಾನು ಯಾವುದೇ ಭಾಷೆ ಕೊಡಲು ಮತ್ತು ಅದನ್ನು ಉಳಿಸಿಕೊಳ್ಳಲು ಬದ್ಧನಾಗಿರುತ್ತೇನೆ” ಎಂದು ಅವನು ಮತ್ತೆಮತ್ತೆ ಯೋಚಿಸುತ್ತಿದ್ದ.
ಕೊನೆಗೊಂದು ದಿನ ಸುರಸುಂದರಿ ಮತ್ತು ಮಕ್ಕಳು ತನ್ನತ್ತ ನಡೆದು ಬರುವುದನ್ನು ರಾಜ ಅಗ್ನಿಸಖ ಕಂಡ. ಸಂತೋಷ ತಡೆಯಲಾಗದೆ ರಾಜ ಅವರನ್ನು ಅಪ್ಪಿಕೊಳ್ಳಲು ಧಾವಿಸಿದ. ಅಷ್ಟರಲ್ಲಿ ಸುರಸುಂದರಿ ಇಬ್ಬರು ಮಕ್ಕಳನ್ನೂ ಎತ್ತಿ, ಅಲ್ಲಿ ಭುಗಿಲೆದ್ದ ಅಗ್ನಿಕುಂಡಕ್ಕೆ ಎಸೆದಳು.
ರಾಜ ಅಗ್ನಿಸಖನಿಗೆ ಆಘಾತವಾಯಿತು. ತಾನು ಎರಡನೆಯ ಸಲ ಕೊಟ್ಟಿದ್ದ ಭಾಷೆಯನ್ನು ಮುರಿದು, ಅವನು ಆಕ್ರೋಶದಿಂದ ಸುರಸುಂದರಿಯನ್ನು ಶಪಿಸಿದ. ತಕ್ಷಣವೇ ಆಕಾಶದಲ್ಲಿ ಸಿಡಿಲು ಮೊಳಗಿದ ಸದ್ದು ಕೇಳಿಸಿತು. ಬಿಳಿಯ ಹಂಸಗಳು ಎಳೆಯುತ್ತಿದ್ದ ಒಂದು ರಥದಲ್ಲಿ, ದೇವಿಯೊಬ್ಬಳು ಆಕಾಶದಿಂದ ಕೆಳಕ್ಕೆ ಇಳಿದು ಬಂದಳು.
"ಮೂರ್ಖ ಮನುಷ್ಯನೇ, ಈಗ ನೀನು ಮಾಡಿದ ಕೆಲಸದಿಂದಾಗಿ ನಿನ್ನ ಪ್ರೀತಿಯ ಪತ್ನಿಯನ್ನು ಶಾಶ್ವತವಾಗಿ ಕಳೆದು ಕೊಂಡಾಯಿತು. ಅವಳು ನಿಜಕ್ಕೂ ನದಿಯ ಯಕ್ಷಿಣಿ. ನೀನು ಜಿಂಕೆಯ ರೂಪದಲ್ಲಿದ್ದ ಅವಳನ್ನು ಹುಡುಕುತ್ತಾ ಕಾಡಿನಲ್ಲಿ ಸುತ್ತಾಡಿದ ನಂತರ ಅವಳು ನಿನ್ನನ್ನು ಮದುವೆಯಾಗಲು ಬಯಸಿದಳು. ನನಗೆ ಹಾಗಾಗುವುದು ಇಷ್ಟವಿರಲಿಲ್ಲ ಯಾಕೆಂದರೆ ನಶ್ವರ ಮನುಷ್ಯನೊಬ್ಬ ರಾಜನಾಗಿದ್ದರೂ ಅಮರರಾದ ಯಕ್ಷರು ಅವನನ್ನು ಮದುವೆಯಾಗಬಾರದು. ನೀನು ಎರಡು ಸಲ ಕೊಟ್ಟ ಭಾಷೆ ಮುರಿದಿದ್ದಿ. ಆದರೂ ನಿನ್ನ ಪತ್ನಿಗೆ ದುಃಖವಾಗಬಾರದೆಂದು ನಿಮ್ಮ ಮಕ್ಕಳನ್ನು ನಿನಗೆ ಕೊಡುತ್ತೇನೆ.”
ದೇವಿ ಕೈಬೀಸಿದಾಗ ಇಬ್ಬರು ಮಕ್ಕಳು ಅಲ್ಲಿ ಕಾಣಿಸಿದರು. ಆ ಕ್ಷಣವೇ ತನ್ನ ಮಂತ್ರದಂಡವನ್ನು ಬೀಸಿ, ಸುರಸುಂದರಿಯನ್ನು ಒಂದು ಭಯಂಕರ ಹಾವಾಗಿ ದೇವಿ ಪರಿವರ್ತಿಸಿದಳು. ಆ ಹಾವು ನೆಲದಲ್ಲಿದ್ದ ಒಂದು ತೂತಿನೊಳಗೆ ಮಾಯವಾಯಿತು. “ಸಾಧ್ಯವಾದರೆ ಈ ಶಾಪದಿಂದ ವಿಮೋಚನೆ ಪಡೆದುಕೋ" ಎಂದು ದೇವಿ ಆಕಾಶದಲ್ಲಿ ಕಣ್ಮರೆಯಾದಳು.
ಹತಾಶನಾದ ರಾಜ ಅಗ್ನಿಸಖ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ರಾಜ್ಯಕ್ಕೆ ಹಿಂತಿರುಗಿದ. ಆದರೆ ಅವನಿಗೆ ತನ್ನ ಪತ್ನಿಯನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಜ್ನಾನಿಯೊಬ್ಬನನ್ನು ಭೇಟಿಯಾದ ರಾಜ ಅಗ್ನಿಸಖ ತನ್ನ ಸಂಕಟವನ್ನೆಲ್ಲ ಅರುಹಿದ. ತನ್ನ ಪತ್ನಿಯನ್ನು ಪಡೆಯಲು ಏನು ಮಾಡಬಹುದೆಂದು ಪ್ರಶ್ನಿಸಿದ. “ನೀನು ಅಪಾಯಕಾರಿ ಪರೀಕ್ಷೆಗಳನ್ನು ಎದುರಿಸ ಬೇಕಾಗುತ್ತದೆ. ನನ್ನ ಜೊತೆಗೆ ಬಾ" ಎಂದು ಆ ಜ್ನಾನಿ ರಾಜ ಅಗ್ನಿಸಖನನ್ನು ಕರೆದೊಯ್ದ.
ಒಂದು ಬೆಟ್ಟದ ಬುಡದ ಗವಿಯ ಎದುರು ರಾಜ ಅಗ್ನಿಸಖನನ್ನು ನಿಲ್ಲಿಸಿ, ಆತನ ಕೈಗೊಂದು ಮರದ ದೊಣ್ಣೆಯನ್ನು ಕೊಟ್ಟ ಜ್ನಾನಿ ಹೇಳಿದ, “ಈ ದೊಣ್ಣೆಯಿಂದ ಗವಿಯ ಬಾಗಿಲಿಗೆ ಬಡಿ." ಹಾಗೆ ಬಡಿಯುತ್ತಲೇ ಭಾರೀ ಗಾತ್ರದ ಗೂಳಿಯೊಂದು ಬಾಯಿಯಿಂದ ಬೆಂಕಿಯುಗುಳುತ್ತಾ ಅಲ್ಲಿ ಪ್ರತ್ಯಕ್ಷವಾಯಿತು. ರಾಜನತ್ತ ಗೂಳಿ ನುಗ್ಗಿತು. ಅದನ್ನು ಎದುರಿಸಿದ ರಾಜ ಕಾಳಗದಲ್ಲಿ ಗೆದ್ದ.
ಪುನಃ ಗವಿಯ ಬಾಗಿಲಿಗೆ ದೊಣ್ಣೆಯಿಂದ ಬಡಿಯಬೇಕೆಂದು ಜ್ನಾನಿ ರಾಜನಿಗೆ ಹೇಳಿದ. ಹಾಗೆ ಬಡಿಯುತ್ತಲೇ ದೈತ್ಯಾಕಾರದ ರಾಕ್ಷಸನೊಬ್ಬ ಅಲ್ಲಿ ಪ್ರತ್ಯಕ್ಷನಾದ. ಅವರಿಬ್ಬರೊಳಗೆ ಘೋರ ಯುದ್ಧ ನಡೆದು, ಕೊನೆಗೂ ರಾಜನೇ ಗೆದ್ದ.
“ರಾಜಾ, ಈಗ ಕೊನೆಯ ಪರೀಕ್ಷೆ ಉಳಿದಿದೆ. ಮೂರನೆಯ ಸಲ ಗವಿಯ ಬಾಗಿಲಿಗೆ ದೊಣ್ಣೆಯಿಂದ ಬಡಿ. ಆಗ ಗವಿಯಿಂದ ಏನು ಹೊರಗೆ ಬಂದರೂ ಅದಕ್ಕೊಂದು ಮುತ್ತು ಕೊಡು” ಎಂದ ಜ್ನಾನಿ. ಹಾಗೆಯೇ ರಾಜ ಗವಿಯ ಬಾಗಿಲಿಗೆ ಬಡಿದಾಗ, ಭಾರೀ ಹಾವೊಂದು ಗವಿಯಿಂದ ಹೊರಗೆ ಬಂತು. ಅದನ್ನು ಕಂಡು ರಾಜ ಹೆದರಿದರೂ ಮುನ್ನುಗ್ಗಿ ಅದಕ್ಕೊಂದು ಮುತ್ತು ಕೊಟ್ಟ.
ಆ ಕ್ಷಣದಲ್ಲಿ ಭೂಮಿ ನಡುಗಿತು ಮತ್ತು ಆಗಸದಲ್ಲಿ ಗುಡುಗುಮಿಂಚುಗಳು ಮೂಡಿದವು. ಒಡನೆಯೇ ಆ ಭಯಂಕರ ಹಾವು ಮಾಯವಾಗಿ ಅಲ್ಲಿ ಸುರಸುಂದರಿ ಪ್ರತ್ಯಕ್ಷಳಾದಳು. ಕೊನೆಗೂ ರಾಜ ಅಗ್ನಿಸಖನ ಶೌರ್ಯಸಾಹಸಗಳಿಂದಾಗಿ ಸುರಸುಂದರಿಗೆ ಶಾಪ ವಿಮೋಚನೆಯಾಯಿತು. ಅನಂತರ ಅವರಿಬ್ಬರೂ ಮಕ್ಕಳೊಂದಿಗೆ ಸುಖಸಂತೋಷದಿಂದ ಬಹುಕಾಲ ಬಾಳಿದರು.