ಸಿರಿಧಾನ್ಯಕ್ಕೆ ಪ್ರೋತ್ಸಾಹ
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (೨೯-೦೧-೨೦೨೩) ‘ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಕರ್ನಾಟಕದ ಎರಡು ಗ್ರಾಮಗಳಲ್ಲಿನ ಸಿರಿಧಾನ್ಯ ಸಂಸ್ಥೆಗಳ ಯಶೋಗಾಥೆಯನ್ನು ಪ್ರಸ್ತಾಪಿಸಿದ್ದಾರೆ. ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ತಡಕಲ್ ಗ್ರಾಮದ ಅಳಂದ ಭೂತಾಯಿ ಸಿರಿಧಾನ್ಯ ರೈತ ಉತ್ಪಾದನಾ ಕಂಪೆನಿಯ ಸಾಧನೆ ಹಾಗೂ ಬೀದರ ಜಿಲ್ಲೆಯ ಹುಲಸೂರಿನ ಮಹಿಳಾ ಕಿಸಾನ್ ಮಿಲೆಟ್ಸ್ ಪ್ರೊಡ್ಯೂಸರ್ ಕಂಪೆನಿ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿರುವುದು ರೈತರನ್ನು, ಸಿರಿಧಾನ್ಯ ಬಳಕೆಯನ್ನು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸಿರುವ ಕ್ರಮವಾಗಿದೆ. ತಡಕಲ್ ಗ್ರಾಮದ ಕಂಪೆನಿ ಸಿರಿಧಾನ್ಯಗಳ ಹಿಟ್ಟು, ಬಿಸ್ಕತ್ ಉತ್ಪನ್ನಗಳನ್ನು ತಯಾರಿಸಿ ಮಾರುತ್ತದೆ. ಹುಲಸೂರಿನ ಕಂಪೆನಿಯ ಮಹಿಳೆಯರು ರಾಗಿ ಬೆಳೆಯುವ ಜತೆಗೆ, ಆರೋಗ್ಯ ಮಿತ್ರ ಬ್ರಾಂಡ್ ನೊಂದಿಗೆ ರಾಗಿ ಹಿಟ್ಟು, ಸಾಮೆ ಅಕ್ಕಿ, ನವಣೆ, ಕುಸುಬೆ ಎಣ್ಣೆ ಸೇರಿ ವಿವಿಧ ಸಿರಿಧಾನ್ಯಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಪ್ರಸ್ತುತ ಸಿರಿಧಾನ್ಯ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ವಾರ್ಷಿಕವಾಗಿ ಅಂದಾಜು ೧೭೦ ಲಕ್ಷ ಟನ್ ಸಿರಿಧಾನ್ಯವನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ.
ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಬಳಸಲಾಗುವ ಜೋಳ, ದಕ್ಷಿಣ ಕರ್ನಾಟಕದಲ್ಲಿ ಉಪಯೋಗಿಸುವ ರಾಗಿ ಸಿರಿಧಾನ್ಯಗಳೇ ಆಗಿವೆ. ಸಿರಿಧಾನ್ಯಗಳು ಪೋಷಕಾಂಶ, ಜೀವಸತ್ವ, ಖನಿಜಗಳ ಉತ್ತಮ ಆಗರವಾಗಿದೆ. ಆರೋಗ್ಯಕಾರಿ ಪ್ರಯೋಜನಗಳಂತೂ ಹಲವಾರು. ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ನಿಯಂತ್ರಿಸಲು, ಹೃದಯ ರಕ್ತನಾಳದ ಆರೋಗ್ಯ ರಕ್ಷಿಸಲು, ಕರುಳಿನ ಉರಿಯೂತ ನಿರ್ವಹಿಸಲು ನೆರವಾಗುತ್ತದೆ. ಆರೋಗ್ಯ ಸ್ನೇಹಿಯಾಗಿರುವ ಸಿರಿಧಾನ್ಯಗಳ ಬಗೆಗೆ ಜನರಲ್ಲಿ ಇತ್ತಿಚೆಗೆ ಜಾಗೃತಿ ಹೆಚ್ಚತೊಡಗಿರುವುದು ಹಾಗೂ ಭಾರತ ಸರ್ಕಾರ, ಅದರಲ್ಲೂ ಸ್ವತಃ ಮೋದಿಯವರು ಆಸಕ್ತಿ ತಳೆದಿರುವುದು ಸ್ವಾಗತಾರ್ಹ ಸಂಗತಿ.
ಮಳೆ ಆಶ್ರಿತ ಮತ್ತು ಕಡಿಮೆ ಫಲವತ್ತಾದ ಜಮೀನಿನಲ್ಲಿ ಒಣ ಬೇಸಾಯ ಪದ್ಧತಿಯಲ್ಲಿ ಕರಾವಳಿ, ಬೆಟ್ಟ, ಬಯಲು ಹೀಗೆ ಎಲ್ಲ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು. ೬೫ ದಿನಗಳಲ್ಲಿಯೇ ಬೆಳೆ ತೆಗೆಯಬಹುದಾಗಿದೆ. ಎರಡು ವರ್ಷಗಳಿಗೂ ಹೆಚ್ಚುಕಾಲ ಸಂಗ್ರಹಿಸಿ ಇಡಬಹುದು. ಹೀಗೆ ಬೆಳೆಯಲು ಹಾಗೂ ಸೇವಿಸಲು ಹತ್ತು ಹಲವು ವಿಶಿಷ್ಟ ಅನುಕೂಲಗಳನ್ನು ಹೊಂದಿರುವ ಸಿರಿಧಾನ್ಯಗಳ ಉತ್ಪಾದನೆ ಪ್ರೋತ್ಸಾಹಿಸಲು ಭಾರತ ಸರ್ಕಾರವು ೨೦೧೮ ಅನ್ನು ರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಆಚರಿಸಿತು. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಅಡಿಯಲ್ಲಿ ಸಿರಿಧಾನ್ಯ ಬೆಳೆ ಪ್ರದೇಶ, ಉತ್ಪಾದನೆ ಹಾಗೂ ಇಳುವರಿ ಹೆಚ್ಚಿಸಲು ಯೋಜನೆ ರೂಪಿಸಿ ಪ್ರೋತ್ಸಾಹ ಕೂಡಾ ನೀಡುತ್ತಿದೆ. ಇದಲ್ಲದೆ, ಪ್ತಧಾನಿ ಮೋದಿ ಪ್ರಸ್ತಾಪವನ್ನು ವಿಶ್ವಸಂಸ್ಥೆ ಒಪ್ಪಿಕೊಂಡು ೨೦೨೩ ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಭಾರತ ಸರಕಾರವು ಭಾರತವನ್ನು ಸಿರಿಧಾನ್ಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಜನಾಂದೋಲನ ರೂಪಿಸಲು ಮುಂದಾಗಿದೆ. ರೈತರು ಹಾಗೂ ಜನರು ಇದಕ್ಕೆ ಕೈಜೋಡಿಸಿ ಬೆಳೆಯಲು ಹಾಗೂ ಬಳಸಲು ಮುಂದಾಗುವ ಮೂಲಕ ಆರ್ಥಿಕ - ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಲು ಮುಂದಾಗಬೇಕಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೩೦-೦೧-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ