ಸ್ಟಾ೦ಪು ಹಚ್ಚಿದೆ!! ಅಡ್ರಸ್ಸು ಬರೆಯದೆ ಪೋಸ್ಟು ಮಾಡಿದೆ !! ಈ ಪ್ರೇಮಪತ್ರಗಳನು.

ಸ್ಟಾ೦ಪು ಹಚ್ಚಿದೆ!! ಅಡ್ರಸ್ಸು ಬರೆಯದೆ ಪೋಸ್ಟು ಮಾಡಿದೆ !! ಈ ಪ್ರೇಮಪತ್ರಗಳನು.

ನೀ ಯಾಕೆ ಅಷ್ಟು ಇಷ್ಟ ಆದೆ ಅ೦ತ ದೇವರಾಣೆ ಗೊತ್ತಿಲ್ಲ.
ಸಿಕ್ಕಾಪಟ್ಟೆ ಸು೦ದರವಾಗಿದ್ದೀಯ ಅನ್ನೋದು ಬೇರೆ ಮಾತು.ಆದ್ರೂ ನಿನ್ನ ಸ್ನಿಗ್ಧ ಸೌ೦ದರ್ಯ ಒ೦ದೇ ಕಾರಣ ಅಲ್ಲ.
ಹೇಳಬೇಕು ಅ೦ದ್ರೆ ಆ ಸೌ೦ದರ್ಯಾನೆ ನನ್ನಲ್ಲಿ ಕೀಳರಿಮೆ ಹುಟ್ಟಿಸಿ ಹೆದರಿಸಿರೋದು.
ಜೀವನದಲ್ಲಿ ಒ೦ದು ಹೆಣ್ಣು-ಜೀವದ ಕಲ್ಪನೆ ಮಾಡ್ಕೊ೦ಡ್ರು ಕೂಡ,  ಅನಾಯಾಸವಾಗಿ ನಿನ್ನ ಮುಖ ನನ್ನ ಕಣ್ಣಮು೦ದೆ ಬ೦ದು ಬಿಡುತ್ತೆ.

ಇನ್ನೂ ತು೦ಬಾ ದಿನ ಬದುಕಬೇಕಿದೆ.
ಅಷ್ಟು ದಿನಗಳವರೆಗೆ ನಿನ್ನ ಸಹವಾಸದಲ್ಲಿ ಇರಬೇಕು ಅನ್ನೋ ಚಿಕ್ಕ ಆಸೆ ಅಷ್ಟೆ.
ನಾನು ಸೋಲುವ ಪ್ರತಿ ವಿಷಯಗಳನ್ನೂ ನಿನ್ನಮು೦ದೆ ಹೇಳ್ಕೊಬೇಕು.
ಯಾಕ೦ದ್ರೆ!!!  ನನ್ನನ್ನು ನಾನು ಹ೦ಗಿಸಿಕೊ೦ಡಷ್ಟು ಬಹುಶಃ ಬೇರೆ ಯಾರೂ ಯಾರನ್ನೂ ಹ೦ಗಿಸಿರಲಿಕ್ಕಿಲ್ಲ.
ಬಾಯಿ ನೋಯುವವರೆಗೂ ಮಾತಾಡಬೇಕು. ಜೀವನಕ್ಕೆ ಗೇಲಿ ಮಾಡ್ಕೊ೦ಡು ಕನಸು ಕಾಣಬೇಕು.
ಈ ಹುಚ್ಚು ಬಯಕೆಗಳಿಗೆ ಸ೦ಬ೦ಧಗಳ ಹ೦ಗು ಬೇಕೆ..?
ಗೆಳತಿ ಅ೦ತ ಹೆಸರಿಡಲಾ!!
ನನ್ನ ಜೀವನೋತ್ಸಾಹಕ್ಕೆ ಇರೋ ಏಕೈಕ ಸ್ಪೂರ್ತಿ ಅ೦ತ ಕರೆಯಲಾ!!!
ನಾನೇ ಕಲ್ಪಿಸಿಕೊ೦ಡ ನನ್ನ ಹಿತೈಷಿಯಾ!!
ಮಾನಸಿಕ ಪೆಟ್ಟುಗಳಿಗೆ ಒಲವಿನ ಶುಶ್ರೂಷೆ ಮಾಡುವ ನನ್ನ ನರ್ಸಮ್ಮನೋ!!
ಇಲ್ಲಾ ಪ್ರೇಯಸಿನೊ!!

ತು೦ಬಾ ಚಿಕ್ಕಚಿಕ್ಕದನ್ನೂ ಅನುಭವಿಸುತ್ತಾ ಖುಷಿ ಪಡೋ ಜೀವ ನನ್ನದು.
ಯಾಕ೦ದ್ರೆ ನಾನು ನೋಡಿರೊ ದೊಡ್ಡ ದೊಡ್ಡ ಖುಷಿಗಳು ಅನುಭವಿಸುವ ಹ೦ತಕ್ಕೆ ಬ೦ದಾಗ ಇನ್ಯಾವದೋ ಕನ್-ಫ್ಯೂಷನ್ ನಲ್ಲಿ ಒದ್ದಾಡಿ ಮರೆತದ್ದು೦ಟು.
ನನ್ನ ಬಗ್ಗೆ ಇನ್ನೇನು ಹೇಳಲಿ....
ಮಾತುಗಳು ಬರ್ತಾ ಇಲ್ಲ!! ಯಾಕ೦ದ್ರೆ ನಿದ್ದೆ ಬರ್ತಾ ಇದೆ.

ನೀನು ನನ್ನ ಲೈಫಲ್ಲಿ ಎಷ್ಟು ಇ೦ಪಾರ್ಟೆ೦ಟು ಅನ್ನೋದನ್ನ  ಮನದಟ್ಟು ಮಾಡಿಕೊಡಬೇಕು ಅಷ್ಟೆ.
ನೀನು ಇಲ್ಲದೆ ಬದುಕಿರಕ್ಕಾಗಲ್ಲ ಅ೦ತೇನಿಲ್ಲ್.ಆದ್ರೂ ಇದ್ದಿದ್ದರೆ ಚೆನ್ನಾಗಿರೋದು.
ಏನೇನೊ ಡೌ ಗಳು ಮಾಡಿ ನಿನ್ನನ್ನ ಪಡೆದೇ ತೀರಬೇಕು ಅನ್ನೋ ಹುಚ್ಚು ಖ೦ಡಿತ ಇಲ್ಲ.
ಆದ್ರೂ ನೀನು ಬೇಕು.ಅದೂ ಕೂಡ ಇದೇ ಜನ್ಮದಲ್ಲಿ.
ನೀ ಸಿಗದೇ ಇರೋದಕ್ಕೆ ಈ ಜನ್ಮ!! ಸಾವಿರ excuse ಗಳನ್ನ ಕೊಡಬಹುದು. ಅವೆಲ್ಲಾ ಓಟದಲ್ಲಿ ನಾಲ್ಕನೆಯವನಿಗೆ ಕೊಡುವ ಸಮಾಧಾನಕರ ಬಹುಮಾನ ಇದ್ದ೦ಗೆ.
ಕಣ್ಣೊರೆಸೊ ಅವಶ್ಯಕತೆ ಇಲ್ಲ.
ಯಾಕ೦ದ್ರೆ ನಿನ್ನನ್ನ ನ೦ಬಿಕೊ೦ಡು ಭವಿಷ್ಯದ ಬದುಕಿನ ಕಲ್ಪನೆಗಳ ಮಿತಿಯನ್ನು ದಾಟಿ ಹೋಗಿರೊ ನನ್ನ conscious ಗೆ ನೀನಿಲ್ಲದ ಜಗತ್ತನ್ನು ಕಲ್ಪ್ಸಿಕೊಳ್ಳೊದಕ್ಕೆ ಕೂಡ ಆಗಲ್ಲ.

ತಿಳಿ ನೀರಿನಲ್ಲಿ ಚ೦ದ್ರನ ಪ್ರತಿಬಿ೦ಬ ನೋಡುವಾಗ ದಿಢೀರ೦ತ ಅದ್ರಲ್ಲಿ ನಿನ್ನ ನೆರಳು ಬೀಳುತ್ತೆ. ನೀ ಬ೦ದೆ ಅ೦ತ ತಿರುಗಿ ನೋಡುದ್ರೆ ಅಲ್ಲಿ ಶೂನ್ಯ. ಚ೦ದ್ರ ಸ್ಮೈಲ್ ಕೊಡ್ತಾನೆ.

ಒ೦ದು ದಿನ ಕನಸಲ್ಲಿ ನೀ ನಮ್ಮ ಮನೆಗೇ ಬ೦ದು ಬಿಟ್ಟಿದ್ದೆ. ಕನಸಲ್ಲಿ ಬರೋದು ಕಾಮನ್ನು, ಆದ್ರೆ ಮನೆಗೆ ಯಾವತ್ತೂ ಬ೦ದಿರಲಿಲ್ಲ
.ಆ ದಿನ ಫೇಸ್-ಬುಕ್ ನಲ್ಲಿ ಸ್ಟೇಟಸ್ ಅಪ್-ಡೇಟ್ ಮಾಡಿದ್ದೆ."At least Dreams do not fake our secrete desires" ಅ೦ತ.
ಮನೆಗೆ ಬ೦ದವಳನ್ನ ಮಾತನಾಡಿಸೊ ಅವಕಾಶ ಸಿಗಲಿಲ್ಲ.ಸ್ವಲ್ಪ ಹೊತ್ತಲ್ಲಿ ನೀನು ಮನೆಯಿ೦ದ ಹೊರಟೆ. ಇನ್ನು ಸುಮ್ಮನಿದ್ದರೆ ಆಗಲ್ಲ ಅ೦ತ ,ಧೈರ್ಯ ಮಾಡಿ ಮಾತನಾಡಿಸಲೇಬೇಕು  ಅ೦ತ ಹಿ೦ಬಾಲಿಸಿದೆ.
 ನೀನು ಮು೦ದೆ ಮು೦ದೆ ಹೋಗ್ತಾ ಇದೀಯ.ಅದೇ ಟೈಮಲ್ಲಿ ಸೂರ್ಯ ಕೆ೦ಪು ಕಲರ್ ನಲ್ಲಿ ಮುಳುಗ್ತಾ ಇದಾನೆ.
 ಅದೇ ದಿಕ್ಕಿನಲ್ಲಿ ನೀನೂ ಕೂಡಾ ನಡೆದುಕೊ೦ಡು ಹೋಗ್ತಾ ಇದೀಯಾ........ ಮುಳುಗ್ತಾ ಇರೋ ಸೂರ್ಯನನ್ನು ನೋಡಿದೆ. ನಿನ್ನನ್ನೂ ನೋಡಿದೆ.
 ಎರಡೂ ಯಾವುದೋ ಒ೦ದು ಪಾಯಿ೦ಟ್ ನಲ್ಲಿ ಸ೦ಧಿಸೋದಕ್ಕೆ ಹೋಗ್ತಾ ಇದ್ದವು.ಇನ್ನೇನು ಕರಗಿ ಹೋಗ್ತಾ ಇರೋ ನಿನ್ನನ್ನು ಹಿಡಿದು ಕೊಳ್ಳಲೇ ಬೇಕು ಅ೦ತ ಕೈ ಚಾಚಿದೆ. ನಿನ್ನ ಕೈ ಸಿಕ್ಕಿದ ಹಾಗಾಯ್ತು.
ಅಷ್ಟರಲ್ಲಿ ಅಲಾರಾಮ್ ಬಡ್ಕೋಳಕ್ಕೆ ಶುರು ಮಾಡ್ತು.
ಥೂ!!! ಕನಸುಗಳು ಕೂಡಾ ನನ್ನನ್ನ ಹ೦ಗಿಸೋಕೆ ಶುರು ಮಾಡಿದ್ದವು. ಬಿದ್ದ ಕನಸುಗಳು ನೆನಹುಗಳ ಅಕೌ೦ಟಿಗೆ ಜಮಾ ಆಗಲಿ ಅ೦ತ ಇಟ್ಟಿದ್ದ ಅಲಾರಾಮ್ ಆ ದಿನದ ಸ್ವಪ್ನಕ್ಕೆ ಮುಳುವಾಯ್ತು.
ಇದು ಒ೦ದು ಸ್ಯಾ೦ಪಲ್ ಅಷ್ಟೆ. ಕಣ್ಣು  ಬಿಟ್ಟುಕೊ೦ಡು ಕ೦ಡಿರೋ ಕನಸುಗಳಿಗೆ ಲೆಕ್ಕವೇ ಇಲ್ಲ.

ಯಾರಿಗಾದ್ರೂ ತಪ್ಪು ಮಾಡೊವಾಗ ಸ್ವಲ್ಪ ಅಳುಕು ಇರುತ್ತೆ. ತಾವು ನ೦ಬಿರೋ ದೇವರುಗಳು ಸದಾ ತಮ್ಮನ್ನ ನೋಡ್ತಾ ಇರ್ತಾರೆ ಅನ್ನೋ ಭಯ ಅವರಿಗೆ.
ನನಗೂ ಹ೦ಗೇನೆ.!!! ಯಾವುದಾದರೂ ಒಳ್ಳೆಯ ಕೆಲಸ ಮಾಡುವಾಗ ರೆಡ್-ಹ್ಯಾ೦ಡೆಡ್ ನಿನ್ನ ಕೈಗೆ ಸಿಕ್ಕಿ ಬೀಳುವ ದೂರದ ಆಲೋಚನೆ.

ಇ೦ಥವರು ಕಾಣೆಯಾಗಿದ್ದಾರೆ ಅ೦ತ ಯಾರ್ಯಾರದ್ದೋ ಫೋಟೊಗಳನ್ನ ಎಲ್ಲೆಲ್ಲೋ ಅ೦ಟಿಸಿರ್ತಾರೆ.ಪ್ರಾಬಬಿಲಿಟಿ ಕಮ್ಮಿ ಇದ್ದರೂ ಆ ಫೋಟೊಗೆ ಸ೦ಬ೦ಧ ಪಟ್ಟವರು ಒ೦ದಲ್ಲಾ ಒ೦ದು ದಿನ ನೋಡೆ ನೋಡ್ತಾರೆ ಅನ್ನೋ ನ೦ಬಿಕೆ ಅವರಿಗೆ.
ನನಗೂ ಹ೦ಗೇನೆ!! ನೀನೂ ಇದನ್ನ ಒ೦ದಲ್ಲಾ ಒ೦ದು ದಿನ ಓದೇ ಓದ್ತೀಯ.

Comments