ಸ್ಟೇಟಸ್ ಕತೆಗಳು (ಭಾಗ ೧೦೩೩)- ಶಿಕ್ಷಣ

ಸ್ಟೇಟಸ್ ಕತೆಗಳು (ಭಾಗ ೧೦೩೩)- ಶಿಕ್ಷಣ

ತುಂಬಾ ವಿಸ್ತಾರವಾದ ಪ್ರದೇಶದಲ್ಲಿ ಶಾಲೆಯೊಂದನ್ನು ಕಟ್ಟುವ ತಯಾರಿ ನಡೆದಿದೆ. ಸುತ್ತಮುತ್ತ ಹಲವಾರು ಹಳ್ಳಿಗಳ ಮಕ್ಕಳಿಗೋಸ್ಕರ ಈ ಶಾಲೆಯನ್ನು ಕಟ್ಟಬಹುದು ಅಂತ ಯೋಚನೆ ಮಾಡಿದರೂ ಸಹ ಆ ಶಾಲೆಯ ಕಲಿಯುವ ಅರ್ಹತೆ ಸಿಗುವುದು ದೊಡ್ಡ ಮನೆಯ ದೊಡ್ಡ ಮಂದಿಗೆ ಮಾತ್ರ. ಈ ಶಾಲೆಯಲ್ಲಿ ಈ ರೀತಿಯ ಸವಲತ್ತುಗಳಿದ್ದಾವೆ, ತರಗತಿಗಳು ತುಂಬಾ ಅದ್ಭುತವಾಗಿದ್ದಾವೆ, ದೊಡ್ಡ ದೊಡ್ಡ ಪದವಿ ಪಡೆದ ಶಿಕ್ಷಕರು ಇಲ್ಲಿ ವಿದ್ಯಾರ್ಥಿಗಳಿಗೆ ಪಾಠಗಳನ್ನು ಮಾಡುತ್ತಾರೆ ಹೀಗೆ ಎಲ್ಲವನ್ನ ವಿವರಿಸುವ ಬಿತ್ತಿ ಚಿತ್ರಗಳು ಊರ ತುಂಬೆಲ್ಲ ಮಿನುಗುತ್ತಿವೆ. ಆ ಊರಿನ ಹಲವು ಮಂದಿಗೆ ಕೆಲಸವೂ ಸಿಕ್ಕಿದೆ. ನೆಲದಿಂದ ಹಿಡಿದು ಮುಗಿಲೆತ್ತರದವರೆಗೆ ಆ ಶಾಲೆಯ ಎಲ್ಲ ಕೆಲಸವನ್ನ ಆ ಊರಿನವರು ಮಾಡಿದ್ದಾರೆ. ಪ್ರತಿ ತರಗತಿಯ ವಿನ್ಯಾಸ ಹೇಗಿದೆ ಅಂತ ಕಣ್ತುಂಬಿಸಿಕೊಂಡಿದ್ದಾರೆ. ಸಂಜೆಯಾದರೆ ಸಾಕು ಊರಿನವರೆಲ್ಲ ಸಂಭ್ರಮಕ್ಕಾದರೂ ಒಂದು ಸಲ ಆ ಶಾಲೆಯ ಒಳಗೆ ಅಡ್ಡಾಡಿ ಮತ್ತೆ ಹೊರಟು ಹೋಗುತ್ತಾರೆ. ಆದರೆ ಶಾಲೆ ಆರಂಭವಾಗಿನಿಂದಿನಿಂದ ಇಂದಿನವರೆಗೂ ಆ ಊರಿನ ಒಬ್ಬ ಮಗುವಿಗೂ ಆ ಶಾಲೆಯ ಒಳಗೆ ಪ್ರವೇಶ ಸಿಕ್ಕಿಲ್ಲ. ಪ್ರತಿದಿನ ಅವರು ಪಕ್ಕದೂರಿನ ಶಾಲೆಗೆ ಹೊರಡುವಾಗ ಆ ಶಾಲೆಯನ್ನು ನೋಡಿ ಕಣ್ತುಂಬಿಕೊಳ್ಳುತ್ತಾ ಅವರು ಹೇಳುವ ಕಥೆಗಳನ್ನು ಕೇಳುತ್ತಾನೆ ಬದುಕ್ತಾ ಇದ್ದಾರೆ. ಶಾಲೆಯ ಗೇಟು ಕಾಯುತ್ತಿರುವವನು ಕೂಡ ಆ ಶಾಲೆಯನ್ನ ದೂರದಿಂದಲೇ ನೋಡಿ ಕಣ್ತುಂಬಿಸಿಕೊಳ್ಳುತ್ತಾ ಇಲ್ಲಿ ಸಿಕ್ಕಿದ ಹಣದಿಂದ ತನ್ನ ಮಗನನ್ನು ಪಕ್ಕದೂರಿನ ಶಾಲೆಗೆ ಸೇರಿಸುತ್ತಿದ್ದಾನೆ...ಶಿಕ್ಷಣ ಮಾರಾಟವಾಗುತ್ತಿದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ