ಸ್ಟೇಟಸ್ ಕತೆಗಳು (ಭಾಗ ೧೧೧೨)- ಪಯಣ

ಸ್ಟೇಟಸ್ ಕತೆಗಳು (ಭಾಗ ೧೧೧೨)- ಪಯಣ

ದೇವರು ಶಹರ ತೊರೆದಿದ್ದಾನೆ, ಇಲ್ಲಾ ಇಲ್ಲಿ ಬದುಕೋಕೆ ಸಾಧ್ಯವಿಲ್ಲವೆಂದು ಹಳ್ಳಿಯ ಕಡೆ ಮುಖ ಮಾಡಿದ್ದಾನೆ. ಪೇಟೆಯ ನಡುವೆ ಜನರ ಒಳಿತಿಗಾಗಿ ಬಂದು ಹಾರೈಸುತಿದ್ದವನೆಂದು ಬಂದವ ಇಲ್ಲಿಯ ಕಲ್ಮಶಗಳ ಕಂಡು ಅಡವಿಗೆ ಹೆಜ್ಜೆಇರಿಸಿದ್ದಾನೆ, ಜನರೇ ಉಸಿರಾಟಕ್ಕೆ ಪರದಾಡುತ್ತಿರುವಾಗ ಭಗವಂತ ಹೇಗೆ ಸಹಿಸಿ ಸಹಿಸಿಯಾನು. ಇವರೆಲ್ಲರಿಗೂ ಅವಕಾಶವನ್ನು ಕೊಟ್ಟಿದ್ದ, ಬದಲಾವಣೆಗೆ ಸಮಯವನ್ನು ನಿಗದಿ ಮಾಡಿದ್ದ, ಎಲ್ಲವೂ ದುಂದು ಬೆಚ್ಚವಾಗದೆ ಭಕ್ತಿಯ ಆಚರಣೆಯನ್ನು ಬಯಸಿದ್ದ, ಹಸಿದವನಿಗೆ ಅನ್ನವ ನೀಡುವ, ಶಿಕ್ಷಣವಿಲ್ಲದ ಕಡೆ ಜ್ಞಾನವ ಒದಗಿಸುವ, ಮನೆ ಇಲ್ಲದವನಿಗೆ ಸೂರು ನೀಡುವ, ಹೀಗೆ ಒಳಿತನ್ನ ಮಾಡಲಿ ಎಂದು ವಿವೇಚನೆಯನ್ನು ನೀಡಿದ. ಆದರೆ ಆ ಎಲ್ಲ ಯೋಚನೆಗಳನ್ನು ಬದಿಗೆ ಸರಿಸಿ, ಅರ್ಥವಿಲ್ಲದ ವ್ಯರ್ಥ ಕಾರ್ಯದ ಕಡೆಗೆ ಮನುಜ ಮುಖ ಮಾಡಿದ ಕಾರಣ ಭಗವಂತ ಶಹರ ತೊರೆದು ಹಳ್ಳಿ ಸೇರಿದ್ದಾರೆ. ಅಲ್ಲಿ ನೆಮ್ಮದಿ ಇದೆ, ಜಗಳವಿಲ್ಲದ ಪ್ರೀತಿ ಹಂಚುವ ,ಅಂಗಳದಲ್ಲಾದರೂ ಒಟ್ಟಿಗೆ ಸೇರಿ ಬದುಕುವ ಶುಭ ಮನಸ್ಸಿದೆ. ಆ ಮನಸಿನೊಳಗೆ ನೆಲೆಸುವ ಆಸೆಗಾಗಿ ಹಳ್ಳಿಯ ಕಡೆಗೆ ಬರುತ್ತಿದ್ದಾನೆ. ಪೇಟೆ ಇನ್ನೂ ಭಾವವಿಲ್ಲದ ಕೊರಡಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ಬದುಕಿರುವವರಿಗೆ ಭಾವ ತುಂಬಬೇಕಾದರೆ ಉಳಿದವರ ಭಾವ ಅರ್ಥೈಸಿಕೊಂಡು ಬದುಕುವುದನ್ನು ಕಲಿಯಬೇಕು. ಹೆಜ್ಜೆ ಹಾಕುತ್ತಿದ್ದಾನೆ... ಶಹರ ದೂರವಾಗುತ್ತಿದೆ.. ಹಳ್ಳಿ ಹತ್ತಿರವಾಗುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ