ಸ್ಟೇಟಸ್ ಕತೆಗಳು (ಭಾಗ ೧೧೪೦)- ಹಸಿರುಳಿಸಬೇಕು
ಆ ತಂಡದ ಉದ್ದೇಶ ತುಂಬಾ ದೊಡ್ಡದಿತ್ತು. ಭಕ್ತಿಯಿಂದ ಕೈ ಮುಗಿಯುವ ನಾಗನಿಗೆ ಹಸಿರಿನ ಚಪ್ಪರ ಹಾಸಿ ಸುತ್ತಲೂ ಕಂಗೊಳಿಸುವ ಹಸಿರೆಲೆಗಳ ನಡುವೆ ನಾಗ ನೆಮ್ಮದಿಯಿಂದ ಉಸಿರಾಡುವಂತೆ ಮಾಡಬೇಕೆಂಬುದು ಅವರ ಮಹದಾಸೆ. ಈಗ ತುಂಬಿರುವ ಕಾಂಕ್ರೀಟ್ ಕಾಡುಗಳ ನಡುವೆ ಮನುಷ್ಯನೇ ಸ್ವಲ್ಪ ಹೊತ್ತು ನಿಲ್ಲಕ್ಕಾಗದೆ ಒದ್ದಾಡುವ ಕ್ಷಣದಲ್ಲಿ ಪರಿಸರ ಜೀವಿ ನಾಗ ಬದುಕೋದು ಹೇಗೆ? ಹಾಗಾಗಿ ಗಿಡ ನೆಡುವ ಯೋಚನೆಗೆ ಅವರು ಮುನ್ನಡಿಯಿಟ್ಟರು, ಜನರೊಳಗೆ ವಿಚಾರ ತುಂಬುತ್ತಾ ಕಾಂಕ್ರೀಟ್ ಕಾರ್ಡನ್ನು ಕಡಿದು ಹಸಿರ ಕಾಡಾಗಿ ಪರಿವರ್ತಿಸುವ ಕೈಂಕರ್ಯಕ್ಕೆ ಹೆಜ್ಜೆ ಇಟ್ಟರು. ಇವತ್ತು ಹಸಿರನುಡಿಸುವ ಕಾರ್ಯಕ್ರಮಕ್ಕೆ ಜೊತೆಯಾಗಿ ಬಂದಿದ್ದರು .ಇನ್ನು ಮುಂದೆ ಆ ನೆಲದಲ್ಲಿ ಬದುಕಬೇಕಾದ ಕುಟುಂಬ ತಾವು ಕೈ ಜೋಡಿಸುತ್ತೇವೆ ಎಂದವರು ಕೊನೆ ಕ್ಷಣದವರೆಗೂ ನಿಂತೆ ಇದ್ದರೆ ವಿನಃ ಕೆಲಸ ಮಾಡುವ ಗೋಜಿಗೆ ಹೋಗಲಿಲ್ಲ. ಜವಾಬ್ದಾರಿ ಹೊತ್ತು ತಂಡ ನಿರ್ವಹಿಸಬೇಕಾದ ಕೆಲಸವನ್ನ ಶ್ರದ್ಧೆಯಿಂದ ಪ್ರೀತಿಯಿಂದ ಮಾಡಿ ಭಗವಂತನಿಗೆ ತಲೆಬಾಗಿ ಅಲ್ಲಿಂದ ಹೊರ ನಡೆದರು .ಆಲೋಚನೆಗಳು ಇವರ ಮನಸ್ಸಿನೊಳಗೆ ತುಂಬಾ ಆಳವಾಗಿ ಬೇರೂರಿದೆ .ಅದರ ಬೀಜವನ್ನ ಮುಂದಿನವರಿಗೆ ದಾಟಿಸುವಾಗ ಅವರು ತಮ್ಮೊಳಗೆ ಹದವಾದ ಮಣ್ಣನ್ನು ಮಾಡಿಕೊಳ್ಳದೆ ಹೋದರೆ ಆ ಬೀಜ ಮೊಳಕೆಯೊಡೆಯುವುದೇ ಇಲ್ಲ. ಅದು ಮರವಾಗಿ ಹಣ್ಣು ನೀಡುವುದು ಯಾವಾಗ? ಕಾಯುತ್ತಿರುವುದು ಇನ್ನೊಂದಷ್ಟು ಹಸಿ ಮಣ್ಣಿನಂತಹ ಮನಸ್ಸುಗಳು ಆಲೋಚನೆಯ ಬೀಜಕ್ಕೆ ಬೇರುಳಿಸುವುದಕ್ಕೆ ಅವಕಾಶ ನೀಡುವ ನಿಷ್ಕಲ್ಮಶ ಹೃದಯಗಳಿಗೆ. ಹೀಗೆ ಊರು ದಾಟುತ್ತಿದ್ದಾರೆ ನಿಮ್ಮೂರಲ್ಲೂ ಕಾಂಕ್ರೀಟ್ ತುಂಬಿದ್ದರೆ ಒಡೆದು ಹಸಿರಾಗಿಸುವ ಯೋಚನೆಯನ್ನು ಮಾಡಿ ಖಂಡಿತ ಇವರು ಜೊತೆಯಾಗುತ್ತಾರೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ