ಸ್ಟೇಟಸ್ ಕತೆಗಳು (ಭಾಗ ೧೧೪೧)- ಭಕ್ತಿ ಅಭಿನಯ

ಸ್ಟೇಟಸ್ ಕತೆಗಳು (ಭಾಗ ೧೧೪೧)- ಭಕ್ತಿ ಅಭಿನಯ

ಭಗವಂತನಿಗೆ ಒಮ್ಮೆ ಕಸಿವಿಸಿ ಆಯಿತು, ತನ್ನ ಸೃಷ್ಟಿ ಹೀಗಿಲ್ವಲ್ಲ ಅಂತ. ಯಾಕಂದ್ರೆ ಅಂಗಳದಲ್ಲಿ ಕುಳಿತು ತೊದಲು ನುಡಿಯಾಡುತ್ತಿದ್ದ ಮಗು ತನ್ನ ಬಾಲ್ಯದ ಚೇಷ್ಟೆಗಳನ್ನ ಹಾಗೆ ಮುಂದುವರಿಸಿ ಹೋಗ್ತಾ ಇತ್ತು. ಯಾರಿಗೂ ಅದೇನು ವಿಶೇಷ ಅಂತ ಅನ್ನಿಸಲೇ ಇಲ್ಲ .ಎಲ್ಲರೊಂದಿಗೆ ತಾನು ಒಬ್ಬನಾಗಿ ಬೆರೆತು ಸಾಮಾನ್ಯನಾಗಿ ಮುಂದುವರೆದಿತ್ತು .ಆದರೆ ಮನೆಯಲ್ಲಿರುವ ತಂದೆ ತಾಯಿಗಳಿಗೆ ತಮ್ಮ ಮಗನಿಂದ ಹೆಸರಾಗಬೇಕು ಒಂದಷ್ಟು ಹಣ ಸಂಪಾದನೆಯ ದಾರಿಯಾಗಬೇಕು ಅನ್ನುವ ಯೋಜನೆಯನ್ನು ರೂಪಿಸಿಕೊಂಡು ಆತನಿಗೆ ವೇಷವನ್ನು ತೊಡಿಸಿ ಮಾತನ್ನ ಹೇಳಿಕೊಟ್ಟರು. ಪ್ರತಿಯೊಂದು ಚಾಚೂ ತಪ್ಪದೇ ಆತ ಮುಂದುವರಿಸುತ್ತಾನೆ ಇದ್ದ, ಹಾಗೆ ಹೆಜ್ಜೆ ಇಟ್ಟವನಿಗೆ ಬದುಕಿನ ಮುಂದಿನ ದಾರಿಗಳ ಬಗ್ಗೆ ಯಾವುದರ ಅರಿವಿಲ್ಲ, ತಾನು ಭಗವಂತನ ಸಮೀಪವರ್ತಿ ಆತನು ನಾನು ಆತ್ಮೀಯ ಸ್ನೇಹಿತ ಅನ್ನುವ ರೀತಿಯ ವರ್ತನೆ ಆರಂಭವಾಯಿತು. ಮನಸ್ಸು ಬದಲಾಗುತ್ತಾ ಹೋಯಿತು. ಶೈಕ್ಷಣಿಕ ಅರ್ಹತೆಗಳು ಬದುಕಿನ ಮುಂದಿನ ದಾರಿಗೆ ಬೇಕಾದ ಸಾಮಾನ್ಯ ಜ್ಞಾನವು ಇಲ್ಲದಾಯಿತು. ಪ್ರಚಾರದ ಹಂಗಿನಿಂದ ಭಕ್ತಿಯ ಮಾರ್ಗವನ್ನರಿಯದೆ ಭೂಮಿಗಿಳಿದ ಭಗವಂತನಾಗಿ ಬಿಟ್ಟ. ಹಣ ಮಾಡುವ ದಾರಿ ಹುಡುಕಿಕೊಳ್ಳಲಾರಂಬಿಸಿದ. ನಿಜವಾದ ಭಕ್ತಿ ಮರೆಯಾಗಿ ಆಡಂಬರ ಕಣ್ಣ ಮುಂದೆ ಕಂಡು ಬಂತು. ಆತನ ಮಾನಸಿಕ ಸ್ಥಿಮಿತ ತಪ್ಪಿ ಹೋಯಿತು. ದೇವರೇ ಮೇಲೆ ಕುಳಿತು ನಗುತ್ತಿದ್ದ. ಸುಳ್ಳುಗಳ ಲೋಕ ಕಟ್ಟಿ ಮೆರೆಯುತ್ತಿದ್ದಾನೆ, ಎರಡು ಮೆಟ್ಟಿಲೇರಿ ಪರ್ವತದ ತುದಿ ತಲುಪಿದ ಅನುಭವಿಯಂತೆ ವರ್ತಿಸುತ್ತಿದ್ದಾನೆ. ಇಲ್ಲಿಂದ ಭಗವಂತನ ಚಾಟಿ ಏಟಿನ ರುಚಿ ಅರಿವಾಗಬೇಕಷ್ಟೆ. ಭಗವಂತ ನಕ್ಕು ಮರೆಯಾಗಿದ್ದಾನೆ ದುಡಿಯುವವರ ನಿಷ್ಕಲ್ಮಶ ಸಹ ಹೃದಯ ಹೊಂದಿದವರ ಬಳಿ ತೆರಳುತ್ತಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ