ಸ್ಟೇಟಸ್ ಕತೆಗಳು (ಭಾಗ ೪೫೭) - ಜೀವನ ಪಾಠ

ಸ್ಟೇಟಸ್ ಕತೆಗಳು (ಭಾಗ ೪೫೭) - ಜೀವನ ಪಾಠ

ಕಬ್ಬಿಣವನ್ನು ಕಬ್ಬಿಣದಿಂದ ಕತ್ತರಿಸುವ ಕೆಲಸ ನಡೆಯುತ್ತಿದೆ. ನೋಡುಗರ ಕಣ್ಣಿಗೆ ಬೆಳಕಿನ ಹಬ್ಬ. ಕಬ್ಬಿಣವನ್ನು ಕತ್ತರಿಸುವಾಗ ಉಂಟಾಗುವ ಬೆಂಕಿಯ ಕಿಡಿಗಳು ದೇಹವನ್ನು ಸುಡಬಹುದು ಎನ್ನುವ ಭಯ ನೋಡುಗನ ಎದೆಯಲ್ಲಿ ಮೂಡುತ್ತದೆ. ಅದರ ನಡುವೆ ಬದುಕುತ್ತಿರುವವನಿಗೆ ಅವೆಲ್ಲವೂ ಅಭ್ಯಾಸವಾಗಿಬಿಟ್ಟಿದೆ. ಇಲ್ಲದಿದ್ದರೆ ಕೆಲಸ ಅಭ್ಯಾಸವಾಗಿಬಿಟ್ಟಿದೆ. ಇದೇ ಕೆಲಸದಲ್ಲಿ ಪ್ರತಿದಿನವೂ ಅದರ ಜೊತೆಗೆ ಬದುಕುತ್ತಿರುವವರಿಗೆ ಅದು ತನ್ನ ದೈನಂದಿನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಯಾವುದೇ ಸಮಸ್ಯೆಗಳು ಬರಬಾರದು, ಹೊಸ ಸಮಸ್ಯೆಗಳು ಭಯ ಹುಟ್ಟಿಸಿ ಹತ್ತಿರ ಹೋಗುವುದಕ್ಕೆ ಅಂಜಿಕೆಯನ್ನು ಸೃಷ್ಟಿಸಬಾರದು, ಪ್ರತಿದಿನವೂ ಸವಾಲುಗಳನ್ನು ಎದುರಿಸುತ್ತಾ ಹೋದರಷ್ಟೇ ನಮ್ಮ ಕೆಲಸವಾಗುವುದು. ಇವತ್ತು ನೋವು ಸಂಕಷ್ಟದ ಕಿಡಿಗಳು ಭಯ ಹುಟ್ಟಿಸಲು ಕಾಯ್ತಾ ಇರ್ತವೆ. ಬೆಂಕಿಯ ಕಿಡಿಗಳು ಸುಡುವುದಕ್ಕೆ ಕಾಯುತ್ತಿರುತ್ತದೆ. ಕಬ್ಬಿಣವನ್ನು ಕತ್ತರಿಸುವವನು ಜೀವನ ಪಾಠವನ್ನು ತುಂಬಾ ಸಮಯದಿಂದ ಹೇಳುತ್ತಿದ್ದ. ನಾನು ಅರ್ಥ ಮಾಡಿಕೊಳ್ಳೋಕೆ ಇಷ್ಟು ಸಮಯವಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ