ಸ್ಟೇಟಸ್ ಕತೆಗಳು (ಭಾಗ ೫೩೯) - ಸೀಟಿನ ಮಾತು

ಅಲ್ಲೊಂದು ವಾಹನ ರಸ್ತೆಯಲ್ಲಿ ಚಲಿಸ್ತಾ ಇತ್ತು. ನಾನು ಅದರ ಪಕ್ಕ ಹಾದು ಹೋಗ್ತಾ ಇದ್ದೆ. ನನಗೆ ಒಂದಷ್ಟು ನೋವಿನ ಮಾತುಗಳು ಕೇಳೋದಕ್ಕೆ ಆರಂಭವಾಯಿತು. ಬಸ್ಸಿನೊಳಗೆ ನೋಡುತ್ತೇನೆ ತುಂಬಾ ಜನ ಇದ್ದಾರೆ. ಮುಂದಿನ ನಿಲ್ದಾಣದಲ್ಲಿ ಬಸ್ಸನ್ನೇರಿದೆ. ನನಗೆ ಬೇರೆಯವರ ಮಾತನ್ನು ಕೇಳುವುದೊಂದು ಚಟ. ಬಸ್ಸಿನಲ್ಲಿ ಯಾರೂ ಕೂಡ ಮಾತನಾಡುತ್ತಿರಲಿಲ್ಲ. ಆದರೆ ತುಂಬಾ ಗುಸು ಗುಸು ಮಾತುಗಳು ಕೇಳ್ತಾ ಇದ್ದವು. ಬಸ್ಸು ನಿಂತು ಜನಾ ಇಳಿದರೂ ಕೂಡಾ ಮಾತುಗಳು ಮುಂದುವರೆದಿದ್ದವು. ಬಸ್ಸಿನ ಸೀಟುಗಳು ಮಾತನ್ನಾರಂಬಿಸಿದ್ದವು. ನಮ್ಮ ಕಷ್ಟವನ್ನು ಯಾರ ಬಳಿ ಹೇಳುವುದು, ಬಂದವರು ಅವರ ಸುಖಾಸೀನಕ್ಕಾಗಿ ನಮ್ಮ ಮೇಲೆ ಕುಳಿತುಕೊಳ್ಳುತ್ತಾರೆ. ಆದರೆ ಸುಮ್ಮನೆ ಕುಳಿತು ಹೋಗುವುದಲ್ಲ ಒಂದಷ್ಟು ತೊಂದರೆಗಳನ್ನು ಮಾಡಿ ಎದ್ದು ಹೋಗ್ತಾರೆ. ಅವರ ಕೈಯಲ್ಲಿರುವ ಸಣ್ಣ ಸಣ್ಣ ವಸ್ತುಗಳಲ್ಲಿ ನಮ್ಮನ್ನ ಹರಿದು ನಮಗೆ ನೋವನ್ನು ನೀಡುತ್ತಾರೆ, ಯಾವುದರಿಂದಲೋ ಚುಚ್ಚುತ್ತಾರೆ. ನಮಗೆ ಏನು ಮನಸ್ಸಿಲ್ಲವಾ? ನಾವಷ್ಟು ಸಹಾಯ ಮಾಡಿದರು ನಮಗೆ ತಿರುಗಿ ಸಹಾಯ ಸಿಗುವುದಿಲ್ಲ .ನೋವೇ ಸಿಕ್ತಾ ಇದೆ. ನಾವು ಎಷ್ಟೇ ಬೊಬ್ಬೆ ಹೊಡೆದರು ಅವರಿಗೆ ಕೇಳೋದೇ ಇಲ್ಲ. ಪ್ರೀತಿ ಸ್ನೇಹ ದ್ವೇಷ ಎಲ್ಲವೂ ಕೂಡ ಜೊತೆಗೆ ಪಯಣಿಸುತ್ತವೆ. ಆ ಪಯಣವನ್ನ ಅನುಭವಿಸಬೇಕು ಅನ್ನೋದರ ನಡುವೆ ಇಂತಹ ನೋವಿನ ಸಂಗತಿಗಳು ನಡೆಯುತ್ತವೆ .ಕೆಲವೊಂದು ಸಲ ಕಣ್ಣೀರು ನಮ್ಮ ಮೇಲೆ ಬಿದ್ದಾಗ ಕಣ್ಣೀರು ಒರೆಸುವುದಕ್ಕೆ ಪ್ರಯತ್ನಪಟ್ರು ಸಾಧ್ಯವಾಗ್ತಾ ಇಲ್ಲ. ಹಾಗಾಗಿ ಕೇಳಿಕೊಳ್ಳುವುದು ಇಷ್ಟೇ, ಜೊತೆಗೆ ಚಲಿಸುವವರು ಇನ್ನು ಮುಂದೆ ಇದೇ ಜಾಗದಲ್ಲಿ ಇನ್ಯಾರೋ ಚಲಿಸುವುದಕ್ಕೆ ಇದ್ದಾರೆ ಅನ್ನುವ ನೆನಪನ್ನ ಇಟ್ಟುಕೊಂಡು ಚಲಿಸಿದರೆ ಒಳ್ಳೆಯದು. ನಿಮ್ಮ ಕೆಟ್ಟ ಮಾತುಗಳಿಗೆ ಸುಮ್ಮನಿರದ ಕೈಗಳಿಗೆ ಕೆಲಸವನ್ನು ಕೊಟ್ಟು ನೋವನ್ನ ನೀಡಬೇಡಿ. ನಿಮಗೆ ಹೇಗೆ ಬದುಕಿದಿಯೋ ನನಗೂ ಬದುಕಿದೆ. ಈ ಜೀವನ ಅನ್ನೋದು ಒಂದೇ ಅದನ್ನ ಬದುಕಿ ಬಿಡಿ ಅಂತಾರಲ್ಲ ಅದು ಸುಳ್ಳು, ಸಾವು ಅನ್ನೋದು ಮಾತ್ರ ಒಂದು. ಜೀವನ ಅನ್ನೋದುನ್ನ ಪ್ರತೀದಿನ ಜೀವಿಸ್ತಾ ಹೋಗಬೇಕು". ಇಷ್ಟೆಲ್ಲಾ ಮಾತುಗಳು ನನ್ನ ಕಿವಿಗೆ ಬಿತ್ತು. ಹಾಗಾಗಿ ಇಂದಿನಿಂದ ಪಯಣ ಹೇಗಿರಬೇಕು ಅನ್ನೋದು ನನಗೆ ಅರಿವಾಯಿತು. ಉಳಿದವರಿಗೂ ತಿಳಿದರೆ ಒಳ್ಳೇದಲ್ವಾ ಅದಕ್ಕೆ ಇಲ್ಲಿ ತಿಳಿಸಿದ್ದೇನೆ…!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ