ಸ್ಟೇಟಸ್ ಕತೆಗಳು (ಭಾಗ ೯೭೬)- ಅನಾಮಿಕ
ಹಾಗೆಯೇ ದಾರಿಯಲ್ಲಿ ಸಾಗುವಾಗ ಅನಾಮಿಕನಿಗೆ ಬರೆದ ಪತ್ರವೊಂದು ಕಣ್ಣಿಗೆ ಬಿತ್ತು. ಯಾರದೂ ಹೆಸರಿರಲಿಲ್ಲ, ವಿಳಾಸವೂ ಇರಲಿಲ್ಲ. ಪತ್ರವೂ ಅನಾಮಿಕನಿಗೆ ತಲುಪಬೇಕಿತ್ತೋ ಏನೋ?
‘ನೀನು ಸರಿಯಾಗಿದ್ದೀಯಾ? ನಿನ್ನಲ್ಲೇ ಏನು ತಪ್ಪೇ ಇಲ್ವಾ? ನೀನು ಇಂದಿನವರೆಗೂ ಮಾಡಿದ್ದ ಕೆಲಸಗಳಿಂದ ಯಾರಿಗೂ ನೋವಾಗಿಲ್ವಾ? ನಿನ್ನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಹಾದು ಹೋಗಿಲ್ವಾ? ನಿನ್ನ ದೃಷ್ಟಿಗೆ ಒಂದಷ್ಟು ಕೆಟ್ಟ ವಿಚಾರಗಳು ಬರಲೇ ಇಲ್ಲವಾ? ಇದೆಲ್ಲಾ ಪ್ರಶ್ನೆಗಳು ನಿನ್ನಲ್ಲೇ ಕೇಳಬೇಕಾಗಿರೋದು. ಏಕೆಂದರೆ ನೀನು ಒಂದು ಅದ್ಭುತ ಅಂತ ಜಗತ್ತನ್ನ ನಂಬಿಸುತ್ತಿದ್ದೀಯಾ? ಅಲ್ವಾ? ನಿನ್ನಲ್ಲಿ ಬಂದಿರುವ ಇಷ್ಟೆಲ್ಲ ಯೋಚನೆಗಳು ತಪ್ಪು ಅಂತ ನಾನು ಹೇಳುತ್ತಾನೇ ಇಲ್ಲ. ಆದರೆ ಈ ತಪ್ಪುಗಳು ಕೆಲವೊಂದು ಸಲ ಕಾರ್ಯರೂಪಕ್ಕೆ ಬಂದು ಇನ್ನೊಬ್ಬರಿಗೆ ತೊಂದರೆಯಾದಾಗ ಮಾತ್ರ ಅದು ತಪ್ಪಾಗುತ್ತದೆ. ಆಲೋಚನೆಗಳು ಹುಟ್ಟಿ ಹಾಗೆ ಮರೆಯಾಗಿ ನಿನ್ನ ಬದುಕು ನೆರವಾಗಿದ್ದರೆ ಯಾರಿಗೂ ಸಮಸ್ಯೆ ಇಲ್ಲ. ಕನ್ನಡಿಯ ಮುಂದೆ ಒಮ್ಮ್ರೆ ನಿಂತು ನಿನ್ನನ್ನ ಆಲೋಚಿಸು. ನೀನೀಗ ಬದುಕುತ್ತಿರುವ ಪರಿಸರದಲ್ಲಿ ಏನಾದರೂ ಸಣ್ಣ ತಪ್ಪುಗಳು ನಿನ್ನಿಂದ ಆಗ್ತಾ ಇಲ್ವಾ? ನಿನ್ನ ಮಾತು ನಿನ್ನ ಕಡೆ ನೋಡಿ ನಿನ್ನ ಯೋಚನೆಗಳಲ್ಲಿ ಸಣ್ಣ ಬದಲಾವಣೆಗೂ ಅವಕಾಶವಿಲ್ಲ? ನೀನು ಅದನ್ನು ಮಾಡಿಕೊಂಡರೆ ನಿನ್ನ ಸುತ್ತಮುತ್ತಲಿನ ಪರಿಸರದಲ್ಲಿ ತುಂಬಾ ಅದ್ಭುತವಾದ ಬದಲಾವಣೆಗಳು ಸಾಧ್ಯವಾಗುತ್ತೆ. ಮನಸ್ಸು ನೀನು ಮಾಡಬೇಕಷ್ಟೇ. ಹಲವು ಬದಲಾವಣೆಗಳಿಗೆ ನಿನ್ನೊಳಗೂ ಅವಕಾಶವಿದೆ. ನಿನ್ನ ಸುತ್ತಮುತ್ತಲೂ ಅವಕಾಶವಿದೆ. ಹಾಗಾಗಿ ಒಮ್ಮೆ ನಿರ್ಧಾರ ತೆಗೆದುಕೋ. ಆಗ ಬದುಕುತ್ತಿದ್ದ ರೀತಿಗಿಂತ ಒಂದಷ್ಟು ವಿಭಿನ್ನವಾಗಿ ಬದುಕುವುದಕ್ಕೆ ಆಲೋಚಿಸು. ಖಂಡಿತವಾಗಿಯೂ ನಿನಗೂ ನಿನ್ನ ಸುತ್ತಮುತ್ತಲೂ ಒಳ್ಳೆಯದಾಗುತ್ತದೆ. ನನಗೆ ಇದನ್ನ ನಿನ್ನ ಹೆಸರು ಹೇಳಿ ಬರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ನೀನು ಅದನ್ನು ಅರ್ಥ ಮಾಡಿಕೊಂಡು ನೀನು ಅದನ್ನು ನಿನ್ನದೆಂದು ಒಪ್ಪಿಕೊಂಡು ಮುಂದುವರೆದರೆ ಸಾಕು. ನಾನು ಒಂದಷ್ಟು ಬದಲಾವಣೆಗಳನ್ನು ಒಪ್ಪಿಕೊಂಡಿದ್ದೇನೆ. ನೀನು ಒಪ್ಪಿಕೊಳ್ಳುತ್ತಿಯ ಅಂತ ನಂಬಿದ್ದೇನೆ. ಅನಾಮಿಕನಿಂದ ಅನಾಮಿಕನಿಗೆ".
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ