ಸ್ಟೇಟಸ್ ಕತೆಗಳು (ಭಾಗ ೯೭೯)- ಗುಬ್ಬಿ
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%AE%E0%B2%B0%E0%B2%BF.jpg?itok=N6DwBBig)
ಊರ ಹೊರಗೆ ಅಜ್ಜ ದೇವರ ಬೇಡುತ್ತಿದ್ದರು, ನನ್ನ ಊರನ್ನ ನಾನು ಕಂಡ ನನ್ನ ಬಾಲ್ಯದ ತರಹ ಬದಲಾಯಿಸಿ ಬಿಡು ದೇವರೇ, ಈಗ ಜನ ಮೊಬೈಲ್, ಟಿವಿ ಎಂದು ಮುಳುಗಿ ಹೋಗಿದ್ದಾರೆ ಅಂತ ದೇವರಿಗೂ ಅವರ ಮಾತು ತಲುಪಿತೋ ಏನೋ ದೇವರು ಪುಟ್ಟ ಗುಬ್ಬಿ ಮರಿಯೊಂದರಿಂದ ನಿಮ್ಮೂರು ಬದಲಾಗುತ್ತೆ. ಭಯ ಬೇಡ ಮಗು ಎಂದು ತಿಳಿಸಿದರು. ಅಜ್ಜನಿಗೆ ಎಷ್ಟು ಯೋಚನೆ ಮಾಡಿದರೂ ಹೇಗೆ ಇದು ಸಾಧ್ಯ ಅಂತ ಗೊತ್ತಾಗಲೇ ಇಲ್ಲ. ಹೇಗೂ ಭಗವಂತನೇ ಇದ್ದಾನಲ್ಲ, ಆತನ ಮೇಲೆ ನಂಬಿಕೆ ಇಟ್ಟು ಸುಮ್ಮನೆ ದಿನವನ್ನು ನೋಡಬೇಕು. ಖಂಡಿತ ಒಳ್ಳೆಯದಾಗುತ್ತೆ ಅನ್ನುವ ನಂಬಿಕೆಯಲ್ಲಿ ಬದುಕೋಕೆ ಆರಂಭ ಮಾಡಿದರು. ಹಾಗೇ ದಿನಗಳು ಮುಂದುವರೆದು ಊರಲ್ಲೇನೋ ಬದಲಾವಣೆ ಇರಲಿಲ್ಲ .ಆ ಊರಿಗೊಂದು ವಿದ್ಯುತ್ ನಿಲುಗಡೆಗೆ ಅಂತ ಒಂದು ಸ್ಥಳವನ್ನು ನಿಗದಿ ಮಾಡಿದ್ರು. ಇಡೀ ಊರಿನ ವಿದ್ಯುತ್ ಹಾದು ಹೋಗುವ ಮತ್ತು ಬದಲಾಯಿಸುವ ಮುಖ್ಯಸ್ಥಳವದು. ಅದು ಸರಕಾರದಿಂದ ನಿಗದಿಯಾದ ಜಾಗ. ಆ ಊರ ಜನ ಒಂದು ಸಣ್ಣ ಜೀವಿಗೂ ನೋವು ಮಾಡದಂತೆ ಬದುಕುವ ಮನಸ್ಥಿತಿಯವರು. ಆದರೆ ಪ್ರತಿಯೊಬ್ಬರೂ ಕೂಡ ಮೊಬೈಲ್ ಟಿವಿಯ ಒಳಗೆ ಮುಳುಗಿ ಹೋಗಿ ತಮ್ಮ ದೈನಂದಿನ ಬದುಕಿನ ರೀತಿ ನೀತಿಗಳನ್ನೇ ಬದಲಿಸಿಕೊಂಡಿದ್ದಾರೆ. ಜೋರು ಗುಡುಗಿನ ಶಬ್ದಕ್ಕೆ ಊರಿನಲ್ಲಿ ವಿದ್ಯುತ್ ವ್ಯತ್ಯಯವಾಯಿತು. ಜನರಿಗೆ ತೊಂದರೆ ಆಗಬಹುದು ಅನ್ನುವ ಕಾರಣಕ್ಕೆ ವಿದ್ಯುತ್ ನಿಲುಗಡೆಯಾಯಿತು. ಪುಟ್ಟ ಗುಬ್ಬಿಗಳ ಸಂಸಾರವೊಂದು ವಿದ್ಯುತ್ ಅನ್ನು ಊರಿಗೆ ಕಳುಹಿಸುವ ಮುಖ್ಯ ವಾಹಕದ ಪೆಟ್ಟಿಗೆಯ ಒಳಗಡೆ ಗೂಡು ಕಟ್ಟಲಾರಂಬಿಸಿತು, ಗೂಡಿನಿಂದ ಮೊಟ್ಟೆಯಾಗುವವರೆಗೂ ಊರವರಿಗೆ ತಿಳಿದಿರಲಿಲ್ಲ. ಈಗ ವಿದ್ಯುತ್ ವ್ಯತ್ಯಯವಾಗಿ ಮತ್ತೆ ಊರಿನೊಳಗೆ ವಿದ್ಯುತ್ತನ್ನು ಕಳುಹಿಸಬೇಕಾದರೆ ಅದರೊಳಗಿರುವ ಮೊಟ್ಟೆಗಳೆಲ್ಲ ಒಡೆದು ಹೋಗಲೇಬೇಕು. ಬೇರೆ ಯಾವ ಅವಕಾಶವೂ ಅವರಲ್ಲಿರಲಿಲ್ಲ. ಯಾವುದೂ ಇಷ್ಟವಿಲ್ಲದ ಕಾರಣ ಮೊಟ್ಟೆಯಿಂದ ಮರಿಯಾಗುವವರೆಗೆ ವಿದ್ಯುತ್ ಇಲ್ಲದೆ ಬದುಕುವ ನಿರ್ಧಾರ ಮಾಡಿದರು. ಆಗ ಊರಲ್ಲಿ ಒಬ್ಬರನ್ನು ಒಬ್ಬರು ಮಾತನಾಡಿಸುತ್ತಾ ಕಷ್ಟ ಸುಖ ಹಂಚಿಕೊಳ್ಳುತ್ತಾ ರೀತಿಯಲ್ಲಿಯೇ ಬದುಕೋಕೆ ಆರಂಭ ಮಾಡಿದರು. ಮೊಟ್ಟೆ ಒಡೆದು ಪುಟ್ಟ ಮರಿಯೊಂದು ಹೊರಗೆ ಬಂದು ಜಗತ್ತನ್ನ ನೋಡುವಾಗ ಇಡೀ ಊರಿಗೆ ಊರೇ ಸಂಭ್ರಮಪಟ್ಟಿತು, ದೊಡ್ಡದಾಗಿ ಇಡೀ ಊರ ತುಂಬಾ ಹಾರುತ್ತಿರುವಾಗ ಊರು ಬದಲಾಗಿತ್ತು. ಪ್ರತಿಯೊಬ್ಬರು ಸಮಯ ಕೊಡುತ್ತಿದ್ದರು ಸಂಬಂಧಗಳು ಗಟ್ಟಿಯಾಗಿತ್ತು. ಊರವರಿಗೆ ಅರ್ಥವಾಗಿತ್ತು. ಅರ್ಥ ಮಾಡಿಸಲು ಗುಬ್ಬಿಮರಿಯೊಂದು ಬರಲೇಬೇಕಾಗಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ