ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ

ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ

ಬರಹ

ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ. ಇಲ್ಲಿನ ಪ್ರತಿಭಾ ಮಹಿಳಾ ಸ್ವಕೃಷಿ ಪೊದಪು ಪರಸ್ಪರ ಸಹಾಯಕ ಸಹಕಾರ ಪರಿಮಿತ ಸಂಘಂ ಇಲ್ಲಿನ ಜನರಲ್ಲಿ ಅಂತಹ ಬದಲಾವಣೆ ತಂದಿದೆ.

"1991 ರಲ್ಲಿ ಸಿಡಿಎಫ್ ನಿಂದ ಆಗಮಿಸಿದ ಶ್ರೀಮತಿ ವಸುಂಧರಾ ಸ್ವ ಸಹಾಯ ಗುಂಪಿನ ಬಗ್ಗೆ ಮಾಹಿತಿ ನೀಡಿ ಅದರಲ್ಲಿ ತೊಡಗಲು ಪ್ರೇರೇಪಿಸಿದ ನಂತರ ಮೂರೇ ದಿನದಲ್ಲಿ 150 ಜನರನ್ನು ಸೇರಿಸಿಕೊಂಡು ಸಂಘವನ್ನು ಆರಂಭಿಸಿದೆವು. ನಂತರ ಪರಸ್ಪರ ಸಹಾಯ ಸಹಕಾರ ಕಾಯ್ದೆ ಜಾರಿಗೆ ಬಂದ ನಂತರ 1996 ರಲ್ಲಿ ನಮ್ಮ ಸಂಘವನ್ನು ಸಹಕಾರಿ ಸಂಸ್ಥೆಯಾಗಿ ನೋಂದಾಯಿಸಿಕೊಂಡು ಇನ್ನಷ್ಟು ಹುಮ್ಮಸ್ಸಿನಿಂದ ಚಟುವಟಿಕೆಯಲ್ಲಿ ತೊಡಗಿದೆವು" ಎಂದು ಅಧ್ಯಕ್ಷೆ ಶ್ರೀಮತಿ ಶೋಭಾರಾಣಿ ನೆನಪಿಸಿಕೊಳ್ಳುತ್ತಾರೆ.
ಈ ಸಂಘ ಆರಂಭವಾದ ನಂತರ ನಮ್ಮ ಹಳ್ಳಿಯಲ್ಲಿ ಖಾಸಗಿ ಲೇವಾದೇವಿ ವ್ಯವಹಾರ ಸಂಪೂರ್ಣವಾಗಿ ನಿಂತಿದೆ, ಜನರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಮಹಿಳೆಯರಲ್ಲಿ ಆತ್ಮ ವಿಶ್ವಾಸ ಎದ್ದು ಕಾಣುತ್ತಿದೆ. ಜಾತಿಗಳ ಆಧಾರದ ಮೇಲೆಯೇ ಗಲ್ಲಿಗಳಿರುವ ಈ ಗ್ರಾಮದಲ್ಲಿ ನಮ್ಮ ಸಂಸ್ಥೆ ಆರಂಭವಾದಾಗಿನಿಂದ ಕೇವಲ ಆರ್ಥಿಕ ಸುಧಾರಣೆಯಲ್ಲ, ಜಾತಿಗಳ ನಡುವಿನ ಕಂದಕವೂ ಕಡಿಮೆಯಾಗಿದೆ ಎಂದು ಶೋಭಾರಾಣಿ ಹೇಳುತ್ತಾರೆ. 31 ಡಿಸೆಂಬರ್ 2003 ರಂದಿನಂತೆ 2 ಲಕ್ಷ ರೂಪಾಯಿ ಲಾಭ ಗಳಿಸಿದ ಈ ಸಂಘದಲ್ಲಿ ಇಂದು ಒಟ್ಟು 836 ಸದಸ್ಯರ ಬಲ ಹೊಂದಿದ ಈ ಸಂಘದ ಸದಸ್ಯರು ಮಾಡುವ ಕಡ್ಡಾಯ ಉಳಿತಾಯದ ಹಣ ರೂ. 13, 35, 150 /- ಮತ್ತು ಒಟ್ಟು ವಿವಿಧ ರೀತಿಯ ಉಳಿತಾಯ ಖಾತೆಯಲ್ಲಿರುವ ನಿಧಿ ರೂ 33 ಲಕ್ಷ.
ಈ ರೀತಿಯ ಸ್ವ ಸಹಾಯ ಸಹಕಾರಿ ಸಂಘಗಳು ಒಟ್ಟು ಗೂಡಿ ತಮ್ಮದೇ ಆದ ಒಕ್ಕೂಟವನ್ನು ರಚಿಚಿಕೊಂಡಿವೆ. ಅಂತಹ ಒಂದು ಒಕ್ಕೂಟ ಕೊತ್ತ ಪಲ್ಲಿಯ ಶ್ರೀ ವಿಶ್ವ ಭಾರತಿ ಮಹಿಳಾ ಪೊದಪು ಸಮಿತಿ. 1991 ರಲ್ಲಿ ಆರಂಭವಾದ ಇದು 1995 ರಲ್ಲಿ ಪರಸ್ಪರ ಸಹಾಯಕ ಕಾಯ್ದೆ ಜಾರಿ ಬಂದ ನಂತರ ಅದರಡಿ ನೋಂದಾಯಿತವಾಗಿದೆ. 11 ಮಹಿಳಾ ಪರಸ್ಪರ ಸಹಾಯಕ ಸಂಘಗಳು ಸೇರಿ ರಚಿಸಿಕೊಂಡ ಒಕ್ಕೂಟವಿದು. ಈ ಒಕ್ಕೂಟಕ್ಕೆ ಎಲ್ಲಾ ಸಂಘಗಳು ತಮ್ಮಲ್ಲಿ ಸಂಗ್ರಹವಾದ ಕಡ್ಡಾಯ ಉಳಿತಾಯ ಹಣದ ಶೇ 5 ನ್ನು ಕಳುಹಿಸುತ್ತಾರೆ. ಒಕ್ಕೂಟವು ಸದಸ್ಯ ಸಂಘಗಳಿಗೆ ಅಗತ್ಯವಿದ್ದಲ್ಲಿ ಅವುಗಳಿಗೆ ಈ ಕಡ್ಡಾಯ ಉಳಿತಾಯದ 85 ರಷ್ಟು ಸಾಲ ಒದಗಿಸುತ್ತವೆ. ಈ ಒಕ್ಕೂಟದ ಒಟ್ಟು ನಿಧಿ ರೂ 2 ಕೋಟಿಗಳಷ್ಟು. ಎಲ್ಲಾ ಸದಸ್ಯ ಸಂಘಗಳು ತಮ್ಮಲ್ಲಿನ ಎಲ್ಲಾ ಹಣವನ್ನು ಈ ಒಕ್ಕೂಟದಲ್ಲಿರುವ ಖಾತೆಯಲ್ಲಿಡುತ್ತಾರೆ. ಒಕ್ಕೂಟ ಬ್ಯಾಂಕ್ ಖಾತೆ ಹೊಂದಿರುತ್ತದೆ. ಸದಸಯ ಸಹಕಾರಿಗಳ ಆಗು ಹೋಗುಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಈ ಒಕ್ಕೂಟದಲ್ಲಿ ಚರ್ಚೆಯಾಗಿ ಅವುಗಳಿಗೆ ಸಮಾಧಾನ ಕಂಡುಕೊಳ್ಳುವ, ಸದಸ್ಯರುಗಳಿಗೆ ಮಾರ್ಗದರ್ಶನ ನೀಡುತ್ತದೆ. ಇದುವೇ ನಿಜವಾದ ಸದಸ್ಯ ನಿಯಂತ್ರಣ. ಪ್ರಜಾರಾಜ್ಯ.