ಹೀಗೊಂದು ಒಳ ಮನಸ್ಸು...
ನೀನೊಬ್ಬ ಹುಚ್ಚ ಎಂದು ಯಾರೋ ಹೇಳಿದರು. ಅದಕ್ಕೆ ನನ್ನ ಉತ್ತರ, " ಹೌದು, ಆ ಬಗ್ಗೆ ನನಗೆ ಅನುಮಾನವಿತ್ತು. ಅದನ್ನು ದೃಢಪಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಹೊಸ ದಾರಿಯ ಹುಡುಕಾಟವೇ ಒಂದು ಹುಚ್ಚುತನ. ಈ ಹದಗೆಟ್ಟ ವ್ಯವಸ್ಥೆಯ ಬದಲಾವಣೆಗೆ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸಲು ಹುಚ್ಚನ ಪಾತ್ರದ ಅವಶ್ಯಕತೆ ಇದೆ."
ನೀನೊಬ್ಬ ಸೂ… ಮಗ ಎಂದು ಇನ್ನೊಬ್ಬರು ಹೇಳಿದರು." ಹೌದು, ನನ್ನ ತಾಯಿಯ ಸ್ವಾತಂತ್ರ್ಯವನ್ನು, ಅನಿವಾರ್ಯತೆಯನ್ನು, ಅಸಹಾಯಕತೆಯನ್ನು, ಶೋಷಣೆಯನ್ನು ಅರ್ಥಮಾಡಿಕೊಂಡು ಆ ಮಾತನ್ನು ಅಭಿಮಾನದಿಂದ ಒಪ್ಪಿಕೊಳ್ಳುತ್ತೇನೆ " ಎಂದೆ.
ಮತ್ತೊಬ್ಬರು ಹೇಳಿದರು, ನೀನೊಬ್ಬ ದ್ವಂದ್ವ ನಿಲುವಿನ ಎಡಬಿಡಂಗಿ. " ಹೌದು, ಅದೇ ನನ್ನ ಸಾಮರ್ಥ್ಯ. ಏಕೆಂದರೆ ಒಮ್ಮೆ ಅಂಕಿ ಸಂಖ್ಯೆಗಳ ಗಣಿತ ಹೊರತುಪಡಿಸಿ ಇತರ ವಿಷಯಗಳಲ್ಲಿ ಸ್ಪಷ್ಟತೆ ಮೂಡಿದರೆ ಅಲ್ಲಿಗೆ ನಿಮ್ಮ ಜ್ಞಾನದ ಬೆಳವಣಿಗೆ ನಿಲ್ಲುತ್ತದೆ. ನನ್ನಲ್ಲಿ ಅದು ನಿಲ್ಲಬಾರದು. ಬದುಕಿನ ಕೊನೆಯವರೆಗೂ ಜ್ಞಾನದ ಹಸಿವು ನಿರಂತರವಾಗಿ ಮತ್ತು ಅದರ ಎಲ್ಲಾ ಮಗ್ಗುಲುಗಳನ್ನು ನೋಡಲು ಪ್ರಯತ್ನಿಸುತ್ತಿರಬೇಕು. ಅದಕ್ಕಾಗಿ ನಾನು ಎಡಬಿಡಂಗಿಯಾಗಿರಲು ಇಷ್ಟಪಡುತ್ತೇನೆ."
ಯಾರೋ ಹೇಳಿದರು, " ನೀವು ಅಧ್ಯಯನ ಮಾಡಿ, ಚಿಂತಿಸಿ, ಓದಿ, ದಾಖಲೆ ಸಾಕ್ಷಿಗಳ ಸಮೇತ ಬರೆಯಿರಿ ಎಂದು. " ಅದಕ್ಕೆ ನಾನು ಹೇಳಿದೆ, " ನಾನು ವಾಸಿಸುತ್ತಿರುವುದು ಭಾರತೀಯ ಸಮಾಜದಲ್ಲಿ. ಇಲ್ಲಿನ ಬಹುತೇಕ ಜನರಿಗೆ ಇನ್ನೂ ಸರಿಯಾಗಿ ಅಕ್ಷರ ಜ್ಞಾನವೇ ತಿಳಿದಿಲ್ಲ. ಕೆಲವರಿಗೆ ಅಕ್ಷರ ತಿಳಿದಿದ್ದರೂ ಓದುವಷ್ಟು ಸಮಯ ಮತ್ತು ಆಸಕ್ತಿ ಇಲ್ಲ. ಅದು ಇದ್ದರೂ ಅದನ್ನು ಸಂಪೂರ್ಣ ಅರ್ಥಮಾಡಿಕೊಳ್ಳಲು ಅವರ ದಿನನಿತ್ಯದ ಅನಿವಾರ್ಯತೆಗಳು ಬಿಡುವುದಿಲ್ಲ. ಆದ್ದರಿಂದ ಅಧ್ಯಯನ, ಚಿಂತನೆ, ದಾಖಲೆ, ಸಾಕ್ಷಿಗಳಿಗಿಂತ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ಆಸಕ್ತರು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ನೋವಿನಲ್ಲಿರುವ, ಸಂಕಷ್ಟದಲ್ಲಿರುವ, ಅಸಹಾಯಕರು ನನಗೆ ಮುಖ್ಯವೇ ಹೊರತು ಪ್ರಕಾಂಡ ಪಾಂಡಿತ್ಯದ, ಅಪಾರ ಓದಿನ, ಸಿದ್ಧಾಂತಗಳನ್ನು ಅರೆದು ಕುಡಿದವರಲ್ಲ. ಸಾಮಾನ್ಯ ಜನರ ಭಾವನೆಗಳೇ ನನ್ನ ಭಾಷೆ. "
ಕೆಲವರು ಹೇಳಿದರು. " ನೀವು ಪ್ರಚಾರಕ್ಕಾಗಿ, ಸನ್ಮಾನಕ್ಕಾಗಿ, ಪ್ರಶಸ್ತಿಗಾಗಿ, ಮೆಚ್ಚುಗೆಗಾಗಿ ಬರೆಯುವಿರಿ ಎಂದು " ನಾನು ಹೇಳಿದೆ, " ನಾನು ಬರೆಯುವುದರಿಂದ ಓದುಗರು ನೀಡುವ ಪ್ರತಿಕ್ರಿಯೆಯ ಪ್ರಚಾರ ಬಿಟ್ಟರೆ ನೀವು ಪ್ರಶಸ್ತಿಯೋ, ಸನ್ಮಾನವೋ ಮಾಡಲು ಕರೆದರೂ ಅದನ್ನು ಒಪ್ಪಿಕೊಳ್ಳುವ ಮತ್ತು ಸ್ವೀಕರಿಸುವ ಸ್ಥಿತಿಯಲ್ಲಿಯೇ ನಾನು ಇಲ್ಲ. ಇನ್ನು ಅದಕ್ಕಾಗಿ ಪ್ರಯತ್ನಿಸುವ ಪ್ರಶ್ನೆಯೇ ಉದ್ಬವವಾಗುವುದಿಲ್ಲ. ನಾನು ಕೇವಲ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಮಾತ್ರ ಕಾರ್ಯಕ್ರಮಗಳಿಗೆ ಹೋಗುತ್ತೇನೆ"...
ಮಾತುಗಳಿಗಿಂತ, ಅಕ್ಷರಗಳಿಗಿಂತ, ನಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಗಳೇ ಬಹುಮುಖ್ಯ ಮತ್ತು ಅಮೂಲ್ಯ. ಕೆಲವರು ಬರೆಯುತ್ತಾರೆ, ಅತ್ಯುತ್ತಮ ಭಾಷೆ, ಭಾವ, ವಾಕ್ಯ, ಛಂದಸ್ಸುಗಳ ಸಮಾಗಮದಂತೆ. ಆದರೆ ಅವರ ನಿಜ ಜೀವನದ ವರ್ತನೆ ತುಂಬಾ ಬಾಲಿಶವಾಗಿ, ಅಪಾಯಕಾರಿಯಾಗಿ ಮತ್ತು ಆತ್ಮಸಾಕ್ಷಿ ಮರೆಮಾಚಿ ಮುಖವಾಡವನ್ನು ಹೊಂದಿರುತ್ತದೆ. ಓದುಗರ ಸಂಖ್ಯೆ ಮುಖ್ಯವಲ್ಲ. ಅವರ ವ್ಯಕ್ತಿತ್ವ, ಪ್ರಬುದ್ಧ ಮನಸ್ಸುಗಳ ಗುಣಮಟ್ಟ ಮುಖ್ಯ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸುತ್ತಾ ಮತ್ತು ಸ್ವೀಕರಿಸುತ್ತಾ...
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ