‘ನಾಯಿಗಳಿವೆ ಎಚ್ಚರಿಕೆ’ ಬೋರ್ಡ್ ‘ಓದಿದ’ ಮಲಬಾರ್ ಪೈಡ್ ಹಾರ್ನ್ ಬಿಲ್!
‘ಅತಿಥಿ ದೇವೋ ಭವ’; ‘ಬನ್ನಿ ನಿಮಗಿದೋ ಸ್ವಾಗತ’; ‘ಸುಸ್ವಾಗತ’; ‘ವೆಲ್ ಕಮ್’ ಹೀಗೆ ಹತ್ತು ಹಲವು ವಿಧದಲ್ಲಿ ಮನೆಗಳ ಮುಂದೆ ಬೋರ್ಡ್ ಬರೆದು ತೂಗು ಹಾಕಿದ್ದನ್ನು ನಾನು ಚಿಕ್ಕವನಿದ್ದಾಗ ಓದಿದ್ದೇನೆ. ಅದೇ ಏಕೋಭಾವದಿಂದ ಅತಿಥಿಗಳನ್ನು ನಮ್ಮ ಹಿರಿಯರು ಸಂಭ್ರಮದಿಂದ ಮನೆಗಳಲ್ಲಿ ಸ್ವಾಗತಿಸುತ್ತಿದುದನ್ನು ಸಹ ನಾನು ಕಂಡಿದ್ದೇನೆ. ಆದರೆ ಈಗ.. ಅದೇ ಮನೆಗಳ ಮುಂದೆ ‘ನಾಯಿಗಳಿವೆ ಎಚ್ಚರಿಕೆ’, ‘ನಾಯಿ ಇದೆ ಎಚ್ಚರಿಕೆ’, ‘ಈ ಕಟ್ಟಡದ ಒಳಗೆ ಪ್ರವೇಶಿಸುವುದು ನಿಮ್ಮ ಸ್ವಂತ ರಿಸ್ಕ್ ಮೇಲೆ’, ‘ನಾಯಿ ಕಚ್ಚಿದರೆ ನಾವು ಜವಾಬ್ದಾರರಲ್ಲ’, ಈ ತರಹದ ‘ಅಮಾನವೀಯ’ಫಲಕಗಳು ತೂಗುತ್ತಿರುವುದನ್ನು ಕಾಣುತ್ತಿದ್ದೇನೆ.
ನನಗೆ ಈ ಫಲಕಗಳನ್ನು ಓದಿದಾಗಲೊಮ್ಮೆ ನಿರಾಸೆ. ನನಗೆ ಓದಲು-ಬರೆಯಲು ಬರುತ್ತದಲ್ಲ ಎಂದು ನೆನೆದು ಕೆಲವೊಮ್ಮೆ ದು:ಖವೂ ಆಗುತ್ತದೆ. ಜತೆಗೆ, ‘ಇದ್ದವರು ಹೇಳಿದರೆ ನಂಬೋದಿಲ್ಲ; ಸತ್ತವರು ಎದ್ದು ಬಂದು ಹೇಳೋದಿಲ್ಲ!’ ನಮ್ಮಜ್ಜಿ ಸಿಟಿಗೆದ್ದಾಗ ನನಗೆ ಹೇಳುತ್ತಿದ್ದ ಮಾತು ನೆನಪಾಗುತ್ತದೆ. ಎರಡು ದಶಕಗಳ ಅಭಿವೃದ್ಧಿಯ ನಾಗಾಲೋಟ ನಮ್ಮನ್ನು ‘ಇಷ್ಟು’ ಬದಲಿಸಿತೆ? ಮನುಷ್ಯರ ಈ ಪರಿ ‘ಮಾನವತೆ’ಯ ಬೋರ್ಡ್ ಗಳನ್ನು ಪಕ್ಷಿಗಳಿಗೂ ಓದಲು ಬರುತ್ತದೆ! ಆಶ್ಚರ್ಯವಾಯಿತೇ? ಇಲ್ಲಿದೆ ಉದಾಹರಣೆ.
ಮಲಬಾರ್ ಪೈಡ್ ಹಾರ್ನ್ ಬಿಲ್ (ಮಂಗಟ್ಟೆ ಹಕ್ಕಿ) ಧಾರವಾಡದ ಮಂಜುನಾಥಪುರಕ್ಕೆ ನಿನ್ನೆ ಸಂಜೆ ಏಕಾಏಕಿ ಭೇಟಿ ನೀಡಿತ್ತು. ಅದೂ ಗಿಡಗಂಟಿಗಳಿಂದ ಆವೃತ್ತವಾಗಿರುವ ಪಟ್ಟಣದಲ್ಲಿ ಕಾಡು ಮನೆಯಂತಿರುವ, ನಿವೃತ್ತ ಎಸ್ಪಿ ನಾಗನೂರ ಅವರ ಮನೆಯ ಹಿತ್ತಿಲಿಗೆ ಬಂದಿತ್ತು. ಮನೆಯ ಮುಂಬಾಗಿಲಿನ ಆವರಣದಲ್ಲಿ ಸಾಕಷ್ಟು ಹಣ್ಣಿನ ಗಿಡಗಳಿವೆ; ಆದರೂ, ಹಿತ್ತಿಲಿಗೇ ಏಕೆ ಮಂಗಟ್ಟೆ ಹಕ್ಕಿ ಹಾರಿಬಂತು? ಕಾರಣ ಮುಂಬಾಗಿಲಿಗೆ ‘ನಾಯಿಗಳಿವೆ ಎಚ್ಚರಿಕೆ’ಫಲಕ ತೂಗು ಬಿದ್ದಿದೆ! ಅದನ್ನು ‘ಓದಿದ’ ಹಾರ್ನ್ ಬಿಲ್ ‘ಪ್ರಿಕಾಶನ್’ ತೆಗೆದುಕೊಳ್ಳಲು ಹಾಗೆ ಮಾಡಿರಬಹುದು!
ಪಶ್ಚಿಮ ಘಟ್ಟದ ಕಾಡುಗಳಿಗೆ ಹೊಂದಿಕೊಂಡಿರುವ ಹಳಿಯಾಳ, ದಾಂಡೇಲಿ ಹಾಗೂ ಅಂಬಿಕಾನಗರಗಳಲ್ಲಿ ಕಾಡಿನ ಆರೋಗ್ಯ ಸೂಚಕ ಪಕ್ಷಿಯಾಗಿ ಮಲಬಾರ್ ಪೈಡ್ ಹಾರ್ನ್ ಬಿಲ್ ‘ಮಂಗಟ್ಟೆ ಹಕ್ಕಿಗಳು’ ಕಂಡು ಬರುತ್ತವೆ. ಈ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಕಾಡು ಆರೋಗ್ಯಪೂರ್ಣವಾಗಿದೆ ಎಂದರ್ಥ. ಸಂಖ್ಯೆ ಕ್ಷೀಣಿಸಿದ್ದರೆ ಕಾಡಿನ ಯಾವುದೋ ಭಾಗದಲ್ಲಿದ್ದ ಹಣ್ಣಿನ ಮರಗಳು ಆಹುತಿಯಾಗಿವೆ; ಹಾಗಾಗಿ ಕಾಡಿನ ಸಮತೋಲನ ತಪ್ಪಿ ಅನಾರೋಗ್ಯ ಅಪ್ಪಳಿಸಿದೆ ಎಂದು ಗಣಿಸಲಾಗುತ್ತದೆ. ಶಿರಸಿಯ ವಿಭಾಗೀಯ ಅರಣ್ಯಾಧಿಕಾರಿ ವಿಜಯಕುಮಾರ್ ಈ ಮಾತಿಗೆ ಸಾಕಷ್ಟು ಪುರಾವೆಗಳನ್ನು ಒದಗಿಸಬಲ್ಲರು.
ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಮಂಗಟ್ಟೆಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. ಕೆಲವೊಮ್ಮೆ ಫೆಬ್ರುವರಿ ತಿಂಗಳಿನಲ್ಲಿಯೂ ಅವುಗಳ ಸಂಸಾರ ಆರಂಭಗೊಳ್ಳಬಹುದು. ಆದರೆ, ಕಾಡು ಈಗ ಮೊದಲಿನಂತೆ ಉಳಿದಿಲ್ಲ. ಮಾನವ ನಿರ್ಮಿತ ‘ಮ್ಯಾನ್ ಗ್ರೋವ್’ಮಾದರಿ ಪಶ್ಚಿಮ ಘಟ್ಟದ ಅಳಿದು-ಉಳಿದ ಕಾಡಿನಲ್ಲಿ ಸಾಮಾಜಿಕ ಅರಣ್ಯೀಕರಣದ ಹೆಸರಿನಲ್ಲಿ ಸ್ಥಳೀಯ ಜೈವಿಕ ಸಂರಚನೆ ಹಾಗೂ ಸೂಕ್ಷ್ಮತೆ ಅರಿಯದೇ (ಇದು ನಮ್ಮ ಅರಿವಿಗೆ ಮೀರಿದ ವಿಚಾರವೂ ಹೌದು; ಮಿತಿಯೂ ಹೌದು. ಲಕ್ಷಾಂತರ ಸೂಕ್ಷ್ಮ ಕೊಂಡಿಗಳನ್ನು ತನ್ನೊಳಗೆ ಬೆಸೆದುಕೊಂಡಿರುವ ಸಂಕೀರ್ಣ ವ್ಯವಸ್ಥೆ ಅದು.) ವೃಕ್ಷಾರೋಪಣ ಕಾರ್ಯಕ್ರಮ ಮಾಡಿದೆವು. ಫಲವಾಗಿ ಕಾಡಿನ ಹಣ್ಣಿನ ಗಿಡಗಳು ಹೇಳಹೆಸರಿಲ್ಲದಂತಾದವು. ಹಾಗಾಗಿ ಬದುಕಲು ಅನಿವಾರ್ಯವಾಗಿ ಹಣ್ಣಿನ ಗಿಡಗಳನ್ನು ಅರಸಿಕೊಂಡು ನೂರಾರು ಕಿಲೋ ಮೀಟರ್ ಗಂಡು ಮಂಗಟ್ಟೆ ಹಕ್ಕಿ ಕ್ರಮಿಸಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ. ಇದು ಕಾಡಿಗೆ ತಗುಲಿರುವ ಅನಾರೋಗ್ಯದ ಸೂಚಕವಲ್ಲದೇ ಮತ್ತೇನು? ಧಾರವಾಡಕ್ಕೆ ಬಂದ ಮಂಗಟ್ಟೆ ಅಂಬಿಕಾನಗರ ಅಥವಾ ಹಳಿಯಾಳದಿಂದ ಸುಮಾರು ೮೦ ಕಿಲೋ ಮೀಟರ್ ಆದರೂ ಕ್ರಮಿಸಿತ್ತು!
ರಣ ಹದ್ದಿನ ಗಾತ್ರದ ಈ ಹಕ್ಕಿಗೆ ಅಗಾಧವಾದ ಕೊಕ್ಕಿನ ಮೇಲೆ ಖಡ್ಗ ಮೃಗಕ್ಕಿರುವಂತೆ ಕೊಂಬು. ಕುತ್ತಿಗೆ ಹಾಗೂ ರೆಕ್ಕೆಗಳ ಬಣ್ಣ ಕಪ್ಪು. ಕೆಲವು ಮಂಗಟ್ಟೆಗಳಿಗೆ ಕುತ್ತಿಗೆ ಹಾಗೂ ಎದೆಯ ಮೇಲೆ ಬಿಳಿ ಪಟ್ಟಿಗಳಿರುತ್ತವೆ. ಗಲ್ಲದ ಬಳಿ ಕೆಂಪು ಪಟ್ಟಿ ಸಹ ಇರಬಹುದು. ಉದ್ದವಾದ ಬಿಳಿ ಬಾಲದ ತುದಿಯಲ್ಲಿ ಕಪ್ಪು ಪಟ್ಟಿಗಳು ಹಕ್ಕಿಯ ಸೌಂದರ್ಯಕ್ಕೆ ಕಿರೀಟವಿಟ್ಟಂತೆ ಭಾಸವಾಗುತ್ತದೆ. ರೆಕ್ಕೆಗಳ ಅಂಚಿನಲ್ಲಿರುವ ಬಿಳಿ ಪಟ್ಟಿಗಳು ಹಕ್ಕಿ ಹಾರಿದಾಗ ಸ್ಪಷ್ಟವಾಗಿ ಕಾಣುತ್ತವೆ. ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿ, ಕರ್ನಾಟಕದ ಮುಕುಟವಾಗಿರುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಂಡುಬರುತ್ತವೆ. ಪರಿಸರ ಹಾನಿ, ಹಣ್ಣಿನ ಮರಗಳ ಕೊರತೆ ಹಾಗೂ ಶಿಕಾರಿಗಳ ದೆಸೆಯಿಂದ ಈ ದೊಡ್ಡ ಮಂಗಟ್ಟೆ ಹಕ್ಕಿಗಳು ವಿನಾಶದ ಅಂಚಿಗೆ ತಲುಪಿವೆ ಎನ್ನುತ್ತಾರೆ ತಜ್ಞರು.
ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಗೆ ಹಿಂದಿ ಭಾಷೆಯಲ್ಲಿ ‘ಧನ್ ಛಿರಿ’, ಬಂಗಾಳಿಯಲ್ಲಿ ‘ಬಾಗ್ಮಾ ಧನೇಶ್’, ಓರಿಯಾದಲ್ಲಿ ‘ಕುಛಲಾ ಖಾ’, ಮರಾಠಿಯಲ್ಲಿ ‘ವಯೇರಾ’, ಕೊಂಕಣಿಯಲ್ಲಿ ‘ಕನಾರಿ’, ತಮಿಳಿನಲ್ಲಿ ‘ಇರಟ್ಟಾಯ್ ಛೋಂಡು ಕುರುವಿ’, ಮಲಯಾಳಿಯಲ್ಲಿ ‘ವೆಝಂಬಾಲ್’ಎಂದು ಕರೆಯಲಾಗುತ್ತದೆ. ಅಂಜೂರ ಜಾತಿಯ ಅತ್ತಿ, ಆಲ, ಬಸರಿ ಸೇರಿದಂತೆ ಎಲ್ಲ ತರಹದ ಕಾಡಿನ ಹಣ್ಣಿನ ಮರಗಳಲ್ಲಿ ಗುಂಪು ಗೂಡಿ ಮಕ್ಕಳಂತೆ ಗಲಾಟೆ ಎಬ್ಬಿಸಿ ಹಣ್ಣುಗಳನ್ನು ಹೆಕ್ಕುವುದು ನಯನ ಮನೋಹರ ದೃಷ್ಯ. ಅನಿವಾರ್ಯ ಪ್ರಸಂಗಗಳಲ್ಲಿ ಹಲ್ಲಿ, ಓತಿಕ್ಯಾತ, ಇಲಿ, ಮರಿ ಹೆಗ್ಗಣ ಮರಿ ಪಕ್ಷಿಗಳನ್ನು ಸಹ ಹಾರ್ನ್ ಬಿಲ್ ಕಬಳಿಸಬಲ್ಲುದು ಎನ್ನುತ್ತಾರೆ ಡಾ. ಸಲೀಂ ಅಲಿ. ಮಂಗಟ್ಟೆ ಹಕ್ಕಿ ಕೂಗಿದಾಗ ಕೇಕೆ ಹೊಡೆದು ನಕ್ಕ ಹಾಗೆ ಭಾಸವಾಗುತ್ತದೆ. ಮರದಿಂದ ಮರಕ್ಕೆ ಹಾರುವಾಗ ರೆಕ್ಕೆ ಬಡಿದು ತೇಲುವ ಅವುಗಳ ಕ್ಷಮತೆ ಹೆಲಿಕಾಪ್ಟರ್ ನೆನಪಿಸುವಂತಿರುತ್ತದೆ.
ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಯ ವಿಶೇಷವೆಂದರೆ ಸಂತಾನಾಭಿವೃದ್ಧಿ ಕಾಲಕ್ಕೆ ಹೆಣ್ಣು ಹಕ್ಕಿ ಕಾಡಿನ ಮಧ್ಯದ ದೊಡ್ಡ ಮರವನ್ನು ಹುಡುಕುತ್ತದೆ. ಅತ್ಯಂತ ಎತ್ತರದಲ್ಲಿ ಪೊಟರೆ ಕೊರೆದು ತಾನು ಅದರೊಳಗೆ ಇಳಿಯುತ್ತದೆ. ಘೇಂಡಾಮೃಗದಂತೆ ಕೊಕ್ಕಿನ ಮೇಲೆ ದೊಡ್ಡ ಕೊಂಬಿರುವ ಕಾರಣ ಆ ಹದ್ದಿನ ಗಾತ್ರದ ಹಕ್ಕಿಗೆ ಇಡಿಯಾಗಿ ಆ ಬಿಲದೊಳಗೆ ತೂರಿಕೊಳ್ಳುವುದು ಸಾಧ್ಯವಾಗದ ಮಾತು. ಹಾಗಾಗಿ ಹೆಣ್ಣು ಮಂಗಟ್ಟೆ ಸಮರ್ಪಕವಾದ ಆಕಾರಕ್ಕೆ ಗೂಡನ್ನು ತರಲು ಗಂಡಿನ ಸಹಾಯದಲ್ಲಿ ಪೊಟರೆ ಕೊರೆಯುತ್ತ ಹೋಗುತ್ತದೆ. ಗೂಡು ಸಮರ್ಪಕವಾಗಿದೆ ಎನಿಸಿದಾಗ ಹೆಣ್ಣು ಮಂಗಟ್ಟೆ ಒಳಹೊಕ್ಕು ಕೇವಲ ಒಂದು ಮೊಟ್ಟೆ ಇಡುತ್ತದೆ. (ಕೆಲವೊಮ್ಮೆ ೨ ಮೊಟ್ಟೆಗಳನ್ನು ಸಹ ಇಟ್ಟ ಉದಾಹರಣೆಗಳಿವೆ; ನಾಲ್ಕು ಮೊಟ್ಟೆ ಇಟ್ಟ ದಾಖಲೆ ಸಹ ಇದೆ, ಆದರೆ ಮರಿ ಮಾತ್ರ ಒಂದು ಬದುಕಬಹುದು) ಮೊಟ್ಟೆಯ ಬಣ್ಣ ಬಿಳಿ ಹಾಗೂ ಕಟ್ಟಿಗೆ ಕಂದು ಬಣ್ಣ ಹೋಲುತ್ತದೆ.
ಮೊಟ್ಟೆ ಇಟ್ಟ ತಕ್ಷಣ ಕೇವಲ ಕೊಕ್ಕು ಮಾತ್ರ ಹೊರಬರುವಂತೆ ವ್ಯವಸ್ಥೆ ಮಾಡಿಕೊಂಡು ಬಾಯಿಯ ಜೊಲ್ಲು, ಗಿಡದ ರಾಳ ಹಾಗೂ ಅಂಟು ಬಳಸಿ ಇಡೀ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ಬಿಡುತ್ತದೆ. ಗಂಡು ಮಂಗಟ್ಟೆ ತನ್ನ ಪತ್ನಿಗೆ ಆಹಾರ ಒದಗಿಸುವ ಸೇವಕನ ಕೆಲಸಕ್ಕೆ ಅಣಿಯಾಗುತ್ತದೆ. ಇತ್ತ ಪೊಟರೆಯೊಳಗೆ ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುತ್ತ, ತನಗೆ ಹಾಗೂ ಮೊಟ್ಟೆ ಒಡೆದು ಜೀವ ತಳೆಯಲಿರುವ ಮರಿಗೆ ಜಾಗೆ ಸಾಲದು ಎಂಬ ಕಾರಣಕ್ಕೆ ತನ್ನೆಲ್ಲ ಪುಕ್ಕಗಳನ್ನು ಕಿತ್ತು ಹೊರಗೆಸೆದು ಸಂಪೂರ್ಣ ಬೋಳಾಗಿ ಹಾರಲಾಗದ ಸ್ಥಿತಿಗೆ ತಲುಪುತ್ತದೆ. ಹಾಗೆಯೇ, ಚಿಕ್ಕ ಗರಿಗಳನ್ನು ಬಳಸಿ ತನ್ನ ಮರಿಗೆ ಪೊಟರೆಯ ಒಳಗೆ ‘ಬೆಡ್’ಸಹ ನಿರ್ಮಾಣ ಮಾಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬಂದು ಹಾರುವ ಸ್ಥಿತಿ ತಲುಪುವ ವೇಳೆಗೆ ತಾಯಿ ಹಕ್ಕಿ ಸಹ ತನ್ನ ರೆಕ್ಕೆಯ ಗರಿಗಳನ್ನು ಮರಳಿ ಪಡೆದುಕೊಂಡಿರುತ್ತದೆ. ಈ ಮಧ್ಯೆ, ಗಂಡು ಹಕ್ಕಿ ತನ್ನ ಕೊಕ್ಕಿನಲ್ಲಿ ನೀರನ್ನು ಹಿಡಿದು ತರಲು ಸಾಧ್ಯವಾಗದ್ದರಿಂದ ನೀರಿನ ಅಂಶ ಹೇರಳವಾಗಿರುವ ಹಣ್ಣುಗಳನ್ನೇ ಹುಡುಕಿ ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ತಂದು ತಾಯಿ ಹಾಗೂ ಮರಿ ಹಕ್ಕಿಗೆ ಉಣಬಡಿಸುತ್ತದೆ. ಸಮಯ ಸಿಕ್ಕಾಗ ತಾನೂ ತನ್ನ ಉದರಂಭರಣ ಮಾಡಿಕೊಳ್ಳುತ್ತದೆ. ಕೆಲವೊಮ್ಮೆ ತಾನು ಉಪವಾಸ ಉಳಿದು ತನ್ನವರಿಗಾಗಿ ಹಣ್ಣನ್ನು ಸಹ ಹೆಕ್ಕಿತರುತ್ತದೆ ಗಂಡು ಮಲಬಾರ್ ಪೈಡ್ ಹಾರ್ನ್ ಬಿಲ್!
ಮರಿ ಹಾರುವ ಹಂತ ತಲುಪಿದಾಗ ತಾಯಿ ಹಕ್ಕಿ ಗೂಡಿನ ಬಾಗಿಲನ್ನು ತನ್ನ ಕೊಕ್ಕಿನಿಂದ ಒಡೆದು ತೆಗೆಯುತ್ತದೆ. ಈ ಹಂತದಲ್ಲಿ ತಾಯಿ ಹಕ್ಕಿ ಹಾಗೂ ಮರಿಯ ರೆಕ್ಕೆಗಳು ಬಲಿತದ್ದರಿಂದ ಪೊಟರೆ ಅತ್ಯಂತ ಚಿಕ್ಕದಾಗುತ್ತ ಸಾಗಿರುತ್ತದೆ. ತಂದೆ ಹಕ್ಕಿಯ ಸುಪರ್ದಿಯಲ್ಲಿ ಮರಿ ತಾನು ಕಾಡಿನ ಬದುಕಿಗೆ ಅಣಿಗೊಳ್ಳುತ್ತದೆ. ತನಗೊಂದು ಸಂಗಾತಿ ಜತೆಯಾಗುವ ವರೆಗೆ ತಂದೆ-ತಾಯಿ ಹಕ್ಕಿಗಳೊಂದಿಗೆ ಮರಿ ಅನ್ಯೋನ್ಯವಾಗಿ ಸ್ವಚ್ಛಂದವಾಗಿ ಹಾರಾಡುತ್ತ ಬಾಳುತ್ತದೆ. ಹತ್ತಾರು ಬಾರಿ ಇದೇ ಗೂಡನ್ನು ಸಂತಾನಾಭಿವೃದ್ಧಿಗೆ ತಂದೆ-ತಾಯಿ ಹಕ್ಕಿಗಳು ಬಳಸಬಹುದು ಅಥವಾ ಆ ಪೊಟರೆಯಲ್ಲಿ ಜೀವ ತಳೆದಿದ್ದ ಮರಿ ಹಕ್ಕಿ ತನ್ನ ಸಂಗಾತಿಯೊಂದಿಗೆ ಇದೇ ಪೊಟರೆಗೆ ಆಗಮಿಸಿ ಹೊಸ ಸಂಸಾರ ಹೂಡಬಹುದು!
ವಿಷಯಾಂತರವಾದುದಕ್ಕೆ ಕ್ಷಮೆ ಇರಲಿ; ಈಗ ಮತ್ತೆ ಮರಳಿ ನಮ್ಮ ವಿಷಯಕ್ಕೆ ಬರೋಣ. ಕಾಡನ್ನು ಬಿಟ್ಟು ಧಾರವಾಡದಂತಹ ಕಾಂಕ್ರೀಟ್ ನಗರಕ್ಕೆ ಹಣ್ಣಿನ ಗಿಡಗಳನ್ನು ಹುಡುಕಿ ದೊಡ್ಡ ಕೊಕ್ಕಿನ ಹಕ್ಕಿ ಹಾರಿ ಬಂದರೆ? ದೇವರ ದಯೆಯಿಂದ ಕೆಲ ಹಣ್ಣುಗಳನ್ನು ಅದು ಸಂಗ್ರಹಿಸಿದರೂ ತನ್ನ ಪತ್ನಿಯ ಗೂಡಿಗೆ ಮರಳುವ ವರೆಗೆ ಕೊಕ್ಕಿನಲ್ಲಿ ಕಾಯ್ದಿಟ್ಟುಕೊಳ್ಳಲು ಪಡುವ ಬವಣೆ ಆ ದೇವರಿಗೇ ಪ್ರೀತಿ. ಮಾರ್ಗ ಮಧ್ಯೆ ಗಂಡು ಮಲಬಾರ್ ಪೈಡ್ ಹಾರ್ನ್ ಬಿಲ್ ಹಸಿವೆಯಾಗಿದೆ ಎಂದು ಹಣ್ಣುಗಳನ್ನು ನುಂಗುವಂತಿಲ್ಲ! ಹೈ ಟೆನ್ಶನ್ ವಿದ್ಯುತ್ ವಾಯರ್ ಗಳ ಬಗ್ಗೆ ಅರಿವಿರದ ಈ ಹಕ್ಕಿ ಅಪ್ಪಿ ತಪ್ಪಿ ಹಾರಿ ಬಂದು, ಕುಳಿತಲ್ಲಿ ಅಥವಾ ಆಯ ತಪ್ಪಿ ರೆಕ್ಕೆಗಳು ಬಡಿದಲ್ಲಿ ಅದು ಸತ್ತೇ ಹೋಗುವ ಅಪಾಯವಿದೆ. ನಗರ ಪರಿಸರಕ್ಕೆ ಹೊಂದಿಕೊಂಡಿರುವ ಪಕ್ಷಿಗಳು ಅದನ್ನು ಅಟ್ಟಿಸಿಕೊಂಡು ಹೋಗುವ ಭೀತಿ ಯಾವತ್ತೂ ಆವರಿಸಿರುತ್ತದೆ.
ನಗರ ಭೇಟಿಯ ಸಂದರ್ಭದಲ್ಲಿ ಗಂಡು ಹಕ್ಕಿ ಆಕಸ್ಮಿಕವಾಗಿ ಸಾವನ್ನಪ್ಪುವ ಅವಘಡ ಸಂಭವಿಸಿದರೆ....ರೆಕ್ಕೆ ಕಳೆದುಕೊಂಡು ಪೊಟರೆಯೊಳಗೆ ಬಂಧಿಯಾಗಿರುವ ಹೆಣ್ಣು ಹಕ್ಕಿ, ಜೀವ ತಳೆದಿರುವ ಅಥವಾ ತಳೆಯುತ್ತಿರುವ ಹಕ್ಕಿ ಮರಿ ಹತ್ತಾರು ದಿನಗಳು ಹಸಿವಿನಿಂದ ಬಳಲಿ ಪೊಟರೆಯೊಳಗೆ ಸಾವನ್ನಪ್ಪುತ್ತವೆ. ಆ ಪೊಟರೆ ಸ್ಮಶಾನವಾಗಿ ಪರಿವರ್ತಿತಗೊಳ್ಳುತ್ತದೆ. ಏಕ ಪತಿ ಹಾಗೂ ಪತ್ನಿ ವೃತಸ್ಥ ಮಂಗಟ್ಟೆಗಳು ಹಾಗೇನಾದರೂ ಅಕಾಲಿಕವಾಗಿ ಸಾವನ್ನಪ್ಪಿದರೆ ಬದುಕುಳಿದ ಹಕ್ಕಿ ಏಕಾಂಗಿಯಾಗಿ ಜೀವನ ಸವೆಸುತ್ತದೆ. ಬೇರೆ ಯಾವುದೇ ಮಂಗಟ್ಟೆ ದಂಪತಿ ಹಾಗೆ ಸ್ಮಶಾನವಾಗಿ ಪರಿವರ್ತಿತಗೊಂಡ ಪೊಟರೆಯನ್ನು ಸಂತಾನಾಭಿವೃದ್ಧಿಗೆ ಎಂದಿಗೂ ಬಳಸುವುದಿಲ್ಲ. ಅದು ಶಾಶ್ವತವಾಗಿ ತ್ಯಜಿಸಲ್ಪಟ್ಟ ಮನೆಯಾಗುತ್ತದೆ. ಇತ್ತ ಗೂಡಿನಲ್ಲಿ ಹಾರಲಾಗದ ಸ್ಥಿತಿಯಲ್ಲಿ ಬಂಧಿಯಾದ ಹೆಣ್ಣು ಮಂಗಟ್ಟೆಗೆ ಬೇಟೆಗಾರರ ಕಾಟ ಸಹ ಇಲ್ಲವೆಂದಲ್ಲ. ಕಾಡು ಬೋಳಾಗಿ ಕೆಲವೇ ಎತ್ತರದ ಮರಗಳು ಉಳಿದಿರುವ ‘ಹೆಸರಿಗೆ ಕಾಡು’ಗಳಲ್ಲಿ ಬೇಟೆಗಾರರ ಹದ್ದಿನ ಕಣ್ಣುಗಳಿಗೆ ಎತ್ತರದ ಮರದ ಮೇಲೆ ಪೊಟರೆಯೊಳಗಿಂದ ತನ್ನ ದೊಡ್ಡ ಕೊಂಬನ್ನು ಹೊರ ಚಾಚಿ ಕುಳಿತ ತಾಯಿ ಹಕ್ಕಿಯನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಸಹಜವಾಗಿ ಬೇಟೆಗಾರರ ಬಲಿಗೆ ಆಹುತಿಯಾಗುವ ಹೆಣ್ಣು ಹಕ್ಕಿ, ಅದರ ಮರಿ ಅಥವಾ ಮೊಟ್ಟೆ, ಗಂಡು ಹಕ್ಕಿಯನ್ನು ಜೀವನಪರ್ಯಂತ ಏಕಾಂಗಿ ಆಗಿಸಿಬಿಡುತ್ತದೆ.
ಇಂಟರ್ ನ್ಯಾಶನಲ್ ಯೂನಿಯನ್ ಫಾರ್ ಕಾನ್ಸರವೇಶನ್ ಆಫ್ ನೇಚರ್ (ಆಯ್.ಯು.ಸಿ.ಎನ್) ತನ್ನ ಜುಲೈ ೨, ೨೦೦೯ ರ ಸಂಚಿಕೆಯಲ್ಲಿ, ಕಳೆದ ೫ ನೂರು ವರ್ಷಗಳ ಅವಧಿಯಲ್ಲಿ ಸುಮಾರು ೮೦೦ ಪ್ರಾಣಿಗಳು ಹಾಗೂ ಗಿಡಗಳು ವಿಲುಪ್ತಿಯಾಗಿದ್ದು; ೧೭,೦೦೦ ಪ್ರಜಾತಿಗಳು ವಿನಾಶದ ಹಂತಕ್ಕೆ ತಲುಪಿವೆ ಎಂದು ವರದಿ ಮಾಡಿದೆ. ಆ ಸಾಲಿಗೆ ಈ ಸುಂದರ ಪಕ್ಷಿಯೂ ಸೇರಿತೇ?