‘ಸುವರ್ಣ ಸಂಪುಟ' (ಭಾಗ ೨೯) - ಪಾಂಡೇಶ್ವರ ಗಣಪತಿ ರಾವ್
ಶೇ. ಗೋ. ಕುಲಕರ್ಣಿ ಇವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಅವರು ರಚಿಸಿದ ಕವನಗಳೆರಡು ನಮ್ಮ ಓದುಗರಿಗೆ ಬಹಳ ಮೆಚ್ಚುಗೆಯಾಗಿದೆ. ನಮಗೆ ತಿಳಿಯದೇ ಇದ್ದ ಕವಿಗಳ ಬಗ್ಗೆ ನೀವು ಮಾಹಿತಿಯನ್ನು ನೀಡುತ್ತಿರುವುದು ಶಾಘನೀಯ ವಿಷಯ ಎಂದು ಹೇಳಿದ್ದಾರೆ. ಸಂಪುಟದಲ್ಲಿ ಕುಲಕರ್ಣಿಯವರ ಪ್ರಕಟಿತ ಮೂರು ಕವನಗಳಲ್ಲಿ ಎರಡನ್ನು ನಾವು ‘ಸಂಪದ’ದಲ್ಲಿ ಪ್ರಕಟಿಸಿದ್ದೇವೆ. ಮತ್ತೊಂದು ಕವನದ ಶೀರ್ಷಿಕೆ ‘ಆತ್ಮಶಿಶು'. ಈ ವಾರ ನಾವು ಆಯ್ದ ಕವಿ ಪಾಂಡೇಶ್ವರ ಗಣಪತಿ ರಾವ್.
ಪಾಂಡೇಶ್ವರ ಗಣಪತಿ ರಾವ್ (ಜಿ.ಆರ್. ಪಾಂಡೇಶ್ವರ): ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ೨೩ ಜುಲೈ ೧೯೦೮ರಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರ ರಾವ್ ಹಾಗೂ ತಾಯಿ ಸೀತಮ್ಮ. ಇಂಟರ್ ಮೀಡಿಯೆಟ್ ತನಕ ಶಿಕ್ಷಣ ಪಡೆದ ಇವರು ಸಾಹಿತ್ಯ ವಿಷಯಗಳಲ್ಲಿ ಬಹಳ ಚುರುಕಾಗಿದ್ದರು. ವೀರಕೇಸರಿ, ಲೋಕಮತ ದಿನಪತ್ರಿಕೆಗಳ ಸಂಪಾದಕರಾಗಿದ್ದರು. ತಮ್ಮ ೧೭ನೆಯ ವಯಸ್ಸಿನಲ್ಲೇ ‘ವಿವೇಕಾನಂದ ಚರಿತಮ್' ಎಂಬ ಕಾವ್ಯವನ್ನು ರಚಿಸಿದ್ದರು. ಸ್ವಲ್ಪ ಸಮಯ 'ಜಯ ಕರ್ನಾಟಕ' ಪತ್ರಿಕೆಗೆ ಸಂಪಾದಕರಾಗಿದ್ದರು. ೧೯೪೦-೪೨ರ ಅವಧಿಗೆ ಕರ್ನಾಟಕ ಹರಿಜನ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇವರು ಬಾಲ್ಯದಿಂದಲೇ ಸುಂದರ ಪರಿಸರ ಹಾಗೂ ಪ್ರಕೃತಿಯ ಬಗ್ಗೆ ಕವನಗಳನ್ನು, ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದರು. ‘ನಾಗರಿಕ’ ಎಂಬ ಪತ್ರಿಕೆಯ ಸಂಪಾದಕರೂ, ಪ್ರಕಾಶಕರೂ ಆಗಿದ್ದರು.
ಗಣಪತಿ ರಾವ್ ಅವರು ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೆಲಕಾಲ ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಕನ್ನಡ ವಿಭಾಗಕ್ಕೆ ಸಂಪಾದಕರಾಗಿದ್ದರು. ಇವರಿಗೆ ಪಿ.ಆರ್. ರಾಮಯ್ಯ ಪ್ರಶಸ್ತಿ ದೊರೆತಿದೆ. ಜಿ. ಆರ್. ಪಾಂಡೇಶ್ವರ ಎಂಬ ಪ್ರತಿಷ್ಟಾನ ಇವರ ಸ್ಮರಣಾರ್ಥ ಉತ್ತಮ ಸಂಪಾದಕರೊಬ್ಬರಿಗೆ ‘ಪಾಂಡೇಶ್ವರ ಪ್ರಶಸ್ತಿ’ಯನ್ನು ಪ್ರತೀ ವರ್ಷ ಕೊಡಮಾಡುತ್ತಿದ್ದಾರೆ.
ಇವರು ರಚಿಸಿದ ಪ್ರಮುಖ ಕೃತಿಗಳು: ವಿವೇಕಾನಂದ ಚರಿತಮ್, ಕೊಳಲು ಕೃಷ್ಣ, ಚೆಂಗಲವೆ, ಸುಪಂಥ, ಯಕ್ಷಗಾನ ಕಲಾಲೋಕ ಇತ್ಯಾದಿ. ‘ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಮೂರು ಕವನಗಳು (ಕನ್ನಡ ತಾಯ ಪಾದಕ್ಕೆ, ಶ್ರೀರಂಗಪಟ್ಟಣ ಹಾಗೂ ಸಂಜೆ ಬಂತು) ಪ್ರಕಟವಾಗಿವೆ. ನಾವು ಎರಡು ಕವನಗಳನ್ನು ಸಂಗ್ರಹಿಸಿ ಇಲ್ಲಿ ನೀಡುತ್ತಿದ್ದೇವೆ.
***
ಕನ್ನಡ ತಾಯ ಪಾದಕ್ಕೆ
ತಾಯೇ, ಕನ್ನಡ ದೇವಿ ! ಕೈಗೊಳೆನ್ನೀ ಸೇವೆ
ತಾಯೆ, ನಿನಗಳ್ತಿಯಿಂದೀವೆ ನುಡಿದೊಡವ!
ಪಂಪನೊಲು ಕಂಪುಗುವ ಕವನ ಕುಸುಮವನಿತ್ತು
ಸೊಂಪಿನುತ್ಸವದಿ ಪೂಜಿಸಲರಿಯೆನು;
ರನ್ನ, ಕವಿರನ್ನನೊಲು, ರತ್ನರಾಶಿಯನಿತ್ತು,
ರತ್ನಗರ್ಭೇ ಎಂದು ಹೊಗಳಲರಿಯೆಂ !
ಕನ್ನಡದ ಕವಿಚೂತವನ ಚೈತ್ರನೊಲು ನಿನ್ನ
ಭಾಗೋತ್ಸವಕೆ ಮಧುವ ತರಲಾರೆನು ;
ಬಣಗು ಕವಿಗಳನು ಲೆಕ್ಕಿಸದ ಕಬ್ಬಿಗರಾಯ
ನೊಲು ನಿನ್ನ ಕೀರ್ತಿಗಾನವ ಹಾಡೆನು.
ಇನ್ನೆನಿತೊ ಇಂಪಿಂದ ಕವಿಗಳೆನಿಬರೊ ಜನಿಸಿ
ನಿನ್ನ ರೂಪವನು ಬಣ್ಣಿಸಿ ಬರೆದೊಡಂ,
ಮುನ್ನೆಸೆವನಂತಕಾಲವೆ ನುಡಿಯಲಾಂ ನಿನ್ನ
ಬಣ್ಣಿಸಿದೆನೋ ಇಲ್ಲವೆಂಬ ನಿಜವ !
***
ಸಂಜೆ ಬಂತು
೧
ಸಂಜೆಬಂತು, ಸಂಜೆಬಂತು,
ಮುಗಿಲ ಕದವ ತೆರೆದು ಬಂತು
ಕಡಲ ಕೆರೆಯ ತೊರೆದು ಬಂತು
ಹೊಳಲು ಮಧ್ಯಕೆ -
ಉಡುಗಳಡಿಯನಿಡುತ ಬಂತು
ಗಗನ ಮಧ್ಯಕೆ.
೨
ಹೊಳಲ ಹೂವ ಮುಗಿಸಿ ಬಂತು,
ಬಾನಿನಲರ ನಗಿಸಿ ಬಂತು,
ಕೊಳಲ ಕರೆಯ ಕೇಳಿ ಬಂತು
ಚೆಲುವ ಹಳ್ಳಿಗೆ -
ಹಳುವ ತೆರೆಯ ಸೀಳಿ ಬಂತು
ಹೊಳಲ ಗಲ್ಲಿಗೆ.
೩
ಕಡಲನಳೆದು, ಕಾಡ ತುಳಿದು
ಬೆಟ್ಟದಿಂದಲಳುಕುತಿಳಿದು,
ಇಳೆಯ ನಗೆಯ ನುಂಗಿ ಮುಳಿದು
ಸಂಜೆ ಬಂದಿತು -
ಹೊಳೆವ ತಾರೆ ತಳತಳಿಸುತ-
ಲದೋ ನಿಂತಿತು
೪
ದೂರದೂರಿಗೈದ ನಲ್ಲ
ನೀರೆಯ ಹಂಬಲದಿ ಮೆಲ್ಲ
ಗಾರಿದುಸಿರನುಸಿರುವಂತೆ
ಗಾಳಿಬೀಸುತ
ಸಾರಿ ಬಂತು ಸಂಜೆಯು ಕಂ-
ಬನಿಯ ಸೂಸುತ !
೫
ನೀಲ ಮುಗಿಲ ಮೇಗಣಿಂದ,
ನೀಲ ಕಡಲಿನಾಳದಿಂದ
ನೀಲಗೀತ ಲಹರಿಯೊಂದ
ದಿಳೆಗೆ ಸುರಿದುದು,
ನೀಲೆಯೊಂದೆ ಬಣ್ಣದಿಂದ
ಲಿಳೆಯ ಬರೆದುದು !
೬
ತಳಿರ ತಂಪು ತೆಕ್ಕೆಯಲ್ಲಿ
ಚಿಲಿಪಿಲಿಯಿಂ ಪಕ್ಕಿಯಲ್ಲಿ
ಉಲಿಯುತಿಹುದು ಪುಟ್ಟ ಮರಿಗೆ
ಸಂಜೆಯ ಬರವ-
ಹಳಿಯುತಿಹುದು ಮನವು ನೊಂದು
ಬೇಸರವಿರವ !
***
(‘ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ)