‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫) - ಡಿ.ವಿ.ಗುಂಡಪ್ಪ

ಡಿ.ವಿ.ಗುಂಡಪ್ಪನವರು ‘ಡಿ.ವಿ.ಜಿ' ಎಂಬ ಹೆಸರಿನಲ್ಲಿ ತಮ್ಮ ಬರಹಗಳನ್ನು ಬರೆದಿದ್ದಾರೆ. ಹೊಸಗನ್ನಡ ಸಾಹಿತ್ಯದ ಆದ್ಯ ಪ್ರವರ್ತಕರಲ್ಲಿ ಒಬ್ಬರು. ಕನ್ನಡದ ಆಚಾರ್ಯ ಪುರುಷರೆಂದೂ ಪ್ರಸಿದ್ಧಿ ಪಡೆದ ಇವರು ಮೇಲ್ಮಟ್ಟದ ಪತ್ರಿಕೋದ್ಯಮವನ್ನು ಮಾಡಿದವರು. ಕನ್ನಡದಲ್ಲಿ ಕಾವ್ಯಗಳು, ನಾಟಕಗಳು, ಜೀವನ ಚರಿತ್ರೆಗಳು, ಪ್ರಬಂಧಗಳು, ಮಕ್ಕಳ ಕತೆಗಳು ಹೀಗೆ ಇವರ ಕೃತಿಗಳು ಬಹುಮುಖವಾಗಿವೆ. ‘ವಸಂತ ಕುಸುಮಾಂಜಲಿ' ಎಂಬ ಇವರ ಹೊಸ ಮಾದರಿಯ ಕಾವ್ಯವು ೧೯೨೨ರಲ್ಲಿ ಪ್ರಕಟವಾಯಿತು. ಆ ತರುವಾಯ ‘ನಿವೇದನ' ‘ವಿದ್ಯಾರಣ್ಯಸ್ತುತಿ', ಶ್ರೀರಾಮ ಪರೀಕ್ಷಣ', ‘ಮಂಕುತಿಮ್ಮನ ಕಗ್ಗ', ಅಂತಃಪುರದ ಗೀತೆಗಳು' ಎಂಬ ಕವನ ಗ್ರಂಥಗಳನ್ನು ಪ್ರಕಟಿಸಿದರು. ‘ಗೋಪಾಲ ಕೃಷ್ಣ ಗೋಖಲೆ' ‘ದಿವಾನ್ ರಂಗಾಚಾರ್ಲು' ‘ವಿದ್ಯಾರಣ್ಯರು' ಮೊದಲಾದವರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದನ್ನು ಬೆಳೆಸಲು ದುಡಿದ ಹಿರಿಯರಲ್ಲೊಬ್ಬರು. ೧೯೩೦ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೨೫ರಲ್ಲಿ ಅಖಿಲ ಕರ್ನಾಟಕ ಪ್ರತಿಕಾರರ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಇಂಗ್ಲೀಷ್ ನಲ್ಲಿಯೂ ಇವರು ಅನೇಕಾನೇಕ ಪ್ರಬಂಧಗಳನ್ನು ರಚಿಸಿದ್ದಾರೆ. ‘ಗೋಖಲೆ ಸಾರ್ವಜನಿಕ ಸಂಸ್ಥೆ’ಯ ಸ್ಥಾಪಕರಾಗಿದ್ದರು.
ಡಿವಿಜಿ ಅವರ ಒಂದು ಕವನವನ್ನು ‘ಕಾವ್ಯಶ್ರೀ’ ಸಂಕಲನದಿಂದ ಆರಿಸಲಾಗಿದೆ.
ಬೇಲೂರಿನ ಶಿಲಾ ಬಾಲಿಕೆಯರು
ಶ್ರವಣಕೆ ಸಿಲುಕದ ಲಲಿತಾ
ರವ ಸುಖಮಂ ರಸನೆಗೊದವದಮೃತ ದ್ರವಮಂ
ಎವೆಯಿಕ್ಕದ ನಯನಗಳಿಂ
ಸವಿವುದು ನೀವೆಂಬ ಮಾಯಗಾತಿಯರಿವರಾರ್!
ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀಂ
ನೃತ್ಯಲಾಸ್ಯದಿನಾರನೊಲಿಸುತಿರುವೆ?
ಮಾಧುರ್ಯ ಮಂಜೂಷೆ ಮಧುತರದ ಮೌನದಿಂ
ದಾರ ಚರಿತೆಗಳ ಶುಕಿಗುಸಿರುತಿರುವೆ?
ಮುಗ್ಧಮೋಹನವದನೆ ಮುಕುರದೊಳ್ ನೋಡಿ ನೀ
ನಾರ ನೆನೆದಿಂತು ನಸುನಗುತಲಿರುವೆ?
ಶಿಲ್ಪಿವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ
ದೇವದೇವನ ಸೇವೆಗೈತರ್ಪ ಸಾಧುಕುಲಮಂ
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ
ಇನ್ನೆವರನೊಲಿದು ಬಾರದ ನಿಮ್ಮ ಮನದನಿಯ
ನಿನ್ನು ಬಹನೆಂದು ನೀಂ ತಿಳಿವುದೆಂತು
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿಯೀ
ವಿಷಮ ಸಮಯದಿ ನಿಮಗೆ ದೊರೆವುದೆಂತು
ನಿಮ್ಮ ವದನದ್ಮುತಿಗೆ ಮರುಳಾಗಿ ಸೋಲದನ
ರಸಜೀವಿಯೆನ್ನು ಕಾದರಿಪುದೆಂತು
ನಿಮ್ಮ ನೂಪುರರವಕೆ ಬೆರಗಾಗಿ ನಿಲ್ಲದನ
ಭಾವಜ್ಞನೆಂದು ನೀಂ ಬಗೆವುದೆಂತು?
ರೂಪಮಿಲ್ಲದನೇನೊ ನಿಮ್ಮಿನಿಯನಲ್ಲದಿರೆ ತಾಂ
ರೂಪವಿಭವದಿನಿತ್ತಲೈತಂದು ಮರೆಯೆ ನಿಮ್ಮ
ಲಾಸಲಾವಣ್ಯಗಳ್ ಧರೆಯಿಂದೆ ಪಾರ್ವುವೆನುತೆ
ಮರೆಯಿಂದ ಕಂಡು ನಿಮ್ಮೊಲವಿಂದೆ ನಲಿವನೇನೋ
ಶ್ರುತಗಾನನಮಭಿರಾಮಮಾದೊಡಶ್ರುತಗಾನ
ಮಭಿರಾಮತರಮೆನುತೆ ರಸಿಕರೊಸೆವರ್
ರಾಮಣೀಯಕ ಕುಲುಮೆ ನಿಮ್ಮೆದೆಯ ನುಡಿ ಕಿವಿಯ
ನಾನದೊಡಮೆಮ್ಮೆದೆಯ ಸೇರಲರಿಗುಂ
ಆದರಿಂದಮಲ್ತೆ ನಿಮ್ಮ ಭಿಮತಂಗಳನರಿತು
ಜಾಣರೆನಿಬರೊ ನಿಮ್ಮ ಪೊಗಳಿ ನಲಿವರ್
ವರ್ಷಶತಕಗಳಿಂದೆ ಕುಂದದಿಹೆ ಲಾವಣ್ಯ
ದಂತರಂಗವನಿತು ಬಗೆವೆನೀಗಳ್
ಬಿದಿಯ ಕರಚಾರಿತುರಿಯೊಳನಿತಿನಿತು ಸುಳಿದು ಸರಿವ
ಮನುಜ ಮಾನಸದೊಳತಿ ಚಿತ್ರದಿಂ ಚರಿಸಿ ಮೆರೆವ
ಭುವನ ಜೀವನ ಸಸ್ಯಕಮೃತಬಿಂದುಗಳನೆರೆವ
ಪರತತ್ವಮಾಧುರಿಯನಿನಿಸು ನೀ ತೋರ್ಪಿರಲ್ತೆ
ಆನಂದ ನಿಧಿಯಾ ಪರಾತ್ಪರನೆನಲ್ ಜಗದೊ
ಳಾನಂದವೀವರಂ ಕಳೆಯಲಹುದೇಂ
ಪ್ರೇಮಮಯ ಮೂರ್ತಿಯಾ ಪರದೇವನೆನುತಿರಲ್
ಪ್ರೇಮಾಂಕುರಂಗಳಂ ಮುರಿಯಲಹುದೇಂ
ಸೌಂದರ್ಯ ಸರ್ವಸ್ವನಿಧಿಯಾತನೆನುತಿರಲ್
ಸುಂದರಾಕಾರರೊಳ್ ಮುಳಿಯಲಹುದೆಂ
ಜೀವನಾಧಾರನವನೆನುತೆ ಪೊಗುಳುತ್ತಿರಲ್
ಜೀವನೋಜ್ವಲೆಯರಂ ಪಳಿಯಲಹುದೇಂ
ಜಗದುದಯ ಕಾರಣನ ಮೈಮೆಗಳನರಿತು ನೆನೆದು
ಜಗದ ಯಾತ್ರೆಯ ನಡೆವ ಜನಕೆ ನಿಮ್ಮಂದದಿಂದಂ
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)