‘ಹೊಸ ಬೆಳಕು' ಯಶಸ್ವಿಯಾದರೂ ನೋವುಂಡ ಡಾ. ರಾಜ್

೧೯೮೨ರಲ್ಲಿ ೫೨ ಕನ್ನಡ ಚಿತ್ರಗಳು ತೆರೆಕಂಡವು. ಆ ಪೈಕಿ ಮೊದಲ ಚಿತ್ರವಾಗಿ ‘ಹೊಸ ಬೆಳಕು' ಎಂಬ ಚಿತ್ರವು ವರ್ಷದ ಪ್ರಾರಂಭದಲ್ಲೇ ಬಿಡುಗಡೆಯಾಯಿತು. ಡಾ. ರಾಜಕುಮಾರ್, ಸರಿತಾ, ಮಮತಾ ರಾವ್, ಅಶ್ವಥ್ ತಾರಾಗಣದ ಈ ಚಿತ್ರದ ಕಥಾ ಹಂದರಕ್ಕೆ ಪ್ರೇಕ್ಷಕ ಮಾರು ಹೋದ. ಚಿತ್ರ ಸೂಪರ್ ಹಿಟ್ ಆಯಿತು. ರಜತೋತ್ಸವ ಸಂಭ್ರಮವನ್ನು ಆಚರಿಸಲು ಸಂಘಟಕರು ನಿರ್ಧಾರ ಮಾಡಿದರು. ಆದರೆ ಆ ಚಿತ್ರದ ನಾಯಕರಾಗಿದ್ದ ಡಾ. ರಾಜ್ ಮಂಕಾಗಿ ಬೇಸರದಲ್ಲಿದ್ದರು.
ತಮ್ಮ ಚಿತ್ರವೊಂದು ವಾರದ ಕಾಲ ನಡೆದರೂ ಸಂತೋಷ ಪಡುವ ನಟರಿರುವಾಗ ಬರೋಬ್ಬರಿ ೨೫ ವಾರ ಯಶಸ್ವೀ ಪ್ರದರ್ಶನ ನಡೆದರೂ ಅದರ ನಟರಾದ ರಾಜಕುಮಾರ್ ಬೇಸರದಲ್ಲಿದ್ದದ್ದು ಏಕೆ? ಅವರಿಗಾದ ನೋವಾದರೂ ಏನು? ವರನಟರ ನೋವಿಗೆ ಕಾರಣವಾದದ್ದು ಚಿತ್ರ ತಂಡವಲ್ಲ, ಚಿತ್ರದ ಕಲಾವಿದರೂ ಅಲ್ಲ, ಅವರಿಗೆ ನೋವು ಕೊಟ್ಟದ್ದು ಅಷ್ಟೇನೂ ಖ್ಯಾತವಲ್ಲದ ಒಂದು ಮುಂಬಯಿ ಮೂಲದ ಪತ್ರಿಕೆ. ಆ ಪತ್ರಿಕೆಯ ಹೆಸರು ‘ಟ್ರೇಡ್ ಗೈಡ್'. ಈ ಪತ್ರಿಕೆಯಲ್ಲಿ ಈ ಚಿತ್ರದ ಬಗ್ಗೆ ಬರೆಯುತ್ತಾ ಡಾ. ರಾಜ್ ಓರ್ವ ‘ಮಿನಿ ಹಿಟ್ಲರ್' ಎಂದು ವರ್ಣಿಸಲಾಗಿತ್ತು. ಲೇಖನ ಸಣ್ಣದ್ದೇ ಆದರೂ, ಯಾರನ್ನೂ ಎಂದೂ ನೋಯಿಸದ ರಾಜಕುಮಾರ್ ಅವರಿಗೆ ಈ ವರದಿಯಿಂದ ಬಹಳ ನೋವಾಗಿತ್ತು.
ಅದೇ ಸಮಯದ 'ಹೊಸ ಬೆಳಕು' ಚಿತ್ರದ ರಜತೋತ್ಸವ ಸಮಾರಂಭ ಮೈಸೂರಿನಲ್ಲಿ ಏರ್ಪಡಿಸಲಾಗಿತ್ತು. ಆದರೆ ಚಿತ್ರದ ನಾಯಕ ನಟರೇ ಸದಾಶಿವನಗರದ ತಮ್ಮ ಮನೆಯಲ್ಲಿ ಬೇಸರದಿಂದ ಕುಳಿತು ಬಿಟ್ಟಿದ್ದರು. ರಾಜಕುಮಾರ್ ಅವರು ಸಮಾರಂಭಕ್ಕೆ ಬರುವುದೇ ಇಲ್ಲ ಎಂದು ಹಠ ಹಿಡಿದರಂತೆ. ಆದರೆ ಸಂಘಟಕರು ಹೇಗೋ ಮನವೊಲಿಸಿ ಅವರನ್ನು ಕಾರ್ಯಕ್ರಮಕ್ಕೆ ಬರುವಂತೆ ಮಾಡಿದರಂತೆ. ಡಾ. ರಾಜ್ ಬಗ್ಗೆ ಇಡೀ ಕನ್ನಡ ನಾಡು ಹೆಮ್ಮೆ ಪಡುತ್ತದೆ. ಅವರ ಮಗುವಿನಂತಹ ಮನಸ್ಸಿಗೆ ಆ ಪತ್ರಿಕೆಯ ಸುಳ್ಳು ಆಪಾದನೆ ಬಹಳ ಬೇಸರ ತಂದದ್ದು ನಿಜ. ಆದರೆ ಅಭಿಮಾನಿಗಳು ಈ ವಿಷಯವನ್ನು ಎಳ್ಳಷ್ಟೂ ನಂಬಲಿಲ್ಲ. ನಂತರ ಬಂದ ರಾಜಕುಮಾರ್ ಅವರ ಹಲವಾರು ಚಿತ್ರಗಳು ಸೂಪರ್ ಹಿಟ್ ಅನಿಸಿಕೊಂಡವು. ಅಭಿಮಾನಿಗಳ ಪಾಲಿನ ‘ಅಣ್ಣವ್ರು’ ಎನಿಸಿಕೊಂಡರು.
ಡಾ ರಾಜ್ ರಿಗೆ ಈ ಕೀಳು ಆರೋಪದ ನೋವಿನ ಜೊತೆಗೆ ಸಿಟ್ಟು ಬಂದಿತ್ತು. ಸಿನೆಮಾ ರಂಗದ ಆರ್ಥಿಕ ನೀತಿಗಳು, ಸರಕಾರದ ನೀತಿಗಳು, ಪ್ರದರ್ಶಕರ ಶೋಷಣೆ, ಅಸಹಕಾರ ಇವೆಲ್ಲವೂ ಆ ಸಮಯ ಅವರಲ್ಲಿ ಅಸಮಧಾನವನ್ನು ಹುಟ್ಟುಹಾಕಿತ್ತು. ಈ ವಿಷಯವನ್ನು ಅವರು ಗೋಕಾಕ್ ಚಳುವಳಿಯ ಸಮಯದಲ್ಲಿ ನಡೆದ ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಾ ಬಂದರು. ಡಾ ರಾಜಕುಮಾರ್ ಅವರ ಸಾತ್ವಿಕ ಸಿಟ್ಟು ಸಹಜವೂ ಆಗಿತ್ತು. ಆದರೆ ಇದಕ್ಕೆಲ್ಲಾ ಮೂಲ ಕಾರಣ ‘ಹೊಸ ಬೆಳಕು' ಚಿತ್ರದ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವಾಗಿತ್ತು ಎನ್ನುವುದೂ ಸತ್ಯ.
‘ಹೊಸ ಬೆಳಕು' ಚಿತ್ರದ ಬಗ್ಗೆ ಹೇಳುವುದಾದರೆ ಇದು ಶ್ರೀಮತಿ ವಾಣಿ ಅವರ ಅದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. ಚಿತ್ರದ ನಿರ್ದೆಶಕರು ದೊರೈ ಭಗವಾನ್. ಈ ಚಿತ್ರ ಮಮತಾ ರಾವ್ ಪಾಲಿನ ಎರಡನೇ ಚಿತ್ರ. ಇವರು ಅದೇ ವರ್ಷ (೧೯೮೨) ತೆರೆಕಂಡ ನಾಗಾಭರಣ ನಿರ್ದೇಶನದ ‘ಪ್ರಾಯ ಪ್ರಾಯ ಪ್ರಾಯ' ಚಿತ್ರ ಮೊದಲನೆಯದ್ದು. ಮಮತಾ ರಾವ್ ಯಾರೆಂದು ಅಚ್ಚರಿ ಪಡುವಿರಾ? ಕನ್ನಡದ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದ ರಕ್ಷಿತಾ ಅವರ ಅಮ್ಮ. ಮಮತಾ ರಾವ್ ಹಾಗೂ ಖ್ಯಾತ ಛಾಯಾಗ್ರಾಹಕ ಗೌರೀಶಂಕರ್ ಅವರ ಪ್ರೇಮದ ಕೂಸು. ಮಮತಾ ರಾವ್ ಹುಟ್ಟಿದ್ದು ದಕ್ಷಿಣ ಕನ್ನಡದಲ್ಲಾದರೂ ಬೆಳೆದದ್ದು, ಓದಿದ್ದು ಮಾತ್ರ ಮುಂಬಯಿಯಲ್ಲಿ. ಎರಡನೇ ಚಿತ್ರದಲ್ಲೇ ಕನ್ನಡದ ಖ್ಯಾತ ನಟ ಡಾ ರಾಜ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಅವರ ಅದೃಷ್ಟ. ಅದೇ ಚಿತ್ರದ ಛಾಯಾಗ್ರಾಹಕರಾಗಿದ್ದ ಗೌರೀಶಂಕರ್ ಅವರನ್ನೇ ಮುಂದಿನ ದಿನಗಳಲ್ಲಿ ತಮ್ಮ ಬಾಳಸಂಗಾತಿಯನ್ನಾಗಿ ಆರಿಸಿಕೊಂಡರು. ಗೌರೀಶಂಕರ್ ಓರ್ವ ಅದ್ಭುತ ಛಾಯಾಗ್ರಾಹಕ. ಅತ್ಯಂತ ಹೆಚ್ಚು ಬಾರಿ ರಾಜ್ಯ ಸರಕಾರದಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದುಕೊಂಡವರು. ರಾಜಕುಮಾರ್ ಅವರ ಆಪ್ತವಲಯದಲ್ಲೂ ಗುರುತಿಸಿಕೊಂಡವರು.
ಸರಳವಾದ ಕೌಟುಂಬಿಕ ಕಥೆಯನ್ನು ಹೊಂದಿದ್ದ ‘ಹೊಸ ಬೆಳಕು' ಚಿತ್ರವು ಉತ್ತಮ ನಟನೆ ಮತ್ತು ಇಂಪಾದ ಹಾಡಿನ ಕಾರಣದಿಂದ ಜನಪ್ರಿಯವಾಯಿತು. ನಾಯಕ ದೆಹಲಿಯಲ್ಲಿ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಯಜಮಾನನ ಮಗಳ ಪ್ರೀತಿಯನ್ನು ತ್ಯಜಿಸಿ, ತನ್ನ ಅಕ್ಕನ ಮನೆಯಲ್ಲಿ ಆಕೆಯ ಮಲ ಮಗಳ ಕಷ್ಟಗಳನ್ನು ನೋಡಿ, ಬೇಸರಗೊಂಡು ಆಕೆಯನ್ನು ಪ್ರೀತಿಸುತ್ತಾನೆ. ಅಕ್ಕನಿಗೋ ತನ್ನ ಸ್ವಂತ ಮಗಳನ್ನು ತಮ್ಮನಿಗೆ ಕೊಡುವ ಆಸೆ. ಚಿತ್ರ ಹಲವಾರು ತಿರುವುಗಳನ್ನು ಪಡೆದು ಕೊನೆಯಲ್ಲಿ ನಡೆಯುವ ಅಚ್ಚರಿಯ ಕ್ಲೈಮ್ಯಾಕ್ಸ್ ನೋಡುಗರನ್ನು ಮಂತ್ರಮುಗ್ಧ ಮಾಡುತ್ತದೆ. ಡಾ ರಾಜ್ ಹಾಗೂ ನಾಯಕಿಯಾಗಿ ಸರಿತಾ ಅವರ ನಟನೆಗೆ ಉತ್ತಮ ನಟ, ನಟಿ ಪ್ರಶಸ್ತಿಗಳು ಲಭಿಸಿದವು. ಮಮತಾ ರಾವ್ ಅವರಿಗೆ ಉತ್ತಮ ಪ್ರೋತ್ಸಾಹಕ ನಟಿ ಪ್ರಶಸ್ತಿ ದೊರೆಯಿತು. ಕುವೆಂಪು ಅವರ ‘ತೆರೆದಿದೆ ಮನೆ ಬಾ ಓ ಅತಿಥಿ' ಕವನವನ್ನು ಈ ಚಿತ್ರದಲ್ಲಿ ಬಹಳ ಸೊಗಸಾಗಿ ಬಳಸಿಕೊಳ್ಳಲಾಗಿತ್ತು. ಚಿತ್ರಕ್ಕೆ ಸಂಗೀತ ನೀಡಿದವರು ಎಂ ರಂಗಾರಾವ್. ಈ ಚಿತ್ರದ ‘ಕಣ್ಣೀರ ಧಾರೆ, ಇದೇಕೆ..' ಮತ್ತು ಚೆಲುವೆಯೇ ನಿನ್ನ ನೋಡಲು' ಹಾಡುಗಳು ಇಂದೂ ಜನಪ್ರಿಯ. ಈ ಹಾಡುಗಳನ್ನು ಸ್ವತಃ ಹಾಡಿದ ಡಾ ರಾಜಕುಮಾರ್ ಭವಿಷ್ಯದಲ್ಲಿ ಜನಪ್ರಿಯ ಗಾಯಕರಾಗಿಯೂ ಗುರುತಿಸಿಕೊಂಡರು.
ದೊರೈ ಭಗವಾನ್ ಅವರ ಚಿತ್ರದ ನಿರ್ದೇಶನಕ್ಕೆ ಚಿ ಉದಯ ಶಂಕರ್ ಅವರು ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದರು. ಸದಾನಂದ, ರಾಜಶೇಖರ, ಎಸ್ ಎ ಶ್ರೀನಿವಾಸ್ ಮತ್ತು ಶಿವರಾಂ ಎಂಬ ನಾಲ್ವರು ಸೇರಿ ನಿರ್ಮಿಸಿದ ಈ ಚಿತ್ರ ರಜತೋತ್ಸವ ಸಂಭ್ರಮವನ್ನು ಆಚರಿಸಿತು. ಆದರೆ ‘ಹೊಸ ಬೆಳಕು' ತನ್ನದಲ್ಲದ ಕಾರಣಗಳಿಂದ ರಾಜ್ ಮನಸ್ಸಿನಲ್ಲಿ ಮಾತ್ರ ಎಂದೂ ಅಳಿಯದ ನೋವು ತಂದು ಕೊಟ್ಟಿತು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ