ಕರ್ನಾಟಕ ಕ್ರಿಕೆಟ್ - ೬
ರೋಲಂಡ್ ಬ್ಯಾರಿಂಗ್ಟನ್: ತನ್ನ ೧೯ನೇ ವಯಸ್ಸಿನಲ್ಲಿ ೧೯೯೯-೨೦೦೦ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು ೧೦೬ ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ ೬ ಪಂದ್ಯಗಳಲ್ಲಿ ೪೬.೨೫ ಸರಾಸರಿಯಲ್ಲಿ ೩೭೦ ಓಟಗಳನ್ನು ಗಳಿಸಿದರು. ೧೯ರ ಹುಡುಗನಿಗೆ ಭರವಸೆಯ ಆರಂಭ ಎನ್ನಬಹುದು. ಬ್ಯಾರಿಂಗ್ಟನ್ ನ ತಂದೆಯವರು, ೧೯೬೦ರ ದಶಕದಲ್ಲಿ ಇಂಗ್ಲಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಕೆನೆತ್ ಫ್ರಾಂಕ್ ಬ್ಯಾರಿಂಗ್ಟನ್ ಇವರ ದೊಡ್ಡ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೂ ಅದೇ ಹೆಸರನ್ನಿಟ್ಟರು.
'ಬ್ಯಾರಿ' ಎಂದು ಸಹ ಆಟಗಾರರಿಂದ ಕರೆಯಲ್ಪಡುವ ಬ್ಯಾರಿಂಗ್ಟನ್, ಮೊದಲೆರಡು ಋತುಗಳಲ್ಲಿ ೩ನೇ ಕ್ರಮಾಂಕದಲ್ಲಿ ಆಡಿದರು. ೨೦೦೨-೦೩ ಋತುವಿನಿಂದ ಪ್ರಸಕ್ತ ಋತುವಿನವರೆಗೆ ಆರಂಭಕಾರನಾಗಿ ಆಡಿರುವ ಬ್ಯಾರಿ, ರಾಹುಲ್ ದ್ರಾವಿಡ್ ನ ಮಹಾಭಕ್ತ. ಎಡೆಬಿಡದೆ ದ್ರಾವಿಡ್ ರನ್ನು ಕಾಡಿ, ಬೇಡಿ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡರು. ದ್ರಾವಿಡ್ ಭಾರತದಿಂದ ಹೊರಗೆ ಆಡುವಾಗಲೂ ಅವರನ್ನು ಬೆನ್ನು ಬಿಡದೆ ವಿ-ಅಂಚೆ ಮೂಲಕ ಸಂಪರ್ಕಿಸಿ ತನ್ನ ಆಟವನ್ನು ಬಹಳ ಸುಧಾರಿಸಿ ಭರವಸೆ ಮೂಡಿಸಿದವರು ಬ್ಯಾರಿ.
- Read more about ಕರ್ನಾಟಕ ಕ್ರಿಕೆಟ್ - ೬
- 1 comment
- Log in or register to post comments