ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)

ಬರಹ

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ಬಳಕೆಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ.

ಬರುವ ಒಂದೆರಡು ವಾರಗಳಲ್ಲಿ ಪ್ರತಿ ಲೇಖನವನ್ನೂ ಹಲವು ಕಂತುಗಳಲ್ಲಿ ಸೇರಿಸಲಾಗುವುದು. - ಹರಿ ಪ್ರಸಾದ್ ನಾಡಿಗ್

ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨
(ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
(ಮೊದಲನೇ ಕಂತು)

GNU
ಇ-ಮೇಯ್ಲುಗಳಲ್ಲಿ M S ವರ್ಡ್ ಡಾಕ್ಯುಮೆಂಟುಗಳು ಬಂದರೆ ನಿಮಗೆ ಸಿಟ್ಟು ಬರೋದಿಲ್ವೆ? ವರ್ಡ್ ಅಟ್ಟಾಚ್ಮೆಂಟುಗಳು ಕಿರುಕುಳ ಕೊಡೋದಷ್ಟೇ ಅಲ್ಲ, ಜನರನ್ನು ಮುಕ್ತ ತಂತ್ರಾಂಶದ ಬಳಕೆಯಿಂದ ದೂರ ತಳ್ಳುತ್ತೆ. ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳನ್ನು ಕಳುಹಿಸೋ ಈ ಅಭ್ಯಾಸವನ್ನ ನಾವುಗಳು ಬಹುಶಃ ಒಟ್ಟುಗೂಡಿದ ಒಂದು ಅತಿ ಸಾಮಾನ್ಯ ಪ್ರಯತ್ನದಿಂದ ನಿಲ್ಲಿಸಬಹುದು.

ಕಂಪ್ಯೂಟರ್ ಬಳುಸುವ ಸುಮಾರು ಜನ ಮೈಕ್ರೊಸಾಫ್ಟಿನ ವರ್ಡ್ ಬಳಸ್ತಾರೆ. ಅದು ಅವರಿಗೆ ದುರದೃಷ್ಟಕರವಾದುದು, ಏಕಂದ್ರೆ ವರ್ಡ್ ಬೇರೊಬ್ಬರ ಸ್ವಾಮ್ಯದಡಿ ಇರುವ ತಂತ್ರಾಂಶ. ಅದನ್ನು ಬಳಸುವವರಿಗೆ ತಂತ್ರಾಂಶವನ್ನು ಅಧ್ಯಯನ ಮಾಡಲು, ಬದಲಾಯಿಸಲು ಅಥವ ಬೇರೊಬ್ಬರೊಂದಿಗೆ ಹಂಚಿಕೊಳ್ಳಲು ಇರುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಇದಲ್ಲದೆ, ಮೈಕ್ರೊಸಾಫ್ಟ್ ತನ್ನ ಈ ತಂತ್ರಾಂಶದ ಪ್ರತಿ ಆವೃತ್ತಿಯೊಂದಿಗೂ ಈ ವರ್ಡ್ ಫೈಲುಗಳ ಪಾರ್ಮ್ಯಾಟ್ (ವಿನ್ಯಾಸ) ಬದಲಾಯಿಸುತ್ತದಾದ್ದರಿಂದ ಇದನ್ನು ಬಳಸುತ್ತಿರುವವರು ಪ್ರತಿ ಸಾರಿ ಹೊಸ ಆವೃತ್ತಿಯನ್ನು ಕೊಳ್ಳಲೇಬೇಕು - ತಮಗೆ ಬೇಕೋ ಬೇಡವೋ, ಮುರಿಯಲಾಗದ ಬಂಧನ. ಇಷ್ಟೇ ಅಲ್ಲದೆ, ಈ ತಂತ್ರಾಂಶವನ್ನು ಬಳಸುತ್ತಿರುವವರಿಗೆ ಹಲವು ವರ್ಷಗಳ ನಂತರ ಈಗ ಬರೆದಿಟ್ಟಿರುವ ವರ್ಡ್ ಡಾಕ್ಯುಮೆಂಟುಗಳೂ ಮುಂದೆ ಬರುವ ವರ್ಡ್ ಆವೃತ್ತಿಗಳಲ್ಲಿ ಓದಲು ಬರುವುದಿಲ್ಲ ಎಂಬುದು ತಿಳಿದುಬರಬಹುದೇನೊ.

ಆದರೆ ನೋವಾಗುವುದು ಯಾವಾಗ ಗೊತ್ತೆ? ಈ‌ ತಂತ್ರಾಂಶವನ್ನು ಬಳಸುತ್ತಿರುವವರು ನಾವೂ ವರ್ಡ್ ಬಳಸುತ್ತಿದ್ದೇವೆ ಎಂದು ಲೆಕ್ಕ ಹಾಕಿ ನಮಗೆ ವರ್ಡ್ ಫಾರ್ಮ್ಯಾಟಿನಲ್ಲಿ ಕಳುಹಿಸಿದಾಗ (ಅಥವ ನಾವು ಆ ಫಾರ್ಮ್ಯಾಟಿನಲ್ಲಿ ಕಳುಹಿಸಲಿ ಎಂದು ತಗಾದೆ ತೆಗೆದಾಗ). ಕೆಲವರು ತಮ್ಮ ಡಾಕ್ಯುಮೆಂಟುಗಳನ್ನ ವರ್ಡ್ ಫಾರ್ಮ್ಯಾಟಿನಲ್ಲಿ ಪ್ರಕಟಿಸುತ್ತಾರೆ ಅಥವ ಪೋಸ್ಟ್ ಮಾಡ್ತಾರೆ. ಕೆಲವು ಸಂಸ್ಥೆಗಳಂತೂ ಬರೇ ವರ್ಡ್ ಫಾರ್ಮ್ಯಾಟಿನಲ್ಲಿದ್ದರೆ ಮಾತ್ರ ಕಡತಗಳನ್ನ (ಫೈಲುಗಳನ್ನ) ಸ್ವೀಕರಿಸುತ್ತಾರೆ: ನನ್ನ ಪರಿಚಯದವರೊಬ್ಬರಿಗೆ ಕೆಲಸಕ್ಕೆ ಅರ್ಜಿ ಹಾಕೋದಕ್ಕಾಗುತ್ತಿರಲಿಲ್ಲ - ಅವರ ರೆಸ್ಯೂಮು ವರ್ಡ್ ಫೈಲಿನಲ್ಲಿರಬೇಕಾಗಿತ್ತು ನೋಡಿ. ದೌರ್ಜನ್ಯದ ವಿಷಯವೇನೆಂದರೆ ಸರಕಾರಗಳು ಕೂಡ ಹಲವು ಬಾರಿ ಸಾರ್ವಜನಿಕರ ಮೇಲೆ ವರ್ಡ್ ಫಾರ್ಮ್ಯಾಟ್ ಹೇರುತ್ತಾರೆ.

ಮುಕ್ತ ತಂತ್ರಾಂಶ, ಮುಕ್ತ ಆಪರೇಟಿಂಗ್ ಸಿಸ್ಟಮುಗಳನ್ನು ಬಳಸುವ ನಮ್ಮಂತವರಿಗೆ ವರ್ಡ್ ಡಾಕ್ಯುಮೆಂಟುಗಳನ್ನು ಸ್ವೀಕರಿಸೋದು ರಗಳೆ. ಆದರೆ ವರ್ಡ್ ಫಾರ್ಮ್ಯಾಟಿನಲ್ಲಿ ಕಳುಹಿಸುವುದರ ಕೆಟ್ಟ ಪ್ರಭಾವ ಬೀರೋದು ಮುಕ್ತ ಪದ್ಧತಿಗಳೆಡೆಗೆ ಬದಲಾಗುತ್ತಿರುವ ಜನರ ಮೇಲೆ: ವರ್ಡ್ ಫೈಲುಗಳನ್ನು ಓದಲು ವರ್ಡ್ ತಮ್ಮಲ್ಲಿ ಇರಲೇಬೇಕೆಂದು ಅವರು ಹಿಂದೇಟು ಹಾಕುತ್ತಾರೆ, ಹಿಂಜರಿಯುತ್ತಾರೆ. ರಹಸ್ಯಮಯವಾದ ವರ್ಡ್ ಫಾರ್ಮ್ಯಾಟ್ ಬಳಸುವ ಅಭ್ಯಾಸ ಇದೆಯಲ್ಲ ಅದು ಸಮುದಾಯದ ಬೆಳವಣಿಗೆಯನ್ನು ಕುಂಟಿತಕೊಳುಸುತ್ತೆ. ಆಗೀಗ ವರ್ಡ್ ಫೈಲೊಂದನ್ನ ಪಡೆದಾಗ ಆಗುವ ಕಿರುಕುಳ ಗಮನಿಸುತ್ತೇವೆಯೇ ವಿನಃ ಸಮುದಾಯಕ್ಕಾಗುವ ಕೆಡುಕು ನಮ್ಮ ಗಮನಕ್ಕೆ ಬರೋದಿಲ್ಲ. ಆದರೆ ಪ್ರತೀ ಸಾರಿ ಇದಾಗುತ್ತಲೇ ಇರುತ್ತದೆ.

ಗ್ನು (GNU) ಬಳಕೆದಾರರಲ್ಲಿ ವರ್ಡ್ ಡಾಕ್ಯುಮೆಂಟುಗಳನ್ನು ಪಡೆಯುವ ಹಲವರು ಅದನ್ನು ನಿಭಾಯಿಸುವ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಗಬ್ಬಾಗಿ ಕಾಣುವ ಅಕ್ಷರಗಳ ಮಧ್ಯೆ ಕೆಲವು ASCII ವಾಕ್ಯಗಳನ್ನು ಫೈಲಿನಲ್ಲಿ ಕಣ್ಣು ಹಾಯಿಸಿ ಹುಡುಕುವಷ್ಟು ನೀವು ಯಶಸ್ವಿಯಾಗಬಹುದು. ಮುಕ್ತ ತಂತ್ರಾಂಶ ಇಂದು ಕೆಲವು ವರ್ಡ್ ಡಾಕ್ಯುಮೆಂಟುಗಳನ್ನು ಓದಬಲ್ಲುದು, ಆದರೆ ಎಲ್ಲವನ್ನೂ ಓದುವುದಿಲ್ಲ -- ಆ ಫಾರ್ಮ್ಯಾಟು ರಹಸ್ಯವಾದುದಲ್ಲದೆ ಸಂಪೂರ್ಣ ಡೀಕೋಡ್ (ವಿಂಗಡಣೆ) ಕೂಡ ಮಾಡಲಾಗಿಲ್ಲ. ಇನ್ನೂ ಕೆಟ್ಟದೇನಪ್ಪಾಂದ್ರೆ, ಮೈಕ್ರೊಸಾಫ್ಟ್ ಆ ಫಾರ್ಮ್ಯಾಟನ್ನ ಯಾವಾಗ ಬೇಕಾದರೂ ಬದಲಾಯಿಸಬಹುದು.

ಭವಿಷ್ಯದಲ್ಲಿ, ಬೇರೆ ಯಾವುದೇ ತಂತ್ರಾಂಶಕ್ಕೆ ಶತ ಪ್ರಯತ್ನಮಾಡಿದರೂ ಮೈಕ್ರೊಸಾಫ್ಟಿನ ಅನುಮತಿಯಿಲ್ಲದೆ ಫೈಲುಗಳನ್ನು ಮುಟ್ಟಲಾಗದಂತಹ ರೀತಿಯಲ್ಲಿ ಅವರು ಹೊಸ ವರ್ಡ್ ಫಾರ್ಮ್ಯಾಟಿನೊಂದಿಗೆ ಪಲ್ಲಾಡಿಯಮ್1 ಅಥವ ಇನ್ಯಾವುದೋ "ವಂಚನೆಯ ಗಣಕಪ್ರಯೋಗ" ವ್ಯವಸ್ಥೆಯನ್ನು ಬಳಸಬಹುದು. ಮೈಕ್ರೊಸಾಫ್ಟು ತನ್ನ ಪೇಟೆಂಟೆಡ್ XML extensionಗಳನ್ನು ಭವಿಷ್ಯದ ಫೈಲ್ ಫಾರ್ಮ್ಯಾಟ್ ಮಾಡ ಹೊರಟಿದೆ2 ಎಂಬ ಸುದ್ದಿಗಳು ಬಂದಿವೆ; ಮುಕ್ತ ತಂತ್ರಾಂಶಗಳಲ್ಲಿ ಯಾರಾದರೂ ಅದನ್ನು ಕಾರ್ಯಗತಗೊಳಿಸಿದರೆ ಅವರನ್ನು "ಪೇಟೆಂಟ್ ಉಲ್ಲಂಘನೆ" ಎಂದು ಮೈಕ್ರೊಸಾಫ್ಟು ಕೋರ್ಟಿನ ಕಟಕಟೆ ಹತ್ತಿಸಿಬಿಡಬಹುದು.

(ಲೇಖನದ ಉಳಿದ ಭಾಗ ಎರಡನೇ ಕಂತಿನಲ್ಲಿ ಪ್ರಕಟವಾಗಲಿದೆ)


1 - [:http://en.wikipedia.org/wiki/Palladium], [:http://www.gnu.org/philosophy/can-you-trust.html]
2 - ಸ್ಟಾಲ್ಮನ್ ಈ ಲೇಖನ ಬರೆದ ಸಮಯದಲ್ಲಿ ಇನ್ನೂ ಆ ಬಗ್ಗೆ ಸುದ್ದಿಗಳು ಹೊರಬರುತ್ತಿದ್ದವು. ಆದರೆ ಈಗಾಗಲೇ ಮೈಕ್ರೊಸಾಫ್ಟಿನ ಪೇಟೆಂಟೆಡ್ XML ಫಾರ್ಮ್ಯಾಟುಗಳು ಬಂದುಬಿಟ್ಟಿವೆ. ಆದರೆ ಯೂರೋಪಿಯನ್ ಯೂನಿಯನ್ [:http://europa.eu.int/idabc/servlets/Doc?id=17982| ಮುಕ್ತ ಫಾರ್ಮ್ಯಾಟುಗಳೆಡೆಗೆ ಒಲವು ತೋರಿತ್ತು].

ತಮಾಷೆಯೇನೆಂದರೆ ನಮ್ಮ ಭಾರತದ NIC - ನ್ಯಾಶನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಇದೇ ಮೈಕ್ರೊಸಾಫ್ಟಿನ ಫಾರ್ಮ್ಯಾಟುಗಳನ್ನ ಭಾರತದಲ್ಲಿ e-governanceಗೆ ನಿರ್ದಿಷ್ಟಮಾನವನ್ನಾಗಿ ಮಾಡಹೊರಟಿದೆ.