ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)
ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)
ಮಾರುತಿ ಹುಟ್ಟಿದಾಗಿನಿಂದ ಅವನ ಮನೆಯಲ್ಲಿ ದರಿದ್ರ ಕಾಲೊಕ್ಕರಿಸಿತ್ತು. ಮಗು ಹುಟ್ಟಿದಾಗ ಜಾತಕ ಬರೆದವರು ಹೇಳಿದ್ದೇನೆಂದರೆ ಈ ಮಗು ಮನೆಯಲ್ಲಿರುವವರೆಗೂ ಮನೆಯಲ್ಲಿ ಕಷ್ಟಕಾಲ, ಇವನು ಮನೆಯಿಂದಾಚೆಗೆ ಹೋದಾಗಲೇ ಮನೆಯಲ್ಲಿ ಏಳಿಗೆ. ಹಾಗೆಂದು ಮಗುವನ್ನು ಮನೆಯಿಂದಾಚೆಗೆ ತಳ್ಳೋಕ್ಕಾಗತ್ಯೇ? ಅಲ್ಲಿಯವರೆವಿಗೆ ಅವನಪ್ಪ ಅಮ್ಮ ಐಷಾರಾಮಿ ಜೀವನ ನಡೆಸಿ ಇದ್ದದ್ದೆಲ್ಲವನ್ನೂ ಕಳೆದುಕೊಂಡಿದ್ದರು. ಈ ನಾಲ್ಕನೆಯ ಮಗು ಹುಟ್ಟಿದಾಗ ಅಪ್ಪನಿಗೆ ಕೆಲಸವಿಲ್ಲ. ಮನೆಯಲ್ಲಿ ತಿನ್ನಲು ಏನೇನೂ ಇಲ್ಲ. ಹೊಸಹಳ್ಳಿಯ ಜಂಗಮ ಕರಡಪ್ಪಜ್ಜ ಭಿಕ್ಷೆ ಬೇಡಿ, ತಂದ ಕಾಳು ಕಡ್ಡಿಯನ್ನು ಇವನಮ್ಮ ಭಾಗೀರಥಿಗೆ ಕೊಟ್ಟು - ನೋಡಮ್ಮಾ ನೀನು ಅನುಕೂಲಸ್ಥರ ಮನೆಯಿಂದ ಬಂದವಳು. ಬೇರೆಯವರಿಂದ ಪಡೆದು ಅಭ್ಯಾಸವಿಲ್ಲ. ನಾನು ತಂದು ಕೊಡುವೆ - ನೀನು ಮಗುವನ್ನು ದೊಡ್ಡದು ಮಾಡು ಎಂದಳು. ತಂದೆ ವಿಶ್ವನಾಥರಾಯ ಕೆಲಸ ಬದುಕಿಲ್ಲದೇ ತನಗಾಗಿ ಇದ್ದ ಪಾಳು ಬಿದ್ದ ಜಮೀನನ್ನು ಸಾಗುವಳಿ ಮಾಡಲು ಪ್ರಯತ್ನಿಸಿದ. ಅಂದಿನವರೆಗೂ ಕೆಲಸ ಮಾಡದಿದ್ದ ಮೈ ಕಟು ಕೆಲಸಕ್ಕೆ ಬಗ್ಗೀತೇ? ಅದು ಆಗಿ ಬರಲಿಲ್ಲ. ಕೊನೆಗೆ ಅವನಣ್ಣ ಅಲ್ಲೆಲ್ಲೋ ದೂರದ ಲಕ್ಕವಳ್ಳಿಯಲ್ಲಿ ಇವನಿಗಾಗಿ ಗುಮಾಸ್ತೆಯ ಕೆಲಸ ಕೊಡಿಸಿದರು. ಸರಿ ಅಲ್ಲಿ ಸಂಸಾರ ಪ್ರಾರಂಭಿಸಿದ ಸ್ವಲ್ಪವೇ ದಿನಗಳಲ್ಲಿ ಯಾರೋ ತರ್ಲೆ ಮಾಡಿ ವಿಶ್ವನಾಥರಾಯರ ಕೆಲಸ ಹೋಯಿತು. ಮತ್ತೆ ಅವರಣ್ಣ ಆಗ ತಾನೆ ಶರಾವತಿಯ ಅಣೆಕಟ್ಟಿನ ಕೆಲಸ ಪ್ರಾರಂಭವಾಗಿದ್ದು ಅಲ್ಲಿ ಮೇಸ್ತ್ರಿ ಬೇಕಾಗಿ ಇವರನ್ನು ಅಲ್ಲಿಗೆ ಸೇರಿಸಿದರು. ದುರ್ಭಿಕ್ಷದಲ್ಲಿ ಅಧಿಕಮಾಸ ಬಂದಂತೆ ಹಿಂದೆಯೇ ಮನೆಯಲ್ಲಿ ಇನ್ನೂ ಮೂರು ಮಕ್ಕಳು ಹುಟ್ಟಿದವು. ಮನೆಯೋ ಕೌರವರ ಸೈನ್ಯವೋ ಅನ್ನುವ ಹಾಗಿತ್ತು. ಪಾಪ ಭಾಗೀರಥಿ ಹಸುವಿನಂತಹ ಮನಸ್ಸಿನವಳು. ಹೇಗೋ ಜೀವನದ ಗಾಡಿಯನ್ನು ಎಳೆಯುತ್ತಿದ್ದಳು. ಮಾರುತಿ ಹೈಸ್ಕೂಲಿಗೆ ಹೋಗುವ ವೇಳೆಗೆ ಶರಾವತಿ ಕೆಲಸ ಮುಗಿದು ಅವನಪ್ಪ ವಿಶ್ವನಾಥರಾಯರಿಗೆ ಮತ್ತೆ ಕೆಲಸ ಹೋಯಿತು. ಮುಂದೇನು ಮಾಡಬೇಕೆಂದು ದಿಕ್ಕೇ ತೋಚದಂತಾಗಿದ್ದರು. ದೇವರಂತೆ ಬಂದವರೊಬ್ಬರು ವಿಶ್ವನಾಥರಾಯರಿಗೆ ದೂರದ ಸಾಗರದ ಮಂಡಿಯಲ್ಲಿ ಕೆಲಸ ಕೊಡಿಸಿದರು. ಸಂಸಾರವನ್ನು ಲಿಂಗನಮಕ್ಕಿಯಲ್ಲೇ ಬಿಟ್ಟು ಸಾಗರಕ್ಕೆ ಕೆಲಸಕ್ಕಾಗಿ ಹೋಗುತ್ತಿದ್ದವರು, ವಾರಕ್ಕೊಮ್ಮೆ ಮನೆ ಸೇರುತ್ತಿದ್ದರು. ಹುಡುಗರು ಬುದ್ಧಿವಂತರು. ಶಾಲೆಯಲ್ಲಿ ಮಾಸ್ತರುಗಳಿಗೆ ಅಚ್ಚುಮೆಚ್ಚಿನವರಾಗಿದ್ದರು. ಶಾಲೆಯ ಮಾಸ್ತರರಲ್ಲೊಬ್ಬರಾದ ಜೋಯಿಸರು ಮಾರುತಿ ಮತ್ತು ಅವನಣ್ಣ ಶ್ರೀನಾಥನನ್ನು ಮನೆಗೆ ಕರೆದು ಅವರ ಮನೆಗೆ ಪಾಠಕ್ಕಾಗಿ ಬರುತ್ತಿದ್ದ ಚಿಕ್ಕ ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡಲು ಇವರಿಗೆ ಹೇಳಿ ಮನೆಗೆ ಸ್ವಲ್ಪ ಆಧಾರವಾಗಲು ಕಾರಣರಾದರು. ನೋಡಿ ದೇವರು ಹೇಗೆ ಯಾವ ಯಾವ ರೂಪದಲ್ಲಿ ಬಂದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯನ್ನಿತ್ತು ಮುಳುಗದಂತೆ ನೋಡಿಕೊಳ್ಳುವನು. ಇವರನ್ನು ಪರೀಕ್ಷೆ ಮಾಡಲೆಂದೇ ಅನ್ನುವಂತೆ ಅವರೆಲ್ಲರ ಹಿರ್‍ಇಯ ಹುಡುಗ ಮನೆ ಬಿಟ್ಟು ಎಲ್ಲಿಗೋ ಹೋಗಿದ್ದ. ಮಂಡಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿದ್ದ ವಿಶ್ವನಾಥರಾಯರು ಅಲ್ಲಿ ಇಲ್ಲಿ ಪೌರೋಹಿತ್ಯವನ್ನೂ ಮಾಡಿಕೊಂಡು ಜೀವನರಥವನ್ನು ಎಳೆಯುತ್ತಿದ್ದರು. ಕೊನೆಯವರುಗಳು ಇನ್ನೂ ಚಿಕ್ಕ ಚಿಕ್ಕ ಮಕ್ಕಳು. ಮನೆಯಲ್ಲಿ ಶ್ರೀನಾಥ ಮತ್ತು ಮಾರುತಿಯಷ್ಟೇ ಸ್ವಲ್ಪ ತಿಳುವಳಿಕೆ ಬಂದ ಮಕ್ಕಳು. ಶ್ರೀನಾಥ ಸ್ವಲ್ಪ ಸೂಕ್ಷ್ಮ ಶರೀರದವ. ತೀರ್ಥ ತೆಗೆದುಕೊಂಡರೆ ಶೀತ ಮತ್ತು ಮಂಗಳಾರತಿ ತೆಗೆದುಕೊಂಡರೆ ಉಷ್ಣ ಆಗುತ್ತಿತ್ತು. ಇದ್ದುದರಲ್ಲಿ ಸ್ವಲ್ಪ ಗಟ್ಟಿಗ ಅಂದ್ರೆ ನಮ್ಮ ಮಾರುತಿಯೇ. ಎಂಥ ಕಾಲದಲ್ಲಿಯೂ ಅಪ್ಪನಿಗೂ ಅಮ್ಮನಿಗೂ ಮನೆಯ ಬೆನ್ನೆಲುಬಾಗಿ ನಿಲ್ಲುತ್ತಿದ್ದ. ಪರೀಕ್ಷಿಸಲು ಗಟ್ಟಿಗರಿಗೇ ಕಷ್ಟಗಳು ಜಾಸ್ತಿ ಬರುವುದಂತೆ. ಮಾರುತಿ ಹತ್ತನೇ ತರಗತಿಗೆ ಬಂದಾಗ ತುಂಬಾ ಕಷ್ಟದ ಸಮಯ ಬಂದಿತು. ಚಿಕ್ಕ ಮಕ್ಕಳಿಗೆ ದಿನಂಪ್ರತಿ ಒಂದಲ್ಲ ಒಂದು ಕಾಯಿಲೆಗಳು. ಮಾರುತಿಯದೇ ಮನೆಯಲ್ಲಿ ಹೆಚ್ಚಿನ ಕೆಲಸಗಳೆಲ್ಲಾ. ಅವನಮ್ಮನಿಗೆ ಅವನಿಲ್ಲದಿದ್ದರೆ ಒಂದು ಕೈಯೇ ಕಳೆದು ಹೋದ ಅನುಭವವಾಗುತ್ತಿತ್ತು. ಆ ಕಡೆ ಪಬ್ಲಿಕ್ ಪರೀಕ್ಷೆಗೆ ಓದಿಕೊಳ್ಳಬೇಕು, ಈ ಕಡೆ ಮನೆ ಕಡೆಯೂ ನೋಡಿಕೊಳ್ಳಬೇಕು. ಹೀಗಿರುವಾಗ ಡಿಸೆಂಬರ್ ಮಾಹೆಯಲ್ಲಿ ಪರೀಕ್ಷೆಗೆ ಹಣ ಕಟ್ಟಬೇಕಾದ ಸಂದರ್ಭ ಬಂದಿತು. ಅದು ರಾಜ್ಯದ ಮಟ್ಟದಲ್ಲಿ ನಡೆಯುವ ಪರೀಕ್ಷೆ - ಅದಕ್ಕೆ ೧೦ ರೂಪಾಯಿಗಳನ್ನು ಕಟ್ಟಬೇಕಿತ್ತು. ಮನೆಯಲ್ಲಿ ಹಣವಿಲ್ಲ. ಪಾಠಕ್ಕೆ ಬರುತ್ತಿದ್ದ ಚಿಕ್ಕ ಮಕ್ಕಳು ಸರಿಯಾಗಿ ಹಣ ಕೊಟ್ಟಿಲ್ಲವೆಂದು ಜೋಯಿಸರು ಹೇಳಿದ್ದರು. ಆ ವಾರ ಅವರಪ್ಪ ಕೂಡಾ ಅದೇಕೋ ಬಂದೇ ಇರ್ಲಿಲ್ಲ. ಯಾರ ಮುಂದೆಯೂ ಕೈ ಚಾಚಬಾರದೆಂಬ ಅಣತಿ ಅಪ್ಪನದು. ಮನೆಯವರಲ್ಲೂ ಒಣ ಪ್ರತಿಷ್ಠೆ ತುಂಬಿತ್ತು. ಅಮ್ಮನಿಗಂತೂ ದಿಕ್ಕೇ ತೋಚದೆ, "ಮಾರುತಿ ನೋಡಪ್ಪಾ, ನೀನೇ ಏನಾದರೂ ಮಾಡಿ ಹಣ ಹೊಂದಿಸಿಕೊಂಡು ಪರೀಕ್ಷೆಗೆ ಕಟ್ಟು" ಅಂದಳು. ಪಾಪದ ಹುಡುಗ ಏನು ಮಾಡಿಯಾನು. ವಯಸ್ಸಿಕೆ ಮೀರಿದ ತಿಳುವಳಿಕೆ ಬುದ್ಧಿವಂತಿಕೆ ಇದ್ದರೂ ಹಣ ಎಲ್ಲಿಂದ ತಂದಾನು. ಹತ್ತಿರದವರು ಅನ್ನುವ ಎಲ್ಲರನ್ನೂ ಕೇಳಿದ್ದಾಯಿತು. ಸಾಲ ಕೊಡಲು ಎಲ್ಲರಿಗೂ ಭಯ, ಮತ್ತೆ ಹಣ ವಾಪಸ್ಸು ಬರುತ್ತದೋ ಇಲ್ಲವೋ ಅಂತ. ಜೋಯಿಸರು ಕಣ್ತಪ್ಪಿಸಿ ಓಡಾಡಲು ಆರಂಭಿಸಿದರು. ಅಪ್ಪನಿಗೆ ಪತ್ರ ಬರೆದರೂ ಉತ್ತರವಿಲ್ಲ. ನಂತರ ತಿಳಿದು ಬಂದದ್ದು, ಯಾವುದೋ ಕೆಲಸದ ಮೇಲೆ ಮಂಡಿಯವರು ಅವರನ್ನು ಶಿರಸಿ ಕಡೆಗೆ ಕಳುಹಿಸಿದ್ದರು. ಡಿಸೆಂಬರ್ ೩೦ರೊಳಗೆ ಹಣ ಕಟ್ಟಲು ಗಡುವು ಇದ್ದಿತ್ತು. ೨೯ ಆದರೂ ಎಲ್ಲೂ ಹಣ ಸಿಕ್ಕಲಿಲ್ಲ. ಅದೇ ವೇಳೆಯಲ್ಲಿ ಶ್ರೀನಾಥನಿಗೆ ಉಬ್ಬಸ ಜಾಸ್ತಿ ಆಗಿತ್ತು. ವೈದ್ಯರ ಬಳಿ ಹೋಗಲು ಹಣವಿಲ್ಲ. ಚಿಕ್ಕ ಮಕ್ಕಳಿಗೆ ಸಣ್ಣ ಪುಟ್ಟ ಜ್ವರ, ನೆಗಡಿ. ತಾಯಿಗಂತೂ ಇವರನ್ನೆಲ್ಲಾ ನೋಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಮಾರುತಿ ಅವಳ ಮುಂದೆ ತನ್ನ ಸಮಸ್ಯೆ ಹೇಳಿಕೊಳ್ಳಲು ಇಚ್ಛಿಸಲಿಲ್ಲ. ೨೯ನೇ ತಾರೀಖು ರಾತ್ರಿಯೆಲ್ಲ ನಿದ್ದೆಯಿಲ್ಲದೇ ಹೊರಳಾಡುತ್ತಿದ್ದ. ಏನೇನೋ ಯೋಚನೆಗಳು. ಪುಸ್ತಕ ಹಿಡಿದು ಕೂತರೆ ಏನೂ ಕಾಣುತ್ತಿಲ್ಲ. ನಾಳೆಯನ್ನು ಹೇಗೆ ಎದುರಿಸುವುದೆಂಬ ಭಯದಲ್ಲಿ ಕಣ್ಣು ತುಂಬಿ ಬರುತ್ತಿದೆ. ಹೇಗೋ ಬೆಳಗಾಯಿತು. ಶಾಲೆಯ ಕಡೆ ಹೋದ. ಅಲ್ಲಿ ಹೆಡ್ ಮಾಸ್ತರರನ್ನು ಕಂಡು ತನ್ನ ಕಷ್ಟ ಹೇಳಿಕೊಂಡ. ಅವರು ಏನೂ ಆಗದೆಂದು ಕೈ ಆಡಿಸಿದರು. ಎಲ್ಲೇ ಹೋದರೂ ಏನೇ ಪ್ರಯತ್ನಕ್ಕೆ ಕೈ ಹಾಕಿದರೂ ಅವಮಾನ ಆಗುತ್ತಿತ್ತು. ಮಧ್ಯಾಹ್ನ ೩ ಘಂಟೆಗೆ ಪರೀಕ್ಷೆಗೆ ಹಣ ಕಟ್ಟಲು ಗಡುವು ಮುಗಿಯುತ್ತದೆ. ಆಗ ಸಮಯ ೧ ಆಗಿದೆ. ಹೊಟ್ಟೆ ಹಸಿಯುತ್ತಿರುವುದರ ಕಡೆಗೆ ಪರಿವೆಯೂ ಇಲ್ಲದೇ ಎಲ್ಲೆಂದರಲ್ಲಿ ಓಡಾಡುತ್ತಿರುವ, ಮಾರುತಿ. ೨ ಘಂಟೆಗೆ ಸಾಗರದಿಂದ ಬರುವ ಬಸ್ಸನ್ನು ಎದುರುಗೊಳ್ಳಲು ಬಸ್ ನಿಲ್ದಾಣಕ್ಕೆ ಹೋದ. ಬಸ್ಸು ಬಂದಿತು. ಇವರಪ್ಪ ಇಳಿಯಲೇ ಇಲ್ಲ. ಚಾಲಕನ್ನನ್ನು ಕೆಳಿದ, ನಮ್ಮಪ್ಪನನ್ನು ನೋಡಿದಿರಾ? ಅದಕ್ಕವನು ಯಾರೋ ನಿಮ್ಮಪ್ಪ, ಮುಖ್ಯ ಮಂತ್ರ್‍ಇಯೋ ಅಥವಾ ಪ್ರಧಾನ ಮಂತ್ರಿಯೋ ಅಂತ ವ್ಯಂಗ್ಯ ಮಾಡಿದ. ಎಳೆಯ ಮನಸ್ಸಿನ ಮೇಲೆ ಬರೆ ಎಳೆದಂತಾಯ್ತು. ಇನ್ನು ಮನೆ ಕಡೆಗೆ ಹೋಗಿ ಪ್ರಯೋಜನವಿಲ್ಲ. ಬದುಕನ್ನು ಎದುರಿಸಲೇಬೇಕೆಂಬ ಛಲ ಉಕ್ಕುತ್ತಿದೆ. ಸರಿ ಹಾಗೇ ರಸ್ತೆಗುಂಟ ಹೊರಟ. ಮನೆಕಡೆ ಗಮನವೂ ಬರಲಿಲ್ಲ. ಲಿಂಗನಮಕ್ಕಿಯಿಂದ ಕಾಡಿನ ಮುಖಾಂತರ ಕಾರ್ಗಲ್, ಜೋಗ ದಾಟಿ ಭಟ್ಕಳದ ರಸ್ತೆ ಹಿಡಿದ. ಸಂಜೆಯಾಯಿತು. ಅದ್ಯಾವ ಊರು ಅಂತ ಕೂಡ ತಿಳಿಯಲಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ಮನೆಯ ಜಗುಲಿಯ ಮೇಲೆ ಮಲಗಿದ. ಸ್ವಲ್ಪ ಕಣ್ಣಿಗೆ ಜೊಂಪು ಹತ್ತಿತ್ತು, ಯಾರೋ ಬಂದು "ಲೇ ಮಾಣಿ ಎಂತದ್ದು ಮಾಡ್ತಿ ಇಲ್ಲಿ. ನಡೆ ಆಚೆಗೆ" ಅಂದರು. ಮಾತನಾಡಲು ತ್ರಾಣವೂ ಇಲ್ಲ. ಸ್ವಲ್ಪ ಸಮಯವಾದರೂ ಹುಡುಗನಿಂದ ಉತ್ತರ ಬರದಿರಲು ಮನೆಯಾತನಿಗೆ ಕರುಣೆ ಉಕ್ಕಿ ಬಂದಿತು. ಎಂಥದು! ಉಂಡಿಲ್ಲವೋ ಎಂದ. ಇವನು ತಲೆ ಅಲ್ಲಾಡಿಸಿದ. ಮನೆಯೊಳಗೆ ಹೋಗಿ ಅದೇನನ್ನೋ ತಂದು ಕೊಟ್ಟ. ಸ್ವಲ್ಪ ಅನ್ನ ಇತ್ತು. ಅದೂ ಹಳಸಿದ ವಾಸನೆ ಸಾರುತ್ತಿತ್ತು. ಜೊತೆಗಿದ್ದ ಸಾರಿನಂಥ ಪದಾರ್ಥ ಬಂಗಡಿ ಮೀನಿನ ವಾಸನೆಯ ಗಬ್ಬು ವಾಸನೆ. ಬರಿಯ ಅನ್ನವನ್ನೇ ಹೇಗೋ ಮಾಡಿ ಹೊಟ್ಟೆಯ ಒಳಕ್ಕೆ ತಳ್ಳಿದ. ಸ್ವಲ್ಪ ಹೊತ್ತು ನಿದ್ರಿಸಿ, ಬೆಳಗಾಗುತ್ತಲೇ ಅಲ್ಲಿಂದ ಹೊರಟ. ಹಾಗೇ ಅಲ್ಲಿ ಇಲ್ಲಿ ಸಿಕ್ಕಿದ್ದನ್ನು ತಿಂದು ಕುಡಿದು ೫-೬ ದಿನಗಳ ನಂತರ ಭಟ್ಕಳ ಪೇಟೆಯನ್ನು ತಲುಪಿದ. ಮುಂದೆ ಅಲ್ಲಿ ಏನು ಮಾಡಬೇಕು ಎನ್ನುವ ಪ್ರಶ್ನೆ ಭೂತದಂತೆ ಕಾಡಹತ್ತಿತು. ಪರೀಕ್ಷೆಗೆ ಹಣ ಕಟ್ಟುವ ಅವಧಿಯೂ ಮುಗಿದಿದೆ. ಯಾಕಾದರೂ ಏನು ಮಾಡಬೇಕು, ಎಲ್ಲಿ ಹೋಗಬೇಕು, ಜೀವನ ಅಂದ್ರೆ ಇಷ್ಟೇನಾ ಅನ್ನುವ ಯೋಚನೆ ಹುಟ್ಟಿತು. ಹೊಟ್ಟೆ ಚುರ್ ಅಂದಾಗ ಕಂಡದ್ದು ಹತ್ತಿರದ ಭಟ್ಟರ ಹೋಟೆಲ್. ಅಲ್ಲಿ ಹೋಗಿ ಕೆಲಸ ಕೇಳಿದ. ಅವರು ಇವನ ಪೂರ್ವಾಪರ ವಿಚಾರಿಸಿದರು. ಇವನು ಏನೋ ಒಂದು ಸುಳ್ಳು ಹೇಳಿದ. ಅಂತಹ ಸ್ಥಿತಿಯಲ್ಲೂ ತನ್ನ ಬಗ್ಗೆ ನಿಜ ಹೇಳಲು ಪ್ರತಿಷ್ಠೆ ಅಡ್ಡ ಬಂದಿತ್ತು. ಹೇಗೊ ಒಂದು ತಿಂಗಳು ಭಟ್ಟರು ಹೇಳಿದ ಕೆಲಸವನ್ನೆಲ್ಲಾ ಚೊಕ್ಕವಾಗಿ ಮಾಡಿ ಅವರ ಮೆಚ್ಚುಗೆ ಸಂಪಾದಿಸಿದ. ಭಟ್ಟರಿಗೆ ಇವನು ತನ್ನ ಬಗ್ಗೆ ಸುಳ್ಳು ಹೇಳಿದ್ದಾನೆಂಬ ಸುಳಿವು ಅದು ಹೇಗೋ ಸಿಕ್ಕಿತ್ತು. ಹತ್ತಿರ ಕರೆದು ಅವನ ತಲೆ ನೇವರಿಸಿ "ಲೇ ಮಾಣಿ ಇಂಥ ಸುಳ್ಳು ಹೇಳೂದ, ನೀನು ಬುದ್ಧಿವಂತ. ಓದಿ ಮುಂದೆ ಬರ್ಬೇಕಾದವ. ಹೇಳು ನಿನಗೇನು ತೊಂದರೆ" ಎಂದರು.
ಮಾರುತಿಗೆ ಭಟ್ಟರ ಪ್ರೀತಿಯ ಮಾತುಗಳು ಕೇಳಿ ಅಳುವೇ ಬಂದಿತು. ವಿಷಯವನ್ನೆಲ್ಲಾ ಅರುಹಿದ. ಭಟ್ಟರು ಕೈಗೆ ಸ್ವಲ್ಪ ಹಣವನ್ನಿತ್ತು, ನೋಡು ಈಗ ನೀನು ಮನೆಗೆ ನಡೆ. ಆಗಾಗ್ಯೆ ನನಗೆ ಪತ್ರ ಬರೆ. ನಿನ್ನನ್ನು ನೋಡಿದರೆ, ಸತ್ತು ಹೋದ ನನ್ನ ಮಗನ ಜ್ಞಾಪಕವಾಗುತ್ತಿದೆ. ನೀನು ಇಂದಿನಿಂದ ನನ್ನ ಮಗನೇ. ಚೆನ್ನಾಗಿ ಓದು. ನಿನಗೆಷ್ಟು ಬೇಕೋ ಅಷ್ಟು ಹಣವನ್ನು ನಾನು ಕೊಡುವೆ. ಮನೆಯಲ್ಲಿ ನನ್ನ ವಿಷಯ ತಿಳಿಸು. ಅಂದೇ ಬಸ್ಸಿನಲ್ಲಿ ಕುಳ್ಳಿರಿಸಿ ಲಿಂಗನಮಕ್ಕಿಗೆ ಕಳುಹಿಸಿದರು. ಮನೆಗೆ ಬಂದ ಮಾರುತಿ. ನೊಡ್ತಾನೆ, ಅವರಪ್ಪನಿಗೆ ಲಕ್ವ ಹೊಡಿದು ಮಲಗಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕಾಯಿಲೆಯಿಂದ ಒಬ್ಬ ತೀರಿ ಹೋಗಿದ್ದಾನೆ. ಇವನನ್ನು ನೋಡಿದ ಕೂಡಲೇ ಅವರಮ್ಮ ಮತ್ತು ಶ್ರೀನಾಥ ತಬ್ಬಿ ಕೊಂಡು ಗೊಳೋ ಅಂದು ಅತ್ತು ಬಿಟ್ಟರು. ಮಾರ್ಚ್ ಪರೀಕ್ಷೆಗೆ ಕಟ್ಟಲು ಸಮಯವಾಗಿ ಹೋಗಿತ್ತು. ಆದರೂ ಮರುದಿನ ಹೆಡ್ ಮಾಸ್ತರರನ್ನು ಭೇಟಿಯಾಗಿ ವಿಷಯವನ್ನೆಲ್ಲಾ ಅರುಹಿದ. ಅಷ್ಟು ಹೊತ್ತಿಗಾಗಲೇ ಊರಿನ ಮಂದಿಗೆಲ್ಲಾ ಮಾರುತಿಯ ವಿಷಯ ಗೊತ್ತಾತಿಗ್ಗು. ಇನ್ನು ಸುಮ್ಮನೆ ಕೂತರೆ ಕೆಟ್ಟ ಹೆಸರು ಬರುವುದೆಂದೂ, ತಾನೂ ಏನಾದರೂ ಸಹಾಯ ಮಾಡಬೇಕೆಂದು ಹೆಡ್ ಮಾಸ್ತರರು ಬೆಂಗಳೂರಿನ ವಿದ್ಯಾ ಇಲಾಖೆಗೆ ದೂರವಾಣಿಯ ಮೂಲಕ ಮಾತನಾಡಿ ಹುಡುಗನಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರು. ದೇವರು ದೊಡ್ಡವನು. ಹಾಗೇ ಆಗಿ, ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ದೊರಕಿತು. ಪ್ರತಿ ತಿಂಗಳೂ ಭಟ್ಟರಿಂದ ಹಣ ಬರುತ್ತಿತ್ತು. ಈ ಮಧ್ಯೆ ಒಮ್ಮೆ ಭಟ್ಟರು ಇವರ ಮನೆಗೆ ಬಂದು, ವಿಶ್ವನಾಥರಾಯರ ಚಿಕಿತ್ಸೆಗೆಂದು ಅಂಕೋಲಾಗೆ ಕೂಡ ಕರೆದುಕೊಂಡು ಹೋಗಿದ್ದರು. ಮಾರುತಿಗೆ ಪರೀಕ್ಷೆಗಾಗಿ ಓದುವುದು ಬಿಟ್ಟು ಬೇರೆ ಯಾವುದೂ ಯೋಚನೆಗಳು ಬರದಂತೆ ಎಲ್ಲರೂ ನೋಡಿಕೊಂಡರು. ಮಾರ್ಚ್ ತಿಂಗಳಲ್ಲಿ ಪರೀಕ್ಷೆ ಮುಗಿಯಿತು. ಅಂಕೋಲಾದ ಪೊಕ್ಕ ಮಾನು ಗೌಡ ಔಷಧಿಯ ಸಹಾಯದಿಂದ ಮಾರುತಿ ತಂದೆಯ ಆರೈಕೆ ಮಾಡಿದ. ಬಹಳ ಬೇಗ ತಂದೆ ಆರೋಗ್ಯರಾದರು. ಮೇ ತಿಂಗಳ ಕೊನೆಯ ವಾರದಲ್ಲಿ ಭಟ್ಟರು ಕೈಯಲ್ಲಿ ದಿನಪತ್ರಿಕೆ ಹಿಡಿದು ಓಡೋಡಿ ಬಂದರು. ಜೊತೆಗೇ ಶಾಲೆಯ ಹೆಡ್ ಮಾಸ್ತರರು, ಜೋಯಿಸರು ಮತ್ತಿತರೇ ಮಾಸ್ತರರುಗಳೂ ಇದ್ದರು. ಮನೆಯಲ್ಲಿ ಎಲ್ಲರಿಗೂ ಏನಾಯಿತೆಂದು ಆತಂಕ. ಏದುಸಿರು ಬಿಡುತ್ತಾ ಭಟ್ಟರೇ ಹೇಳಿದರು - ವಿಶ್ವನಾಥರಾಯರೇ ನಿಮ್ಮ ಹುಡುಗ ಅಲ್ಲಲ್ಲ ನನ್ನ ಹುಡುಗ ಮಾರುತಿ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಮೊದಲ rank ಗಳಿಸಿದ್ದಾನೆ. ರಾಜ್ಯ ಸರ್ಕಾರದವರು ಅವನ ಮುಂದಿನ ಓದನ್ನೆಲ್ಲಾ ನೋಡಿಕೊಳ್ಳುತ್ತಾರೆ.
ಎಲ್ಲರೂ ಮಾರುತಿಯನ್ನು ಕೇಳಿದರು, ಏನನಿಸತ್ತೋ ಪುಟ್ಟಾ, ಮುಂದೆ ಓದಲು ನೀನೆಲ್ಲಿಗೆ ಹೋಗ್ತೀ? ಮಾರುತಿ ಎಂದ, ನನಗೆ ಓದು ಬೇಡ! ನನಗೆ ಕೆಲಸ ಬೇಕು. ಯಾರಾದರೂ ಕೆಲಸ ಕೊಡಿಸಿ - ಇಲ್ಲದಿದ್ದಲ್ಲಿ ಭಟ್ಟರ ಹೊಟೆಲ್ ಗೆ ಕೆಲಸಕ್ಕೆ ಸೇರುವೆ.
==================================== ನಂತರ ??? ==================================
- Read more about ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)
- Log in or register to post comments