ಹೊಳಲ್ಕೆರೆಗೆ ಪ್ರಥಮಸ್ಥಾನ ; ಚಂದ್ರಶೇಖರನ ಅಖಂಡವಿಜಯ !

ಹೊಳಲ್ಕೆರೆಗೆ ಪ್ರಥಮಸ್ಥಾನ ; ಚಂದ್ರಶೇಖರನ ಅಖಂಡವಿಜಯ !

 

(ಆಗಿನ ಹುಬ್ಬಳ್ಳಿ ಶಾಖೆಯಲ್ಲಿ ಮುದ್ರಿತ,  ’ಸಂಯುಕ್ತ ಕರ್ನಾಟಕ ದಿನಪತ್ರಿಕೆ’ ಯ ವರದಿಗಾರರು ನಮ್ಮ ಮನೆಗೆ ಬಂದು ಮಾಡಿದ ’ಸಂವಾದ’ ದ ಕೆಲವು ಅಳಿ-ದುಳಿದ ಲೇಖನದ ತುಣುಕುಗಳನ್ನು ಜೋಡಿಸಿ,  ’ ಸ್ಕಾನ್ ಮಾಡಿ’ ಸೇರಿಸಿದ್ದೇನೆ.) 

ಮೇಲಿನ ವರದಿ ಮಾಡಿದ್ದು 'ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ. ಅವರು ಪ್ರಕಟಿಸುತ್ತಿದ್ದ, ತಮ್ಮ ದಿನ-ಪತ್ರಿಕೆಯ ಆ ಕಾಲದ ಪ್ರಖ್ಯಾತ ಕಾಲಂ, " ಅರಳುವ ಪ್ರತಿಭೆ " ಯಲ್ಲಿ ! ವರ್ಷ: ೧೯೬೨. ಆ ದಿನ ಬೆಳಿಗ್ಯೆ ತಾನೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಷಗಳನ್ನು ಪೇಪರ್ ನಲ್ಲಿ ಪ್ರಕಟಿಸಿದ್ದರು. ಅಂದಿನ ದಿನಗಳಲ್ಲಿ ಪರೀಕ್ಷೆಗಳ ಫಲಿತಾಂಷಗಳನ್ನು ಹೀಗೆಯೇ ದಿನ- ಪತ್ರಿಕೆಗಳಲ್ಲಿ ಮುದ್ರಿಸುತ್ತಿದ್ದರು. ಹೊಳಲ್ಕೆರೆಯ 'ಹೈದ'ಚಂದ್ರಶೇಖರ, ರಾಜ್ಯಕ್ಕೇ ಪ್ರಥಮನಾಗಿ ಉತ್ತೀರ್ಣ ಗೊಂಡಿದ್ದ !

ಹೊಳಲ್ಕೆರೆ,ಚಿತ್ರದುರ್ಗ ಜಿಲ್ಲೆಯ ಸುಮಾರು ೪,೦೦೦ ಜನ ವಾಸಿಸುತ್ತಿದ್ದ ಒಂದು ಚಿಕ್ಕ ತಾಲ್ಲೂಕು. ಈ ಸುದ್ದಿ ತಿಳಿದಕೂಡಲೇ ಊರಿನ ಜನ ಹುಚ್ಚೆದ್ದು ಹಾಡಿ, ಕುಣಿದು ಕುಪ್ಪಳಿಸಿದ್ದರು ! ಎಲ್ಲರ ಮುಖದಿಂದಲೂ ಹರ್ಷೋದ್ಗಾರ; ಅವರ ಸಂಭ್ರಮ ಊರಿನ, ಗ್ರಾಮದೇವತೆ ’ ಭಂಡಮ್ಮನ ಜಾತ್ರೆಗೇನೂ' ಕಡಿಮೆಯಿರಲಿಲ್ಲ. ಊರಿನ ಮ್ಯುನಿಸಿಪಲ್ ಹೈಸ್ಕೂಲ್ ನಲ್ಲಿ ಆ ವರ್ಷ ಪರೀಕ್ಷೆಗೆ ಕೂತಿದ್ದ ೫೦ ಜನರಲ್ಲಿ ೪೨ ಜನ ಪಾಸಾಗಿದ್ದರು. ೧೫ ಜನ ಪ್ರಥಮದರ್ಜೆಯಲ್ಲಿ ; ಅವರ ಪೈಕಿ ಒಬ್ಬನು ರಾಜ್ಯಕ್ಕೇ ಪ್ರಥಮ ! ಅಂತಹ ಕಗ್ಗ ಹಳ್ಳಿಯಲ್ಲಿ ಇದೇನು ಸಾಮಾನ್ಯವೇ ?

ಹೊಳಲ್ಕೆರೆಯ ಚರಿತ್ರೆಯಲ್ಲೇ ಪ್ರಥಮ !

ಚಂದ್ರಣ್ಣ ನನ್ನು 'ಎತ್ತಿನ ಗಾಡಿಯಲ್ಲಿ' ಎತ್ತಿ ಕೂಡಿಸಿ ಊರಿನ ಮಣ್ಣಿನ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಹಾರಗಳ ಸುರಿಮಳೆಯೇ ಆಯಿತು. ಊರಿನ 'ಗೋಪಾಲ ದೇವರ ಗುಡಿಯ' ವಿಶಾಲ ಹಜಾರದಲ್ಲಿ ಎಲ್ಲರಿಗೂ ಹುಳಿಯವಲಕ್ಕಿ, ಚಹ ಸೇವನೆಯ ಏರ್ಪಾಡಾಗಿತ್ತು. ಮನೆಯಲ್ಲಿ, ಅವನ ಪ್ರೀತಿಯ ತಾಯಿ, ಅಣ್ಣಂದಿರು, ಮಾವ, ಅತ್ತೆ, ಅಜ್ಜಿ ಇದ್ದರೂ, ಅವನ ತಂದೆಯವರು ಮರಣಗೊಂಡಿದ್ದು, ಈ ವೇಳೆಯಲ್ಲಿ ಅವರ 'ಗೈರುಹಾಜರಿ' ಸಂತಸದಲ್ಲೂ 'ವ್ಯಥೆ' ತಂದಿತ್ತು. ಅವನ ತಂದೆಯವರೇನೋ ಅವನನ್ನು 'ಚಂದ್ರಣ್ಣನೆಂದೇ' ಕರೆಯುತ್ತಿದ್ದರು ; ಈ ಪರೀಕ್ಷೆಯ ಫಲಿತಾಂಷ ಬಂದನಂತರ ಅವನ 'ಅಜ್ಜಿಯೂ' ಅವನನ್ನು ಚಂದ್ರಣ್ಣನೆಂದೇ ಕರೆಯಲು ಆರಂಭಿಸಿದರು !

ತಂದೆಯವರು ಶೇಖರಿಸಿದ್ದ, ಮನೆಯ ಪುಸ್ತಕಭಂಡಾರದಲ್ಲಿ, ೮೫೨ ಪುಸ್ತಕಗಳಲ್ಲಿ ಸುಮಾರು ೫೦೦ ನ್ನು ಅವನು ಅನೇಕ ಬಾರಿ ಓದಿ ಮುಗಿಸಿದ್ದ. ಅವನ ೮ ನೇ ವಯಸ್ಸಿನಲ್ಲೇ 'ಗೀತೆಯ' ಬಾಯಿಪಾಠ ಆಗಿತ್ತು. ಚಂದ್ರಣ್ಣ, ಮೃದುಭಾಷಿ, ಚುರುಕು, ಮೇಧಾವಿ, ಅಪಾರ ಜ್ಞಾಪಕಶಕ್ತಿ ಹೊಂದಿದ್ದ. ಪರೀಕ್ಷೆಯ ತಯಾರಿಗೆ ಎಂದೂ ಟ್ಯೂಷನ್ ಗೆ ಹೋದವನಲ್ಲ. ಎಲ್ಲ ಅವನದೇ ಸ್ವಯಂ ಸಿಧ್ದತೆ ! ಎಸ್.ಎಸ್.ಎಲ್.ಸಿಯ ನಂತರ, ಪಿ.ಯು.ಸಿ; ಬಿ.ಎಸ್.ಸಿ; ಎಮ್.ಎಸ್.ಸಿ, ಹೀಗೆ ಅವನು ಓದಿ, ಅಮೆರಿಕೆಯಲ್ಲಿ ತನ್ನ ಹೆಚ್ಚಿನ ವ್ಯಾಸಂಗವನ್ನು ವಿಜ್ಙಾನ ಕ್ಷೇತ್ರದಲ್ಲೇ ಮಾಡಲು ಹಂಬಲಿಸಿದ್ದ. ಅವನದು ಅಚಲ ನಿರ್ಧಾರ ! ಪಿ.ಯು.ಸಿಯಲ್ಲಿ ಮಾತ್ರ ಒಂದು 'ಅಂಕ' ದಿಂದ ಪ್ರಥಮ ಸ್ಥಾನ ಕೈತಪ್ಪಿತ್ತು.

ಎಮ್.ಎಸ್.ಸಿಯನ್ನು ಕಾನ್ಪುರದ ಐ.ಐ.ಟಿ ಯಲ್ಲಿ ಮುಗಿಸಿದಾಗ, ಅಮೆರಿಕೆಗೆ ಪಿ.ಎಚ್.ಡಿ ಮಾಡಲು ಐ.ಐ.ಟಿ, ಶಿಫಾರಿಸ್ ಪತ್ರ ಕೊಟ್ಟಿತ್ತು. ಅವನ ಶಿಸ್ತು, ಸಂಯಮ, ಕಷ್ಟಪಟ್ಟು ದುಡಿಯುವ ವಿಶೇಷ ಗುಣಗಳು ಅವನ ಕನಸನ್ನು ಈಡೇರಿಸಿದವು ! ಪಿ.ಎಚ್.ಡಿ, ಯನ್ನು ಅಲ್ಲಿನ ಇಂಡಿಯಾನದ "ಪರ್ಡ್ಯೂ" ವಿಶ್ವವಿದ್ಯಾಲಯದಲ್ಲಿ ಮುಗಿಸಿ, ಜರ್ಮನಿಯ 'ಮ್ಯಾಕ್ಸ್ ಪ್ಲ್ಯಾಂಕ್ ' ಸಂಸ್ಥೆಯಲ್ಲಿ ಸಂಶೋದಕನಾಗಿ ಕೆಲಸ ಮಾಡಿದ. ಅಲ್ಲೇ ಅವನು ಉಡುಪಿಯ ಡಾ.ಮೀರಾ ಅವರನ್ನು ಭೇಟಿಯಾದದ್ದು ! ಅದು ಪ್ರೀತಿಯಲ್ಲಿ ಕೊನೆಗೊಂಡು, ೧೯೭೬ ರಲ್ಲಿ ಉಡುಪಿಯ ಕೊಂಜುಬೆಟ್ಟಿ ನಲ್ಲಿ ಮದುವೆಯಾಯಿತು. ಇಬ್ಬರನ್ನೂ ಅಮೆರಿಕೆಯ "ಮಿಸ್ಸೌರಿ ಯೂನಿವರ್ಸಿಟಿ" ಆಹ್ವಾನಿಸಿದ್ದರಿಂದ ಅವರು ಅಮೆರಿಕಕ್ಕೆ ೮೦ ರ ದಶಕದಲ್ಲಿ ಹೋದರು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ಕೊಟ್ಟಿದ್ದಾರೆ. ಚಂದ್ರಣ್ಣ, ಮೀರರಿಗೆ ೩ ಜನ ಹೆಣ್ಣುಮಕ್ಕಳು. ತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಚಿಕ್ಕವರಿಗೆ, ದೊಡ್ಡವರಿಗೆ ಎಲ್ಲರಿಗೂ ಅವನು ಚಂದ್ರಣ್ಣನೇ !

ನಮ್ಮ ಊರಿನಲ್ಲಿ ಅಣ್ಣ ಎಂದು ಕರೆಯುವುದು ವಯಸ್ಸಿನಲ್ಲಿ ಹಿರಿಯರಾದವರಿಗೆ ಮಾತ್ರ. ಆದರೆ ಚಂದ್ರಣ್ಣನ, ತನ್ನ ಅಪೂರ್ವ ಸಾಧನೆಗಳಿಂದ ಎಲ್ಲರ ವಿಶ್ವಾಸಗಳಿಸಿ ಆ ಗೌರವವನ್ನು ಸಂಪಾದಿಸಿದ್ದ. ಇಂದಿಗೂ ಈ ಪ್ರಸಂಗ, ನನ್ನ 'ಹೃದಯದಾಳದಲ್ಲಿ ಹಸಿರಾಗಿ ಉಳಿದಿದೆ.' ನನಗೇನು, ನಮ್ಮ ಊರಿನ ಪ್ರತಿಯೊಬ್ಬ ನಾಗರಿಕನೂ ಪ್ರತಿಬಾರಿ ಎಸ್. ಎಸ್. ಎಲ್. ಸಿ. ಪರೀಕ್ಷೆ ಫಲಿತಾಂಷ ಬಂದಾಗಲೂ, ೧೯೬೨ ರಂದು ಚಂದ್ರಣ್ಣ ಊರಿಗೆ ತಂದು ಕೊಟ್ಟ ಗೌರವವನ್ನು, ಸದಾ- ಸದಾ ನೆನೆಯುತ್ತಾರೆ. !!

ಇದೇ ಚಂದ್ರಶೇಖರ್, ಕೊಲಂಬಿಯದ ಮಿಸ್ಸೂರಿ ವಿಶ್ವವಿದ್ಯಾಲಯದಲ್ಲಿ ಭೌತ ಶಾಸ್ತ್ರದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ (ಛೈರ್) ಕೆಲಸಮಾಡಿ ಈಗ ನಿವೃತ್ತರಾಗಿ ಎರಡು ವರ್ಷಗಳಾಗಿವೆ. ಆದರೂ ಅವರು ವಿಸಿಟಿಂಗ್ ಪ್ರೊಫೆಸರ್ ಆಗಿ, ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದಾರೆ.

೨೦೦೮ ರಲ್ಲಿ ಅವರು ಸಂಪಾದಿಸಿ ಹೊರತಂದ ’ಕರ್ಣಾಟಕ ಭಾಗವತ’ ದ ೨ ಸಂಪುಟಗಳನ್ನು ಲಿಪಿಕಾರರಾಗಿ, ಸಂಶೋಧಕರಾಗಿ, ೧೫ ವರ್ಷಗಳ ಸಮಯದಲ್ಲಿ ಮಾಡಿದ ಮೌಲಿಕ ಕೆಲಸವನ್ನು ದೇಶದಾದ್ಯಂತ ವಿದ್ವಾಂಸರು ಮೆಚ್ಚಿಕೊಂಡಿದ್ದಾರೆ. ಒಂದು ಸಂಸ್ಥೆ ಮಾಡುವ ಕೆಲಸವನ್ನು ಒಬ್ಬ ವಿಜ್ಞಾನದ ಪ್ರೊಫೆಸರ್ ಮಾಡಿರುವುದು ಒಂದು ದಾಖಲಾಗಬೇಕಾದ ಕಾರ್ಯವಾಗಿದೆ. ಭಾಗವತ ಕಾವ್ಯದಲ್ಲಿ ಮತ್ತೂ ಹೆಚ್ಚಿನ ಅಧ್ಯಯನ ಮುಂದುವರೆಸಲು ಈ ಎರಡು ಗ್ರಂಥಗಳು ಕೈಮರಗಳಾಗಿವೆ..

ಇಂತಹ ಮುತ್ಸದ್ಧಿಯವರ 'ಅಣ್ಣ' ನಾನೆಂಬ ಹೆಮ್ಮೆ, ನನಗೆ ಸಮಾಧಾನ ಸಂತೋಷವನ್ನು ತಂದಿದೆ. ’ನಮ್ಮ ಸುಂಕದ ಶ್ಯಾನುಭೋಗರ ವಂಶ’ ದವರಿಗೆಲ್ಲಾ ಈ ’ ಕರ್ಣಾಟಕ ಭಾಗವತ’ ಸದಾ ಪೂಜನೀಯವಾದ ಹೆಮ್ಮೆಯ ಗ್ರಂಥ !

-ವೆಂ.

Rating
No votes yet

Comments