ಅಂಬರಕ್ಕೆ ಹಾರಿತಯ್ಯೋ!!

ಅಂಬರಕ್ಕೆ ಹಾರಿತಯ್ಯೋ!!

ಸರಿ ಸುಮಾರು ಎರಡು ವರ್ಷದ ಹಿಂದಿನ ಬೇಸಿಗೆ ಇರಬೇಕು, ಕುಟುಂಬದ ಜೊತೆ ಬೆಂಗಳೂರಿಗೆ ಹೋದವನು "ನಮ್ಮೂರೇ ಚಂದ" ಅಂದ್ಕೋತಾ "ಉಸ್ಸಪ್ಪಾ" ಅಂದು ಮನೆಗೆ ಬಂದು ಬಿದ್ದೆ! ಮಳೆ ಇನ್ನೂ ಮೊದಲಿಟ್ಟಿರ್ಲಿಲ್ಲ. ಯಾತಕ್ಕೂ ಮನಸ್ಸು ಬಾರದ ಹಾಗೆ ವಿಪರೀತ ಧಗೆ!!ಮನೆ ಹೊರಗೆ ಬಂದು ಜಗಲಿ ಮೇಲೆ ಕೂತ್ರೆ ಹಾಯನ್ಸೋ ಹಾಗೆ ಗಾಳಿಮರದ ತಂಪುಗಾಳಿ. ಮೇಲೆ "ಕುಹೂ ಕುಹೂ" ಕರ್ಣರಸಾಯನ ಬೇರೆ. ಜೊತೆಗೆ ಕಾಗೆ ಕೋಗಿಲೆಗಳ ಜೂಟಾಟ ನೋಡ್ತಾ ಮೈಮರೆತಿದ್ದೆ. ಚಿತ್ತ ಏನೂ ನೇಯದೆ ನಿರುಮ್ಮಳವಾಗಿತ್ತು. ಅಷ್ಟರಲ್ಲಿ "ಅಪ್ಪ, ಅಪ್ಪ, ಇಲ್ನೋಡ್ಬಾರಪ್ಪಅಂತ ಉಸಿರುಬಿಡದೆ ಮಗಮಹಾರಾಯನ ತುರ್ತಿನ ಕಿರಿಚಾಟ. ಮನಸ್ಸಿಲ್ಲದ ಮನಸ್ಸಿಂದ ಎದ್ದು ಹೋಗಿ ನೋಡಿದ್ರೆ ನಮ್ಮ ಗರಾಜ್‌ನಲ್ಲಿ ಬಟ್ಟೆ ಹರವಕ್ಕೆ ಹಾಕಿರೋ ಪ್ಲಾಸ್ಟಿಕ್ ವೈರ್‌ಗಳು ಸೇರೋ ಕಡೆ ಪುಟ್ಟದೊಂದು ಹಕ್ಕಿಗೂಡು!!! ಸಾಧಾರಣವಾಗಿ ಯಾರಿಗೂ ಕಾಣದ ಹಾಗೆ ಮರದಲ್ಲಿ ಎಲೆಯ ಸಂದಿನಲ್ಲಿ ಗೂಡು ಕಟ್ಟುವ ಹಕ್ಕಿ, ನಾವೆಲ್ಲ ಹದಿನೈದು ದಿನ ಮನೆಯಲ್ಲಿ ಇಲ್ಲದಿದ್ದಾಗ ಮನೆ ಬಿಟ್ರು ಅಂದ್ಕೊಂಡ್ತೋ ಏನೋ, ತೀರಾ ಅಪರೂಪಕ್ಕೆ ನಮ್ಮ ಗರಾಜನ್ನ್ನು ಆರಿಸಿಕೊಂಡಿತ್ತು.

ಯಾವ ಹಕ್ಕೀದು ಈ ಗೂಡು ಅಂತ ಪುಸ್ತಕದಲ್ಲಿ ತಲಾಶ್ ಮಾಡುತ್ತಿದ್ದಾಗ ಅದು ಬುಲ್‍ಬುಲ್ ಹಕ್ಕೀದು ಅಂತ ಗೊತ್ತಾಯ್ತು. ಮರುದಿನ ಬಚ್ಚಲುಮನೆಯಿಂದ ಊಟದ ಮನೆಗೆ ಗರಾಜ್ ಹಾದು ಬರುತ್ತಿರುವಾಗ ಬರ್ರ್ರ್ ಅನ್ನೋ ರೆಕ್ಕೆಯ ಸಡಗರದ ಸದ್ದು. ನನ್ನ ಹೆಜ್ಜೆಸದ್ದಿಗೆ ಹೆದರಿದ ಹೆಣ್ಣು ಬುಲ್‌ಬುಲ್ ಹೊರಗೆ ಹಾರಿ ಗೇಟಿನ ಹತ್ತಿರ ಗಣೆ ಬೇತಾಳನ ಹಾಗೆ ಬೆಳಿದು ನಿಂತಿದ್ದ ದಾಸವಾಳದ ಗಿಡದ ಕೊಂಬೆಯ ಮೇಲೆ ಕೂತು "ಶನಿ ತೊಲಗಿತೋ ಇಲ್ವೋ" ಅಂತ ಗರಾಜಿನ ಸಂದಿನಲ್ಲಿ ಹಣಕುತ್ತಾ ಇತ್ತು. ನಾನು ಊಟದ ಮನೆಯಕಡೆ ಹೋದಹಾಗೆ ಮಾಡಿ ಬಾಗಿಲ ಸಂದಿನಿಂದ ಹಣಕಿದರೆ ತಾಯಿ ಹಕ್ಕಿ ಬಾಯಲ್ಲಿ ಒಂದು ಹಣ್ಣೆಲೆ ಕಚ್ಕೊಂಡು ಗೂಡು ಪೂರ್ತಿ ಮಾಡಕ್ಕೆ ಹಾಜರ್!!

ನೋಡ್ತಾ ನೋಡ್ತಾ ಗೂಡು ಆಗೇ ಹೋಯ್ತು. ತಗಳ್ಳಪ್ಪ!! ಶುರುವಾಯ್ತಲ್ಲ ನಂಗೆ ಹೊಟ್ಟೆಕಿಚ್ಚು! ಅದೂ ಈ ಪುಟ್ಟ ಹಕ್ಕೀಮೇಲೆ! ರಿಟೈರ್ಮೆಂಟ್ ಹತ್ರ ಬಂದಾಗ ಮನೆ ಕಟ್ಟಕ್ಕೆ ಶುರು ಮಾಡಿ, "ಎಂಟೊರ್ಷಕ್ಕೆ ನನ್ಮಗ ದಂಟು" ಅಂದಂಗೆ ಎರಡು ವರ್ಷ ತಗಂಡು ಮನೆ ಕಟ್ಟಿದ್ದೆ. ಬ್ಯಾಂಕಿನ ಸಾಲಕ್ಕೆ, ಪುರಸಭೆ ಲೈಸೆನ್ಸ್‌ಗೆ ಮಣ್ಣಿಗೆ ಮಸಿಗೆ ಅಂತ ನಾಯಿ ಅಲೆದ ಹಾಗೆ ಅಲೆದೂ ಅಲೆದೂ ತಲೆ ಮೇಲೆ ಮೂರು ಪುಕುರುಜುಟ್ಟು ಮಾತ್ರ ಉಳಿದಿತ್ತು. ಆದ್ರೆ ಈ ಆಸಾಮಿ ನೋಡಿದ್ರೆ, ಸೈಟಿಲ್ಲ ಪೈಟಿಲ್ಲ, ಪ್ಲಾನಿಲ್ಲ ,ಏನಿಲ್ಲ, ಸಿಮೆಂಟು, ಮರ, ಮೋಪು ಏನೂ ಇಲ್ದೆ ಚಿಟಿಕೆ ಚಪ್ಪರ ಅಂತಾರಲ್ಲ ಹಾಗೆ ಮನೆ ಕಟ್ಟಿ, ಯಾವ ಪುರೋಹಿತನ ಮುಲಾಜೂ ಇಲ್ದೆ ಗೃಹಪ್ರವೇಶ ಮಾಡೇಬಿಡ್ತಲ್ಲ!!

(ಮುಂದುವರೆಯುತ್ತದೆ)

Rating
No votes yet

Comments