ಈ ಸಂಜೆ ಪ್ರತಿ ಸಂಜೆ ಯಾಗಿರಲಿ ನನ್ನ ನಿನ್ನ ಜೀವನದೊಳು

ಈ ಸಂಜೆ ಪ್ರತಿ ಸಂಜೆ ಯಾಗಿರಲಿ ನನ್ನ ನಿನ್ನ ಜೀವನದೊಳು

ನಿನ್ನೊಂದಿಗಿನ ಈ ಸಂಜೆ ಹೆಜ್ಜೆಯೊಳು ಹೆಜ್ಜೆ ಇರಲು
ಅನುರಾಗವು ರಾಗವಾಗಿ ಹೊಮ್ಮುತಲಿರಲು
ಪಾದದ ಕೆಳಗಿನ ಮರಳು ಇನ್ನೂ ಸಡಿಲವಾಯಿತು!!
ಅಲೆಯ ಕರೆಗೆ ಬೆಳಕಿತ್ತ ರವಿಯು ಕಡಲೊಳು ಲೀನನಾಗಲು
ಆ ಕೆಂಬಣ್ಣದ ಪ್ರತಿಬಿಂಬಕ್ಕೆ ನೀನು ಇನ್ನೂ ಕೆಂಪಾಗಲು
ಆಗ ತಾನೇ ಮೂಡಿದ ಚಂದಿರ ನಾಚಿ ಮೋಡದ ಮರೆಯಾದ !!!

 

ನಿನ್ನೊಂದಿಗಿನ ತುಂಟಾಟ , ಸಂಭಾಷಣೆಯ ಹಲವು ದಿನದ ಕನಸು
ಇಂದು ಸಾಕ್ಷಿಯಾಯಿತು ಅದಕೆ ಈ ಮೂಕ ಕಡಲು
ಮುಗುಳುನಗೆಯ ಆ ಪ್ರಹರಕ್ಕೆ ಬೆಳದಿಂಗಳಿಗೂ ಬೆರಗು
ಮೋಡದ ನಡುವಿನ ಚಂದಿರನಿಗೆ ಅಸೂಯೆ ಮೂಡಿಸಿದ ನಿನ್ನ ನಗೆಯು
ಅದ ದೋಚುವ ಕಳ್ಳ ನಾನಾಗಬೇಕು ಎಂಬ ಆಸೆಯು ನಿತ್ಯವೂ

 

ರಮಿಸಲು ನಾ ನಿನ್ನ, ನಿನ್ನ ಲಜ್ಜೆಯು ಚಂದಿರನಿಗೂ ಲಜ್ಜೆ ಮೂಡಿಸಿತು
ಮೋಡದೊಂದಿಗಿನ ಕಣ್ಣಾ ಮುಚ್ಚಾಲೆ ನಿಂತೇ ಹೋಯಿತು
ಮೋಡದಲ್ಲೇ ಚಂದಿರ ಮರೆಯಾಗಲು ಅಮವಾಸ್ಯೆಯ ಕತ್ತಲು ಈ ಕಡಲು
ಪ್ರಣಯ ಶಾಲೆಯ ಮೊದಲ ಪಾಠ ಮುತ್ತಲ್ಲೇ ಕಂಡ ಸಂತ್ರಪ್ತಿ
ಮತ್ತೆ ಮೂಡಿದ ನಿನ್ನ ಬೆಳದಿಂಗಳ ನಗೆಗೆ ಶೋಭಿಸಿತು ಪ್ರಕೃತಿ

 

ಮನಸ ಮಾತ ವಿನಿಮಯ ಈ ಕಡಲ ಒಡಲೊಳು
ಕನಸುಗಳ ವ್ಯವಹಾರ ಯಾರೂ ಇಲ್ಲದ ಈ ಸಂತೆಯೊಳು
ಭಾವದಲ್ಲಿನ ಪಾತ್ರಗಳ ಅನಾವರಣ ಈ ಮರಳ ಮಂಚದೊಳು
ಒಲವಿನ ಚಿತ್ರಗಳ ಅವತರಣ ಜೊತೆಯಾದ ಕೈಯಲ್ಲಿನ ಕುಂಚದೊಳು
ಈ ಸಂಜೆ ಪ್ರತಿ ಸಂಜೆಯಾಗಿರಲಿ ನನ್ನ ನಿನ್ನ ಜೀವನದೊಳು

 

 

ಕಾಮತ್ ಕುಂಬ್ಳೆ

Rating
No votes yet

Comments