ಕೊಪ್ಪಳಕ್ಕೆ ಬರುವವರು ದೊಣ್ಣೆ ತನ್ನಿ!

ಕೊಪ್ಪಳಕ್ಕೆ ಬರುವವರು ದೊಣ್ಣೆ ತನ್ನಿ!

ಗೆಳೆಯನೊಬ್ಬನ ಮದುವೆಗೆಂದು ಬೆಂಗಳೂರಿನಿಂದ ಬಂದಿದ್ದ ಮಿತ್ರನೊಬ್ಬ ಮುಂಜಾನೆ ಅವಸರದಿಂದ ನನ್ನನ್ನು ಎಬ್ಬಿಸಿ, ‘ನೋಡಲ್ಲಿ, ಗಂಡಸರು, ಹೆಂಗಸರು, ಮಕ್ಕಳು ಕೋಲು ಹಿಡಿದುಕೊಂಡು ಕೋಟೆಯ ಕಡೆ ಹೋಗುತ್ತಿದ್ದಾರೆ’ ಎಂದು ಅಚ್ಚರಿಯ ಧ್ವನಿಯಲ್ಲಿ ಹೇಳಿದ.

‘ಸಂಡಾಸ್‌ಗೆ ಹೊರಟಿರಬೇಕು ಬಿಡು ಮಾರಾಯ’ ಎಂದು ಬೇಸರದಿಂದ ಹೇಳಿ ನಾನು ಮತ್ತೆ ಮುಸುಗೆಳೆದುಕೊಂಡೆ.

‘ಏನು? ಕಕ್ಕಸ್‌ಗೆ ಕೋಲು ಹಿಡಿದುಕೊಂಡು ಹೋಗ್ತಾರಾ?’ ಗೆಳೆಯ ಆಶ್ಚರ್ಯಚಕಿತನಾದ.

‘ಇನ್ನೊಂದ್ ತಾಸಿನಲ್ಲಿ ನಿನಗೇ ಗೊತ್ತಾಗುತ್ತೆ’ ಎಂದು ಹೇಳಿ ನಾನು ಸುಮ್ಮನಾದೆ.

ಏಳು ಗಂಟೆಯಾಗುತ್ತಲೇ ಎದ್ದು, ಎರಡು ಪ್ಲಾಸ್ಟಿಕ್ ತಂಬಿಗೆ ತುಂಬಿಕೊಂಡು ಒಂದನ್ನು ಗೆಳೆಯನ ಕೈಗೆ ಕೊಟ್ಟೆ. ಮಜಬೂತಾದ ಎರಡು ಕೋಲುಗಳನ್ನು ತೆಗೆದುಕೊಂಡು, ಒಂದನ್ನು ಅವನಿಗೆ ಕೊಡುತ್ತಾ ‘ನಡಿ, ಸಂಡಾಸ್‌ಗೆ ಹೋಗಿ ಬರೋಣ’ ಎಂದೆ.

ಅವನ ಮುಖದಲ್ಲಿ ದಿಗಿಲು ಕಾಣಿಸಿತು. ಕಕ್ಕಸ್‌ಗೆ ಹೋಗುವ ದಾರಿಯಲ್ಲಿ ಹೋರಾಟ ನಡೆಯುತ್ತದಾ? ಅಥವಾ ಕಕ್ಕಸ್‌ಗೆ ಹೋಗಲಿಕ್ಕೇ ಹೋರಾಡಬೇಕಾ ಎಂದು ಯೋಚಿಸಿ ಗಾಬರಿಯಾಗಿರಬೇಕು.

’ಹೇಳ್ತೀನಿ ಬಾ’ ಎಂದು ದಾರಿಯುದ್ದಕ್ಕೂ ವಿವರಿಸುತ್ತ ಹೋದೆ.

’ಕೊಪ್ಪಳ ಜೈನ ಕಾಶಿಯಷ್ಟೇ ಅಲ್ಲ, ವರಾಹ ಕಾಶಿಯೂ ಹೌದು. ಇಲ್ಲಿ ಹಂದಿಗಳ ಸಂಖ್ಯೆ ಒಟ್ಟು ಜನಸಂಖ್ಯೆಯ ಮುಕ್ಕಾಲು ಪಾಲಿದೆ. ಸದ್ಯ ಕೊಪ್ಪಳದ ಜನಸಂಖ್ಯೆ ೭೫,೦೦೦ ಇರಬಹುದು.

’ಆದರೆ, ಸುಸ್ಥಿತಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳು ಇಲ್ಲವೇ ಇಲ್ಲ ಅನ್ನಬಹುದು. ಬಡತನ ಹಾಗೂ ಶೌಚಪ್ರಜ್ಞೆಯ ಕೊರತೆಯಿಂದಾಗಿ ಬಹಳಷ್ಟು ಜನ ಶೌಚಾಲಯಗಳನ್ನು ಕಟ್ಟಿಕೊಂಡಿಲ್ಲ. ಹೀಗಾಗಿ, ಬೆಳಗಾಗುತ್ತಲೇ ತಂಬಿಗೆ ತುಂಬಿಕೊಂಡು ಕೋಟೆಯ ಕಡೆ ಹೋಗುವುದು ಇಲ್ಲಿ ಸಾಮಾನ್ಯವಷ್ಟೇ ಅಲ್ಲ, ಅನಿವಾರ್ಯವೂ ಹೌದು.

’ಅತ್ತ ಜನ ಗುಡ್ಡ ಏರಿದರೆ, ಇತ್ತ ಹಂದಿಗಳು ಜನರನ್ನು ಹುಡುಕಿಕೊಂಡು ಗುಡ್ಡ ಏರುತ್ತವೆ. ಅಲ್ಲಿ ನರ-ವರಾಹಗಳ ನಡುವೆ ನಡೆಯುವ ಸಂಘರ್ಷ ತಪ್ಪಿಸಲಿಕ್ಕಾಗಿ, ಆ ಅಮೂಲ್ಯ ಹಾಗೂ ಅತ್ಯಂತ ಅನಿವಾರ್ಯವಾದ ಹತ್ತು ನಿಮಿಷಗಳುದ್ದಕ್ಕೂ ಹಂದಿಗಳನ್ನು ಹದ್ದುಬಸ್ತಿನಲ್ಲಿಡಲು ಕೋಲು ಬೇಕೆ ಬೇಕು.

’ಹೀಗಾಗಿ ಬೆಳಗಾಗುತ್ತಲೇ ಇಲ್ಲಿ ದೊಣ್ಣೆನಾಯಕರು/ನಾಯಕಿಯರು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಾರೆ’-

ಎಂದು ಗೆಳೆಯನಿಗೆ ವಿವರಿಸಿದೆ.

ಮರುದಿನ ಗೆಳೆಯನ ಜೊತೆಗೆ ಸಂಡಾಸ್‌ಗೆ ಬಂದವರು ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರ್‍. ಅರ್ಜೆಂಟ್ ಹೊರಟ ಜನರು ಕೆರಳದ ಹಾಗೆ ಒಂದಷ್ಟು ಫೋಟೊಗಳನ್ನು ತೆಗೆದಿದ್ದಾಯಿತು. ಅವುಗಳ ಪೈಕಿ ಸಭ್ಯ ಎನ್ನಿಸಿದ ಒಂದಷ್ಟು ಫೋಟೊಗಳು ಹಾಗೂ ಸ್ವಲ್ಪ ವಿವರಗಳನ್ನು ಸೇರಿಸಿ ’ಪ್ರಜಾವಾಣಿ’ಯ ಕರ್ನಾಟಕ ದರ್ಶನಕ್ಕೆ ಬರೆದೆ. ಅದು ಅಚ್ಚಾಯಿತು ಕೂಡ.

ಅದಾಗಿ, ಐದು ವರ್ಷಗಳೇ ಆಗಿವೆ. ಆದರೂ, ಕೊಪ್ಪಳದ ಪರಿಸ್ಥಿತಿ ಅಷ್ಟೇನೂ ಬದಲಾಗಿಲ್ಲ.

ಕೊಪ್ಪಳ ಜಿಲ್ಲೆಯಾಗಿ ಹನ್ನೊಂದು ವರ್ಷಗಳಾದವು. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಆರು ದಶಕಗಳಷ್ಟು ಹಿಂದಿದೆ. ಎಪ್ಪತ್ತೈದು ಸಾವಿರ ಜನಸಂಖ್ಯೆಯುಳ್ಳ ಈ ಪಟ್ಟಣದಲ್ಲಿ ಸುಸ್ಥಿತಿಯಲ್ಲಿರುವ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಖಾಸಗಿಯಾಗಿ ಶೌಚಾಲಯ ಕಟ್ಟಿಕೊಳ್ಳುವವರಿಗೆ ಸಿಗಬೇಕಾದ ತಾಂತ್ರಿಕ ಹಾಗೂ ಆರ್ಥಿಕ ನೆರವು ಸಿಗುತ್ತಿಲ್ಲ.

ಐದು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಹುಡ್ಕೋ ನೆರವಿನಿಂದ ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಚ್ಛ ಗ್ರಾಮ ಯೋಜನೆಯನ್ನು ಜಾರಿಗೆ ತರಲು ಕಾರ್ಯಕ್ರಮ ಹಾಕಿಕೊಂಡಿತ್ತು. ಅದರ ಪ್ರಕಾರ ೧,೦೦೦ ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಘೋಷಣೆಯಾಯಿತು. ಆದರೆ, ಸ್ವಚ್ಛವಾಗಿದ್ದು ಮಾತ್ರ ಸರ್ಕಾರದ ಅನುದಾನ. ಇದೇ ಪರಿಸ್ಥಿತಿ ಕೊಪ್ಪಳ ಪಟ್ಟಣದಲ್ಲೂ ಇದೆ.

ಹೀಗಾಗಿ, ಬಹಿರ್ದೆಶೆಗೆ ಜನ ಊರ ಪಕ್ಕದಲ್ಲೇ ಇರುವ ಐತಿಹಾಸಿಕ ಕೋಟೆಯ ಮೊರೆ ಹೊಕ್ಕಿದ್ದಾರೆ. ಹಂದಿಗಳು ಅವರ ಬೆನ್ನು ಬಿದ್ದಿವೆ. ಇದು ನರ-ವರಾಹದ ಮುರಿಯದ ಬಂಧನ. ಜನ ಜಾಗೃತರಾಗುವವರೆಗೆ ಈ ಬಂಧನ ’ಟೂಟೇಗಾ ನಂಹೀ’.

ಆದ್ದರಿಂದ ಕೊಪ್ಪಳಕ್ಕೆ ಬರುವ ಸಂದರ್ಭ ಇದ್ದರೆ ತಪ್ಪದೇ ದೊಣ್ಣೆ ತನ್ನಿ!

- ಚಾಮರಾಜ ಸವಡಿ

Rating
No votes yet

Comments