ಕ್ರೂಟ್ಸರ್ ಸೊನಾಟಾ ಅಧ್ಯಾಯ ಇಪ್ಪತ್ತು

ಕ್ರೂಟ್ಸರ್ ಸೊನಾಟಾ ಅಧ್ಯಾಯ ಇಪ್ಪತ್ತು

“ಅವಳನ್ನ ಕೊಲ್ಲುವುದಕ್ಕೆ ಮೊದಲು ಪರಿಸ್ಥಿತಿ ಹಾಗಿತ್ತು. ಒಂದು ಥರ ಸ್ವಲ್ಪ ಕಾಲದ ಕದನವಿರಾಮ. ಉಲ್ಲಂಘಿಸುವ ಕಾರಣವೇ ಇರಲಿಲ್ಲ. ಒಂದು ದಿನ ಯಾವುದೋ ನಾಯಿಗೆ ಡಾಗ್‌ ಶೋನಲ್ಲಿ ಮೆಡಲು ಬಂತು ಅಂದೆ. ‘ಮೆಡಲಲ್ಲ, ಸರ್ಟಿಫಿಕೇಟು’ ಅಂದಳು. ಜಗಳ ಶುರುವಾಯಿತು. ಮಾತು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹರಿಯಿತು. ವಾದ, ವಾದ, ವಾದ. ‘ಕಂಡಿದ್ದೀನಿ, ಇದೇನು ಹೊಸದಲ್ಲ...’, ‘ನೀನು ಅನ್ನಲಿಲ್ಲವಾ...’ ‘ಹಾಗೆ ಅನ್ನಲೇ ಇಲ್ಲ...’ ‘ಹಾಗಾದರೆ ಸುಳ್ಳು ಹೇಳುತ್ತಿದೀನಾ?’ ಸತ್ತು ಹೋಗಬೇಕು ಅಥವ ಸಾಯಿಸಿಬಿಡಬೇಕು ಅನ್ನಿಸುವಂಥ ಜಗಳ ಹುಟ್ಟುತ್ತಿದೆ ಅನ್ನಿಸಿ ಭಯವಾಯಿತು. ಜಗಳದ ಬೆಂಕಿ. ಕಂಟ್ರೋಲು ಮಾಡಿಕೊಳ್ಳಬೇಕು ಅಂದುಕೊಂಡೆ. ಮೈಯೆಲ್ಲ ಉರಿಯುತ್ತಿತ್ತು. ಅವಳೂ ಹಾಗೇ ಇದ್ದಳು.ಅಥವಾ ಇನ್ನೂ ಭಯಂಕರ ಮೂಡಿನಲ್ಲಿದ್ದಳು. ನಾನು ಹೇಳಿದ ಒಂದೊಂದು ಮಾತನ್ನೂ ತಿರುಚಿ ಬೇರೆ ಅರ್ಥ ಹೊರಡಿಸುತ್ತಿದ್ದಳು. ಅವಳ ಮಾತಿನ ತುಂಬ ವಿಷ. ಮಾತಿನಲ್ಲಿ ಹೇಗೆ ಎಲ್ಲಿಗೆ ಹೊಡೆದರೆ ನನಗೆ ನೋವಾಗುತ್ತದೋ ಅಲ್ಲಿಗೇ ಸರಿಯಾಗಿ ಗುರಿಯಿಟ್ಟು ತಿವಿಯುತ್ತಿದ್ದಳು. ತಡೆದುಕೊಳ್ಳಲು ಆಗಲಿಲ್ಲ. ಬಾಯಿ ಮುಚ್ಚು ಅಂದೆ ಜೋರಾಗಿ.
“ಮಕ್ಕಳ ರೂಮಿನ ಕಡೆ ಓಡಿ ಹೋಗುವುದಕ್ಕೆ ನೋಡಿದಳು. ನಾನು ಹೇಳುತ್ತಿದ್ದ ಮಾತು ಮುಗಿಸಬೇಕು ಅಂತ ಅವಳ ಕೈ ಹಿಡಿದು ನಿಲ್ಲಿಸಿಕೊಂಡೆ. ಬಹಳ ನೋವಾದಹಾಗೆ ನಟಿಸುತ್ತಾ ‘ಬನ್ನಿ, ಎಲ್ಲಾ ಬನ್ನಿ, ನಿಮ್ಮಪ್ಪ ನನ್ನ ಹೊಡೀತಿದಾರೆ ನೋಡಿ’ ಎಂದು ಕೂಗಿಕೊಂಡಳು. ‘ಸುಳ್ಳು ಹೇಳಬೇಡ’ ಅಂತ ಕಿರುಚಿದೆ. ಮಕ್ಕಳು ಓಡಿಬಂದವು. ಅವಳ ಹತ್ತಿರ ಗುಂಪು ಸೇರಿದವು. ಮಕ್ಕಳನ್ನ ಸಮಾಧಾನ ಮಾಡುವುದಕ್ಕೆ ಶುರುಮಾಡಿದಳು. ‘ಕಳ್ಳಾಟ ಆಡಬೇಡ’ ಅಂದೆ. ‘ನಾನು ಮಾಡೋದೆಲ್ಲ ಕಳ್ಳಾಟ ಅಂತಾನೇ ಕಾಣುತ್ತೆ ನಿಮಗೆ. ನನ್ನ ಕೊಲೆ ಮಾಡಿಬಿಟ್ಟು ಸತ್ತೋದ ಹಾಗೆ ಕಳ್ಳಾಟ ಆಡ್ತಾ ಇರೋದು ನೋಡಿ ಅನ್ನೋದು ನಿಮ್ಮ ಬುದ್ಧಿ, ಗೊತ್ತಿಲ್ಲವಾ; ಅಂದಳು. ‘ನಾಯಿ, ನಾಯಿ. ನೀನು ಸತ್ತೋದರೇ ವಾಸಿ’ ಅಂದುಬಿಟ್ಟೆ.
“ಹಾಗಂದಕೂಡಲೆ ಗಾಬರಿ, ಭಯ, ಅಸಹ್ಯ. ಅಂಥ ಮಾತು ನನ್ನ ಬಾಯಿಂದ ಬರುತ್ತದೆ ಅಂದುಕೊಂಡಿರಲಿಲ್ಲ. ಬಂದುಬಿಟ್ಟಿದ್ದವು. ಕಿರುಚಾಡಿಕೊಂಡೇ ನನ್ನ ಓದುವ ರೂಮಿಗೆ ಹೋಗಿ ಸಿಗರೇಟು ಸೇದುತ್ತಾ ಕೂತುಕೊಂಡೆ. ಅವಳು ಹಾಲ್‌ಗೆ ಹೋಗೆ ಎಲ್ಲಿಗೋ ಹೊರಡಲು ರೆಡಿಯಾಗುತ್ತಿರುವ ಸದ್ದು ಕೇಳಿಸಿತು. ‘ಎಲ್ಲಿಗೆ ಹೊರಟೆ?’ ಅಂತ ಕೂಗಿದೆ. ಉತ್ತರ ಬರಲಿಲ್ಲ. ಎಲ್ಲಾದರೂ ಸಾಯಲಿ ಅಂದುಕೊಂಡು ಮತ್ತೆ ರೂಮಿಗೆ ಬಂದು ಸಿಗರೇಟು ಸೇದುತ್ತಾ ಕೂತುಕೊಂಡೆ.
“ಸೇಡು ತೀರಿಸಿಕೊಳ್ಳಬೇಕು, ಸಾಯಿಸಿಬಿಡಬೇಕು, ರಾಜಿ ಮಾಡಿಕೊಳ್ಳಬೇಕು, ಏನೂ ಆಗಿಲ್ಲ ಅನ್ನುವಹಾಗೆ ಇದ್ದುಬಿಡಬೇಕು-ಹೀಗೆ ಸಾವಿರ ಪ್ಲಾನುಗಳು ತಲೆಯಲ್ಲಿ ಓಡುತ್ತಿದ್ದವು. ಒಂದಾದಮೇಲೆ ಒಂದು ಸಿಗರೇಟು ಸೇದುತ್ತಾ ಇದ್ದೆ. ಓಡಿ ಹೋಗಬೇಕು, ಅವಳು ಎಷ್ಟು ಹುಡುಕಿದರೂ ಸಿಗದ ಹಾಗೆ ಬಚ್ಚಿಟ್ಟುಕೊಳ್ಳಬೇಕು, ಅಮೆರಿಕಾಗೆ ಹೋಗಿಬಿಡಬೇಕು ಅನ್ನಿಸಿತು. ಅವಳಿಲ್ಲದೆ ಇದ್ದರೆ ಎಷ್ಟು ಚೆನ್ನಾಗಿರುತ್ತದೆ, ಲೈಫು ಎಷ್ಟು ವಂಡರ್‌ಫುಲ್ಲಾಗಿರುತ್ತದೆ, ಬೇರೆ ಥರದವಳನ್ನು ಮದುವೆಯಾಗಿ ಎಷ್ಟು ಸಂತೋಷವಾಗಿರಬಹುದು ಅನ್ನುವ ಯೋಚನೆಗಳು ಬಂದವು. ಅವಳು ಸತ್ತು ಹೋಗಬೇಕು ಅಥವಾ ಡೈವೋರ್ಸು ಕೊಡಬೇಕು, ಆಗ ಎಲ್ಲ ಸರಿಹೋಗುತ್ತದೆ. ಮಾಡಬಾರದ ಯೋಚನೆಗಳನ್ನು ಮಾಡುತ್ತಿದ್ದೇನೆ ಅನ್ನಿಸಿತು. ಕನ್ಫ್ಯೂಸ್ ಆಯಿತು. ಮನಸ್ಸು ಎಲ್ಲೆಲ್ಲೋ ಹರಿದಾಡದಿರಲಿ ಅಂತ ಒಂದೇ ಸಮ ಸಿಗರೇಟು ಸೇದಿದೆ.
“ಮನೆಯ ಬದುಕು ಎಂದಿನಂತೆ ನಡೆದಿತ್ತು. ಮಕ್ಕಳಿಗೆ ಪಾಠ ಹೇಳುವ ಗೌರ್ನೆಸ್ ಬಂದಳು. ‘ಅಮ್ಮಾವರು ಎಲ್ಲಿ? ಯಾವಾಗ ಬರುತ್ತಾರೆ?’ ಅಂದಳು. ಆಡುಗೆಯವನು ಬಂದು ‘ಟೀ ಗೆ ರೆಡಿ ಮಾಡಲೇ?’ ಎಂದು ಕೇಳಿದ. ಡೈನಿಂಗ್ ಹಾಲಿಗೆ ಹೋದೆ. ಮಕ್ಕಳಿಗೆ ಗೊತ್ತಾಗಿತ್ತು. ಅದರಲ್ಲೂ ಲೀಸಾ ಚುರುಕು. ಪ್ರಶ್ನೆ ಕೇಳುವ ಹಾಗೆ, ನಾನು ಮಾಡಿದ್ದು ತಪ್ಪು ಎಂದು ಆಪಾದಿಸುವ ಹಾಗೆ ನೋಡಿದಳು. ಮಾತಿಲ್ಲದೆ ಟೀ ಕುಡಿದೆವು. ಅವಳು ಬರಲಿಲ್ಲ. ಸಾಯಂಕಾಲವಾಯಿತು. ಬರಲಿಲ್ಲ. ನನ್ನ ಮನಸ್ಸಿನಲ್ಲಿ ಎರಡು ಥರ ಭಾವನೆಗಳಿದ್ದವು. ನನ್ನ, ಮಕ್ಕಳನ್ನ, ಹಿಂಸೆ ಮಾಡಬೇಕು ಅಂತಲೇ ಹೋಗಿದ್ದಾಳೆ. ಹಾಗನ್ನಿಸಿ ಕೋಪ ಉಕ್ಕುತ್ತಿತ್ತು. ವಾಪಸ್ಸು ಬಂದರೆ ಸರಿಹೋಗುತ್ತದೆ ಅನ್ನಿಸುತ್ತಿತ್ತು. ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಇಲ್ಲ, ವಾಪಸ್ಸು ಬರುವುದಿಲ್ಲ, ಏನಾದರೂ ಮಾಡಿಕೊಂಡು ಬಿಡುತ್ತಾಳೆ ಅನ್ನಿಸಿ ಭಯವಾಗುತ್ತಿತ್ತು. ನಾನೇ ಹೋಗಿ ಕರೆದುಕೊಂಡು ಬರಬೇಕು. ಆದರೆ ಎಲ್ಲಿಗೆ ಹೋಗಿದ್ದಾಳೆ ಎಂದು ಹುಡುಕುವುದು? ಅಕ್ಕನ ಮನೆಗೆ ಹೋಗಿರಬಹುದಾ? ನಾನು ಅವಳ ಅಕ್ಕನ ಮನೆಗೆ ಹೋಗಿ ಕೇಳಿದರೆ ಪೆಕರನಹಾಗೆ ಕಾಣುತ್ತೇನೆ. ಅವಳಿಗೆ ಬೇಕಾದದ್ದೂ ಅದೇ. ಸಾಯಲಿ. ಹಿಂಸೆ ಕೊಡಬೇಕು ಅಂತಿದ್ದರೆ ಅವಳಿಗೇ ಕೊಟ್ಟುಕೊಳ್ಳಲಿ. ಇನ್ನೊಂದು ಸಾರಿ ಜಗಳವಾದರೆ ಇನ್ನೂ ಭಯಂಕರವಾಗಿರುತ್ತದೆ. ಅಕ್ಕನ ಮನೆಗೆ ಹೋಗಿರದಿದ್ದರೆ, ಏನಾದರೂ ಮಾಡಿಕೊಂಡರೆ, ಮಾಡಿಕೊಂಡೇಬಿಟ್ಟಿದ್ದರೆ?
“ಹನ್ನೊಂದಾಯಿತು. ಹನ್ನೆರಡು. ಬೆಡ್ ರೂಮಿಗೆ ಹೋಗಲಿಲ್ಲ. ಬಂದಾಳೇನೋ ಅಂತ ಕಣ್ಣು ಬಿಟ್ಟುಕೊಂಡು ಒಬ್ಬನೇ ಎಚ್ಚರವಾಗಿ ಕಾದಿರುವುದರಲ್ಲಿ ಅರ್ಥವಿಲ್ಲ ಅನಿಸಿತು. ಓದುವ ರೂಮಿನಲ್ಲೇ ಮಲಗಬೇಕು ಅಂತಲೂ ಅನಿಸಲಿಲ್ಲ. ಕಾಗದ ಬರೆಯಬೇಕು, ಏನಾದರೂ ಓದಬೇಕು, ಮನಸ್ಸು ಹೀಗೆ ತಡಬಡಾಯಿಸಬಾರದು ಅನ್ನಿಸುತ್ತಿತ್ತು. ಏನೂ ಮಾಡಲು ಆಗಲಿಲ್ಲ. ಒಬ್ಬನೇ ಕೂತಿದ್ದೆ, ಸುಮ್ಮನೆ, ಕೋಪಮಾಡಿಕೊಂದು, ಹಿಂಸೆಪಡುತ್ತಾ, ಚಡಪಡಿಸುತ್ತಾ, ಕೇಳಿಸಿಕೊಳ್ಳುತ್ತಾ..ಮೂರು ಗಂಟೆ. ನಾಲ್ಕು. ಇನ್ನೂ ಬಂದಿಲ್ಲ. ಬೆಳಗಿನ ಜಾವ ನಿದ್ದೆ ಬಂತು. ಎಚ್ಚರವಾಯಿತು. ಬಂದಿರಲಿಲ್ಲ.
“ಮನೆಯಲ್ಲಿ ದಿನ ನಿತ್ಯದ ಕೆಲಸ ಮಾಮೂಲಿನಂತೆ ಶುರುವಾಯಿತು. ಯಾಕೆ, ಏನಾಯಿತು ಎಂಬಂತೆ, ನನ್ನದೇ ತಪ್ಪು, ಆಗಿದ್ದಕ್ಕೆಲ್ಲ ನಾನೇ ಕಾರಣ ಎಂದು ಟೀಕೆ ಮಾಡುವ ಹಾಗೆ ನೋಡುತ್ತಿದ್ದರು. ಮನಸ್ಸಿನಲ್ಲಿ ಅದೇ ದ್ವಂದ್ವ. ಅಬಳು ಹಿಂಸೆ ಕೊಡುತ್ತಿದ್ದಾಳೆ ಅನ್ನುವ ಕೋಪ, ಯಾಕೋ ಬರಲಿಲ್ಲವಲ್ಲ ಎಂಬ ಕಳವಳ. ಹನ್ನೊಂದು ಗಂಟೆಯ ಹೊತ್ತಿಗೆ ಅವಳ ಅಕ್ಕ ಬಂದಳು. ರಾಯಭಾರಕ್ಕೆ ಬಂದಿದ್ದಳು. ‘ಯಾಕೆ, ಏನಾಯಿತು? ಅವಳನ್ನ ಕಣ್ಣಲ್ಲಿ ನೋಡೋದಕ್ಕೆ ಆಗುವುದಿಲ್ಲ, ಹಾಗಿದಾಳೆ. ಏನಾಯಿತು?’ ಅಂದಳು. ಏನೂ ಅಗಿಲ್ಲ. ಅವಳ ಸ್ವಭಾವನೇ ಹಾಗೆ. ಮೊಂಡು ಅಂದೆ. ‘ಹೀಗೇ ಇರೋದಕ್ಕೆ ಆಗುತ್ತದಾ? ಹೊಂದಿಕೊಂಡು ಹೋಗಬೇಕು’ ಅಂದಳು. ‘ಅದನ್ನ ಅವಳಿಗೆ ಹೇಳಿ. ನಾನಂತೂ ಬರುವುದಿಲ್ಲ. ಅವಳೇ ಇಲ್ಲಿಗೆ ಬಂದು ಇರುವ ಹಾಗಿದ್ದರೆ ಇರಲಿ, ಬೇರೆ ಆಗಬೇಕು ಅನ್ನಿಸಿದರೆ ಆಗಲಿ. ಎಲ್ಲಾ ಅವಳಿಗೆ ಬಿಟ್ಟಿದ್ದು’ ಅಂದೆ.
ಏನೂ ಹೇಳಲು ತೋಚದೆ ಅವಳ ಅಕ್ಕ ಹೊರಟು ಹೋದಳು. ಎಲ್ಲಾ ಅವಳಿಗೆ ಬಿಟ್ಟಿದ್ದು ಎಂದು ಧೈರ್ಯವಾಗಿ ಹೇಳಿದ್ದರೂ, ಅವಳು ಹೋದಮೇಲೆ, ನನ್ನ ಓದುವ ರೂಮಿನಿಂದ ಹೊರಗೆ ಬಂದಾಗ, ಕಣ್ಣಲ್ಲಿ ನೀರು ತುಂಬಿಕೊಂಡು, ಭಯಪಟ್ಟುಕೊಂಡು ಸುಮ್ಮನೆ ನಿಂತಿದ್ದ ಮಕ್ಕಳನ್ನು ನೋಡಿದರೆ, ಹಾಳಾಗಲಿ, ನಾನೇ ಹೋಗಿ ಕರೆಯಬೇಕು ಅನ್ನಿಸಿತು. ಆದರೆ ಹೋಗಲೋ ಬೇಡವೋ ಎಂದು ಸುಮ್ಮನೆ ಮನೆಯೆಲ್ಲ ಅಡ್ಡಾಡಿದೆ. ವೋಡ್ಕಾ, ವೈನು ಕುಡಿದೆ. ನನ್ನ ಹಠಮಾರಿತನ, ಮೂರ್ಖತನ, ದೈನ್ಯ ಮನಸಿನಿಂದ ಮರೆಯಾದವು.
“ಮೂರು ಗಂಟೆಯ ಹೊತ್ತಿಗೆ ಬಂದಳು. ನಾನು ಕಂಡರೂ ಮಾತನಾಡಿಸಲಿಲ್ಲ. ತಪ್ಪು ಒಪ್ಪಿಕೊಂಡಿದ್ದಾಳೆ ಅಂದುಕೊಂಡು ನೀನು ಬೈಯ್ದದ್ದಕ್ಕೇ ನನಗೆ ಸಿಟ್ಟು ಬಂದದ್ದು ಅಂದೆ. ಅವಳ ಮುಖ ದುಮುಗುಡುತ್ತಿತ್ತು. ‘ನಾನೇನೂ ನಿಮ್ಮ ಮಾತು ಕೇಳುವುದಕ್ಕೆ ಬರಲಿಲ್ಲ, ಮಕ್ಕಳನ್ನು ಕರಕೊಂಡು ಹೋಗೋಣ ಅಂತ ಬಂದೆ. ಇನ್ನುಮೇಲೆ ಒಟ್ಟಿಗೆ ಇರುವುದು ಸಾಧ್ಯ ಇಲ್ಲ’ ಅಂದಳು. ನನ್ನದೇನೂ ತಪ್ಪಿಲ್ಲ, ಅವಳೇ ಸಿಕ್ಕಾಪಟ್ಟೆ ರೇಗುವ ಹಾಗೆ ಮಾಡಿದ್ದು ಅಂತ ಹೇಳಲು ಹೋದೆ. “ಸುಮ್ಮನೆ ಮಾತಾಡಬೇಡಿ, ಚೆನ್ನಾಗಿರಲ್ಲ ಆಮೇಲೆ” ಅಂದಳು. ಈ ತಮಾಷೆಯೆಲ್ಲ ಹಿಡಿಸುವುದಿಲ್ಲ ಅಂದೆ. ಅವಳು ಅರ್ಥವಾಗದ ಹಾಗೆ ಏನೇನೋ ಗೊಣಗಿಕೊಂಡು ರೂಮಿಗೆ ಓಡಿಹೋಗಿ ಬಾಗಿಲು ಹಾಕಿಕೊಂಡಳು. ಚಿಲಕ ಹಾಕಿದ ಸದ್ದು ಕೇಳಿಸಿತು. ಬಾಗಿಲು ತಟ್ಟಿದೆ. ಸದ್ದಿಲ್ಲ. ಸಿಟ್ಟು ಬಂತು. ವಾಪಸ್ಸು ಬಂದೆ. ಅರ್ಧಗಂಟೆ ಆಯಿತು. ಲಿಸಾ ಅಳುತ್ತಾ ಓಡಿಬಂದಳು. “ಯಾಕೆ? ಏನಾಯಿತು ಈಗ?” ಅಂದೆ. “ಅಮ್ಮ ಮಾತೇ ಆಡುತ್ತಿಲ್ಲ” ಅಂದಳು. ಇಬ್ಬರೂ ರೂಮಿಗೆ ಹೋದೆವು. ಶಕ್ತಿಯೆಲ್ಲ ಬಿಟ್ಟು ಬಾಗಿಲು ಎಳೆದೆ. ಒಂದೇ ಚಿಲುಕ ಹಾಕಿಕೊಂಡಿದ್ದಳು. ಬಾಗಿಲು ತೆಗೆದುಕೊಂಡಿತು. ಹಾಸಿಗೆಯ ಹತ್ತಿರ ಹೋದೆ. ವಕ್ರವಾಗಿ ಬಿದ್ದಿದ್ದಳು ಹಾಸಿಗೆಯ ಮೇಲೆ. ಕಾಲಲ್ಲಿ ಬೂಟು ಹಾಗೇ ಇತ್ತು. ಟೇಬಲ್ಲಿನ ಮೇಲೆ ಅಫೀಮಿನ ಬಾಟಲು ಖಾಲಿಯಾಗಿ ಬಿದ್ದಿತ್ತು. ಎಬ್ಬಿಸಿದೆವು. ಅತ್ತೆವು. ರಾಜಿ ಆದೆವು. ಪೂರಾ ಅಲ್ಲ, ಸ್ವಲ್ಪ. ಇಬ್ಬರ ಮನಸ್ಸಿನಲ್ಲೂ ದ್ವೇಷ ಹಾಗೇ ಇತ್ತು. ಈಗ ಅದರ ಜೊತೆಗೆ ಈ ಜಗಳದ ಕೋಪ, ಬೇಸರ ಸೇರಿಕೊಂಡವು. ಆದ ಜಗಳಕ್ಕೆ ಅವಳು ಕಾರಣ ಎಂದು ನನ್ನ ಮನಸ್ಸಿನಲ್ಲಿ, ನಾನು ಕಾರಣ ಎಂದು ಅವಳ ಮನಸ್ಸಿನಲ್ಲಿ ಸಿಟ್ಟು ಉಳಿದುಕೊಂಡೇ ಇತ್ತು. ಜಗಳ ಎಷ್ಟೆಂದು ಮುಂದುವರೆದೀತು. ಮತ್ತೆ ಮೊದಲಿನ ಹಾಗೇ ಇರಲು ತೊಡಗಿದೆವು. ಇಂಥದೇ ಜಗಳ, ಇನ್ನೂ ಕೆಟ್ಟ ಜಗಳ ಮತ್ತೆ ಮತ್ತೆ ಆಗುತ್ತಿತ್ತು-ತಿಂಗಳಿಗೊಂದು, ವಾಕ್ಕೆ ಒಂದು, ಆಗಾಗ ದಿನಕ್ಕೆ ಒಂದು. ಕಥೆ ರಿಪೀಟ್ ಆಗುತ್ತಿತ್ತು. ಒಂದು ಸಾರಿ ಎರಡು ದಿನ ಜಗಳ ಆಡಿದ್ದೆವು. ಫಾರಿನ್ನಿಗೆ ಹೋಗಿಬಿಡೋಣ ಎಂದು ಪಾಸ್‌ಪೋರ್ಟಿಗೆ ಅರ್ಜಿಯನ್ನೂ ಹಾಕಿದ್ದೆ. ಮತ್ತೆ ಅರ್ಧ ಸಮಾಧಾನ, ಅರ್ಧ ರಾಜಿ. ಫಾರಿನ್ನಿಗೆ ಹೋಗಲಿಲ್ಲ.
(ಮುಂದುವರೆಯುವುದು)

Rating
No votes yet