ಜಾತಿ ಆಧಾರಿತ ಮೀಸಲಾತಿ ಪದ್ಧತಿಯಿಂದ ಬಿಡುಗಡೆ ಬೇಡವೇ?

ಜಾತಿ ಆಧಾರಿತ ಮೀಸಲಾತಿ ಪದ್ಧತಿಯಿಂದ ಬಿಡುಗಡೆ ಬೇಡವೇ?

ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಜಾತಿ ಆಧಾರಿತ ಮೀಸಲಾತಿ ಪದ್ಧತಿಯ ಬಗ್ಗೆ ಹಾಗೇ ಸುಮ್ಮನೇ ಕೂತು ಯೋಚಿಸಿದಾಗ ಕೆಲವೊಂದು ವಿಚಾರಗಳು ನನ್ನ ತಲೆಯಲ್ಲಿ ಬಂದವು. ಅವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮತ್ತಲಿಂದಲೂ ಸೂಕ್ತ ವಿಚಾರಧಾರೆ ಹರಿದು ಬರಬಹುದೆಂಬ ನಿರೀಕ್ಷೆ ನನಗೆ.

ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದಲ್ಲಿ ಮುಂದೆ ತರಬೇಕೆನ್ನುವ ಉದ್ದೇಶವನ್ನು ಇಟ್ಟುಕೊಂಡು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. (ಹೀಗಂತ ನನ್ನೆಣಿಕೆ, ಅದರ ಉದ್ದೇಶ ಬೇನಾದರೂ ಆಗಿತ್ತೇ, ಎನ್ನುವ ಅನುಮಾನ ಕೂಡ). ಸ್ವಾತಂತ್ರ್ಯ ಸಿಕ್ಕಿ ಅರುವತ್ತೆರಡು ವರುಷವಾದರೂ ಇನ್ನೂ ಆ ಉದ್ದೇಶ ಸಫಲವಾಗದೇ ಉಳಿದಿದೆ. ಏಕೆ ಹೀಗಾಗಿರಬಹುದು ಎಂದು ಯೋಚಿಸಿದಾಗ ಮೂಡಿ ಬಂದ ನನ್ನ ತರ್ಕಬದ್ಧ ಮತ್ತು ವಿಚಾರಾರ್ಹವಾದ ಅನಿಸಿಕೆಗಳು ಹೀಗಿವೆ.

ಆರ್ಥಿಕವಾಗಿ ಹಿಂದುಳಿದವರನ್ನು ಮೀಸಲಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಮುಂದೆ ತಂದು ಆರ್ಥಿಕವಾಗಿ ಮುಂದುವರಿದವರ ಗುಂಪಿಗೆ ಸೇರಿಸಬಹುದು. ಆದರೆ, ಜಾತಿಯಲ್ಲಿ ಹಿಂದುಳಿದವರು ಸಮಾಜದಲ್ಲಿ ಎಷ್ಟೆ ಮುಂದುವರಿದರೂ ಅವರು ಮುಂದುವರಿದ ಜಾತಿಯ ಸದಸ್ಯರಾಗಲು ಸಾಧ್ಯವೇ?

ಅದೂ ಅಲ್ಲದೆ, ಯಾವುದೇ ಹಿಂದುಳಿದ ಜಾತಿ ಅಥವಾ ವರ್ಗ, ಸಮಾಜದಲ್ಲಿ ಎಷ್ಟೇ ಮುಂದುವರಿದರೂ ತನ್ನ "ಹಿಂದುಳಿದ ಜಾತಿ" ಅಥವಾ "ಹಿಂದುಳಿದ ವರ್ಗ" ಎನ್ನುವ ಹಣೆಪಟ್ಟಿಯನ್ನು ಬಿಟ್ಟುಕೊಡಲು ತಯಾರಾಗಿ ಬಿಡಬಹುದೇ? ಇಲ್ಲ. ಖಂಡಿತಕ್ಕೂ ಇಲ್ಲ.

ಹಾಗಾಗಿ, ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರ ಪ್ರಯೋಜನಕ್ಕೆ ಜಾರಿಗೆ ತರಬೇಕಾಗಿತ್ತೇ ವಿನಹ ಜಾತಿಗಳನ್ನು ಅಥವಾ ವರ್ಗಗಳನ್ನು ಆಧರಿಸಿ ಅಲ್ಲ. ಕುಟುಂಬದ ವಾರ್ಷಿಕ ಆದಾಯದವನ್ನು ಆಧರಿಸಿ, ಒಂದು ಬಡತನದ ರೇಖೆ ಎನ್ನುವುದನ್ನು ನಿರ್ಧರಿಸಿ, ಆ ರೇಖೆಯ ಕೆಳಗಿನ ಆದಾಯ ಇರುವವರ ಒಂದು ವರ್ಗ ಮತ್ತು ಆ ರೇಖೆಯೆ ಮೇಲಿನ ಆದಾಯ ಇರುವವರ ಒಂದು ವರ್ಗ ಮಾಡಿದ್ದರೆ ಮುಗಿದು ಬಿಡುತ್ತಿತ್ತು. ಆ ರೇಖೆಯ ಕೆಳಗಿನವರಿಗಾಗಿ ದೇಶಾದ್ಯಂತ ಒಂದೇ ರೀತಿಯ ಮೀಸಲಾತಿ ವ್ಯವಸ್ಥೆ ಜಾರಿಗೆ ತಂದು ಬಿಟ್ಟಿದ್ದರೆ ಎಷ್ಟೊಂದು ಸ್ವಾಗತಾರ್ಹವಾದ ಮತ್ತು ನಿರಾಯಾಸವಾದ ಪರಿಹಾರಮಾರ್ಗ ದೊರೆತು ಬಿಡುತ್ತಿತ್ತು ಅಲ್ಲವೇ?

ಬಡತನದ ರೇಖೆಯ ಕೆಳಗಿನವರಿಗಾಗಿ ಮುಕ್ತ ಮತ್ತು ಉತ್ತಮ ದರ್ಜೆಯ ವಿದ್ಯಾಭ್ಯಾಸವನ್ನು ದೊರಕಿಸುವ ವ್ಯವಸ್ಥೆ ಮಾಡಿ, ಆ ನಂತರ ವಿದ್ಯಾವಂತರಿಗೆ ನೌಕರಿಯಲ್ಲಿ ಮೀಸಲಾತಿ ಜಾರಿ ಮಾಡಿದ್ದರೆ, ನಮ್ಮ ದೇಶದ ಸಮಸ್ಯೆ ಇಷ್ಟು ದೀರ್ಘಕಾಲ ಜೀವಂತವಾಗಿ ಉಳಿದು ಬಿಡುತ್ತಿರಲಿಲ್ಲವೋ ಏನೋ. ಅಲ್ಲದೆ, ವರ್ಷದಿಂದ ವರ್ಷಕ್ಕೆ, ಈ ಬಡತನದ ರೇಖೆಯ ಕೆಳಗಿನವರ ಸಂಖ್ಯೆ ಕಡಿಮೆಯಾಗುತ್ತಲೂ ಬಂದಿದ್ದಿರಬಹುದು.

ಇದೊಂದು ಆಗಿ ಬಿಟ್ಟಿದ್ದಿದ್ದರೆ ಇನ್ನು ಈ ಜಾತಿಯ ಪ್ರಶ್ನೆಯೇ ಉಳಿದಿರುತ್ತಿರಲಿಲ್ಲ.

ಯಾವುದೇ ಅರ್ಜಿಯಲ್ಲಾದರೂ ಅಥವಾ ಸಮೀಕ್ಷೆಯಲ್ಲಾದರೂ ಗಂಡು, ಹೆಣ್ಣು ಮತ್ತು ನಪುಂಸಕ ಎನ್ನುವ ಮೂರು ಜಾತಿಯನ್ನುಳಿದು, ಇನ್ನಾವ ಜಾತಿಯ ಉಲ್ಲೇಖವೂ ಇರದಂತೆ ನೋಡಿಕೊಳ್ಳಬೇಕು. ವಿದ್ಯೆ ನೀಡುವ ವಿದ್ಯಾ ಸಂಸ್ಥೆಗಳಿಗೆ, ಪ್ರಜೆಗಳನ್ನು ಏಕತೆರನಾಗಿ ನೋಡಬೇಕಾಗಿರುವ ಸರಕಾರಕ್ಕೆ ಹಾಗೂ ವಿದ್ಯಾರ್ಹತೆಗೆ ಅನುಗುಣವಾದ ನೌಕರಿ ನೀಡುವ ಸರಕಾರಕ್ಕೆ ಹಾಗೂ ಸರಕಾರೀ ಮತ್ತು ಖಾಸಗಿ ಕಂಪನಿಗಳಿಗೆ ಅರ್ಜಿದಾರ ಯಾವ ಜಾತಿಯವನಾದರೇನು ಸ್ವಾಮೀ?

ಅರ್ಜಿದಾರನ ಕುಟುಂಬದ ಆರ್ಥಿಕ ಸ್ಥಿತಿ ಅಥವಾ ದುಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಆ ಸ್ಥಿತಿಗೆ ಸೂಕ್ತವಾದ ರಿಯಾಯಿತಿ ಅಥವಾ ಮೀಸಲಾತಿ ನೀಡಿದರೆ ಮುಗಿಯಿತು.

ನಮ್ಮ ದೇಶದ ಈ ಜಾತಿ ವ್ಯವಸ್ಥೆಯಿಂದ ಸೃಷ್ಟಿಕರ್ತನಾದ ದೇವರೂ ರೋಸಿ ಹೋದಂತಿದೆ.

ನಿಸ್ವಾರ್ಥ ನಾಯಕಾನಾಗಿ ಈ ದೇಶದ ಜನತೆಯ ಸೇವೆ ಮಾಡುವಂತಹ, ಈ ದೇಶದ ಏಳಿಗೆಗಾಗಿ ಶ್ರಮಪಡುವಂತಹ ಯೋಗ್ಯತೆ ಹೊಂದಿರುವ ಒಂದೇ ಒಂದು ಮಗುವನ್ನೂ, ೧೯೪೦ರ ದಶಕದಿಂದೀಚೆಗೆ, ಈ ನಮ್ಮ ನಾಡಿನಲ್ಲಿ ಸೃಷ್ಟಿಕರ್ತ ಸೃಷ್ಟಿ ಮಾಡಿರುವುದು ಕಂಡು ಬರುತ್ತಿಲ್ಲ.

ನಮ್ಮದು ಜಾತ್ಯಾತೀತ ರಾಷ್ಟ್ರ ಎನ್ನುವುದು ಅಕ್ಷರಶಃ ನಿಜವಾಗ ಬೇಕಿದ್ದರೆ ಈ ಜಾತಿ ವ್ಯವಸ್ಥೆಯನ್ನು ಬೇರಿನಿಂದಲೇ ಕಿತ್ತೊಗೆಯಬೇಕು. ಅದಕ್ಕಾಗಿ, ನಾವು, ನೀವು ಎಲ್ಲರೂ ಧ್ವನಿಯೆತ್ತಬೇಕು. ನಮ್ಮನ್ನು ಉದ್ಧಾರ ಮಾಡಲು ನಾಯಕರು ಬರಬಹುದೆಂಬ ನಿರೀಕ್ಷೆ ಮಾಡುತ್ತಾ ಕುಳಿತು ಕೊಳ್ಳಲಾಗದು. ಅಂತಹ ನಾಯಕರು ಈಗ ಇಲ್ಲವೇ ಇಲ್ಲ. ರಾಜಕೀಯ ನಾಯಕರುಗಳೆಲ್ಲಾ, ಅವರದೇ ಆದ ಸಮಸ್ಯೆಗಳಲ್ಲಿ ಹುದುಗಿ ಹೋಗಿ ಬಿಟ್ಟಿದ್ದಾರೆ. ಅವರೆಲ್ಲಾ ತಮ್ಮ ಕುಟುಂಬದ ಸದಸ್ಯರ ಏಳಿಗೆಗಾಗಿಯೇ ದುಡಿಯಲು ಪಣತೊಟ್ಟಂತಿದ್ದಾರೆ.

ಈ ವಿಷಯದ ಬಗ್ಗೆ ಸಾರ್ವತ್ರಿಕ ಚರ್ಚೆ ನಡೆಯಲಿ. ತನ್ಮೂಲಕ ಇದಕ್ಕೊಂದು ಶಾಶ್ವತ ಪರಿಹಾರ ದೊರೆಯಲಿ ಎನ್ನುವುದು ನನ್ನ ಆಶಯ.

ಬಡವರು, ಶ್ರೀಮಂತರು, ಮಣ್ಣಿನಮಕ್ಕಳು, ರಾಜಕೀಯ ನೇತಾರರು, ವಿಚಾರವಾದಿಗಳು, ನಿಜವಾದ ಬುದ್ಧಿಜೀವಿಗಳು ಹಾಗೂ ಬುದ್ಧಿಜೀವಿಗಳು ಎನಿಸಿಕೊಂಡವರು, ಎಲ್ಲಾರೂ ಮುಕ್ತವಾಗಿ ತಮ್ಮ ವಿಚಾರಧಾರೆಯನ್ನು ಹರಿಯ ಬಿಡಲಿ. ಈ ಬಾರಿಯ ಸಾರ್ವತ್ರಿಕ ಚುನಾವಣಾ ನಂತರ ಸ್ಥಾಪನೆಯಾಗುವ ಹೊಸ ಸರಕಾರ ಇಡೀ ದೇಶಕ್ಕೆ ಅನ್ವಯವಾಗುವಂತಹ ಏಕಮೇವ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರುವಂತಾಗಲಿ.

-ಆಸು ಹೆಗ್ಡೆ.

Rating
No votes yet

Comments