ಥಂಡಿ ಡಿಸೆಂಬರ್ ನ ಬೆಚ್ಚನೆಯ ನೆನಪು....

ಥಂಡಿ ಡಿಸೆಂಬರ್ ನ ಬೆಚ್ಚನೆಯ ನೆನಪು....

ಪ್ರಿಯ ಡಿಸೆಂಬರ್,

ಅದೇನು ಮಾಯೆಯೋ ನಿನ್ನಲ್ಲಿ, ಅದೋ ನಾನು ನಿನ್ನ ಮಾಯೆಯೊಳೋ ಅಂತಾ ಗೊತ್ತಿಲ್ಲ. ಆದರೂ ನೀನೆಂದರೆ ನನಗೆ ತುಂಬಾ ಇಷ್ಟ. ಯಾಕೆಂತ ಹೇಳಲಾ? ಈ ಚುಮು ಚುಮು ಚಳಿ ಎಷ್ಟು ರೊಮ್ಯಾಂಟಿಕ್ ಅಂದ್ರೆ ಕುಳಿತರೆ ನಿಂತರೆ ನಿನ್ನದೆಯ ಅನುರಾಗ..., ನನ್ನ ಭಾವನೆಗಳನ್ನು ಪುಳಕಗೊಳಿಸುವ ನಿನ್ನ ಸಾನಿಧ್ಯ ..ಇವೆಲ್ಲಾ ನನ್ನೊಡಲ ಕವಿ ಭಾವನೆಗೆ ಪ್ರೇರಣೆ ನೀಡಲು ಸಾಲದೇನು?

ಮುಂಜಾನೆಯ ವೇಳೆ ಮಂಜಿನ ಹೊದಿಕೆ ಹೊದ್ದು ನನ್ನನ್ನು ನಿನ್ನ ತೆಕ್ಕೆಗೆ ಬರ ಮಾಡಿಕೊಳ್ಳುವ ಪರಿಯೇನು? ನಾನು ನಿನ್ನ ತೋಳ ಬಂಧನದಲ್ಲಿ ನಾನು ಬೆಚ್ಚನೆ ಮಲಗಿಕೊಂಡು ಕನಸು ಕಾಣುವಾಗ ಈ ಮಧುರ ಕ್ಷಣಗಳು ಕಳೆದು ಹೋಗದಿರಲೆಂದು ಆಶಿಸುತ್ತೇನೆ. ನಿನ್ನ ಮೌನ ರಾಗವು ನನ್ನೊಳಗಿನ ಅನುರಾಗವನ್ನು ಕೆಣಕಿಸುತ್ತಿರುವಾಗ, ಇನಿಯಾ ನಿನ್ನ ಮೋಹದ ಮೋಡಿಯನು ಬಣ್ಣಿಸಲು ಹೇಗೆ ಸಾಧ್ಯ.?

ತಣ್ಣನೆಯ ಗಾಳಿಗೆ ಮೈಯೊಡ್ಡಿ ನಿಂತಾಗ ನನಗರಿವಲ್ಲದಂತೆಯೇ ಮುಂಗುರುಳ ಸರಿಸಿ ಕೆನ್ನೆಗೆ ಮುತ್ತಿಟ್ಟು ಹೋದ ಪ್ರಿಯಕರ ನೀನಲ್ಲವೇ? ಅಬ್ಬಾ... ಕದ್ದು ಮುಚ್ಚಿ ಪ್ರೀತಿಸುತ್ತಿರುವ ಚಾಣಾಕ್ಷತನ ನಿನ್ನಿಂದಲೇ ಕಲಿಯಬೇಕು.! ನಿನ್ನ ಆ ಹಿತವಾದ ಆ ಸ್ಪರ್ಷ ಅದೆಷ್ಟು ಹರುಷ ನೀಡುತ್ತದೆ ಅಂತಾ ಗೊತ್ತಾ ನಿನಗೇ? ಇರುಳಿಡೀ ಈ ಚುಮು ಚುಮು ಚಳಿಗೆ ಚಾದರ ಹೊದ್ದು ಮಲಗಿ ನಿದ್ದೆ ಹೋಗುವಾಗ ಮುಂಜಾನೆಯ ನಿನ್ನ ಸಿಹಿ ಮುತ್ತಿನ ನಿರೀಕ್ಷೆಗೆ ಮನ ಮಿಡಿಯುತ್ತದೆ.

ಅಂತೂ ಬೆಳಗ್ಗಿನ ಜಾವಕ್ಕೆ ಪ್ರಿಯಾ ನೀ ಬಂದು ನನ್ನ ಮೇಲೆ ಪ್ರೇಮದ ಮಂಜುಹನಿ ಚಿಮುಕಿಸುವಾಗ ಅದೇನು ಪುಳಕ! ನಿನ್ನೀ ಪ್ರಣಯ ಲೀಲೆಗೆ ನಾನು ನಾಚಿಕೊಂಡಾಗಂತೂ ನೀನು ನಿಜವಾಗಿಯೂ ನಿಬ್ಬೆರಾಗಾಗಿದ್ದೆ ಅಂತಾ ನನಗೆ ಗೊತ್ತು.

ನಿಜ ಹೇಳಲಾ? ಇನಿಯಾ ನಾನಂತೂ ನಿನ್ನ ಈ ಪ್ರೇಮದಲ್ಲಿ ನನ್ನನ್ನೇ ಮರೆತು ಹೋಗಿದ್ದೇನೆ. ಉದಯ ವೇಳೆಯಲಿ ರವಿ ಮೂಡಿ ಬಂದು ನನ್ನ ಮೇಲೆ ನೀನು ಚಿಮುಕಿಸಿದ ಮಂಜಿನ ಮುತ್ತು ಹನಿಗಳ ಮೇಲೆ ರಂಗು ಚೆಲ್ಲಿದಾಗ, ದುಂಬಿಗಳು ಝೇಂಕರಿಸಿ ನಮ್ಮ ಪ್ರಣಯವನ್ನು ಮತ್ತಷ್ಟು ಸುಮಧುರವಾಗಿಸುವ ಆ ವೇಳೆ... ನಿನ್ನ ಕೈ ಹಿಡಿದು ಪುಟ್ಟ ಹೆಜ್ಜೆಗಳನ್ನಿಟ್ಟರೆ ಸಾಕು ಅಂತಾ ಅನಿಸುತ್ತದೆ. ನಮ್ಮ ಪ್ರಣಯ ಸಲ್ಲಾಪದ ಈ ರಸ ನಿಮಿಷಗಳಲ್ಲಿ ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಕುಳಿತಿರುವಾಗ ನಿನ್ನ ಮೌನ ನನ್ನ ಮಾತಾಗುತ್ತದೆ. ನಿನ್ನ ಸ್ಪರ್ಷ ನನ್ನ ಕವನವಾಗುತ್ತದೆ.

ಓ ನನ್ನ ಚಿನ್ನಾ, ಮುಂದೆ ನಮ್ಮೀ ಮಿಲನದ ದಿನಗಳು ಮರುಕಳಿಸಿ ಪದೇ ಪದೇ ಅನುರಾಗದ ನೆನಪುಗಳನ್ನು ಹೊತ್ತು ತರುವಾಗ, ಗೆಳೆಯಾ ನಿನ್ನ ಹಿತವಾದ ಸ್ಪರ್ಷವನ್ನು, ನಿನ್ನ ಮಿತವಾದ ಒಲವನ್ನು ನಾನು ಪ್ರೇಮ ಕಾವ್ಯವಾಗಿಸಿ ಎದೆಗೂಡಲ್ಲಿ ಬಚ್ಚಿಟ್ಟು, ಪ್ರತಿ ಹೃದಯ ಬಡಿತವನ್ನು ತಾಳವಾಗಿಸುವೆ.

ಇತೀ,
ನಿನ್ನ ನಿರೀಕ್ಷೆಯಲ್ಲಿ...
ನಿನ್ನವಳು.

Rating
No votes yet

Comments