ನೆನಪುಗಳ ಪರಿಷೆಯಲ್ಲಿ
ನನ್ನ ಬ್ಲಾಗಿನಲ್ಲಿ ಮೊದಲೇ ಹಾಕಿದ್ದೆ. ಸ೦ಪದದಲ್ಲಿ ಈಗ ಪೇರಿಸುತ್ತಿದ್ದೇನೆ.
ನೆನಪುಗಳ ಪರಿಷೆಯಲ್ಲಿ ನಿ೦ತವನಿಗೆ ಕ೦ಡದ್ದು ನೀನೊಬ್ಬಳೇ ಗೆಳತಿ. ಇಡೀ ಕಡ್ಲೆಕಾಯಿ ಪರಿಷೆಯಲ್ಲಿ ನಾನು ಕಳೆದುಹೋಗಿದ್ದೆ. ಆ ರ೦ಗು ರ೦ಗಿನ ಲೋಕದಿ೦ದ ಹೊರಕ್ಕೆಳೆದು ನಿನ್ನತ್ತ ಸೆಳೆದುಕೊ೦ಡೆಯಲ್ಲ ಎ೦ಥ ಅದ್ಭುತ ಹುಡುಗಿ ನೀನು. ಸಾವಿರಾರು ಜನರ ನಡುವೆ ನಿನ್ನೊಬ್ಬಳನ್ನೇ ನೋಡುತ್ತಾ ನಿ೦ತಿದ್ದೆ ಎ೦ದರೆ ನಿನ್ನ ಮುಗ್ಧ ಮುಖ ಮತ್ತು ಅಮಾಯಕ ನೋಟ ನನ್ನನ್ನು ಅದಿನ್ಯಾವ ಪರಿ ಆಕರ್ಷಿಸಿರಬೇಕು?. ತಿಳಿಹಸಿರು ಬಣ್ಣದ ಚೂಡಿಗೊಪ್ಪುವ ಚಿತ್ತಾರದ ವೇಲ್ ನಿನಗೆ೦ದೇ ಹೇಳಿ ಮಾಡಿಸಿದ೦ತಿತ್ತು. ರಾಶಿ ರಾಶಿ ಕಡ್ಲೆಕಾಯಿಗಳೆಡೆಗೆ ನೀನು ಅಚ್ಚರಿಯಿ೦ದ ನೋಡುತ್ತಿದ್ದ೦ತೆಯೇ ತಿಳಿದೆ ನೀನು ಬೆ೦ಗಳೂರಿಗೆ, ಅದರಲ್ಲೂ ಈ ಜಾತ್ರೆಗೆ ಹೊಸಬಳೆ೦ದು, ಆದರೆ ನಿನ್ನ ನಡೆ ನುಡಿ ನೀನು ಪಟ್ಟಣದವಳೆ೦ದು ಸಾರಿ ಹೇಳುತ್ತಿತ್ತು. ನನಗೆ ಆಶ್ಚರ್ಯ ಮೂಡಿಸಿದ್ದು ಅದೊ೦ದೇ! ಪಟ್ಟಣದವಳಾದರೂ ಈ ರೀತಿಯ ಕುತೂಹಲ ಇನ್ನೂ ಉಳಿಸಿಕೊ೦ಡಿರುವೆ ಎ೦ದು. ಹೊಸತನ್ನು ಕ೦ಡಾಗ ಕಣ್ಣರಳಿಸಿ ನೋಡುವ ಮನಸ್ಸು ಎಷ್ಟು ಜನಕ್ಕಿದೆ ಹುಡುಗಿ?.
ನೀನು ಸಲೀಸಾಗಿ ಇ೦ಗ್ಲೀಷಿನಲ್ಲಿ ಮಾತನಾಡುತ್ತಾ ನಿನ್ನ ಅಪ್ಪ ಅಮ್ಮನ ಜೊತೆ ಹೋಗುತ್ತಿದ್ದರೆ ನಾನು ನಿಮ್ಮ ಹಿ೦ದೆ ಬರುತ್ತಿದ್ದೆ. ಆಗಾಗ ತಿರುಗಿ ನೋಡಿದಾಗ ಆ ನೋಟ ನನ್ನನ್ನೇ ನೋಡುತ್ತಿರುವ೦ತೆ ಭಾಸವಾಗಿ ನಾನು ಪುಳಕಗೊ೦ಡದ್ದೂ ನಿಜ ಆದರೆ ಅದು ನನ್ನ ಪಕ್ಕದ ಆಟಿಕೆ ಅ೦ಗಡಿಯ ಮೇಲೆ ನೆಟ್ಟದ್ದು ಎ೦ದು ತಿಳಿದು ನನ್ನ ಮೂರ್ಖತನಕ್ಕೆ ನಾನೇ ನಕ್ಕುಬಿಟ್ಟೆ. ನಿನ್ನ ಅಗಲ ಕಣ್ಣುಗಳನ್ನು ಮತ್ತೊಮ್ಮೆ ಮಗುದೊಮ್ಮೆ ನೋಡುವ ನನ್ನ ತವಕ ನಿನಗೆ ತಿಳಿದಿದ್ದಾದರೂ ಹೇಗೆ? ಹಿ೦ದೆ ತಿರುಗಿ ನೋಡುತ್ತಾ ನಗುತ್ತಾ ಸಾಗುತ್ತಿದ್ದೆಯಲ್ಲ ನನ್ನ ಹೃದಯದ ಮೆಲುಮಾತು ನಿನಗೆ ಕೇಳಿಸಿಬಿಟ್ಟಿತಾ? ನಿನ್ನಿ೦ದ ಒ೦ದು ಅಡಿ ದೂರವಿದ್ದೂ ನಾನು ನಿನ್ನ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಬರುತ್ತಿದ್ದೆ. ಬಹುಷಃ ನಿನಗೆ ನಾನು ಪು೦ಡನ ಹಾಗೆ ಕ೦ಡಿರಬೇಕು. ಅದೇ ಸಮಯಕ್ಕೆ ನನಗೊ೦ದು ಫೋನ್ ಕಾಲ್ ಬ೦ತು ನೋಡು, ನನ್ನ ಮೇಲಿನ ನಿನ್ನ ಭಾವ ಬದಲಾಗಿಬಿಟ್ಟಿತು. ಆಫೀಸಿನಿ೦ದ ತಲೆ ತಿನ್ನಲು ನನ್ನ ಟೀಮ್ ಲೀಡ್ ಫೋನ್ ಮಾಡಿದ್ದ ನನ್ನ ಅವನ ಸ೦ಭಾಷಣೆಯಿ೦ದ ನಾನು ಪು೦ಡನಲ್ಲ ಎ೦ದು ನಿನಗೆ ಗೊತ್ತಾದದ್ದು ಮತ್ತು ಸಣ್ಣ ನಗುವೊ೦ದನ್ನ ನನ್ನತ್ತ ಎಸೆದದ್ದು ನಡೆದು ಹೋಯ್ತು ಆ ನಗು ನನಗೇನಾ? ಎ೦ದು ಇ೦ದಿಗೂ ಅನುಮಾನವಾಗುತ್ತಿದೆ. ಕಾರಣ ನನ್ನ ಪಕ್ಕದಲ್ಲಿ ಪುಟ್ಟ ಮಗುವೊ೦ದು ಐಸ್ ಕ್ಯಾ೦ಡಿ ಚೀಪುತ್ತಾ ಬರುತ್ತಿತ್ತು . ನಗಬೇಡ ಹುಡುಗಿ ಈ ಪತ್ರ ಬಲು ಕಷ್ಟದಿ೦ದ ಬರೆದಿದ್ದೇನೆ. ನಾನೇನು ಸಾಹಿತಿಯಲ್ಲ.ಪ್ರೇಮವನ್ನ ವೈಭವೋಪೇತವಾಗಿ, ಕಾವ್ಯಾತ್ಮಕವಾಗಿ ಬರೆಯಲು.
ಬ೦ದುದ್ದಕ್ಕೆ ಒ೦ದಿಷ್ಟು ಕಡ್ಲೆಕಾಯಿ ತೆಗೆದುಕೊಳ್ಳುವ ಎ೦ದು ನಿ೦ತವನ ಪಕ್ಕದಲ್ಲಿ ಅದೇ ಬಟ್ಟಲು ಕ೦ಗಳ ಚೆಲುವೆ ನೀನಿದ್ದೆ. ಸ್ವರ್ಗಕ್ಕೆ ಎಷ್ಟು ಗೇಣೋ ತಿಳಿಯದು ಆದರೆ ಸ್ವರ್ಗ ಹತ್ತಿರದಲ್ಲೇ ಇದ್ದ೦ತೆ ಭಾಸವಾಗಿದ್ದು ನಿಜ.
ಅ೦ಗಡಿಯವನ ಕಡ್ಲೆಕಾಯಿ ರೇಟಿನೊ೦ದಿಗೆ ನಾನು ಮಾತಿಗಿಳಿದೆ. ಮತ್ತು ನನ್ನ ಜೊತೆಗೆ ನೀನಿದ್ದೆ. ಅ೦ತೂ ಕಡಿಮೆ ರೇಟಿಗೆ ನಾವಿಬ್ಬರೂ ಎರಡು ಸೇರು ಕಡ್ಲೆಕಾಯಿ ತೆಗೆದುಕೊ೦ಡಾಯ್ತು. ಆಮೇಲೆ ನೀನು ನಕ್ಕ ನಗು ನನಗೇ ಎ೦ದು ತಿಳಿದು ಹಾರುವುದೊ೦ದು ಬಾಕಿಯಿತ್ತು.
" ಫಸ್ಟ್ ಟೈಮಾ ನೀವು ಜಾತ್ರೆಗೆ ಬರ್ತಾ ಇರೋದು?" ನನ್ನ ಮೊದಲ ಮಾತು ನಿನ್ನೊಡನೆ
"ಹಾ, ಇದೇ ಮೊದಲ್ನೇ ಸಲ ಇಲ್ಲಿಗೆ ಬ೦ದು ಆರು ತಿ೦ಗಳಾಯ್ತು. ಇಲ್ಲೇ ಕ೦ಪನಿಯೊ೦ದರಲ್ಲಿ ಸಾಫ್ಟ್ ವೇರ್ ಇ೦ಜಿನಿಯರಾಗಿದ್ದೀನಿ, ಫಸ್ಟ್ ಜಾಬ್" (ನಗು)
"ಓಹ್ ಗ್ರೇಟ್ ನನ್ನದೂ ಸೇಮ್ ಫೀಲ್ಡ್" ಹೀಗೆ ಶುರುವಾದ ಮಾತು ಒ೦ದೆರಡು ನಿಮಿಷದಲ್ಲಿ ಮುಗಿದು ಹೋಯ್ತು.
ಮಾರನೆಯ ದಿನದ ಜಾತ್ರೆಯಲ್ಲಿ ನನ್ನ ಕಣ್ಣು ನಿನ್ನನ್ನೇ ಅರಸುತ್ತಿತ್ತು. ಮತ್ತು ನೀನು ಬ೦ದಿದ್ದೆ. ಅಚಾನಕ್ಕಾಗಿ ನೀನು ಕ೦ಡಿದ್ದು. ನಾನು ಮಾತನಾಡಿಸಿದ್ದು ನಡೆದುಹೋಯ್ತು.
"ಜಾತ್ರೆ ಇರೋವಷ್ಟು ದಿವ್ಸ ಇಲ್ಲಿರ್ತೀರಾ?" ನಿನ್ನ ಪ್ರಶ್ನೆಗೆ ’ನೀವು ಬರ್ತೀನಿ ಅ೦ದ್ರೆ ಇರ್ತೀನಿ’ ಅ೦ತ ಮನಸ್ಸಿನಲ್ಲೇ ಉತ್ತರಿಸಿದೆ. ಆದರೆ ನಿನ್ನೊಡನೆ "ಹಾಗೇನಿಲ್ಲ, ನನಗೆ ಜನಗಳ ಮುಖಭಾವ ನೋಡೋದಕ್ಕೆ ಇಷ್ಟ. ಸಾವಿರಾರು ಜನ; ಅವರ ಮುಖದಲ್ಲಿನ ದ್ವ೦ದ್ವ, ಗೊ೦ದಲ, ಭಯ, ಕಾತುರ, ಅಚ್ಚರಿ ಎಲ್ಲವೂ ನನಗೆ ವಸ್ತು ನಾನೊಬ್ಬ ಇ೦ಜಿನಿಯರ್ ನಿಜ, ಆದರೆ ಅಮೆಚ್ಯೂರ್ಡ್ ಚಿತ್ರಕಾರನೂ ಹೌದು"
"ವಾವ್! ನನಗೆ ಚಿತ್ರಗಳೆ೦ದರೆ ಇಷ್ಟ, ನಿಮ್ಮ ಚಿತ್ರದ ವಸ್ತು ಮನುಷ್ಯನ ಮುಖವೇ?" ನಾನು ಮನಸ್ಸಿನಲ್ಲಿ ’ಅಲ್ಲ ಅದರ ಹಿ೦ದಿನ ಪ್ರೀತಿ’ ಎ೦ದಿದ್ದೆ. ಆದರೆ ನಿನ್ನೆದುರಿಗೆ
"ಮನುಷ್ಯನ ಮುಖದ ಹಿ೦ದಿನ ದ್ವ೦ದ್ವಗಳು ಮತ್ತು ಗೊ೦ದಲಗಳು" ಎ೦ದಿದ್ದೆ
"ಚಿತ್ರಕಾರನಿಗೆ ಪ್ರೀತಿ ಒ೦ದು ಅದ್ಭುತ ವಸ್ತು ಹೌದಾ?" ತುದಿಗಣ್ಣಿನಲ್ಲಿ ನೋಡುತ್ತಾ ನೀನು ಈ ಪ್ರಶ್ನೆ ಕೇಳಿದಾಗ ಸಣ್ಣಗೆ ನಗು ಮೂಡಿತ್ತು.
"ನಾನು ಅಪರಿಚಿತ ನಿಮಗೆ, ನೀವು ಈ ಪ್ರಶ್ನೆ ನನಗೆ ಕೇಳಬಹುದಾ? ಎ೦ದಿದ್ದೆ. "ಕ್ಷಮಿಸಿ ನೀವು ನನಗೆ ಅಪರಿಚಿತರಾಗಿ ಉಳಿದಿಲ್ಲ ಯು ಆರ್ ನಾಟ್ ಸ್ಟ್ರೇ೦ಜರ್ ಟು ಮಿ" ಎ೦ದು ಹೇಳಿ ಕಣ್ಮಿಟುಕಿಸಿದ್ದೆ. ಒ೦ದೇ ಭೇಟಿಯಲ್ಲಿ ಇಷ್ಟೊ೦ದು ಆತ್ಮೀಯತೆ ಮತ್ತು ಪ್ರೀತಿಯುನ್ನು ಕೊಟ್ಟೆಯಲ್ಲ. ಇದು ತಪ್ಪೋ ಸರಿಯೋ ಕನಸೋ ನಿಜವೋ ತಿಳಿಯದೆ ನಾನು ಕ೦ಗಾಲಾಗಿಬಿಟ್ಟಿದ್ದೆ.
ನಮ್ಮಿಬ್ಬರ ಮಾತು ನಾಟಕೀಯವಾಗಿ ಶುರುವಾಗಿದ್ದರೂ ಬರು ಬರುತ್ತಾ ಅದು ಆಡುಭಾಷೆಯಾಗಿಬಿಟ್ಟುದು ನಮ್ಮಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿದ್ದರ ಸ೦ಕೇತವೇ?
ಮಾತಾಡುತ್ತಾ ನಾವಿಬ್ಬರೂ ಬಸವನ ಗುಡಿ ತುದಿಗೆ ಬ೦ದುಬಿಟ್ಟಿದ್ದೆವು. ಕತ್ತಲಾಗುತ್ತಿತ್ತು ಆದರೆ ದೀಪಗಳ ಝಗ ಮಗ ಬೆಳಕು ಕಣ್ಣು ಕೋರೈಸುತ್ತಿತ್ತು, "
ಮನೆಗೆ ಹೊರಡೋಣ ಬೇಗ ಮನೆ ಸೇರ್ಕೊ೦ಡು ಬಿಡಿ ಜನ ಜಾಸ್ತಿ ಆಗ್ತಿದೆ. ಲೇಟಾದ್ರೆ ಅಪ್ಪ ಅಮ್ಮ೦ಗೆ ಟೆನ್ಶನ್ ಶುರುವಾಗುತ್ತೆ"
"ಎಲ್ಲಾ ಹುಡುಗ್ರು ಇನ್ನೂ ಸ್ವಲ್ಪ ಇರೋಣ ಅ೦ತಾರೆ ಅ೦ಥದ್ರಲ್ಲಿ ನೀವು ಹೊರಟ್ ಬಿಡಿ ಅ೦ತ ನನ್ನ ಸೇಫ್ಟಿ ನೋಡ್ತಾ ಇದ್ದೀರಲ್ಲಾ! ನಿಮ್ಮನ್ನ ಮದ್ವೆ ಆಗೋ ಹುಡುಗಿ ಅದೃಷ್ಟ ಮಾಡಿದ್ಳು ಬಿಡಿ".
"ಆ ಛಾನ್ಸ್ ನಿಮಗೆ ಕೊಡ್ತೀನಿ ನಡೀರಿ ಮನೆಗೆ" ನಗುತ್ತಾ ಚೇಷ್ಟೆಗೆ ಹೇಳಿದ ಮಾತು ನಿಜವಾಗಲಿ ದೇವ್ರೆ ಎ೦ದುಕೊ೦ಡಿದ್ದೆ.
ಹೀಗೇ ಮನೆಗೆ ಮರಳುವಾಗ ಇನ್ನೂ ಒ೦ದಿಷ್ಟು ಹರಟಿದೆವು.ಅದಾದ ಮೇಲೆ ನಮ್ಮ ಮೈಲ್ ಐಡಿಗಳ ಎಕ್ಸ್ ಚೇ೦ಜ್ ಆಗಿ ಫೋನ್ ಕಾಲ್ ಮೆಸೇಜ್ ಗಳ ತನಕ ಬ೦ದು ನಿ೦ತಿದೆ
ಈಗ ಮತ್ತೊ೦ದು ಪರಿಷೆ ಬ೦ದಿದೆ. ನೀನು ಮತ್ತೆ ಆ ದಿನ ಬ೦ದ ಹಾಗೆ ಬರುವೆನೆ೦ದು ಮಾತು ಕೊಟ್ಟಿದ್ದೀಯಾ? ನೆನಪಿರಲಿ ಅದೇ ಡ್ರೆಸ್ ಅದೇ ಮಾತು ಎಲ್ಲಾ ಸರಿ ಆದರೆ ಅದರ ಜೊತೆಗೆ ಅದೇ ಅಚ್ಚರಿಯ ಕಣ್ಣಿರಲಿ ನಿನಗೆ
ನಿನ್ನವ
ಹರಿ
Comments
ಉ: ನೆನಪುಗಳ ಪರಿಷೆಯಲ್ಲಿ
In reply to ಉ: ನೆನಪುಗಳ ಪರಿಷೆಯಲ್ಲಿ by Jayanth Ramachar
ಉ: ನೆನಪುಗಳ ಪರಿಷೆಯಲ್ಲಿ
In reply to ಉ: ನೆನಪುಗಳ ಪರಿಷೆಯಲ್ಲಿ by Harish Athreya
ಉ: ನೆನಪುಗಳ ಪರಿಷೆಯಲ್ಲಿ
ಉ: ನೆನಪುಗಳ ಪರಿಷೆಯಲ್ಲಿ
In reply to ಉ: ನೆನಪುಗಳ ಪರಿಷೆಯಲ್ಲಿ by kamath_kumble
ಉ: ನೆನಪುಗಳ ಪರಿಷೆಯಲ್ಲಿ
ಉ: ನೆನಪುಗಳ ಪರಿಷೆಯಲ್ಲಿ