ಪಾಪ ಪ್ರಜ್ಞೆ ( ಕಥೆ ) ಭಾಗ 1
ಸುಮಾರು ನಾಲ್ವತ್ತೈದು ವರ್ಷಗಳ ಹಿಂದಿನ ಮಾತು, ನಾನು ಮೆಟ್ರಿಕ್ಯುಲೇಶನ್ ಪಾಸ್ ಮಾಡಿ ಉನ್ನತ ವಿದ್ಯಾಭ್ಯಾಸ ಸಾಧ್ಯವಾಗದೆ ಮನೆಯಲಿದ್ದೆ. ಕೆಳ ಮಧ್ಯಮ ವರ್ಗಕ್ಕೆ ಸೇರಿದ ನಾನು ದಿನ ಪತ್ರಿಕೆಗಳಲ್ಲಿ ಬರುವ ವಾಂಟೆಡ್ ಕಾಲಂ ಗಳನ್ನು ಓದುತ್ತ, ನೌಕರಿಗಾಗಿ ಅರ್ಜಿಗಳನ್ನು ಗುಜರಾಯಿಸುತ್ತ, ದೊರೆಯದ ನೌಕರಿಯೆಂಬ ಮರೀಚಿಕೆಯ ಬೆಂಬತ್ತಿ ನಿರಾಶೆಯ ವಾತಾವರಣದಲ್ಲೂ ಆಶಾವಾದಿಯಾಗಿ ಕಾಲಕಳೆಯುತ್ತಿದ್ದೆ. ಆ ವರ್ಷ ಯುಗಾದಿ ಹಬ್ಬದ ದಿನ ನಮ್ಮ ಅಜ್ಜಿಗೆ ಅಸೌಖ್ಯವೆಂಬ ಸುದ್ದಿಯನ್ನು ಹೊತ್ತ ಪತ್ರ ಬಂತು. ಆ ಸುದ್ದಿ ನನ್ನನ್ನು ಖಿನ್ನನನ್ನಾಗಿಸಿತು. ಯಾಕೆಂದರೆ ಅವಳು ನನ್ನನ್ನು ನಾಲ್ಕು ವರ್ಷ ವಯಸ್ಸಿನಿಂದ ಹಿಡಿದು ಮುಲ್ಕಿ ಪರೀಕ್ಷೆ ಮುಗಿಸುವ ವರೆಗೂ ಸಾಕಿ ಸಲುಹಿದವಳು. ನಾನು ನನ್ನನ್ನು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವಳು.
ವರ್ತಮಾನದಲ್ಲಿ ಪ್ರಾಮಾಣಿಕತೆ ಎನ್ನುವುದು ಹಾಸ್ಯಾಸ್ಪದ ನಡುವಳಿಕೆಯಾಗಿ ಕಾಣಬಹುದು, ಆದರೆ ನಾಲ್ಕು ದಶಕಗಳ ಹಿಂದೆ ಅದು ಸಮಾಜದಲ್ಲಿ ಕೆಲಮಟ್ಟಿಗೆ ಮಾನ್ಯತೆಯನ್ನು ಪಡೆದಿತ್ತು. ಉತ್ತಮ ವಿದ್ಯಾಭ್ಯಾಸ ಒಳ್ಳೆಯ ನಡತೆ ಮತ್ತು ಓದು ಇವಿಷ್ಟಿದ್ದರೆ ಸಾಕು ಕೆಲಸ ನಮಗಾಗಿ ಕಾದಿರುತ್ತೆ ಎಂದು ಭ್ರಮಿಸಿದ್ದ ದಿನಗಳವು. ಉತ್ತಮ ರೀತಿಯ ತೇರ್ಗಡೆ ಮುಂದೆ ಬರಬೇಕೆನ್ನುವ ಆಶೆ ಎಲ್ಲ ಇದ್ದರೂ ಓದು ಮುಂದುವರಿಸಲಾಗದ ಸ್ಥಿತಿ ನನ್ನದಾಗಿತ್ತು. ಅಲ್ಲಿಯ ವರೆಗೂ ನನ್ನ ಕೌಟುಂಬಿಕ ಸ್ಥಿತಿ ಗತಿಯ ಬಗ್ಗೆ ನನಗೆ ತಿಳಿದಿರಲೇ ಇಲ್ಲ. ಉನ್ನತ ವಿದ್ಯಾಭ್ಯಾಸ ಕುಂಠಿತ ಗೊಂಡು ಮುಂದಿನ ವಿದ್ಯಾರ್ಜನೆ ನನ್ನ ಕೈಗೆಟುಕದ್ದು ಎಂಬ ಪರಿಸ್ಥಿತಿಯ ಅರಿವಾಗಿ ಗತ್ಯಂತರವಿಲ್ಲದೆ ನೌಕರಿಯ ಬೆಂಬತ್ತಿದ್ದೆ. ಅಲ್ಲಿಯೂ ನೂರೆಂಟು ಅಡತಡೆಗಳು. ಅವುಗಳನ್ನು ದಾಟಿ ನೌಕರಿಯೆಂಬ ಕಾಮನಬಿಲ್ಲನ್ನು ಹಿಡಿಯುವುದು ಕನಸಿನ ಮಾತಾಗಿತ್ತು, ಆದರೂ ಕೆಲಸದ ಅನಿವಾರ್ಯತೆಯಿತ್ತು ಅದನ್ನು ಹಿಡಿಯುವ ನಿರರ್ಥಕ ಪ್ರಯತ್ನ ನಡೆದಿತ್ತು.
ಅಜ್ಜಿಯ ಕಾಯಿಲೆ ಉಲ್ಬಣಿಸಿದ ಬಗ್ಗೆ ಭುಜಂಗನಹಳ್ಳಿಯಿಂದ ಮತ್ತೆ ಕಾಗದ ಬಂತು. ಈಗ ಅನಿವಾರ್ಯವಾಗಿ ಅಲ್ಲಿಗೆ ಹೋಗಲೇ ಬೇಕಾದ ಪ್ರಸಂಗ ಬಂತು. ನಿರುದ್ಯೋಗ ಕುಟುಂಬದ ಚಿಂತಾಜನಕ ಪರಿಸ್ಥಿತಿ ಹೀಗಾಗಿ ನನಗೆ ಅಲ್ಲಿಗೆ ಹೋಗಲು ಎಳ್ಳಷ್ಟೂ ಮನಸಿರಲಿಲ್ಲ, ಆದರೂ ಹೋಗಲೇ ಬೇಕಾದ ಅನಿವಾರ್ಹತೆಯಿತ್ತು ಹೋದೆ. ಏಳು ವರ್ಷಗಳ ದೀರ್ಘ ಅವಧಿಯ ನಂತರ ನಾನು ಭುಜಂಗನಹಳ್ಳಿಗೆ ಹೋಗಿದ್ದೆ. ಅಜ್ಜಿ ನನ್ನನ್ನು ನೋಡಿ ಸಂತಸ ಪಟ್ಟಳು, ನನ್ನ ನಿರುದ್ಯೋಗ ಮತ್ತು ನಮ್ಮ ಮನೆಯ ಅಸಹಾಯಕ ಪರಿಸ್ಥಿತಿ ಅವಳನ್ನು ಬಹಳ ಚಿಂತೆಗೀಡು ಮಾಡಿತ್ತು. ಆಕೆಯ ಒತ್ತಾಯಕ್ಕೆ ಮಣಿದು ಇಲ್ಲವೆನ್ನಲಾಗದೆ ಕೆಲವು ದಿನ ಅಲ್ಲಿಯೆ ಉಳಿದೆ.
ನಾನು ಬಾಲ್ಯದಲ್ಲಿ ಕಂಡ ಭುಜಂಗನಹಳ್ಳಿಗೂ, ಈಗ ಅದು ಇದ್ದ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಹಳ್ಳಿ ಬಹಳ ಬದಲಾಗಿತ್ತು. ನಿಜಕ್ಕೂ ಹಳ್ಳಿ ಬದಲಾಗಿತ್ತೆ ಅಥವಾ ಮಾನಸಿಕವಾಗಿ ನಾನು ಬದಲಾಗಿದ್ದೆನೊ ಖಚಿತವಾಗಿ ಹೇಳಲು ಸಾಧ್ಯವಿರಲಿಲ್ಲ. ಸ್ನೇಹಿತರಲ್ಲಿ ಮೊದಲಿನ ಗೆಳೆತನದ ಉತ್ಕಟತೆ ವಿಶ್ವಾಸಗಳು ಮಾಯವಾಗಿದ್ದವು. ಪರಿಚಿತರ ಮಾತುಕತೆಗಳೆಲ್ಲ ಬರಿಬೂಟಾಟಿಕೆ ಮತ್ತು ಯಾಂತ್ರಿಕ ನಡವಳಿಕೆಗಳಾಗಿ ನನಗೆ ಕಂಡು ಬಂದವು. ನನ್ನ ನಿರುದ್ಯೋಗ ಜೀವನ ನನಗೇ ಜಿಗುಪ್ಸೆ ತರಿಸಿತ್ತು. ಹಳ್ಳಿಯ ಸುತ್ತಾಟ ಕಡಿಮೆ ಮಾಡಿ ಜಮೀನು ಮತ್ತು ಕಾಡಿನ ಕಡೆಗೆ ನನ್ನ ಅಭಿಯಾನ ಪ್ರಾರಂಭಿಸಿದೆ. ಈ ಬದಲಾವಣೆ ನಿಜಕ್ಕ್ಕೂ ನನಗೆ ತೃಪ್ತಿನೀಡಿತು. ಪ್ರಕೃತಿ ಮತ್ತು ಪರಿಸರ ಮನುಷ್ಯನನ್ನು ಯಾವತ್ತೂ ನಿರಾಶೆ ಗೊಳಿಸಿಲ್ಲ, ಅವುಗಳಿಗೆ ಒಳ್ಳೆಯದು ಮಾತ್ರ ಗೊತ್ತು ಕೆಟ್ಟದ್ದು ಗೊತ್ತಿಲ್ಲ ಕೇಡು ಬಯಸುವವನು ಮನುಷ್ಯ ಮಾತ್ರ.
***
ಆ ಊರಿಗೆ ಭುಜಂಗನಹಳ್ಳಿ ಎಂದು ಏಕೆ ಹೆಸರು ಬಂತು ಎನ್ನುವುದು ಖಚಿತವಾಗಿ ನನಗೆ ಗೊತ್ತಿಲ್ಲ. ಆ ಹಳ್ಳಿಯ ಹಿರಿಯ ಜನರು ಹೇಳುವುದನ್ನು ನಂಬುವುದಾದರೆ ಈಗ್ಗೆ ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಆ ಹಳ್ಳಿಗೆ ಬರಗಾಲ ಬಂದು ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವಾಗ, ಆ ಹಳ್ಳಿಯ ಪೂರ್ವ ದಿಕ್ಕಿಗೆ ಇರುವ ಮೈಲಾರಲಿಂಗನ ಗುಡಿಯಿಂದ ಸುಮರು ಎರಡು ಫರ್ಲಾಂಗ್ ದೂರದಲ್ಲಿರುವ ತನ್ನ ಹೊಲದಲ್ಲಿ ಭುಜಂಗಯ್ಯ ಸಾರ್ವಜನಿಕರಿಗಾಗಿ ಸುಮಾರು ಹದಿನೈದು ಅಡಿ ಉದ್ದ ಹದಿನೈದು ಅಡಿ ಅಗಲದ ಭಾವಿ ಯೊಂದನ್ನು ಕಟ್ಟಿಸಿದ. ಮೈಲಾರಲಿಂಗನ ಕೃಪಾಕಟಾಕ್ಷವೋ ಅಥವಾ ಭುಜಂಗಯ್ಯನ ಅದೃಷ್ಟವೋ ಭಾವಿಗೆ ನೀರು ಬಿತ್ತು. ಆ ನೀರೋ ಕುಡಿದಷ್ಟೂ ರುಚಿ. ಆ ಭಾವಿ ಆ ಹಳ್ಳಿಯ ಜನರ ಕುಡಿಯುವ ನೀರಿನ ಬವಣೆಯನ್ನು ಹಿಂಗಿಸಿತು. ಭುಜಂಗಯ್ಯ ಆ ಭಾವಿಗೆ ಸಾರ್ವಜನಿಕರಿಗೆ ಮುಕ್ತ ರಹದಾರಿಯನ್ನು ನೀಡಿದ. ಅಂದಿನಿಂದ ಆ ಹಳ್ಳಿಗೆ ಭುಜಂಗಯ್ಯನಹಳ್ಳಿ ಎಂದೂ ಆ ಭಾವಿಗೆ ಭುಜಂಗನಭಾವಿಯೆಂದೂ ಜನರು ಕರೆಯಲು ಪ್ರಾರಂಭಿಸಿ ಆ ಹೆಸರು ಗಳೇ ಶಾಶ್ವತವದವು. ಈಗ ಆ ಹಳ್ಳಿಯಲ್ಲಿ ಭುಜಂಗಯ್ಯನ ವಂಶಸ್ಥರು ಯಾರೂ ಇಲ್ಲ, ಆದರೂ ಆತನ ಹೆಸರು ಮಾತ್ರ ಆ ಹಳ್ಳಿಗೂ ಮತ್ತು ಭಾವಿಗೂ ಶಾಶ್ವತವಾಗಿ ಅಂಟಿಕೊಂಡಿತು.
ಎಲ್ಲ ಹಳ್ಳಿಗಳಂತೆ ಭುಜಂಗಯ್ಯನ ಹಳ್ಳಿಗೂ ಇತ್ತೀಚೆಗೆ ಆಧುನಿಕತೆಯ ರೋಗ ಬಡಿದಿದೆ. ಕಳೆದ ಕೆಲವು ವರ್ಷಗಳಿಂದ ಭುಜಂಗಯ್ಯನ ಹಳ್ಳಿಗೆ ಲೈಟು ಮತ್ತು ನಲ್ಲಿಯ ನೀರು ಬಂದಿದೆ. ಆ ಹಳ್ಳಿಯ ಜನ ಬಾರದ ನಲ್ಲಿ ನೀರಿಗಾಗಿ ಗಂಟೆಗಟ್ಟಲೆ ಕಾಯ್ದರೂ ಚಿಂತೆಯಿಲ್ಲ ಭಾವಿ ಕೆರೆಗಳ ಉಪಯೋಗ ಪಡೆಯದಷ್ಟು ಸೋಮಾರಿತನ ಬೆಳೆಸಿ ಕೊಂಡಿದ್ದಾರೆ. ಕೆರೆ ಭಾವಿ ಹಳ್ಳ ಝರಿ ತೊರೆ ಮುಂತಾದ ನೈಸರ್ಗಿಕ ಜಲಮೂಲಗಳನ್ನು ಅಲಕ್ಷಿಸಿ ಅವುಗಳನ್ನು ಹಾಳುಗೆಡವಿದ್ದಾರೆ. ಹೊಲಕ್ಕೆ ಹೋಗುವಾಗ ಒಂದು ದಿನ ಭುಜಂಗಯ್ಯನ ಭಾವಿಯ ಹತ್ತಿರ ಹಾಯ್ದು ಹೋಗಿ ಭಾವಿಯನ್ನು ಇಣುಕಿ ನೋಡಿದೆ. ಭಾವಿಯ ಕಟೋಡಿ ಕುಸಿದು ಬಿದ್ದು ಒಂದು ಮೂಲೆಯಲ್ಲಿ ಸ್ವಲ್ಪು ನೀರು ನಿಂತಿತ್ತು. ಒಂದು ಕಾಲದಲ್ಲಿ ಇಡೀ ಊರಿಗೆ ನೀರು ಪೂರೈಸುತ್ತಿದ್ದ ಭಾವಿ ಇದೇನೆ ಎನ್ನುವಂತಾ ಯಿತು. ಆ ಭಾವಿಯ ಸ್ಥಿತಿ ಕಂಡು ವಿಷಾದವಾಯಿತು. ಭಾವಿಯ ಸುತ್ತಮುತ್ತಲೂ ಇದ್ದ ಗಿಡಮರಗಳ ಸಂಖ್ಯೆ ಕ್ಷೀಣಿಸಿತ್ತು. ವರ್ಷದ ಹನ್ನೆರಡೂ ತಿಂಗಳೂ ಜುಳು ಜುಳು ನಿನಾದ ಮಾಡುತ್ತ ಹರಿಯುತ್ತಿದ್ದ ಹಳ್ಳ ತನ್ನ ಮೊದಲಿನ ಹರಿಯುವ ವೇಗವನ್ನು ಕಳೆದು ಕೊಂಡಿತ್ತು. ನನ್ನ ಬಾಲ್ಯದ ಕಾಲದಲ್ಲಿ ಹಳ್ಳದ ಬದಿಯ ಪೊದೆಗಳಲ್ಲಿ ಮತ್ತು ಮರಗಳಲ್ಲಿ ಅಸಂಖ್ಯ ಹಕ್ಕಿಗಳ ಗೂಡುಗಳು ಇದ್ದುದನ್ನು ಕಂಡಿದ್ದೆ, ಅವುಗಳ ಕಲರವ ಕೇಳಿ ಸಂತಸಪಟ್ಟಿದ್ದೆ. ಆದರೆ ಈಗ ಹಕ್ಕಿಗಳ ಗೂಡುಗಳು ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಉತ್ಸಾಹ ಗೆಡಿಸುವ ನೀರಸ ವಾತಾ ವರಣ, ಯಾಕೆ ಹೀಗೆ ? ಉತ್ತರಿಸುವುದು ಕಷ್ಟ. ನಾವು ಪ್ರಕೃತಿ ಮತ್ತು ಪರಿಸರವನ್ನು ಸಂಪೂರ್ಣ ಕಡೆಗಣಿ ಸಿದ್ದೇವೆ, ನಿಜಕ್ಕೂ ಇದು ಆತಂಕಕಾರಿ ವಿಷಯ. ಆದರೆ ಈ ನಿಟ್ಟಿನಲ್ಲಿ ಚಿಂತಿಸುವವರು ಯಾರು ? ಒಬ್ಬನ ವೈಚಾರಿಕತೆಯಿಂದ ಸುಧಾರಣೆ ಸಾಧ್ಯವೆ? ಇಲ್ಲ ಎಲ್ಲರಲೂ ಆ ಜಾಗೃತಿಬೇಕು. ಒಟ್ಟಿನಲ್ಲಿ ಎಲ್ಲೆಡೆಯೂ ಇರುವ ಉಸಿರುಗಟ್ಟಿಸುವ ವಾತಾವರಣ ಆತಂಕಕ್ಕೀಡು ಮಾಡಿತ್ತು.
ನನ್ನ ಸೋದರಮಾವನ ಮಗ ನರಹರಿ ನೌಕರಿಯೆಂಬ ಗಗನ ಕುಸುಮವನ್ನು ಹಿಡಿಯಲಾಗದೆ ವ್ಯವಸಾಯವೇ ತನ್ನ ಬದುಕು ಮತ್ತು ಜೀವನವೆಂದು ನಿರ್ಧರಿಸಿ ವ್ಯವಸಾಯದಲ್ಲಿ ತೊಡಗಿದ್ದ. ನನ್ನ ಮಾವ ಕಾರ್ಯ ನಿಮಿತ್ತ ಊರಿಗೆ ಹೋದವರು ವಾಪಾಸು ಬಂದಿರಲಿಲ್ಲ..ತಾಲೂಕು ಕಛೇರಿಯಲ್ಲಿ ಕೆಲಸವಿದ್ದ ಕಾರಣ ನನ್ನ ಸೋದರಮಾವನ ಮಗ ನರಹರಿ ಸಹ ಊರಿಗೆ ಹೋಗಬೇಕಾಗಿ ಬಂತು. ಆ ದಿನ ರಾತ್ರಿ ಊಟದ ವೇಳೆ ನರಹರಿ ನನಗೆ
' ಹರೀಶ ನೀನು ನಾಳೆ ಸ್ವಲ್ಪ ಗಿರಿಯಣ್ಣನ ಮರದ ಹೊಲಕ್ಕೆ ಹೋಗು, ಈ ಸಲ ಆ ಮಾವಿನ ಮರದಲ್ಲಿ ತುಂಬಾ ಕಾಯಿಗಳನ್ನು ಬಿಟ್ಟಿದೆ. ಹಳ್ಳದ ಆಚೆಗೆ ಇರುವ ತಿಪ್ಪಣ್ಣನ ಹೊಲದಲ್ಲಿರುವ ಮಾವಿನ ಗಿಡಗಳಿಗೆ ಮುಶಿಯಗಳ ಹಿಂಡು ಬಂದಿದೆಯಂತೆ, ಅವು ನಮ್ಮ ಮಾವಿನ ಮರಕ್ಕೂ ಬಂದು ಕಾಯಿಗಳನ್ನು ಕೆಡವಿ ಹಾಳು ಮಾಡಬಹುದು ಅವುಗಳು ಬಂದರೆ ಓಡಿಸು ಎಂದು ಹೇಳಿ, ಬೇಕಾದರೆ ಯಂಕಣ್ಣನ ಏರ್ ಗನ್ ತೆಗೆದುಕೊಂಡು ಹೋಗು ' ಎಂದು ಹೇಳಿದ.
***
ನಾನು ಮಾರನೆ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ತಿಂಡಿ ಮುಗಿಸಿ ನರಹರಿಯ ಜೊತೆ ಬಸ್ ಸ್ಟಾಂಡ್ಗೆ ಹೋದವನು ಆತನನ್ನು ಬಸ್ ಗೆ ಹತ್ತಿಸಿ ಮನೆಯ ಕಡೆಗೆ ಹೊರಟೆ. ದಾರಿಯಲ್ಲಿ ಬರುತ್ತಿರುವಾಗ ಏರ್ ಗನ್ ನೆನಪಾಗಿ ಯಂಕಣ್ಣನ ಮನೆಗೆ ಹೋದೆ. ಆತನೊಂದಿಗೆ ಉಭಯ ಕುಶಲೋಪರಿಯಾದ ನಂತರ ಯಂಕಣ್ಣನನ್ನು ಉದ್ದೇಶಿಸಿ
' ಯಂಕಣ್ಣ ನಮ್ಮ ಗಿರಿಯಣ್ಣನ ಮರದ ಹೊಲ ಕ್ಕೆ ಮುಶಿಯಗಳ ಹಿಂಡು ಬಂದಿದೆಯಂತೆ ಅವುಗಳನ್ನು ಹೆದರಿಸಿ ಓಡಿಸಲು ಏರ್ ಗನ್ನಿನ ಅವಶ್ಯಕತೆಯಿದೆ, ಸ್ವಲ್ಪ ನಿನ್ನ ಏರ್ ಗನ್ ಕೊಡು ಎಂದು ಕೇಳಿದೆ. ' ಯಂಕಣ್ಣ ನೀಲಪ್ಪನಿಗೆ
' ನೀಲಪ್ಪ ಪಡಸಾಲೆಯ ಗೋಡೆಗೆ ನೇತು ಹಾಕಿರುವ ಏರ್ ಗನ್ ಮತ್ತು ಕೆಲವು ಚರೆಗಳನ್ನು ತಂದು ಕೊಡು ' ಎಂದ.
ನೀಲಪ್ಪ ತಂದ ಏರ್ ಗನ್ ತೆಗೆದುಕೊಂಡು ಅದರ ನಿರ್ವಹಣೆಯನ್ನು ತೋರಿಸಿ, ಗನ್ನಿನ ಜೊತೆಗೆ ಹತ್ತು ಚರೆಗಳನ್ನು ನನಗೆ ಕೊಟ್ಟ. ಆ ಗನ್ನಿನ ಬಟ್ ಮತ್ತು ಬ್ಯಾರಲ್ಗಳು ಮಿರಿ ಮಿರಿ ಮಿಂಚುತ್ತಿದ್ದವು ಅದರ ಮೇಲೆ
' ಮೇಡ್ ಇನ್ ಇಂಗ್ಲಂಡ್ ' ಎಂದು ಇಂಗ್ಲೀಷ್ ನಲ್ಲಿ ಬರೆದಿತ್ತು. ಅದನ್ನು ನಾನು ಗಮನಿಸಿದ್ದನ್ನು ನೋಡಿ ಯಂಕಣ್ಣನು
' ಇದು ನಮ್ಮ ಅಜ್ಜನ ಕಾಲದ್ದು ಈಗ ಇದರ ಬೆಲೆ ಎರಡು ಸಾವಿರ ರೂ.ಗಳು ಆಗಬಹುದು, ನಮ್ಮಲ್ಲಿಯೂ ಏರ್ ಗನ್ ಗಳು ತಯಾರಾಗುತ್ತವೆ, ಆದರೆ ಇಷ್ಟು ಒಳ್ಳೆಯ ಗುಣಮಟ್ಟದವು ಇರುವುದಿಲ್ಲ ' ಎಂದ. ನಾನು ಏರ್ ಗನ್ ಪಡೆದು ಯಂಕಣ್ಣನಿಗೆ ವಿದಾಯ ಹೇಳಿ ಮನೆಯ ಕಡೆಗೆ ಬಂದೆ.
ಅಜ್ಜಿಯು ಬುತ್ತಿಯ ಗಂಟನ್ನು ಕಟ್ಟಿ ಇಟ್ಟಿದ್ದಳು, ನಾನು ಅದನ್ನು ತೆಗೆದುಕೊಂಡು ಹೊಲದ ಕಡೆಗೆ ಹೊರಟೆ. ಅಜ್ಜಿ ನನಗೆ
' ಮುಶಿಯಗಳ ಹಿಂಡು ಮಾವಿನಮರಕ್ಕೆ ಬಂದರೆ ಬರಿ ಹೆದರಿಸಿ ಓಡಿಸು,, ಹೆಚ್ಚಿಗೆ ತೊಂದರೆ ಕೊಡಬೇಡ, ಹೆಚ್ಚು ಕಡಿಮೆಯಾದರೆ ಗಡವಗಳು ಮೈಮೇಲೆ ಬೀಳುತ್ತವೆ ' ಎಂದು ಎಚ್ಚರಿಸಿದಳು.
ಆಕೆಯ ಮಾತಿಗೆ ನಾನು ಹ್ಞೂಗುಟ್ಟಿ ಎತ್ತುಗಳಾದ ಚೆಲುವ ಶಿವರಾಯಿ ಗಳನ್ನು ಬಿಟ್ಟುಕೊಂಡು ಗಿರಿಯಣ್ಣನ ಮರದ ಹೊಲದ ಕಡೆಗೆ ಮುನ್ನಡೆದೆ. ಕಮ್ಮಾರರ ಕೇರಿಯನ್ನು ದಾಟಿ, ಗೌಡರ ಓಣಿಯನ್ನು ಹಾಯ್ದು ವೀರಭದ್ರ ದೇವರ ಗುಡಿಯ ಹತ್ತಿರ ಬಂದೆ. ಶುಭ್ರವಾದ ನೀಲ ಆಗಸ ಸಾಲು ಸಾಲಾಗಿ ಹಾರಿ ಹೋಗುತ್ತಿರುವ ಬೆಳ್ಳಕ್ಕಿಗಳ ಹಿಂಡು. ಶುಭ್ರ ನೀಲಗಗನದ ಹಿನ್ನಲೆಯಲ್ಲಿ ಗುಡಿಯ ಗೋಪುರ ಮತ್ತು ಪಂಚಲೋಹದ ಕಳಸಗಳು ಮಿರುಗು ತ್ತಿದ್ದವು. ಹಲವರು ದನಗಳನ್ನು ತುರಮಂದಿಗೆ ಬಿಟ್ಟು ತಮ್ಮ ತಮ್ಮ ಮನೆಗಳಿಗೆ ವಾಪಾಸು ಹೋಗುತ್ತಿದ್ದರು. ಗೌಡರ ಮನೆಯ ಆಳುಗಳಾದ ನಿಂಗ ಮತ್ತು ಕರಿಯ ತುರಮಂದಿಯಲ್ಲಿ ಬಿದ್ದ ದನಗಳ ಶೆಗಣಿಯನ್ನು ಒಟ್ಟು ಮಾಡಿ ಗೌಡರ ಕಣದ ಒಂದು ಮೂಲೆಯಲ್ಲಿದ್ದ ಗೊಬ್ಬರದ ರಾಶಿಗೆ ಸೇರಿಸುತ್ತಿದ್ದರು. ನಾನು ಶೀಬಾರವನ್ನು ದಾಟಿ ಭುಜಂಗಯ್ಯನ ಭಾವಿಯನ್ನು ಹಿಂದೆ ಬಿಟ್ಟು ಹಳ್ಳವನ್ನು ತಡ್ಹಾಯ್ದು ಹಿರೆಕೆರಿ ಕಟ್ಟೆಯನ್ನು ಏರಿದೆ. ಸುಮ್ಮನೆ ಹೊಲದ ದಿಕ್ಕಿನೆಡೆಗೆ ದೃಷ್ಟಿ ಹರಿಸಿದೆ, ವಿಶಾಲವಾಗಿ ಸುತ್ತಮುತ್ತ ತನ್ನ ರೆಂಬೆಗಳನ್ನು ಪಸರಿಸಿ ಸಮೃದ್ಧವಾಗಿ ಬೆಳೆದ ಗಿರಿಯಣ್ಣನಮರ ಕಾಣಿಸಿತು. ಮನ ಉಲ್ಲಸಿತವಾಯಿತು, ನೆನಪುಗಳು ಬಾಲ್ಯಕ್ಕೆ ಜಾರಿದವು, ಅನುಭವ ಗಳು ನಾ ಮುಂದು ತಾ ಮುಂದು ಎಂದು ಸ್ಪರ್ದೆಗೆ ಇಳಿದವು.
( ಮುಂದುವರಿದಿದೆ )