ಪ್ರಜಾ.inನ ಬಗ್ಗೆ

ಪ್ರಜಾ.inನ ಬಗ್ಗೆ

ಗೆಳೆಯರೆ,
ನನ್ನ ಕೆಲವು ಸಮಾನ ಮನಸ್ಕ ಗೆಳೆಯರ ಜೊತೆ ಬೆಂಗಳೂರಿನ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅವುಗಳಿಗೆ ಪರಿಹಾರ ಹುಡುಕಲು ಒಂದು online ವೇದಿಕೆಯನ್ನು ಪ್ರಾರ0ಭಿಸಿದ್ದೇವೆ. ಆಸಕ್ತ ಸ0ಪದ ಓದುಗರು ಇದರಲ್ಲಿ ಓದುಗ, ಬ್ಲಾಗಿಗ (blogger) ಅಥವಾ tracker ಆಗಿ ಭಾಗವಹಿಸಬಹುದು. ಕೆಳಗಿನ ಪರಿಚಯವನ್ನು ದಯವಿಟ್ಟು ಓದಿ, ನಿಮಗೆ ಆಸಕ್ತಿದಾಯಕ ಎನಿಸಿದರೆ http://bangalore.praja.in ಗೆ ಒಮ್ಮೆ ಭೇಟಿ ಕೊಡಿ.

ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಅನೇಕ ಸಮಸ್ಯೆಗಳು ಒದಗಿ ಬರುವುದು ಸಹಜ. ಬೆಳೆಯುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಬೆಳೆಸುವುದು ಒಂದು ಸಮಸ್ಯೆಯಾದರೆ, ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸುವ ಕೆಲಸ ಕೂಡ ಕಷ್ಟಸಾಧ್ಯ.

ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕರ್ತವ್ಯ ಸರಕಾರದ್ದು ಹಾಗು ಆ ನಿಟ್ಟಿನಲ್ಲಿ ಸರಕಾರಗಳು ಯೊಚಿಸುತ್ತಿರುವುದು ಒಂದು ಧನಾತ್ಮಕ ಬೆಳವಣಿಗೆ. ಮೆಟ್ರೋ ರೈಲ್ ಯೋಜನೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅನೇಕ ವರ್ತುಲ ರಸ್ತೆಗಳು, ಪ್ಲೈ-ಓವರ್‍ಗಳು ಈ ದಿಕ್ಕಿನಲ್ಲಿ ಸರಕಾರಗಳು ತೆಗೆದುಕೊಂಡ ಹೆಜ್ಜೆಗೆ ಉದಾಹರಣೆಗಳು. ಆದರೆ, ಎಲ್ಲ ಸರಕಾರೀ ಯೋಜನೆಗಳಂತೆಯೇ ಕೆಂಪು ಪಟ್ಟಿ, ಕಳಪೆ ಮತ್ತು ಅವ್ಯವಸ್ಥಿತ ಕಾಮಗಾರಿ, ಮುಂದಾಲೊಚನೆಯ ಕೊರತೆ ಇತ್ಯಾದಿಗಳು ಈ ಯೋಜನೆಗಳನ್ನೂ ಪೀಡಿಸುತ್ತಿವೆ.

ಇನ್ನು ಇರುವ ಸೌಲಭ್ಯಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲೂ ಅನೇಕ ಕುಂದುಕೊರತೆಗಳು ಎದ್ದು ಕಾಣುತ್ತವೆ. ವಿಭಿನ್ನ ಸರಕಾರೀ ಇಲಾಖೆಗಳ ನಡುವೆ ಸಂಪರ್ಕದ ಕೊರತೆ, ಸಾರ್ವಜನಿಕರು ಹಾಗು ಸರಕಾರದ ಇಲಾಖೆಗಳ ನಡುವೆ ಸಂವಾದದ ಕೊರತೆ, ಅಧಿಕಾರಿಗಳಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ದಿವ್ಯ-ನಿರ್ಲಕ್ಷ್ಯ, ಸರ್ವವ್ಯಾಪಿ ಬ್ರಷ್ಟಾಚಾರ, ಅಧಿಕಾರ ಉಳ್ಳವರ ಬಾಧ್ಯತಾರಾಹಿತ್ಯ (lack of accountability) ಮುಂತಾದ ಕಾರಣಗಳಿಂದ ಮೂಲಭೂತ ಸೌಲಭ್ಯಗಳ ಕೊರತೆ ಮತ್ತಷ್ಟು ವ್ಯಾಪಕ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯ ನಾಗರಿಕನಿಗೆ ಇರುವ ಆಯ್ಕೆಗಳೆಂದರೆ,

೧. ಸ್ಥಿತಪ್ರಜ್ಙತೆ : ಇರುವ ಪರಿಸ್ಥಿತಿಯನ್ನು ಅನಿವಾರ್ಯವೆಂದು ಭಾವಿಸಿ, ಅದರೆಡೆಗೆ ನಿರ್ಲಕ್ಷ್ಯ ತಾಳುವುದು

೨. ಪಲಾಯನವಾದ: ಪರಿಸ್ಥಿತಿಯನ್ನು ಬದಲಿಸುವುದು ಬೇರೊಬ್ಬರ ಕೆಲಸ ಎಂದು ಭಾವಿಸಿ ಸಿನಿಕತನ ಬೆಳೆಸಿಕೊಳ್ಳುವುದು

೩. ಕ್ರಿಯಾಶೀಲತೆ: ಪರಿಸ್ಥಿತಿಯನ್ನು ಸಾರ್ವಜನಿಕ ಪ್ರಯತ್ನದಿಂದ ಬದಲಿಸಲು ಸಾಧ್ಯ ಎಂದು ನಂಬಿ, ಅದನ್ನು ಉತ್ತಮಪಡಿಸಲು ಕ್ರಿಯಾಶೀಲರಾಗುವುದು

ಪ್ರಜಾ.in ಮೇಲಿನ ಮೂರನೆಯ ಆಯ್ಕೆಯಿಂದ ಹೊಮ್ಮಿದ ವೇದಿಕೆ. ನಾವು (ಪ್ರಜಾ.in ಸದಸ್ಯರು) ಈ ವೇದಿಕೆಯ ಮೂಲಕ ಮೇಲೆ ಉಲ್ಲೆಖಿಸಲ್ಪಟ್ಟ ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ ಎಂದು ನಂಬಿದ್ದೇವೆ.

ಪ್ರಜಾ.inನ ಕಾರ್ಯವೈಖರಿ

ಪ್ರಜಾ.in ತನ್ನ ಸದಸ್ಯರಿಗೆ ಪರಸ್ಪರ ಸಮಾಲೋಚನೆಗಾಗಿ online ವೇದಿಕೆಯನ್ನು ಒದಗಿಸಿಕೊಡುತ್ತದೆ. ಪ್ರಜಾ.inನ ಸೌಲಭ್ಯಗಳನ್ನು (ಬ್ಲಾಗ್, ಫೋರಮ್ ಇತಾದಿ) ಬಳಸಿ ಸದಸ್ಯರು ಪ್ರಚಲಿತ ಸಾರ್ವಜನಿಕ ಸಮಸ್ಯೆಗಳು, ಅವುಗಳ ಪರಿಹಾರಗಳು, ಸಲಹೆಗಳು ಮುಂತಾದವುಗಳನ್ನು ಚರ್ಚಿಸಬಹುದು.

ಪ್ರಜಾ.inನ ಕೆಲವು ಕಾರ್ಯಕಾರೀ ಸದಸ್ಯರು ಈ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವನ್ನು ಸೂಕ್ತ ಅಧಿಕಾರಿ/ಇಲಾಖೆಗಳಿಗೆ ತಲುಪಿಸುತ್ತಾರೆ. ಹೀಗೆ ತಲುಪಿಸಲಾದ ಅನಿಸಿಕೆಗಳನ್ನು ಕಾರ್ಯಕಾರೀ ಸದಸ್ಯರು ಸಂಬಂಧಿಸಿದ ಅಧಿಕಾರಿಗಳ ಜೊತೆ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುತ್ತಾರೆ (follow-up) ಮತ್ತು ಆ ನಿಟ್ಟಿನ ಬೆಳವಣಿಗೆಗಳನ್ನು ಇತರ ಸದಸ್ಯರೊಂದಿಗೆ ಇದೇ ವೇದಿಕೆಯ ಮೂಲಕ ಹಂಚಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರ ಅಭಿಪ್ರಾಯವನ್ನು ಸರಕಾರಿ ಇಲಾಖೆಗಳಿಗೆ ತಲುಪಿಸುವ ಕೆಲಸದ ಜೊತೆಗೆ ಅಧಿಕಾರಿಗಳನ್ನು ಸಾರ್ವಜನಿಕ ವೇದಿಕೆಗೆ ಬಾಧ್ಯರನ್ನಾಗಿ ಮಾಡುವ ಉದ್ದೇಶವೂ ಈಡೇರುತ್ತದೆ.

ಈ ಮುಖ್ಯ ಉದ್ದೇಶದ ಜೊತೆಗೆ ಪ್ರಜಾ.inನ ಕಾರ್ಯಕಾರೀ ಸದಸ್ಯರು ಸಾರ್ವಜನಿಕ ಆಸಕ್ತಿಯ ಯೋಜನೆಗಳ ಹಾಗು ಅವುಗಳ ಅಭಿವೃದ್ಧಿಯ ಬಗ್ಗೆ ನಿಯಮಿತವಾಗಿ ಈ ವೇದಿಕೆಯ ಮೂಲಕ ಮಾಹಿತಿಯನ್ನು ತಲುಪಿಸುತ್ತಾರೆ. ಈ ರೀತಿ ಪ್ರಜಾ.in ಸಾರ್ವಜನಿಕ ಯೋಜನೆಗಳಿಗೆ ಒಂದು ಸ್ವತಂತ್ರ watchdog ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಸೂಕ್ತಮಟ್ಟದ ಆಸಕ್ತಿ ಮತ್ತು ಇಚ್ಛಾಶಕ್ತಿಯಿರುವ ಯಾವ ವ್ಯಕ್ತಿ ಕೂಡಾ ಕಾರ್ಯಕಾರೀ ಸದಸ್ಯನಾಗುವ ಸೌಲಭ್ಯದ ಮೂಲಕ ಪ್ರಜಾ.in ಪ್ರಜಾಪ್ರಭುತ್ವ ಹಾಗು ಕ್ಷಮತಾಧಾರಿತ (meritrocratic) ಸಂಸ್ಥೆಯಾಗಿ ಬೆಳೆಯಬಯಸುತ್ತದೆ.

ಈ ಮೇಲ್ಕಂಡ ಕೆಲಸಗಳ ಜೊತೆ ಪ್ರಜಾ.inನ ಸದಸ್ಯರು ಸೂಕ್ತವೆನಿಸಿದಲ್ಲಿ ಮೇಲಿನ ಧ್ಯೇಯಗಳಿಗೆ ಅನುಗುಣವಾಗಿ ಇತರ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಬಹುದು.

ಹೀಗೆ ಪ್ರಜಾ.in ಸಾರ್ವಜನಿಕರ ಹಿತಾಸಕ್ತಿಗೊಸ್ಕರ ಸಾರ್ವಜನಿಕರಿಂದಲೇ ಬೆಂಬಲಿತ ಸಂಸ್ಥೆಯಾಗಿ ಬೆಳೆಯಬಯಸುತ್ತದೆ.

ಬನ್ನಿ, ನಮ್ಮ ಪರಿಸ್ಥಿತಿಯನ್ನು ಉತ್ತಮಪಡಿಸಲು ಒಂದಾಗೋಣ!

Rating
No votes yet