ಬರಹ
ಬರಹ
ಬರಹದಾ ಸರಮಾಲೆ
ಬರದಲ್ಲಿ ನಡೆದಿರಲು,
ಭಾವನೆಯ ರತ್ನಗಳ
ಬರಹದಾ ಬಂಗಾರ,
ಬರವಣಿಗೆ ಸಿಂಗಾರ
ಬೆರೆಸಿ ಪೊಣಿಸುತಿರುವ
ಅಕ್ಕಸಾಲಿಗ ನಾನು.//ಪ//.
ಸರಸದಾ ಬರಹಗಳು
ವಿರಹದಾ ಬರಹಗಳು,
ಚಿಲುಮೆಯಾ ಬರಹಗಳು
ಒಲುಮೆಯಾ ಬರಹಗಳು,
ಚೆಲುವಾದ ಬರಹಗಳು
ಸೊಗಸಾದ ಬರಹಗಳು,
ಉಚಿತವೀ ಬರಹಗಳು.//೧//.
ಹರಿಭಕ್ತಿಯಲಿ ಮಿಂದು
ಗೀತೆ ಪಠಿಸುತಲಿಂದು,
ಹಗುರಾದ ಮನದಲ್ಲಿ
ಆನಂದದಿಂದಿರಲು,
ಎತ್ತಲಿಂದಲೊ ಬಂದು
ಮನದಾಳದಲಿ ನಿಂತ
ಹಿಡಿದಿಟ್ಟ ಬರಹಗಳು.//೨//.
ಶಸ್ತ್ರದಿಂದಾಗಲಿ,
ಅಗ್ನಿಯಿಂದಾಗಲಿ,
ನೀರಿನಿಂದಾಗಲಿ,
ಗಾಳಿಯಿಂದಾಗಲಿ
ನಾಶವಾಗದ ಕೆಲಸ
ನಾಹುಡುಕುತಿರಲು
ಸಿಕ್ಕವೀಬರಹಗಳು.//೩//.
ಶ್ರೀಹರಿಯು ಅರುಹಿರುವ
ಅರಿವುಗಳು ಬೆರೆತಿರುವ,
ಗತವ್ಯತವ ಮರೆಸುವ
ಭಯಗಳನು ತೊಳೆಯುವ,
ಪ್ರೀತಿಯನು ಬೆಳೆಸುವ
ಸ್ನೆಹವನು ಕಲಿಸುವ
ಕನ್ನಡದ ಬರಹಗಳು.//೪//.
ನೋವು ನಲಿವುಗಳನ್ನು
ಮಳೆಬಿಸಿಲುಚಳಿಗಳನು,
ಮಾನಾಪಮಾನಗಳು
ಹಗೆಮಿತ್ರಬಂಧುಗಳು
ನಿಂದೆ ಹೊಗಳಿಕೆಗಳು
ಸಮವೆಂದು ಸಾರುವಾ
ಗೀತೆಯಾ ಬರಹಗಳು.//೫//.
ಕೆಲಸ ಕಲಿಸುವ ಬರಹ,
ಮಗುವಾಡಿಸುವ ಬರಹ,
ತಿನಿಸು ಮುನಿಸಿನ ಬರಹ,
ದೇಶಭಕ್ತಿಯ ಬರಹ,
ಧನ್ಯಭಾವದ ಬರಹ,
ಶ್ರೀರಾಮನಾ ಸನಿಹ
ನಮ್ಮನೊಯ್ಯುವ ಬರಹ.//೬//.
-: ಅಹೋರಾತ್ರ.