ಭೋಗದಿಂದ ತ್ಯಾಗದವರೆಗೂ ಓಶೋ...!!!
"ಅವ ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಮಲಗುತ್ತಿದ್ದನಂತೆ. ಭಕ್ತರನ್ನು ವಶೀಕರಿಸಲು ಏನೇನೋ ಬಳಸುತ್ತಿದ್ದನಂತೆ. ಗಾಂಜಾ ಮೊದಲಾದ ಮಾದಕ ವಸ್ತುವನ್ನು ಉಪಯೋಗಿಸುತ್ತಿದ್ದನಂತೆ. ಆದರೂ ಸಂನ್ಯಾಸಿಯಂತೆ!" ಅನ್ನೋ ಎಲ್ಲಾ ಅಂತೆಕಂತೆಗಳಿರುವುದು ಓಶೋ ರಜನೀಶನ ಕುರಿತಾಗಿ. ನಾನಂತೂ ಓಶೋವನ್ನೇ ಕಾಣಲಿಲ್ಲ. ಇನ್ನೂ ಅವನ ಚಟುವಟಿಕೆಗಳನ್ನು ಕಾಣುವುದೆಂತು? ಅದೆಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ ಓಶೋ ಕುರಿತಾಗಿ ಸಾಕಷ್ಟು ಅಪಸ್ವರವಿದೆ. ಅವನನ್ನು ಸಂತ, ಸಾಧು, ಸಾಧಕ ಎಂಬುದನ್ನು ಎಷ್ಟೋ ಜನ ಒಪ್ಪುವುದಿಲ್ಲ. ಒಪ್ಪಬೇಕು ಅಂತಾನೂ ಅವ ಹೇಳಿಲ್ಲ!
ಅಂತಹ ಓಶೋ ನನಗೆ ಪರಿಚಿತವಾಗಿದ್ದು ನಾಲ್ಕು ವರ್ಷದ ಕೆಳಗೆ ಸ್ತ್ರೀ ಮುಕ್ತಿ-ಹೊಸದೊಂದು ದೃಷ್ಟಿಕೋನ ಎಂಬೊಂದು ಅದ್ಬುತ ಪುಸ್ತಕದಿಂದ. ಗೆಳೆಯ ಅವಧಾನಿಗಳು ಪರಿಚಯಿಸಿಕೊಟ್ಟ ಪುಸ್ತಕವದು. ವೈಚಾರಿಕವಾದ ಸೆಕ್ಸ್ ಪುಸ್ತಕ ಅಂತಾನೇ ಅದನ್ನು ಕರೆಯಬಹುದು. ಸ್ತ್ರೀ ಬದುಕಿನ ಬಗೆಗೆಗೊಂದು ವಿಭಿನ್ನ ಆಯಾಮ ಕಲ್ಪಿಸಿಕೊಡುವ, ಸೆಕ್ಸ್ ಕುರಿತಾಗೊಂದು ವಿಚಿತ್ರ ಬಗೆಯ ಪರಿಕಲ್ಪನೆಯನ್ನು ಕಟ್ಟಿಕೊಡುವ ಪುಸ್ತಕ. "ಮನುಷ್ಯ ಯಾರನ್ನಾದರೂ ಅನುಭೋಗಿಸಬೇಕು ಅನ್ನಿಸಿದರೆ ಅನುಭವಿಸಬಿಡಬೇಕು. ತನ್ನೊಳಗಿನ ತೃಷೆಯನ್ನು, ಆಸೆಯನ್ನು ಕಟ್ಟಿಕೊಂಡಿರಬಾರದು" ಅನ್ನುತಾರೆ ಓಶೋ(ಸೆಕ್ಸ್ ವಿಚಾರದಲ್ಲಿ ಒಂತರಹ ದನಗಳ ತರಹವೇ ಬದುಕಬೇಕೆಂಬ ದಾಟಿಯ ಮಾತುಗಳವು!) ನನಗೇನೋ ಅನುಭವಿಸಬೇಕೆಂದಿದೆ ಆದರೆ ಆಕೆಗೆ ಇರಬೇಕಲ್ಲ? ಅಂತಹ ಭೋಗ ಬಲಾತ್ಕಾರವಾಗದೇ ಅಂದರೆ? ಅವಳ ಸಮ್ಮತಿಯಿಲ್ಲದಿದ್ದರೆ, ಅವಳಿಗೆ ಭೋಗದಲ್ಲಿ ಆಸಕ್ತಿಯಿರದಿದ್ದರೆ ನೀವು ಮೈಮೇಲೆ ಬಿದ್ದು ಅವಳಿಗೆ ಹಪಹಪಿಸುವುದು ವ್ಯರ್ಥ. ಅವಳಿಂದ ನಿಮಗೆ ನೈಜ ಸುಖದ ಅನುಭವವೇ ಸಿಗುವುದಿಲ್ಲ ಎಂಬುದು ಅವರ ವಾದ. ಇದ್ದರೂ ಇರಬಹುದು ನನಗಂತೂ ಸದ್ಯಕ್ಕೆ ಅದರ ಅನುಭವವಿಲ್ಲ!
ಅಲ್ಲಿಂದಲೇ ಪರಿಚಯವಾದದ್ದು ಓಶೋ ಎಂಬೋರ್ವ ಚಿಂತಕ. ಓಶೋ ಅಂತಹ ಪುಸ್ತಕಗಳನ್ನು ಓದಿದಾಗ ಆತನ ಮೇಲಿರುವ ಆಪಾದನೆಗಳೆಲ್ಲಾ ನಿಜವೇನೋ ಅನ್ನಿಸತ್ತೆ(ಇಲ್ಲದಿದ್ದರೂ ಅದು ನಿಜವೇ ಅನ್ನುತ್ತಾರೆ ಹೆಚ್ಚಿನ ಮಂದಿ!)ಆದರೆ ಅವನ ಚಿಂತನೆಯ ವೋಗ ಅಲ್ಲಿಗೆ ನಿಲ್ಲುವುದಿಲ್ಲ. ನಾನು ಇದುವರೆಗೆ ಓದಿದ ಓಶೋ ಬರೆದ ಪುಸ್ತಕಗಳಲ್ಲಿ ಅದ್ಬುತವಾದ ಪುಸ್ತಕ"ಭಜಗೋವಿಂದಂ ಮೂಢಮತೆ". ಊಹುಂ ಓಶೋ ವೈಚಾರಿಕತನವನ್ನು ಊಹಿಸಲು ಸಾಧ್ಯವಿಲ್ಲ. ಸೆಕ್ಸ್ ಮೊದಲಾದ ಸಮಾಜದಲ್ಲಿನ ಒಂತರಹ ನಿರ್ಬಂಧಿತ ವಿಚಾರದ ಕುರಿತಾಗಿ ಮಾತಾಡುವ ಓರ್ವ ಆಧ್ಯಾತ್ಮದ ಕುರಿತಾಗಿಯೂ ಅಷ್ಟೇ ಫ್ರೌಡವಾಗಿ ಮಾತಾಡಬಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆ ಪರಿ ಉನ್ನತವಾದ ಪುಸ್ತಕವದು. ನಾನು ಓಶೋವನ್ನು ಇಷ್ಟಪಡುವುದು ಅಂತಹ ಚಿಂತನೆಗಳಿಗಾಗಿಯೇ.
ಒಪ್ಪಲು ಸಾಧ್ಯವಿಲ್ಲ, ಆಡುವ ಮಾತೊಂದು ಮಾಡುವ ಕೃತಿ ಇನ್ನೊಂದು ಎಂಬ ಕೆಟಗರಿಯ ಮಂದಿಯನ್ನು ನಾವು ಸ್ವೀಕರಿಸಲು ಸಾಧ್ಯವೇ ಇಲ್ಲ. ಹೌದು ನನಗೆ ಓಶೋ ಇಷ್ಟವಾಗುವುದು ಹಾಗಾಗಿಯೇ. ಅವ ಆಧ್ಯಾತ್ಮದ ನಡುವೆ ಕುರುಡು ಕಟ್ಟಲೆಗಳನ್ನು ತೂರಿಸಲಿಲ್ಲ. ಎಲ್ಲವನ್ನು ಮುಕ್ತವಾಗಿಯೇ ಮಾತನಾಡಿದ. ನಮ್ಮಲ್ಲಿ ಹಲವು ಸಂನ್ಯಾಸಿಗಳಿದ್ದಾರೆ. ಅವರಲ್ಲಿ ಕೆಲವರು ಅನೈತಿಕ ಸಂಬಂಧ ಹೊಂದಿರುವುದರ ಕುರಿತು ಸಾಕಷ್ಟು ಗುಸುಗುಸುವಿದೆ. ಮುಲ್ಲಾಗಳಿದ್ದಾರೆ, ಫಾದರ್ಗಳಿದ್ದಾರೆ. ಅವರಲ್ಲಿ ಸಾಕಷ್ಟು ಜನ ಮಾಡಬಾರದ ಹಲ್ಕಾ ಕೆಲಸಗಳನೆಲ್ಲಾ ಮಾಡಿ ಮುಗಿಸಿ ಚರ್ಚ್, ಮಸೀದಿಗೆ ಬಂದು ಒಳ್ಳೆಯ ಉಪದೇಶ ನೀಡುತ್ತಾರೆ! ಎಂದು ಜನ ಮಾತಾಡುವುದನ್ನು ಕೇಳಿದ್ದೇವೆ. ಅರ್ಥಾತ್ ಸೆಕ್ಸ್ನಂತಹ ದೇಹಸಹಜವಾದ ಅಭಿರುಚಿಯನ್ನು ತ್ಯಾಗ ಮಾಡುವುದು ಅಷ್ಟು ಸುಲಭದ ಕಾಯಕವಲ್ಲ. ಅದನ್ನು ತ್ಯಾಗಮಾಡಿದ್ದೇವೆ. ನಾವು ಮಹಾನ್ ತ್ಯಾಗಿಗಳು ಎಂಬ ಮುಖವಾಡ ಧರಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ನನಗನ್ನಿಸುತ್ತದೆ. ಹಾಗಾಗಿಯೇ ನಾನು ಓಶೋವನ್ನು ಇಷ್ಟಪಡುತ್ತೇನೆ.
ಸೆಕ್ಸ್ ಮನುಷ್ಯನನ್ನು ಯಾವ ಪರಿ ಕಾಡುತ್ತದೆ ಎಂಬೊಂದನ್ನು ಬೈರಪ್ಪನಪ್ಪವರು "ಮಂದ್ರಾ"ದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಅದನ್ನು ಓದುವಾಗ ಅದೊಂದು ಕೆಟ್ಟ ಕಾದಂಬರಿ ಅನ್ನಿಸತ್ತೆ. ಆದರೆ ಅದನ್ನು ಓದಿ ಸಮಾಜವನ್ನು ನೋಡುವಾಗ ಅದು ವಾಸ್ತವ ಎಂಬ ಅರಿವಾಗತ್ತೆ. ಇನ್ನೂ ಸೆಕ್ಸ್ ಎಂಬುದು ಸಂನ್ಯಾಸಿಗಳನ್ನು ಹೇಗೆ ಕಾಡತ್ತೆ ಎಂಬುದನ್ನು ಶಿವರಾಮಕಾರಂತರು "ಕೇವಲ ಮನುಷ್ಯರು" ಕಾದಂಬರಿಯಲ್ಲಿ ಕೆತ್ತಿದ್ದಾರೆ! ಕಪಟ ಸಂನ್ಯಾಸಿಗಳ ಮುಖವಾಡ ಕಳಚಿಟ್ಟಿದ್ದಾರೆ. ಒಳಗೊಂದು ಹೊರಗೊಂದು ಎಂಬ ಆ ಎಲ್ಲಾ ಮರೀಚಿಕೆಯಿಂದ ಓಶೋ ಹೊರನಿಲ್ಲುತ್ತಾರೆ ಅಲ್ಲವೇ?
ಹಾಗಂತ ಓಶೋ ಭೊಗವನ್ನೇ ಪ್ರೋತ್ಸಾಹಿಸಿದರು ಎಂಬುದನ್ನು ನಾನಂತೂ ಒಪ್ಪುವುದಿಲ್ಲ. ಭೊಗಕ್ಕೆ ಕಡಿವಾಣ ಹಾಕಲಿಲ್ಲ. ಕಟ್ಟಲೆ ವಿಧಿಸಲಿಲ್ಲ ಅಷ್ಟೆ. ಭಾರತ ಭೊಗಭೂಮಿಯಲ್ಲ ತ್ಯಾಗಭೂಮಿ ಎಂಬುದನ್ನು ಓಶೋ ಕಣಕಣಗಳಲ್ಲೂ ನಿರೂಪಿಸಿದ್ದಾರೆ. ಬಿಕ್ಷು ರಾಜನಾಗುವುದನ್ನು ಕೇಳಿದ್ದೇವೆ. ಆದರೆ ರಾಜ ಸ್ವಪ್ರೇರಣೆಯಿಂದ ಬಿಕ್ಷುವಾಗುವ ಉದಾಹರಣೆ ಎಲ್ಲಾದರೂ ಇದೆಯಾ? ಇದೆ ಅದು ಭಾರತದಲ್ಲಿ ಮಾತ್ರ ಸಾಧ್ಯವಿದೆ. ರಾಜನಾಗಿದ್ದ ಗೌತಮ ಬುದ್ದನಾದ. ಬಿಕ್ಷುವಾದ. ಮಹಾವೀರ ಕೂಡಾ ಹಾಗೇ. ಇಂಥ ಅದ್ಬುತ ತ್ಯಾಗ, ಜಗತ್ತಿನಲ್ಲಿ ಬೇರೆಲ್ಲಿದೆ? ಎನ್ನುತ್ತಾರೆ ಓಶೋ. ಸಂತ ಏಕನಾಥರ ತ್ಯಾಗದ ಕುರಿತಾಗಿ ಮಾತನಾಡುತ್ತಾರೆ. ಹಾಗೇ ಮೀರಾಳ ಪ್ರೇಮದ ಕುರಿತಾಗಿಯೂ ಮಾತನಾಡುತ್ತಾರೇ! ಸಂಭೋಗದಿಂದ ಸಮಾಧಿ ತಲುಪುವುದನ್ನೂ ವಿವರಿಸುತ್ತಾರೆ. ಭೋಗಿಗಳಿಗೆ ಭೋಗದಿಂದಲೇ ಧ್ಯಾನ ಸ್ಥಿತಿ ತಲುಪುವುದನ್ನು ಹೇಳುತ್ತಾರೆ. ತ್ಯಾಗಿಗಳಿಗೆ ಬುದ್ದ, ಮಹಾವೀರರ ಹಾದಿ ತೋರಿಸುತ್ತಾರೆ. ಎಂತಹ ಅದ್ಬುತ ಅಲ್ವಾ?
ಹೌದು ಓಶೋ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಮನುಷ್ಯನಲ್ಲ ಅಥವಾ ಸಾಧುವೂ ಅಲ್ಲ. ಅದೊಂದು ಪ್ರತಿಭೆ. ಅದ್ಬುತವಾದೊಂದು ಶಕ್ತಿ. ವಿಚಾರ ಭಂಡಾರ. ಹಾಗಾಗಿ ನಾವು ಆತನನ್ನು ವೈಚಾರಿಕವಾಗಿಯೇ ಸ್ವೀಕರಿಸೋಣ. ಮನುಷ್ಯನ ಬದುಕಿರುವುದು ೧೦೦ ವರ್ಷ. ಅಂತಹ ಬದುಕಿನಲ್ಲಿ ನೀನು ಅದು ಮಾಡಬೇಡ, ಇದನ್ನು ನೋಡಬೇಡ ಎಂದು ಕಟ್ಟುಪಾಡು ವಿಧಿಸುವ ಹಕ್ಕು ಯಾರಿಗೂ ಇಲ್ಲ. ಆದರ್ಶಗಳು ಮನಸಿಗೆ ಆನಂದವನ್ನುಂಟುಮಾಡಬೇಕೇ ಹೊರತು ಅದೊಂದು ಬಂಧನವಾಗಬಾರದು. ನೀನು ನಿನ್ನ ಕೊಣೆಯೊಳಗೆ ಏನಾದರೂ ಮಾಡಿಕೋ. ಅದನ್ನು ಸಮಾಜಕ್ಕೆ ತರಬೇಡ. ನಿನ್ನ ರೋಗಗಳನ್ನೆಲ್ಲಾ ಸಮಾಜಕ್ಕೆ ಅಂಟಿಸಬೇಡ ಎಂದಷ್ಟೇ ಹೇಳಬಹುದು ಹೊರತೂ ಒಬ್ಬ ಇನ್ನೊಬ್ಬನಿಗೆ ಆಜ್ಞೆ ಮಾಡುವ ಹಕ್ಕಿಲ್ಲ. ಹಾಗೆ ಮಾಡಿದರೆ ಒಬ್ಬನ ಸುಂದರವಾದ ಬದುಕನ್ನು ನೀವು ಕಸಿದುಕೊಂಡಂತೆ ಎಂಬುದು ನನ್ನ ನಿಲುವು. ಹಾಗಾಗಿಯೇ ನನಗೆ ಓಶೋ ತುಂಬಾ ಇಷ್ಟವಾಗುವುದು. ಓಶೋ ಕುರಿತು ಆಡಿದಷ್ಟು ಇದೆ ಆದರೆ ಸದ್ಯಕ್ಕೆ ಇಷ್ಟು ಸಾಕು.
Comments
ಉ: ಭೋಗದಿಂದ ತ್ಯಾಗದವರೆಗೂ ಓಶೋ...!!!
ಉ: ಭೋಗದಿಂದ ತ್ಯಾಗದವರೆಗೂ ಓಶೋ...!!!