"ಮಾತೃ ದೆವ್ವೋ ಭವ"

"ಮಾತೃ ದೆವ್ವೋ ಭವ"

ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದೇ ಸಮನೆ ಫೋನ್ ಮಾಡುತ್ತಿರುತ್ತಾಳೆ ಎಂದು ಪುತ್ರ ಮಹಾಶಯ ನ್ಯಾಯಾಲಯದ ಕಟ್ಟೆ ಹತ್ತಿದ. ಆಸ್ಟ್ರಿಯಾದ ೭೩ ವರ್ಷದ ಈ ವೃದ್ಧ ಮಾತೆ ದಿನಕ್ಕೆ ೪೯ ಸಲ ಫೋನ್ ಮಾಡಿ ಪೀಡಿಸುತ್ತಿದ್ದಳಂತೆ ಒಂಭತ್ತು ತಿಂಗಳು ಹೊತ್ತೂ, ಹೆತ್ತೂ ಸಾಕಿದ ಮಗನನ್ನು. ನ್ಯಾಯಾಲಯ ಆಕೆಯಿಂದ ವಿವರಣೆ ಕೇಳಿದಾಗ ಆಕೆ ಹೇಳಿದ್ದು, ನನಗೆ ಅವನೊಂದಿಗೆ ಮಾತನಾಡಬೇಕಿತ್ತು ಅಷ್ಟೇ ಎಂದು. ಮುಂದುವರೆದು, ನನ್ನ ಮಗನ ಹತ್ತಿರವೋ, ಮಗಳ ಹತ್ತಿರವೋ ಮಾತನಾಡುವಂತಿಲ್ಲ, ನನ್ನ ೧೫ ವರುಷದ ಮೊಮ್ಮಗುವನ್ನು ಇದುವರೆಗೂ ನಾನು ನೋಡಿಯೇ ಇಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಳು ಆ ಮಹಾತಾಯಿ. ತನಗೆ ಅದು ಬೇಕು ಇದು ಬೇಕು ಪೀಡಿಸದೇ ತನ್ನ ಮಗನೊಂದಿಗೆ ಮಾತನಾಡಲು ಶ್ರಮಿಸುವುದೇ ಆ ತಾಯಿ ಮಾಡಿದ ಮಹಾಪರಾಧ. ನೋಡಿ ನಮ್ಮ ಸಂಸ್ಕೃತಿಗೂ, ಸಂಪತ್ತಿನ ಹಿಂದೆ ಬಿದ್ದು ಮನೋಕ್ಲೇಷೆಗಳನ್ನು ಗಳಿಸಿಕೊಂಡ ಆಧುನಿಕ ಜಗತ್ತಿನ ಸಂಸ್ಕೃತಿಗೂ ಇರುವ ವ್ಯತ್ಯಾಸ. ಇಂಥ ಪ್ರಕರಣಗಳು ನಮ್ಮಲ್ಲಿಲ್ಲ ಎಂದೇನಲ್ಲ. ಆದರೆ ಅವು ಈ ಮತ್ತಕ್ಕಂತೂ ಇಳಿದಿರುವುದಿಲ್ಲ.  ತಾವು ಆರ್ಹ್ತಿಕವಾಗಿ ಸುಸ್ಥಿಯಲ್ಲಿದ್ದರೂ ಮಡದಿ ಏನೆಂದುಕೊಳ್ಳುತ್ತಾಳೋ ಎಂದು ಹೆದರಿ  ತಮ್ಮ ತಾಯಂದಿರನ್ನು ತಮ್ಮೊಂದಿಗೆ ಇಟ್ಟುಕೊಳ್ಳದ ಮಹಾನುಭಾವರೂ ಇದ್ದಾರೆ. ವಿಧಿಯಿಲ್ಲದೇ ಇಂಥ ತಾಯಂದಿರು ಯಾರದಾದರೂ ಮನೆಯಲ್ಲಿ ಕೆಲಸಕ್ಕಿದ್ದು ಇರುವಷ್ಟು ಆಯಸ್ಸನ್ನು ಕಳೆಯುತ್ತಿದ್ದಾರೆ. 

 

ಸರಿ ನ್ಯಾಯಾಲಯ ಇವರೀರ್ವರ ವಾದ ಆಲಿಸಿ ಕೊಟ್ಟ ಮಹಾ ತೀರ್ಪು? 

೩೬೦ ಯುರೋಗಳ ದಂಡ. ಈ ಕೇಸನ್ನು ಕೋರ್ಟಿನ ಮುಂದೆ ತಂದು ಆಮೂಲ್ಯ ಸಮಯ ಹಾಳು ಮಾಡಿದ್ದಕ್ಕೂ, ತಾಯ್ತನಕ್ಕೆ ಚಿಕ್ಕಾಸಿನ ಬೆಲೆ ಕೊಡದ ಮಗನ ಸಂಸ್ಕೃತಿಗೂ ವಿಧಿಸಿದ ದಂಡ ಅಲ್ಲ.

ಒಂದೇಸಮನೆ ಫೋನ್ ಮಾಡಿ ಮಗನ ನೆಮ್ಮದಿ ಕೆಡಿಸಿದ ತಾಯಿಗೆ ವಿಧಿಸಿತು ದಂಡ ನ್ಯಾಯಾಲಯ.
Rating
No votes yet

Comments