ವೇದಾಂತಿ ದಂತಕತೆ....

ವೇದಾಂತಿ ದಂತಕತೆ....

ಮುಂಜಾನೆ ಎದ್ದು ಬೇಗನೆ ದೇವರ ಸ್ತೋತ್ರ ಹೇಳುತ್ತ ಇದ್ದೆ. ನನ್ನ ಗೆಳೆಯ ವಿಲಾಸ್ ಬಂದ. ಬಂದವನೇ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ತನ್ನ ಮದುವೆ ಕಾರ್ಡ್ ಕೊಟ್ಟ. ನಮಗೂ ತುಂಬಾ ಖುಷಿ ಆಯಿತು. ಇಲ್ಲೇ, ತಿಂಡಿ ತಿಂದು ಹೋಗು ಎಂದು ಹೇಳಿದೆ. ಆಯಿತು ಎಂದ. ಮಡದಿ ತಿಂಡಿ ತಂದು ಕೊಟ್ಟಳು. ತಿಂಡಿ ತಿನ್ನುವ ಸಮಯದಲ್ಲಿ ಒಂದು ಹರಳು ನನ್ನ ಬಾಯಿಗೆ ಬಂತು. ನಾನು ಪಕ್ಕಕ್ಕೆ ಇಟ್ಟು, ತಿಂಡಿ ತಿಂದು ಮುಗಿಸಿದೆ. ಆಮೇಲೆ ಕಾಫೀ ಕುಡಿಯುತ್ತಾ ಇರುವಾಗ, ಮತ್ತೆ ಮಾತನಾಡುತ್ತಾ ನಿನಗೆ ಯಾರಾದರೂ ದಂತ ವೈಧ್ಯರು ಗೊತ್ತಾ ಎಂದು ಕೇಳಿದ. ನನಗೆ ಘಾಬರಿ, ನನಗೆ ಹರಳು ಬಂದರು, ನಾನೇ ಸುಮ್ಮನಿರುವಾಗ ಇವನದು ಜಾಸ್ತಿ ಆಯಿತು ಅನ್ನಿಸಿತು. ನಾನು ಸುಮ್ಮನೇ ನಕ್ಕು ಸುಮ್ಮನಾದೆ. ಮತ್ತೊಮ್ಮೆ ಕೇಳಿದ ಆಸಾಮಿ... ಆದರೂ ಸುಧಾರಿಸಿಕೊಂಡು, ಹಾ... ಗೊತ್ತು ನನ್ನ ಒಬ್ಬ ಹಳೆಯ ಗೆಳೆಯ ರಾಜೀವ ಇದ್ದಾನೆ ಎಂದೆ. ಅವನಿಗೆ ಹೇಳು ನಾನು ಬರುತ್ತಿದ್ದೇನೆ ಅಂತ ಎಂದ. ಏಕೆ? ಹಲ್ಲಿಗೆ ಏನು ಆಯಿತು ಎಂದೆ. ಅದು ಮದುವೆ ಮುಂಚೆ ಹಲ್ಲು ಚೆನ್ನಾಗಿ ತೋರಿಸಿಕೊಂಡು ಬರಬೇಕು ಎಂದಿದ್ದೇನೆ ಎಂದಾಗ ನನ್ನ ಮನಸ್ಸು ನಿರಾಳವಾಯಿತು.

ಮದುವೆ ಫಿಕ್ಸ್ ಆಯಿತು, ಅಂದರೆ ಸಾಕು ಅನೇಕ ಜನರು ದಂತ ವೈದ್ಯರ ಬಳಿ ಹೋಗಿ, ತಮ್ಮ ದಂತಕತೆಗಳನ್ನು ಹೇಳಿ, ದಂತ ಚಿಕಿತ್ಸೆ ಮಾಡಿಸಿಕೊಂಡು ಬರುತ್ತಾರೆ. "ಪ್ರಥಮ್ ಚುಂಬನಮ್ ದಂತ ಭಗ್ನಮ್" ಆಗಬಾರದು ನೋಡಿ ಅದಕ್ಕೆ..ಆಮೇಲೆ ಬೇಕಾದರೆ ಭಗ್ನಗೊಳಿಸುವುದು ಅವರವರ ಇಚ್ಛೆ. ಗಂಡ ಹೆಂಡತಿಯದೋ ಅಥವಾ ಹೆಂಡತಿ ಗಂಡನದೋ.... ಚಿಕ್ಕವನಿದ್ದಾಗ ಅಪ್ಪ ನಾನು ಕೀಟಲೆ ಮಾಡಿದಾಗ "ಲೇ ನಿನ್ನ ಹಲ್ಲು ಉದುರಿಸುತ್ತೇನೆ ಎಂದಿದ್ದು" ನೆನಪು ಆಯಿತು.

ಅವನಿಗೆ ರಾಜೀವನ ವಿಸಿಟಿಂಗ್ ಕಾರ್ಡ್ ಕೊಟ್ಟೆ. ಕಾರ್ಡ್ ನೋಡಿ,ಮುಖ ಹರಳೆಣ್ಣೆ ಕುಡಿದವನ ಹಾಗೆ ಮಾಡಿದ. ಏಕೆ? ಏನು ಆಯಿತು ಎಂದೆ. ಅದು... ಅದು... ಕ್ಲಿನಿಕ್ ಹೆಸರು ಅಂದ. ಅದಾ.. ಅವನು ಗಣೇಶನ ಭಕ್ತ, ಅದಕ್ಕೆ ಏಕದಂತ ಕ್ಲಿನಿಕ್ ಎಂದು ಇಟ್ಟಿದ್ದಾನೆ ಅಷ್ಟೇ ಎಂದಾಗ, ನಿರಾತಂಕವಾಗಿ ನಿಟ್ಟುಸಿರು ಬಿಟ್ಟ. ಅವನ ಸಿಲ್ವರ್ ತಲೆ ನೋಡಿ, ಇದನ್ನು ಸರಿ ಮಾಡಿಸಿಕೊ ಎಂದು ತಮಾಷೆ ಮಾಡಿದೆ. ನಾನು ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ ಎಂದ. ಅದಕ್ಕೆ ನನ್ನ ಮಡದಿ ನಿಮ್ಮನಾಟಿ ವೈಧ್ಯರ ಅಡ್ರೆಸ್ ಕೊಡಿ ಪಾಪ... ಎಂದು ನಗಹತ್ತಿದಳು. ಅವನಿಗೆ ಅರ್ಥವಾಗಲಿಲ್ಲ, ಯಾರದೂ ನಾಟಿ ವೈಧ್ಯರು ಎಂದ. ನನ್ನ ಕಥೆಯನ್ನು ತುಂಬಾ ರಸವತ್ತಾಗಿ ಹೇಳಿದಳು. ಸಕ್ಕತ್ ನಗುತ್ತಾ, ಬೇಡ.. ಬೇಡ... ನನಗೆ ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ, ನನ್ನ ನೋಡಿ, ಆಮೇಲೆ 10 ವರ್ಷ ಚಿಕ್ಕವನ ಹಾಗೆ ಮಾಡಿ ಕಳಿಸುತ್ತಾರೆ ಎಂದ. ಅದಕ್ಕೆ ನಾನು ಕೋಪದಿಂದ ನಿನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಬಿಡುತ್ತೇನೆ, ಬಾಲ್ಯ ವಿವಾಹ ಮಾಡಿಕೊಳ್ಳುತ್ತಿದ್ದಾನೆ ಎಂದು ಎಂದೆ.

ನಾವಿಬ್ಬರು ಮದುವೆ ಸಿದ್ಧತೆ ಬಗ್ಗೆ ಮಾತನಾಡುತ್ತಾ ಇದ್ದಾಗ, ನನ್ನ ಸುಪುತ್ರ ಬಂದು, ಅಪ್ಪ ನೋಡಿ.. ಅಮ್ಮ ನನ್ನ ಮಾತು ಕೇಳುತ್ತಾ ಇಲ್ಲ ಎಂದ. ಅದಕ್ಕೆ ನಾನು, ಮದುವೆ ಆಗಿ ಆರು ವರ್ಷ ಆಗೋಕೆ ಬಂತು ನನ್ನ ಮಾತೆ ಕೇಳಲ್ಲ, ಇನ್ನೂ ನಿನ್ನ ಮಾತು ಅವಳಿಗೆ ಎಲ್ಲಿಯ ಲೆಕ್ಕ ಎಂದು ನಗುತ್ತಾ ಅಂದೆ. ಅದಕ್ಕೆ... ಅವನು ನಕ್ಕು ಅಪ್ಪನಿಗೆ ಹೇಳಿದ್ದೇನೆ ಎಂದು ಹೇಳುತ್ತ ಅಡುಗೆ ಮನೆಗೆ ಹೋದ. ಹೇಳು ಏನು? ಮಾಡುತ್ತಾರೆ ನೋಡುತ್ತೇನೆ ಎಂದಳು ಮಡದಿ.

ಕೆಲ ಸಮಯದ ನಂತರ ಪಕ್ಕದ ಮನೆ ಪೂಜ ಬಂದು "ಆಂಟೀ ಸ್ವಲ್ಪ ಮೊಸರು ಇದ್ದರೆ ಕೊಡಿ" ಎಂದಳು. ಮೊಸರು ಕೊಟ್ಟು ಕಳುಹಿಸಿದಳು. ನನ್ನ ಮಗ ಅವರ ಅಮ್ಮನಿಗೆ ಆಂಟೀ ... ಆಂಟೀ ಎಂದು ಸಂಭೋದಿಸುತ್ತಾ ಮೋಜು ಮಾಡುತ್ತಾ ಆಡುತ್ತಿದ್ದ. ಮದುವೆ ಆದ ಮೇಲೆ ಸಿಗುವಂತ ಮೊದಲನೆ ಪ್ರಮೋಶನ್ ಏನು ಗೊತ್ತಾ? ಎಂದು ವಿಲಾಸ್ ನಿಗೆ ಕೇಳಿದೆ. ಏನು? ಎಂದ. ನೀನು ಪಕ್ಕದ ಮನೆ ಜನರಿಗೆ ಅಂಕಲ್ ಆಗುತ್ತಿ ಮತ್ತೆ ನಿನ್ನ ಮಡದಿ ಆಂಟೀ...ವಯಸ್ಸು ಎಷ್ಟೇ ಇದ್ದರು. ಮದುವೆ ಮೊದಲು ನೀನು ಹೀರೊ ಇರುತ್ತಿ... ಎಂಗೇಜ್ಮೆಂಟ್ ಆದ ಮೇಲೆ ಸೂಪರ್ ಹೀರೊ ತರಹ ಆಡುತ್ತೀ.. ಆಮೇಲೆ ಗೊತ್ತಾಗೋದು ನೀನು ಆಂಟೀ ಅಥವಾ (Anti) ಹೀರೊ ಎಂದು. ಅದಕ್ಕೆ ಒಟ್ಟಿನಲ್ಲಿ ಹೀರೊ ಇರುತ್ತೇನೆ ತಾನೇ? ಅಂದ. ಲೇ.... ನಿನಗೆ ಹೀರೊದ ನಿಜವಾದ ಅರ್ಥ ಗೊತ್ತಾ? ಎಂದೆ. ಇಲ್ಲ ಅಂದ. ಹೀ(ಅವನು) ಇಂಗ್ಲೀಶ್ ಶಬ್ದ. ರೊ(ಅಳು) ಹಿಂದಿ ಶಬ್ದ ಎಂದೆ. ಜೋರಾಗಿ ನಗಹತ್ತಿದ. ಅಷ್ಟರಲ್ಲಿ ನನ್ನ ಮಡದಿ ನೀವು ಇವರ ಮಾತು ಕೇಳುತ್ತಾ ಇದ್ದರೆ ಮುಗೀತು ಕತೆ. ಗಿಡದಲ್ಲಿ ಇರುವ ಮಂಗ ಕೂಡ ಕೈ ಬಿಡುತ್ತೆ ಎಂದಳು. ವೇದಾಂತಿಗಳೇ ನಿಮ್ಮ ದಂತಕತೆಗಳು ಸಾಕು, ಅವರಿಗೂ ಇನ್ನೂ ತುಂಬಾ ಮದುವೆ ಕಾರ್ಡ್ ಕೊಡಬೇಕು ಎಂದು ಕಾಣುತ್ತೆ ಬಿಡಿ ಅವರನ್ನ ಎಂದಳು.

ಮತ್ತೆ ನಕ್ಕು, ಎಲ್ಲರಿಗೂ ಬೈ ಹೇಳಿ ಮದುವೆಗೆ ಬರಲೇಬೇಕು ಎಂದು ಹೇಳಿ ಹೊರಟು ಹೋದ.

ಆಮೇಲೆ ಮಡದಿ ರೀ... ಸ್ವಲ್ಪ ಟೊಮ್ಯಾಟೋ ಫ್ರಿಡ್ಜ್ ನಲ್ಲಿ ಇದೆ ಕೊಡಿ ಎಂದಳು. ನಾನು ಫ್ರಿಡ್ಜ್ ತೆಗೆದೆ ಅಲ್ಲಿ ತುಂಬಾ ಸಾಮಾನುಗಳನ್ನು ಇಟ್ಟಿದ್ದಳು. ಅದನ್ನು ನೋಡಿ ಏನೇ ಇದು ಇಷ್ಟೊಂದು ಸಾಮಾನು ಇಟ್ಟೀದ್ದೀಯ....?. ನನ್ನನ್ನು ಇದರಲ್ಲಿ ತುರುಕಲಿಲ್ಲವಲ್ಲ ಎಂದು ತಮಾಷೆ ಮಾಡಿದೆ. ರೀ, ನಾನು ಕೆಟ್ಟಿರೊ ಸಾಮಾನು ಇಡುವದಿಲ್ಲ ಎಂದು ನಗುತ್ತಾ ನುಡಿದಳು....

Rating
No votes yet

Comments