ಸ್ವಾಗತಾರ್ಹ ಬದಲಾವಣೆ
ಕೇಂದ್ರ ಲೋಕಸೇವಾ ಆಯೋಗ ಜಾರಿಗೊಳಿಸಿರುವ ಪರೀಕ್ಷಾ ಸುಧಾರಣೆ ಸಕಾರತ್ಮಕ ಮತ್ತು ಸ್ವಾಗತಾರ್ಹ. ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ಮಂತ್ರದ ಪರಿಣಾಮವಾಗಿ, ಸಾಮಾನ್ಯ ಆಡಳಿತಯಂತ್ರದ ಕುಸಿದಿರುವ ಬಗ್ಗೆ, ಸಿಬ್ಬಂದಿ ಸಚಿವಾಲಯ, ಈಗಲಾದರೂ ಎಚ್ಚೆತ್ತಿದೆ. ಸಾಫ್ಟ್‌ವೇರ್, ಚಾರ್ಟರ್ಡ್ ಅಕೌಂಟೆಂಟ್, ಮ್ಯಾನೇಜ್‌ಮೆಂಟ್ ಪರಿಣಿತರ ರೂಪದಲ್ಲಿ, ದೇಶದ ಪ್ರತಿಭೆ ಮತ್ತು ಬೌದ್ಧಿಕತೆ ಜಾಗತಿಕ ಖಾಸಗಿ ಕಂಪನಿಗಳತ್ತ ದಾಂಗುಡಿಟ್ಟಿತು. ಅಲ್ಲಿ ಅವರಿಗೆ ವೃತ್ತಿಗೆ ತಕ್ಕ ಬೌದ್ಧಿಕ ಸವಾಲುಗಳ ಜತೆಗೇ ಕೈತುಂಬಾ ಸಂಬಳ, ಸೌಲತ್ತುಗಳೂ ದೊರಕೊಂಡಿತು. ಎರಡನೆ ದರ್ಜೆ ಪ್ರತಿಭೆ ಮಾತ್ರಾ ಸರಕಾರೀ ಉದ್ಯೋಗದತ್ತ ಮುಖಮಾಡಿತು. ಇದು ರಾಜಕೀಯದ ದುಷ್ಪ್ರಾಭಾವದೆದುರು ಮಂಕಾದದ್ದಷ್ಟೇ ಅಲ್ಲದೆ, ಸ್ವಯಂ ದಬ್ಬಾಳಿಕೆ ಮತ್ತು ದುರಾಡಳಿತಕ್ಕೂ ಕಾರಣವಾಯಿತು. ಸುಸಂಸ್ಕೃತ ವ್ಯವಸ್ಥೆಯಲ್ಲಿ ಇಂತಹ ಆಡಳಿತ ಅಸ್ಯವೆನಿಸುತ್ತದೆ. ಪ್ರಸ್ತುತ ಪರೀಕ್ಷಾ ಸುಧಾರಣೆ, ಅಂತಹ ಕೊಳಕು ತೊಳೆಯುವ ಪ್ರಯತ್ನವಾಗಿದೆ. ಇನ್ನು ಮುಂದಾದರೂ ಬಹುಶಃ, ನಾವು ಸರಕಾರೀ ಕಚೇರಿಗಳಲ್ಲೂ, ಸಮಾನ್ಯ ಪ್ರಜ್ಞೆ, ಪ್ರಾಮಾಣಿಕತೆ ಮತ್ತು ಶಿಸ್ತು-ಮರ್ಯಾದೆಗಳನ್ನು ಕಾಣಬಹುದೋ, ಏನೋ?!