ಹೀಗೆ ಒಂದು ಮಧ್ಯಾಹ್ನ

ಹೀಗೆ ಒಂದು ಮಧ್ಯಾಹ್ನ

ಬೇಸಿಗೆಯ ಒಂದು ಶನಿವಾರ ಮಧ್ಯಾಹ್ನ

ಊಟಕ್ಕೆಂದು ಮನೆಗೆ ಹೊರಟ ವೇಳೆ,

ಸ್ಕೂಟರಿನ ಪೆಟ್ರೋಲು ಮುಗಿದು

ಹಸಿವೆಯ ಜೊತೆಗೇ ಸ್ಕೂಟರನ್ನೂ ತಳ್ಳುತ್ತ ಬಂದು

ಮನೆಯ ಗೇಟಿನೊಳಗೆ ನಿಲುಗಡೇ ಕೊಟ್ಟು

ಕುಕ್ಕರಿನಲ್ಲಿನ್ನೂ ಬಿಸಿ ಆರದೇ ಇದ್ದ ತರಕಾರಿ ಬೇಳೆಗಷ್ಟು

ಮಸಾಲೆ ಸುರಿದೆ, ಕುದಿಯಲಿಟ್ಟು

ಷವರ್ರಿನೆ ಕೆಳಗೆ ಬೆತ್ತಲೆ ನಿಲ್ಲುತ್ತಾನೆ.

 *****

ಹನಿಹನಿಸಿದ ಸಿಂಚನದ ಖುಷಿ

ನಖಶಿಖಾಂತ ತುಂಬಿದ ಮಸ್ತಕಾಭಿಷೇಕದ ಸುಖ

ಇಹದೆಲ್ಲ ತರಲೆ ತಾಪತ್ರಯಗಳನ್ನೆಲ್ಲ ಮರೆಸಿ

ಎರಡನೆಯ ಹೆರಿಗೆಗೆ ತವರಿಗೆ ಹೋದ ಮಡದಿ

ಫೋನು ಮಾಡದೇ ಸತಾಯಿಸಿದ್ದನ್ನೂ ಕ್ಷಮಿಸಿ

ಸ್ನಾನ ಮುಗಿಸಿ ಬಂದ ಕೂಡಲೇ ಡಯಲು ತಿರುಗಿಸಿ

ಅವಳ ಕಷ್ತದ ದಿನಗಳಲ್ಲಿ ತಾನೂ

ಅಲ್ಲಿರುವುದಾಗಿ ಮಾತು ಕೊಡುತ್ತಾನೆ.

 *****

ಬಿಸಿ ಆರದ ಸಾಂಬಾರು ಬಿಟ್ಟು

ಫ್ರಿಜ್ಜಿನಲ್ಲಿದ ಮೊಸರು ತೆಗೆದು

ಉಪದ್ರ ಕೊಡುತ್ತಿದ್ದ ಹಸಿವಿಗೆ ನೈವೇದ್ಯ ಕೊಟ್ಟು

ಮಿತಿ ಇರದ ಛಾನಲ್ಲುಗಳಲ್ಲಿ ಎಗ್ಗಿಲ್ಲದೇ ನುಗ್ಗಿ ಬರುತ್ತಿದ್ದ

ಹಸಿ ಹಸಿ ಆಲೋಚನೆಗಳನ್ನೆಲ್ಲ ಬಂದು ಮಾಡಿ

ಮಧ್ಯಾಹ್ನ ಕಾಡುವ ಸಾರಂಗದ ಚಲನೆಗಳಿಗೆ

ಸ್ಟೀರಿಯೋದ ದನೆ ಹೆಚ್ಚಿಸಿ, ಕೊಳಲಿಗೆ ಮೊರೆ ಹೋಗುತ್ತಾನೆ,

ತನ್ನೊಳಗೂ ಇರುವ ಕೃಷ್ಣನನ್ನು ತಡಕತೊಡಗುತ್ತಾನೆ.

 *****

ಮಂಪರಿನಲ್ಲಿನ್ನೇನನ್ನೋ ಕನವರಿಸುತ್ತಿದ್ದವನು

ದೂರದಲ್ಲೆಲ್ಲೋ ಭಿಕ್ಷುಕನ ಕೂಗಿಗೆ ತಳಮಳಗೊಂಡು

ಕಂಟೇನರಿನಲ್ಲಿ ಮಿಕ್ಕಿದ್ದ ಅನ್ನಕೆ ಬಳಸದ ಸಾಂಬಾರನ್ನೆಲ್ಲ ಸುರಿದು

ರಣ ರಣ ಬಿಸಿಲಲ್ಲಿ ಯಾವ ಜೀವವೂ ಕಾಣದೇ

ಪೆಟ್ರೋಲಿರದೇ ನಿಂತ ಸ್ಕೂಟರು ಕಂಡು

ದಿಕ್ಕು ತಪ್ಪಿ ಮೊದಲ ಮಗುವಿನ ನೆನಪಾದವನೇ

ಅಮ್ಮನಿಗೆ ಫೋನು ಮಾಡಿ, ತಾನೂ ಬರುವುದಾಗಿ ಹೇಳುತ್ತಾನೆ.

 * * * * * *

Rating
No votes yet

Comments