ಹೀಗೊಬ್ಬ ಪ್ರಾಮಾಣಿಕ ಬಸವರಾಜ: ವಾಚನಾಭಿರುಚಿ ಶಿಬಿರದ ಒಂದು ಘಟನೆ
ಸೆಪ್ಟೆಂಬರ್ ೨೭, ೨೦೦೫.
ಚಿತ್ರದುರ್ಗದ ಸರ್ಕಾರೀ ಕಲಾ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ.
ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ವಾಚನಾಭಿರುಚಿ ಶಿಬಿರ. ಭಾಗವಹಿಸಿದ್ದವರು ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದಿದ್ದ ಸುಮಾರು ನೂರು ಮಂದಿ ವಿದ್ಯಾರ್ಥಿಗಳು.
ನಾನು ಆ ಶಿಬಿರದ ನಿರ್ದೇಶಕನಾಗಿ ಹೋಗಿದ್ದೆ.
ಹತ್ತು ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾರ್ಥನೆ ಇತ್ಯಾದಿ. ಸುಮ್ಮನೆ ಜೇಬು ಮುಟ್ಟಿಕೊಂಡೆ. ಮೊಬೈಲು ಇರಲಿಲ್ಲ. ತಟ್ಟನೆ ಹೊಳೆಯಿತು. ಜುಬ್ಬಾದ ಸೈಡು ಜೇಬಿನಲ್ಲಿಟ್ಟುಕೊಂಡಿದ್ದ ಮೊಬೈಲು ಆಟೋದಲ್ಲಿ ಬಿದ್ದು ಹೋಗಿರಬೇಕು ಅಂತ.
ಆಟೋ ಹತ್ತಿದ್ದು ಬೆಳಗಿನ ಎಂಟು ಗಂಟೆಯ ಹೊತ್ತಿನಲ್ಲಿ. ಮೊಬೈಲು ಕಳೆದುಕೊಂಡ ಸಂಗತಿ ಗೊತ್ತಾದಾಗ ಹತ್ತುಗಂಟೆ. ಉದ್ಘಾಟನೆ ಮುಗಿದು ಚಹಾ ವಿರಾಮ ಬರುವ ಹೊತ್ತಿಗೆ ೧೧ ಗಂಟೆ.
ಮೊಬೈಲು ಕಳೆದೇ ಹೋಯಿತು ಎಂದು ಮನಸ್ಸು ಗಟ್ಟಿಮಾಡಿಕೊಂಡರೂ ಚಪಲ ತಾಳಲಾರದೆ ಗೆಳೆಯರ ಮೊಬೈಲಿನಿಂದ ನನ್ನ ಮೊಬೈಲಿಗೆ ಫೋನು ಮಾಡಿದೆ. ಕಳ್ಳನಾದರೆ ಉತ್ತರಿಸಲಾರ ಎಂದು ನನ್ನ ಮನಸ್ಸು ಹೇಳುತ್ತಿತ್ತು.
ಆಶ್ಚರ್ಯ. ಆ ಕಡೆಯಿಂದ ದನಿ ಕೇಳಿಸಿತು. "ನಾಗಭೂಷಣಸ್ವಾಮಿ ಇದ್ದಾರಾ?" ಎಂದೆ. "ಯಾರು ಅವರು?" ಆ ಕಡೆಯ ದನಿ. "ನಾನೇ ಸ್ವಾಮಿ, ನಿಮ್ಮ ಬಳಿ ಇರುವುದು ನನ್ನ ಫೋನು, ಬೆಳಗ್ಗೆ ಕಳೆಯಿತು" ಎಂದೆ. "ನೀವು ಈಗ ಎಲ್ಲಿದ್ದೀರಿ?" ಎಂಬ ಮರುಪ್ರಶ್ನೆ.
"ಸರ್ಕಾರಿ ಕಲಾ ಕಾಲೇಜಿನಲ್ಲಿ."
"ಎಷ್ಟು ಹೊತ್ತಿನವರೆಗೂ ಇರುತ್ತೀರಿ?"
"ಸಂಜೆವರೆಗೂ."
"ಸರಿ, ತಂದುಕೊಡುತ್ತೇನೆ."
ಅರ್ಧ ನಂಬಿಕೆ ಅರ್ಧ ಅಪನಂಬಿಕೆಯಿಂದ ನನ್ನ ಪಾಡಿಗೆ ನಾನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ.
ಮಧ್ಯಾಹ್ನ ೧೨.೩೦. ಚರ್ಚೆ ಸ್ವಾರಸ್ಯಕರವಾಗಿ ನಡೆಯುತ್ತಿತ್ತು.
"ಕಥೆಯಾಗಿಸಿಕೊಳ್ಳದೆ ನಾವು ಏನನ್ನೂ ಗ್ರಹಿಸಲಾರೆವು, ಅರ್ಥ ಮಾಡಿಕೊಳ್ಳಲಾರೆವು" ಎಂದು ಹೇಳುತ್ತಿದ್ದೆ. "ಬದುಕು ಎಷ್ಟು ವಿಶಾಲ, ಅಸಂಗತ, ಅತಾರ್ಕಿಕ ಎಂದರೆ ಅದಕ್ಕೆ ಅರ್ಥ, ತರ್ಕ, ಸುಸಂಗತತೆ ನೀಡುವ ಸಲುವಾಗಿಯೇ ಮನುಷ್ಯ ಕಥೆಯ ಕಲೆಯನ್ನು ಕಟ್ಟಿಕೊಂಡಿದ್ದಾನೆ" ಎಂದು ಮೈ ಮರೆತು ಹೇಳುತ್ತಿದ್ದೆ.
ಪುಸ್ತಕಪ್ರಾಧಿಕಾರದ ಅಧ್ಯಕ್ಷರು ಆಟೋ ಚಾಲಕನೊಬ್ಬನನ್ನು ಕರೆದುಕೊಂದು ಬಂದರು. "ನಿಮ್ಮ ಮೊಬೈಲು ಸಿಕ್ಕಿದೆ" ಎಂದರು.
ನನ್ನ ಮಾತನ್ನು ನಿಲ್ಲಿಸಿ ಆಟೋ ಚಾಲಕನ ಬಗ್ಗೆ ಹೇಳಿದರು. "ಈತ ಬಸವರಾಜ. ನಿಮ್ಮ ಊರಿನ ಆಟೋ ಚಾಲಕ. ಹಿಂದೆ ಇದೇ ಕಾಲೇಜಿನಲ್ಲಿ ಓದಿದವರಂತೆ. ತುಂಬ ಪ್ರಾಮಾಣಿಕರು. ಇಂದು ಬೆಳಗ್ಗೆ ಸ್ವಾಮಿಯವರ ಮೊಬೈಲು ಕಳೆದಿದ್ದು, ಇವರ ಆಟೋದಲ್ಲಿ ಸಿಕ್ಕಿದ್ದು, ತಂದುಕೊಟ್ಟಿದ್ದಾರೆ. ಇವರಿಗೆ ನಮ್ಮ ಪ್ರಾಧಿಕಾರದ ಪರವಾಗಿ ಒಂದು ಕಿರುಕಾಣಿಕೆ" ಎಂದು ಹೇಳಿ ಪುಸ್ತಕವೊಂದನ್ನು ಬಹುಮಾನವಾಗಿ ನೀಡಿದರು.
ಬಸವರಾಜ ಕಪ್ಪಗೆ ಇದ್ದ. ಎತ್ತರವಾಗಿದ್ದ. ಜೋರಾದ ಮೀಸೆ ಇತ್ತು. ನಾನು ಮೊಬೈಲು ಕರೆ ಮಾಡಿದಾಗ ಯಾರೋ ಹೆಣ್ಣುಮಕ್ಕಳ ದನಿ ಕೂಡ ಕೇಳಿತ್ತು. "ಮೊಬೈಲು ತುಂಬ ಚೆನ್ನಾಗಿದೆ ಅಲ್ಲಾ!" ಎಂದು ಉದ್ಗಾರ ಎತ್ತಿದ್ದರು. "ಯಾರೋ ಸಾವುಕಾರರದು ಆದರೆ ಹೋಯಿತು ಎಂದು ಸುಮ್ಮನಾಗುತ್ತಾರೆ, ಹುಡುಕಿಕೊಂಡು ಬಂದರೆ ಕೊಡೋಣ" ಎಂಬ ಗಂಡು ದನಿ ಕೇಳಿತ್ತು.
ಅದು ಸಿಡಿಎಂಎ ಪೋಸ್ಟ್ ಪೇಯ್ಡ್ ಮೊಬೈಲು. ನಾನು ಕಂಪ್ಲೇಂಟು ಕೊಡಬೇಕೋ? ಕಳೆದ ಮೊಬೈಲು ಸಿಕ್ಕ ವ್ಯಕ್ತಿ ಅದನ್ನು ಮಾರಲು ಹೋದಾಗ ಸಿಕ್ಕಿಬೀಳುವನೋ? ಅಥವ ...ಹೀಗೇ ಏನೇನೋ ಯೋಚನೆ ಬರುತ್ತಿತ್ತು.
ಬಸವರಾಜ ಏನೂ ಮಾತಾಡಲಿಲ್ಲ. ಅವನನ್ನು ಒಮ್ಮೆ ಅಪ್ಪಿ "ತುಂಬಾ ಥ್ಯಾಂಕ್ಸ್ ಕಣಪ್ಪಾ" ಅಂದೆ. ಇನನೇನು ಹೇಳಲಿ.
ಅದು ನಾನು ಓದಿದ್ದ ಕಾಲೇಜೂ ಹೌದು. ಚಿತ್ರದುರ್ಗ ನನ್ನ ಬಾಲ್ಯದ ನೆನಪುಗಳನ್ನೆಲ್ಲ ಆವರಿಸಿಕೊಂಡಿರುವ ಊರು. ಅಲ್ಲಿನ ಒಬ್ಬ ಆಟೋ ಚಾಲಕ ಬಸವರಾಜ ಕಳೆದ ಮೊಬೈಲು ತಂದುಕೊಟ್ಟ. ನಾನು ಆತನ ಆಟೋ ಇಳಿದ ಮೇಲೆ ಇನ್ನು ಇಬ್ಬರು ಪ್ರಯಾಣಿಕರನ್ನು ಎಲ್ಲೆಲ್ಲಿಗೋ ತಲುಪಿಸಿ, ಸೀಟು ಒರೆಸುವಾಗ ಸಂದಿಯಲ್ಲಿ ಅದು ಸಿಕ್ಕಿತ್ತಂತೆ.
ಥ್ಯಾಂಕ್ಸ್ ಎಂದೆ. ಅಲ್ಲಿದ್ದ ಪತ್ರಿಕಾ ವರದಿಗಾರರು ಅವನ ಫೋಟೋ, ಆಟೋ ವಿವರ ಇತ್ಯಾದಿ ಪಡೆದುಕೊಂಡರು. ಪೇಪರಿನಲ್ಲಿ ಬಂತೋ ಇಲ್ಲವೋ. ಪ್ರಾಮಾಣಿಕರು ಹೇಗೆ ಹೇಗೆಲ್ಲ, ಯಾವ ಯಾವ ಸಂದರ್ಭಗಳಲ್ಲೆಲ್ಲ ಎದುರಾಗುತ್ತಾರೋ ಯಾರಿಗೆ ಗೊತ್ತು. ಸತ್ಯವೆಂಬುದು ಸದಾ ಅನಿರೀಕ್ಷಿತ ಎಂಬ ಮಾತು, ಆಗುವುದನ್ನೆಲ್ಲ ನಾವು ಕಥೆ ಮಾಡಿಯೇ ಅರಿಯುತ್ತೇವೆ ಎಂಬ ಮಾತು ಎರಡ್ಕೂ ಅಂದು ನಿದರ್ಶನ ಸಿಕ್ಕಿತ್ತು.
Comments
hmm...