೧೪೨. ಲಲಿತಾ ಸಹಸ್ರನಾಮ ೬೧೧ರಿಂದ ೬೧೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೧೧ -೬೧೪
Kalātmikā कलात्मिका (611)
೬೧೧. ಕಲಾತ್ಮಿಕಾ
ದೇವಿಯು ಕಲಾ ರೂಪದಲ್ಲಿದ್ದಾಳೆ. ಕಲಾ ಎಂದರೆ ಅಂಶ ಅಥವಾ ಒಂದು ಸಂಪೂರ್ಣದ ಅಲ್ಪ ಭಾಗ. ಚಂದ್ರನಿಗೆ ಇಂತಹ ಹದಿನಾರು ಕಲೆಗಳಿದ್ದರೆ, ಸೂರ್ಯನಿಗೆ ಹನ್ನೆರಡು ಕಲೆಗಳಿವೆ ಮತ್ತು ಅಗ್ನಿಗೆ ಹತ್ತು ಕಲೆಗಳಿವೆ. ಯಾವಾಗ ಚಂದ್ರನಿಗೆ ಹದಿನಾರು ಕಲೆಗಳಿವೆ ಎಂದು ಹೇಳಲಾಗುತ್ತದೆಯೋ ಆಗ ಚಂದ್ರನು ಹದಿನಾರು ಭಾಗಗಳಿಂದ ಮಾಡಲ್ಪಟ್ಟಿದ್ದಾನೆಂದು ಅರ್ಥ. ಕೃಷ್ಣಪಕ್ಷದಲ್ಲಿ ದಿನವೊಂದಕ್ಕೆ ಚಂದ್ರನ ಒಂದೊಂದೇ ಕಲೆಯು ಕ್ಷೀಣಿಸುತ್ತಾ ಹೋಗಿ ಅದು ಹದಿನೈದನೇ ದಿವಸಕ್ಕೆ ಚಂದ್ರರಹಿತವಾಗುತ್ತದೆ ಅಥವಾ ಅಮಾವಾಸ್ಯೆಯನ್ನು ಉಂಟು ಮಾಡುತ್ತದೆ. ಅದೇ ರೀತಿ ಶುಕ್ಲ ಪಕ್ಷದಲ್ಲಿ ದಿನವೊಂದಕ್ಕೆ ಒಂದೊಂದೇ ಕಲಾವು ವೃದ್ಧಿಸುತ್ತಾ ಹೋಗಿ ಅದು ಹದಿನೈದು ಕಲಾಗಳಿರುವ ಪೂರ್ಣಚಂದ್ರನೆಡೆಗೆ ಕೊಂಡೊಯ್ಯುತ್ತದೆ. ಚಂದ್ರನಲ್ಲಿ ಅಂತರ್ಗತವಾಗಿರುವ ಲಲಿತಾಂಬಿಕೆಯು ಚಂದ್ರನ ೧೬ನೇ ಕಲಾವಾಗಿದ್ದು ಇದು ಕ್ಷಯ ಅಥವಾ ವೃದ್ಧಿಯನ್ನು ಹೊಂದುವುದಿಲ್ಲ. ಪರಬ್ರಹ್ಮವು ಯಾವುದೇ ವಿಧವಾದ ಮಾರ್ಪಾಟನ್ನು ಹೊಂದುವುದಿಲ್ಲ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಈ ನಾಮವು ದೇವಿಯು ಒಂದು ವಸ್ತುವಿನ ಸೂಕ್ಷ್ಮಾತಿಸೂಕ್ಷ್ಮ ಭಾಗದಲ್ಲಿಯೂ ಇರುತ್ತಾಳೆನ್ನುವುದನನ್ನು ತಿಳಿಸುತ್ತಾ ಅದು ಪರಬ್ರಹ್ಮದ ಸರ್ವಾಂತರ್ಯಾಮಿತ್ವವನ್ನು ದೃಢಪಡಿಸುತ್ತದೆ. ಇಲ್ಲಿ ಚಂದ್ರ, ಸೂರ್ಯ ಮತ್ತು ಅಗ್ನಿ ಇವುಗಳನ್ನು ತೆಗೆದುಕೊಳ್ಳಲಾಗಿದೆ, ಏಕೆಂದರೆ ಅವುಗಳ ಪ್ರಜ್ವಲಿಸುವ ಗುಣಗಳಿಂದಾಗಿ. ಅವುಗಳು ಸ್ವಯಂಪ್ರಕಾಶಕಗಳಲ್ಲ, ಆದರೆ ಅವು ಕೇವಲ ಪರಬ್ರಹ್ಮದ ಕಿರಣಗಳನ್ನು ಪ್ರತಿಫಲಿಸುತ್ತವೆ. ಪ್ರಜ್ಞೆಗೆ ನಾಲ್ಕು ಹಂತಗಳಿವೆ. ಅವುಗಳೆಂದರೆ ಜಾಗ್ರತ್, ಸ್ವಪ್ನ, ಸುಷುಪ್ತಿ ಮತ್ತು ತುರ್ಯಾವಸ್ಥೆಗಳಾಗಿವೆ. ಈ ಪ್ರತಿಯೊಂದು ಹಂತವೂ ನಾಲ್ಕರಂತೆ ಕಲಾಗಳನ್ನು ಹೊಂದಿ ಈ ಪ್ರಜ್ಞೆಯು ಒಟ್ಟು ಹದಿನಾರು ಕಲಾಗಳನ್ನು ಹೊಂದಿದೆ. ಜಾಗ್ರದವಸ್ಥೆಯು ಲಲಿತಾಂಬಿಕೆಯ ಸ್ವರೂಪದಲ್ಲಿರುವುದಾಗಿ ಹೇಳಲಾಗುತ್ತದೆ. ಈ ಜಾಗ್ರತ್ ಅವಸ್ಥೆಯ ನಾಲ್ಕು ಭಾಗಗಳು ಏಳುವುದು, ಎಚ್ಚರಗೊಳ್ಳುವುದು, ಸ್ಪೃಹೆಯಿಂದಿರುವುದು ಮತ್ತು ಮಾನಸಿಕವಾಗಿ ಕಾರ್ಯ ತತ್ಪರವಾಗಿರುವುದು.
ನಾಮ ೨೩೬ರಲ್ಲಿ ೬೪ ಕಲೆಗಳ ಕುರಿತಾದ ಉಲ್ಲೇಖವಿದೆ. ಅಲ್ಲಿ ಕಲೆಯನ್ನು ಸಾಮಾನ್ಯ ಅರ್ಥವಾದ ಕೌಶಲ್ಯವೆನ್ನುವ ಅರ್ಥದಲ್ಲಿ ಬಳಸಲಾಗಿದೆ. ಅಂತಹ ಹಲವು ವಿಧವಾದ ಕಲೆಗಳ ಕುರಿತಾದ ಉಲ್ಲೇಖಗಳು ನಮಗೆ ವಿವಿಧ ಗ್ರಂಥಗಳಲ್ಲಿ ದೊರೆಯುತ್ತವೆ.
Kalānāthā कलानाथा (612)
೬೧೨. ಕಲಾನಾಥಾ
ಮೇಲೆ ತಿಳಿಸಿರುವಂತೆ ದೇವಿಯು ಕಲೆಗಳನ್ನು ಪರಿಪಾಲಿಸುವವಳು. ಸ್ಥೂಲವನ್ನು ಉತ್ಪಾದಿಸುವ ಎಲ್ಲಾ ಸೂಕ್ಷ್ಮ ವಿಷಯಗಳು ದೇವಿಯ ಆಧೀನಕ್ಕೊಳಪಟ್ಟಿವೆ. ಆದ್ದರಿಂದ ಆಕೆಯನ್ನು ಕಲೆಗಳ ಅಧಿನಾಯಕಿ ಎಂದು ಕರೆಯಲಾಗಿದೆ.
ಚಂದ್ರನ ಕಲೆಗಳ ಮುಖ್ಯಸ್ಥನು ಕಲಾನಾಥ ಎಂದು ಕರೆಯಲ್ಪಡುತ್ತಾನೆ, ಅದು ಚಂದ್ರನ ಭಾಗಗಳ (ಅಂಶಗಳ) ಒಡೆಯನೆನ್ನುವ ಅರ್ಥವನ್ನೂ ಕೊಡುತ್ತದೆ. ಚಂದ್ರನ ಚಪ್ಪಟೆಯಾದ ಭಾಗವನ್ನು ಶ್ರೀ ಚಕ್ರಕ್ಕೆ ಹೋಲಿಸಲಾಗಿದೆ. ದೇವಿಯು ಶ್ರೀ ಚಕ್ರದಲ್ಲಿ ನಿವಸಿಸುವುದರಿಂದ ಆಕೆಯನ್ನು ಕಲಾನಾಥಾ ಎಂದು ಕರೆಯಲಾಗಿದೆ.
Kāvyālāpa-vinodinī काव्यालाप-विनोदिनी (613)
೬೧೩. ಕಾವ್ಯಾಲಾಪ-ವಿನೋದಿನೀ
ಕಾವ್ಯಗಳೆಂದರೆ ಮಹಾನ್ ಕೃತಿಗಳು. ಈ ಮಹಾನ್ ಗ್ರಂಥಗಳಿಗೆ ಹದಿನೆಂಟು ವಿಧವಾದ ಲಕ್ಷಣಗಳಿವೆ. ಮಹರ್ಷಿ ವಾಲ್ಮೀಕಿಯಿಂದ ರಚಿಸಲ್ಪಟ್ಟ ರಾಮಾಯಣವು ಎಲ್ಲಾ ಹದಿನೆಂಟು ಲಕ್ಷಣಗಳನ್ನು ಹೊಂದಿದ್ದು ಅದು ಗ್ರಂಥಗಳಲ್ಲೆಲ್ಲಾ ಪ್ರಥಮ ಸ್ಥಾನದಲ್ಲಿದೆ. ದೇವಿಯು ಹದಿನೆಂಟು ಲಕ್ಷಣಗಳುಳ್ಳ ಅಂತಹ ಮಹಾನ್ ಕೃತಿಗಳನ್ನು ಶ್ರವಣ ಮಾಡಿದಾಗ ಆನಂದವನ್ನು ಹೊಂದುತ್ತಾಳೆ. ಈ ಹದಿನೆಂಟು ಲಕ್ಷಣಗಳೆಂದರೆ* ಪ್ರಶಾಂತತೆ, ಕ್ರಮಬದ್ಧತತೆ, ದುರಹಂಕಾರವಿಲ್ಲದಿರುವಿಕೆ, ಪ್ರಾಮಾಣಿಕತೆ, ಸರಳತೆ, ಸತ್ಯಶೀಲತೆ, ಸಮಚಿತ್ತತೆ, ದೃಢತೆ, ಮುಜುಗರ ರಾಹಿತ್ಯತೆ, ಹೊಂದಿಕೊಳ್ಳುವಿಕೆ, ವಿನಮ್ರತೆ, ಗ್ರಾಹ್ಯತೆ, ಋಜುತ್ವ, ಘನತೆ (ಉದಾತ್ತತೆ), ಮನೋಜ್ಞತೆ, ಚಾರಿತ್ರ್ಯ, ಪುಷ್ಕಳತೆ ಮತ್ತು ಪರಿಶುದ್ಧತೆ.
ಒಬ್ಬನು ದೇವಿಯನ್ನು ಸೂಕ್ತ ರೀತಿಯಲ್ಲಿ ಪೂಜಿಸಿದರೆ ಅವನಿಗೆ ಕಾವ್ಯವನ್ನು ಹೊಸೆಯುವ ಸಾಮರ್ಥ್ಯಗಳು ಉಂಟಾಗುತ್ತವೆ. ಇವಕ್ಕೆ ಗೊತ್ತಿರುವ ಎರಡು ಪ್ರಸಿದ್ಧ ಉದಾಹರಣೆಗಳೆಂದರೆ ಶಾಕುಂತಲ, ಮಾಳವಿಕಾಗ್ನಿಮಿತ್ರ, ಮೇಘದೂತ ಮತ್ತು ರಘುವಂಶಗಳ ಕರ್ತೃವಾದ ಮಹಾಕವಿ ಕಾಳಿದಾಸ ಮತ್ತು ಮೊದಲು ಮೂಕನಾಗಿದ್ದು ಆಮೇಲೆ ಕವಿಯಾಗಿ ಮಾರ್ಪಟ್ಟು ಮೂಕ ಕವಿ ಎಂದೇ ಪ್ರಸಿದ್ಧನಾದವನು ಮತ್ತೊಬ್ಬ.
ಸೌಂದರ್ಯ ಲಹರಿಯು (ಶ್ಲೋಕ ೧೭) ಸಹ ಇದೇ ಅರ್ಥವನ್ನು ಕೊಡುತ್ತದೆ. ಯಾವಾಗ ದೇವಿಯು ಈ ಸಹಸ್ರನಾಮದ ಕೃತಿಕಾರರಾದ ಎಂಟು ವಾಕ್-ದೇವಿಗಳೊಂದಿಗೆ ಧ್ಯಾನಿಸಲ್ಪಡುತ್ತಾಳೆಯೋ (ದೇವಿ ಮತ್ತು ವಾಗ್ದೇವಿಯರನ್ನು ಒಂದೇ ಆಗಿ ಭಾವಿಸಿ ಕೈಗೊಳ್ಳುವ ಧ್ಯಾನವನ್ನು ಭೂ ಪ್ರಸ್ತಾರವೆನ್ನುತ್ತಾರೆ. ಭೂ ಪ್ರಸ್ತಾರದ ಹೆಚ್ಚಿನ ವಿವರಗಳಿಗೆ ನಾಮ ೫೭೭ನ್ನು ನೋಡಿ) ಆಗ ಒಬ್ಬನು ಕಾವ್ಯಾತ್ಮಕ ಗುಣಗಳನ್ನು ಪಡೆಯುತ್ತಾನೆ.
ನಾಮ ೭೯೮ ದೇವಿಯು ಈ ಮಹಾನ್ ಕಾವ್ಯ ಕೃತಿಗಳ ಸ್ವರೂಪದಲ್ಲಿದ್ದಾಳೆ ಎಂದು ಹೇಳುತ್ತದೆ.
Sacāmara-ramā-vāṇī-savyadakṣiṇa-sevitā सचामर-रमा-वाणी-सव्यदक्षिण-सेविता (614)
೬೧೪. ಸಚಾಮರ-ರಮಾ-ವಾಣೀ-ಸವ್ಯದಕ್ಷಿಣ-ಸೇವಿತಾ
ಲಕ್ಷ್ಮೀ ದೇವಿ (ರಮಾ) ಮತ್ತು ಸರಸ್ವತೀ ದೇವಿ (ವಾಣೀ) ಇವರುಗಳು ದೇವಿಯ ಪಕ್ಕದಲ್ಲಿ ನಿಂತು ಆಕೆಗೆ ಚಾಮರವನ್ನು ಬೀಸುತ್ತಾರೆ. ಈ ನಾಮವು ಯಾರು ದೇವಿಯನ್ನು ಧ್ಯಾನಿಸುತ್ತಾರೆಯೋ ಅವರು ಐಶ್ವರ್ಯ ಮತ್ತು ಬುದ್ಧಿವಂತಿಕೆಯನ್ನು (ಮೇಧಾ ಶಕ್ತಿಯನ್ನು) ಬೇಡದೇ ಇದ್ದರೂ ಸಹ ಪಡೆಯುತ್ತಾರೆ ಎಂದು ಸೂಚಿಸುತ್ತದೆ. ಇದೇ ತತ್ವವು ಸೌಂದರ್ಯ ಲಹರಿಯ ೯೯ನೇ ಶ್ಲೋಕದಲ್ಲಿ ಮತ್ತು ಲಲಿತಾ ತ್ರಿಶತಿಯ ೬೩ನೇ ಮತ್ತು ೧೯೪ನೇ ನಾಮಗಳಲ್ಲಿ ಚರ್ಚಿಸಲ್ಪಟ್ಟಿದೆ.
_________________________________________________________________________________________________________________________________________________________________________
* ಮೂಲ ಲೇಖಕರು ಕೊಟ್ಟಿರುವ ಪಟ್ಟಿಯು ಹೀಗಿದೆ: The eighteen qualities are serenity, regularity, absence of vanity, sincerity, simplicity, veracity, equanimity, fixity, non-irritability, adaptability, humility, tenacity, integrity, nobility, magnanimity, charity, generosity and purity.) ಇದರ ಸ್ಥೂಲ ಅನುವಾದವನ್ನೇ ನಾನು ಲೇಖನದಲ್ಲಿ ಕೊಟ್ಟಿರುವುದು.
ಆದರೆ ಕಣಜದಲ್ಲಿ ಡಾ. ಜಿ. ಎಸ್. ಶಿವರುದ್ರಪ್ಪನವರು ಪಟ್ಟಿ ಮಾಡಿರುವುದು ಹೀಗಿದೆ: “ನಗರ, ಅರ್ಣವ, ಶೈಲ, ಋತು, ಚಂದ್ರೋದಯ, ಸೂರ್ಯೋದಯ, ವನವಿಹಾರ, ಜಲಕ್ರೀಡೆ, ಮಧುಪಾನ ವಿನೋದ, ಸುರತೋತ್ಸವ, ವಿಯೋಗ, ವಿವಾಹ, ಕುಮಾರಜನನ, ಮಂತ್ರಾಲೋಚನೆ, ದೂತಕಾರ್ಯ, ವಿಜಯಯಾತ್ರೆ, ಯುದ್ಧ, ನಾಯಕನ ವಿಜಯ” ಮಹಾಕಾವ್ಯದ ಹದಿನೆಂಟು ಲಕ್ಷಣಗಳು. ಒಂದಕ್ಕೊಂದು ತಾಳೆಯಾಗುವುದಿಲ್ಲ; ಆದ್ದರಿಂದ ಇದರ ಬಗೆಗೆ ಸಂಪದಿಗರು ಸೂಕ್ತ ಮಾಹಿತಿಯನ್ನು ಒದಗಿಸುತ್ತಾರೆಂದು ಆಶಿಸುತ್ತೇನೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 611 - 614http://www.manblunder.com/2010/02/lalitha-sahasranamam-611-614.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೪೨. ಲಲಿತಾ ಸಹಸ್ರನಾಮ ೬೧೧ರಿಂದ ೬೧೪ನೇ ನಾಮಗಳ ವಿವರಣೆ
ಶ್ರೀಧರರೆ, "೧೪೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)
.
.
ಲಲಿತಾ ಸಹಸ್ರನಾಮ ೬೧೧ -೬೧೪
__________________________
.
೬೧೧. ಕಲಾತ್ಮಿಕಾ
ಪೂರ್ಣತೆಯ ಭಾಗಾಂಶ ಕಲಾ, ಷೋಡಶ ಕಲಾಧರ ಚಂದ್ರ
ದ್ವಾದಶಕಲಾಸೂರ್ಯ, ಅಗ್ನಿ ದಶಕಲಾರ್ಯ ಕಲಾ ಲಾಂದ್ರ
ಕೃಷ್ಣಪಕ್ಷ ದಿನೆದಿನೆ ಕ್ಷೀಣ ಅಮಾವಾಸ್ಯೆ, ಶುಕ್ಲಪಕ್ಷ ತಂಬೆಳಕ
ವೃದ್ಧಿ ಕ್ಷಯವಿರದೆ ಚಂದ್ರನಲಿಹ ಷೋಡಶಕಲಾ, ಕಲಾತ್ಮಿಕ ||
.
ಸರ್ವಾಂತರ್ಯಾಮಿ ಪರಬ್ರಹ್ಮ ರೀತಿ, ಮಾರ್ಪಾಟಿಲ್ಲದಾ ಮರ್ಮ
ಪ್ರಜ್ವಲಿಪ ಚಂದ್ರಸೂರ್ಯಾಗ್ನಿ, ಪ್ರತಿಫಲಿಸಿ ಸ್ವಯಂಪ್ರಕಾಶಿ ಬ್ರಹ್ಮ
ಚತುರ್ಪ್ರಜ್ಞಾಹಂತ ಪ್ರತಿ ಚತುರ್ಕಲಾ, ಲೆಕ್ಕ ಪ್ರಜ್ಞೆಯಲಿ ಹದಿನಾರ
ಜಾಗ್ರತ್ದೇವಿ ಏಳು-ಎಚ್ಚರಗೊಳ್ಳು-ಸ್ಪೃಹೆಯಿರು-ಮನ ಕಾರ್ಯತತ್ಪರ ||
.
೬೧೨. ಕಲಾನಾಥಾ
ಚಂದ್ರನ ಕಲೆ ಹದಿನಾರು, ಅಂಶಗಳೊಡೆಯ ಮುಖ್ಯಸ್ಥ ಕಲಾನಾಥ
ಚಪ್ಪಟೆ ಚಂದ್ರಭಾಗ ಶ್ರೀ ಚಕ್ರ, ಕಲಾನಾಥಾ ರೂಪಿ ಲಲಿತ ನಿವಸಿತ
ಕಲೆಗಳಧಿನಾಯಕಿ ದೇವಿ, ಸ್ಥೂಲೋತ್ಪಾದನೆಯೆಲ್ಲ ಸೂಕ್ಷ್ಮ ವಿಷಯ
ಲಲಿತೆಯಧಿನಾಯಕಿ, ದೇವಿ ಕಲೆಗಳ ಪರಿಪಾಲಿಸುವಳು ಸಕ್ರೀಯ ||
.
೬೧೩. ಕಾವ್ಯಾಲಾಪ-ವಿನೋದಿನೀ
ಕಾವ್ಯಗಳೆನೆ ಮಹಾನ್ ಕೃತಿಗಳು, ಗ್ರಂಥ ಲಕ್ಷಣಗಳು ಹದಿನೆಂಟು
ಅದರ ಶ್ರವಣದೆ ದೇವಿಗಾನಂದ, ಮೈ ಮರೆತು ಆಸ್ವದಿಸುವ ಗುಟ್ಟು
ಕಾವ್ಯ ಹೊಸೆವ ಶಕ್ತಿಗೆ ಸೂಕ್ತ ಪೂಜಿಸೆ, ಮೂಕಕವಿ ಕಾಳಿದಾಸರಂತೆ
ವಾಗ್ದೇವಿ-ಲಲಿತೆ ಭೂಪ್ರಸ್ತಾರ ಧ್ಯಾನದೆ, ಕಾವ್ಯಾತ್ಮಕಗುಣ ಗಳಿಸುತೆ ||
.
ಹದಿನೆಂಟು ಮಹಾನ್ ಲಕ್ಷಣಗಳಲಿ ಪ್ರೀತಿ ಕಾವ್ಯಾಲಾಪ ವಿನೋದಿನೀ
ಪ್ರಶಾಂತತೆ-ಕ್ರಮಬದ್ದತೆ-ದುರಂಕಾರರರಾಹಿತ್ಯ-ಪ್ರಾಮಾಣಿಕತೆಗೆ ದನಿ
ಸರಳ-ಸತ್ಯಶೀಲ-ಸಮಚಿತ್ತ-ದೃಢ-ಮುಜುಗರರಾಹಿತ್ಯ-ಹೊಂದಿಕೆ ಬದ್ದ
ವಿನಮ್ರ-ಗ್ರಾಹ್ಯ-ಋಜುತ್ವ-ಘನತೆ-ಮನೋಜ್ಞ-ಚಾರಿತ್ರ್ಯ-ಪುಷಳ-ಪರಿಶುದ್ದ ||
.
೬೧೪. ಸಚಾಮರ-ರಮಾ-ವಾಣೀ-ಸವ್ಯದಕ್ಷಿಣ-ಸೇವಿತಾ
ಲಲಿತಾ ದರ್ಬಾರಿನ ವೈಭವ, ದೇವದೇವಿಯೋಗಿನಿಯರೆಲ್ಲ ಸ್ತುತಿಸುತ
ರಮಾ-ವಾಣಿ ಲಕ್ಷ್ಮೀ-ಸರಸ್ವತಿಯರು ಪಕ್ಕದೆ, ತನ್ಮಯ ಚಾಮರಬೀಸುತ
ಎಡಬಲದಲಿಹ ಸಂಪದ-ಮೇಧಾಶಕ್ತಿ, ಬೇಡದಿದ್ದರು ಪೂಜಿಸಿರೆ ನೀಡುತ
ನಿಜ ಕೈಂಕರ್ಯಕೆ ಒಲಿವಳು ಸಚಾಮರರಮಾವಾಣೀಸವ್ಯದಕ್ಷಿಣಸೇವಿತಾ ||
.
.
- ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು