೧೪. ಲಲಿತಾ ಸಹಸ್ರನಾಮ ೨೬ರಿಂದ ೩೧ರವರೆಗಿನ ವಿವರಣೆ

೧೪. ಲಲಿತಾ ಸಹಸ್ರನಾಮ ೨೬ರಿಂದ ೩೧ರವರೆಗಿನ ವಿವರಣೆ

ಶುದ್ಧ ವಿದ್ಯಾ ಬಗ್ಗೆ ಮತ್ತಷ್ಟು ವಿಚಾರಗಳು:

         ಇದು ಶಿವನಿಂದ ಪ್ರಾರಂಭಿಸಿ ಲೆಕ್ಕ ಮಾಡಿದಾಗ ಹದಿನೈದನೆಯ ತತ್ವವಾಗಿದೆ. ಈ ತತ್ವದಲ್ಲಿ, ‘ನಾನು (ಪರಶಿವ)’ ಮತ್ತು ‘ಇದು (ಪ್ರಕೃತಿ)’ ಎನ್ನುವ ಎರಡೂ ಪ್ರಜ್ಞೆಗಳು ಸಮಾನ ಪ್ರಾಧಾನ್ಯತೆಯನ್ನು ಪಡೆದಿರುತ್ತದೆ. ಮೊಳಕೆಯೊಡೆದ ಪ್ರಪಂಚವು ಬೇರೆಯಾಗಿ ಕಂಡುಬಂದರೂ, ’ಗುರುತಿಸುವಿಕೆ’ಯು (ಪರಶಿವ ಮತ್ತು ಪ್ರಕೃತಿ ಬೇರೆ ಬೇರೆ ಎಂದು ಗುರುತಿಸುವುದು) ಅದರ ಒಳಗೆ ಇನ್ನೂ ತೆಳುವಾದ ದಾರದಂತೆ ಇರುತ್ತದೆ. ಇಲ್ಲಿ ವಿವಿಧತೆಯ ಪ್ರಾರಂಭಿಕ ಗುರುತನ್ನು ಕಾಣುತ್ತೇವೆ ಮತ್ತು ಕ್ರಿಯೆಯು ಇಲ್ಲಿ ಪ್ರಧಾನ ತತ್ವವಾಗಿದೆ. ಇಲ್ಲಿ ಪ್ರಜ್ಞೆಯ ಸ್ವರೂಪವು, ’ನಾನು’ ಹಾಗೂ ’ನಾನು ಮತ್ತು ಇದು ಕೂಡಾ’ ಸ್ಥಿತಿಯಲ್ಲಿರುತ್ತದೆ. ವಿದ್ಯಾ ತತ್ವದಲ್ಲಿ ಮೂರು ವಿಧಗಳಿದ್ದು ಅವಾವುವೆಂದರೆ - ಶುದ್ಧ ವಿದ್ಯಾ, ಸಹಜ ವಿದ್ಯಾ, ಮತ್ತು ಕಂಚುಕ ವಿದ್ಯಾ (ವಿದ್ಯಾ ಕಂಚುಕ) ಅಥವಾ ಪರಿಮಿತ ಜ್ಞಾನ.  ಇಲ್ಲಿ ಐದನೆಯ ತತ್ವವಾದ ’ಸದ್ವಿದ್ಯಾ’ ಮತ್ತು ’ಶುದ್ಧವಿದ್ಯಾ’ ಎರಡೂ ಒಂದೇ ಆಗಿವೆ, ಸಹಜವಿದ್ಯಾ ಎಂದರೆ ಸಹಜವಾದ ಜ್ಞಾನ (ತತ್ವವಲ್ಲ). ಸಹಜ ಜ್ಞಾನವು ಪರಶಿವನ ಪ್ರತ್ಯೇಕತೆಯು ಮೊಳಕೆಯೊಡೆಯುವುದನ್ನು (ಹೊರ ಹೊಮ್ಮುವುದನ್ನು) ಪ್ರತಿಪಾದಿಸುತ್ತದೆ; ಏಕೆಂದರೆ ’ಸಹಜವಿದ್ಯಾ’ವನ್ನು ಶುದ್ಧವಿದ್ಯಾ ಅಥವಾ ಅಪ್ಪಟ ಜ್ಞಾನವೆಂದು ಕರೆಯಲಾಗಿದೆ. 
         ವಿ.ಸೂ: ಮೇಲಿನ ವಿವರಣೆಯು ತ್ರೈತ ಸಿದ್ಧಾಂತ ಅಂದರೆ ಪಶು, ಪಾಶ ಮತ್ತು ಪಶುಪತಿ ಈ ಮೂರು ವಸ್ತುಗಳನ್ನು ಒಳಗೊಂಡ ಪಾಶುಪತ ಮತದ ಸಿದ್ಧಾಂತದ ಪ್ರಕಾರ ವಿವರಿಸಲಾಗಿದೆ. ಇದರ ಅಲ್ಪ-ಸ್ವಲ್ಪ ಬದಲಾವಣೆಯನ್ನು ನಾವು ಕಾಶ್ಮೀರ ಶೈವತತ್ವ ಮತ್ತು ತಮಿಳು ಶೈವಸಿದ್ಧಾಂತದಲ್ಲಿ ಕಾಣಬಹುದು. 
*******

ಲಲಿತಾ ಸಹಸ್ರನಾಮ ೨೬ರಿಂದ ೩೧

Karpūravīṭikāmodha-samākarṣi-digantarā कर्पूरवीटिकामोध-समाकर्षि-दिगन्तरा (26)

೨೬.ಕರ್ಪೂರವೀಟಿಕಾಮೋಧ-ಸಮಾಕರ್ಷಿ-ದಿಗಂತರಾ

          ’ಕರ್ಪೂರವೀಟಿಕಾ’ ಎನ್ನುವುದು ಹಲವಾರು ಸುವಾಸನಾಯುಕ್ತ ವಸ್ತುಗಳನ್ನು ಸೇರಿಸಿ ತಯಾರಿಸಿದ ಒಂದು ಪದಾರ್ಥ, ಇದನ್ನು ವೀಳೆ ಎಲೆಯ ತಾಂಬೂಲದಲ್ಲಿ ಸೇವಿಸುತ್ತಾರೆ. ಇದರಲ್ಲಿ ಉಪಯೋಗಿಸುವ ವಸ್ತುಗಳೆಂದರೆ, ಕೇಸರಿ, ಏಲಕ್ಕಿ, ಲವಂಗ, ಕರ್ಪೂರ, ಕಸ್ತೂರಿ, ಜಾಪತ್ರೆ ಮತ್ತು ಜಾಕಾಯಿ. ಈ ಮೂಲ ಸಾಮಗ್ರಿಗಳನ್ನು ಚೆನ್ನಾಗಿ ಪುಡಿಮಾಡಿ ಅವುಗಳನ್ನು ಪುಡಿಮಾಡಿದ ಕಲ್ಲುಸಕ್ಕರೆಯೊಂದಿಗೆ ಬೆರೆಸುತ್ತಾರೆ. ಈ ಕರ್ಪೂರವೀಟಿಕದ ಪುಡಿಯನ್ನು ವೀಳೆದೆಲೆಯೊಂದಿಗೆ ಅಗಿದಾಗ ಅದು ಸುಗಂಧದಿಂದ ಕೂಡಿದ ಪರಿಮಳವನ್ನು ಬೀರುವುದಲ್ಲದೆ ಬಹಳಷ್ಟು ಸವಿರುಚಿಯನ್ನು ಹೊಂದಿರುತ್ತದೆ. ದೇವಿಯು ಕರ್ಪೂರವೀಟಿಕಾವನ್ನು ಅಗಿದಾಗ ಅದು ಇಡೀ ಪ್ರಪಂಚಕ್ಕೆ ಸುಗಂಧವನ್ನು ಬೀರುತ್ತದೆ. (ಹೆಚ್ಚಿನ ವಿವರಗಳನ್ನು ೫೯೯ನೇ ನಾಮದ ಚರ್ಚೆಯಲ್ಲಿ ನೋಡೋಣ). ’ಲಲಿತಾ ತ್ರಿಶತಿ’ಯ (’ಪಂಚದಶೀ’ ಮಂತ್ರದ ಆಧಾರದ ಮೇಲೆ ರಚಿಸಿದ ೩೦೦ ನಾಮಾವಳಿಗಳು) ೧೪ನೇ ನಾಮವು ಕೂಡಾ ಇದೇ ಅರ್ಥವನ್ನು ಹೊಮ್ಮಿಸುತ್ತದೆ. ಬಹುಶಃ ದೇವಿಯು ಅಮಾಯಕರನ್ನು ಈ ಸುಗಂಧ ದ್ರವ್ಯದ ಪರಿಮಳದಿಂದ ತನ್ನೆಡೆಗೆ ಆಕರ್ಷಿಸುತ್ತಾಳೆ ಎನ್ನುವುದು ಇದರ ಅರ್ಥವಾಗಿರಬಹುದು. ಜ್ಞಾನಿಗಳು ಭಕ್ತಿಯ ಮೂಲಕ ಅವಳನ್ನು ಸಮೀಪಿಸಬಹುದು ಆದರೆ ಅಮಾಯಕರು ಅಥವಾ ಅಜ್ಞಾನಿಗಳಿಗೆ ಅವಳ ಕೃಪೆಯನ್ನು ಹೊಂದಲು ಉತ್ತೇಜನ ನೀಡುವ ವಸ್ತುವಿನ ಅವಶ್ಯಕಯಿದೆ. ಈ ರೀತಿ ಉತ್ತೇಜನವನ್ನೀಯುವ ವಸ್ತುವು ಆ ಸುಗಂಧಭರಿತ ಪರಿಮಳವಾಗಿದೆ.

Nija-sallāpa-mādurya-vinirbhartsita-kacchpī निज-सल्लाप-मादुर्य-विनिर्भर्त्सित-कच्छ्पी (27)

೨೭.ನಿಜ-ಸಲ್ಲಾಪ-ಮಾಧುರ್ಯ-ವಿನಿರ್ಭರ್ತ್ಸಿತ-ಕಚ್ಛಪೀ

          ಸರಸ್ವತಿಯ ವೀಣೆಗೆ ’ಕಚ್ಛಪೀ’ ಎಂದು ಹೆಸರು. ಕಲೆಗಳ ಅಧಿದೇವತೆಯಾದ ಸರಸ್ವತೀ ದೇವಿಯ ಕೈಯ್ಯಲ್ಲಿ ಅದರಿಂದ  ಅಮೋಘವಾದ ಸುಶ್ರಾವ್ಯವು ಹೊಮ್ಮುತ್ತದೆ. ಆದರೆ ಲಲಿತಾದೇವಿಯ ಸ್ವರವು ಕಚ್ಛಪೀ ವೀಣೆಯ ಧ್ವನಿಗಿಂತ ಮಧುರವಾಗಿದೆ.

         ಸೌಂದರ್ಯ ಲಹರಿಯ ೬೬ನೇ ಶ್ಲೋಕವು, "ವಾಣಿಯು(ಸರಸ್ವತಿಯು) ಶಿವನ ವಿವಿಧ ಮಹಿಮಾನ್ವಿತವಾದ ಲೀಲೆಗಳನ್ನು ತನ್ನ ವೀಣೆಯಿಂದ ನುಡಿಸುತ್ತಿದ್ದರೆ; ಅದಕ್ಕೆ ನೀನು ತಲೆಯಾಡಿಸುತ್ತಾ ಮೆಚ್ಚುಗೆಯ ನುಡಿಗಳನ್ನು ಉಲಿದಾಕ್ಷಣ ಸರಸ್ವತಿಯು ತನ್ನ ವೀಣೆಯನ್ನು ಅದರ ಪೆಟ್ಟಿಗೆಯೊಳಗಿಟ್ಟು ಮುಚ್ಚಿಡುತ್ತಾಳೆ. ವೀಣೆಯ ತಂತಿಯ ಮಧುರ ಝೇಂಕಾರವನ್ನು ನಿನ್ನ ಮೃದು ಮತ್ತು ಇಂಪಾದ ಮೆಚ್ಚುಗೆಯ ನುಡಿಗಳು ಅಣಕಿಸುತ್ತವೆ" ಎಂದು ಹೇಳುತ್ತದೆ.

         ಹಿಂದಿನ  ನಾಮಕ್ಕೆ ಕೊಟ್ಟ ವಿವರಣೆಯನ್ನೇ ಇಲ್ಲಿಯೂ ಕೊಡಬಹುದು; ತನ್ನ ಇಂಪಾದ ಧ್ವನಿಯಿಂದ ದೇವಿಯು ಅಜ್ಞಾನಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಾಳೆ. 

Mandasmita-prabhāpūra-majjatkāmeśa-mānasā मन्दस्मित-प्रभापूर-मज्जत्कामेश-मानसा (28)

೨೮. ಮಂದಸ್ಮಿತ-ಪ್ರಭಾಪೂರ-ಮಜ್ಜತ್ಕಾಮೇಶ-ಮಾನಸಾ

         ಸ್ಮಿತ ಅಂದರೆ ಕಿರುನಗೆ ಮತ್ತು ಮಂದಸ್ಮಿತವೆಂದರೆ ವಿಶೇಷ ಆಕರ್ಷಣೀಯವಾದ ನಗೆ. ಕಾಮೇಶನೆಂದರೆ ಶಿವ. ಲಲಿತಾಂಬಿಕೆಯು ಶಿವನ ಎಡತೊಡೆಯ ಮೇಲೆ ಕುಳಿತಾಗ ಅವರನ್ನು ಕಾಮೇಶ್ವರ ಮತ್ತು ಕಾಮೇಶ್ವರಿ ಎಂದು ಕರೆಯುತ್ತಾರೆ. ಈ ರೂಪವು ಅರ್ಧನಾರೀಶ್ವರ ರೂಪಕ್ಕೆ ಭಿನ್ನವಾಗಿದೆ. ಶಿವನು ಶ್ರೀಲಲಿತೆಯ ವಿಶೇಷವಾದ ಮಂದಹಾಸದಲ್ಲಿ ಮುಳುಗಿರುತ್ತಾನೆ ಎನ್ನುವುದು ಈ ನಾಮಾವಳಿಯ ಶಬ್ದಶಃ ಅರ್ಥ.

         ಕಾಮ ಎಂದರೆ ಬಿಂದು ಅಥವಾ ಚುಕ್ಕೆ. ಬಿಂದುವು ಕಾಮಕಲಾ ಬೀಜವಾದ  ’ಈಂ’(ईं)ನ ಅಂಶವೂ ಆಗಿದೆ. ಈ ಬೀಜಾಕ್ಷರದಲ್ಲಿ ಎರಡು ಬಿಂದುಗಳಿವೆ ಒಂದು ಸೂರ್ಯನ್ನು ಪ್ರತಿನಿಧಿಸಿದರೆ ಮತ್ತೊಂದು ಚಂದ್ರನನ್ನು ಪ್ರತಿನಿಧಿಸುತ್ತದೆ. ಬಿಂದುವು ಅಹಂಕಾರವನ್ನು ಕೂಡಾ ಪ್ರತಿನಿಧಿಸುತ್ತದೆ. ’ಕಾಮ’ ಮತ್ತು ’ಕಲಾ’ ಎರಡೂ ಶಬ್ದಗಳು ಆಸೆ/ಬಯಕೆ ಎನ್ನುವ ಅರ್ಥವನ್ನು ಹೊಂದಿವೆ. ಮನಸ್ಸೇ ಎಲ್ಲಾ ಆಸೆಗಳ ಮೂಲ. ಯಾವಾಗ ಸಾಕ್ಷಾತ್ ಪರಶಿವನೇ ಶ್ರೀ ಲಲಿತೆಯ ಸಮ್ಮೋಹಕ ನಗೆಯಲ್ಲಿ ಮುಳುಗಿಹೋಗಿದ್ದಾನೆಂದರೆ (ಲೀನವಾಗಿದ್ದಾನೆಂದರೆ) ಮತ್ತೇನು ಹೇಳಬೇಕು, ಅದು ಅವಳ ಹೆಚ್ಚುಗಾರಿಕೆಯನ್ನು ಕುರಿತು ಹೇಳುತ್ತದೆ.

        ದೇವಿಯು ಅಮಾಯಕ ಜನರನ್ನು ತನ್ನ ಮಂದಹಾಸದಿಂದ ಆಕರ್ಷಿಸಿ ಅವರಲ್ಲಿ ಜ್ಞಾನವನ್ನು ತುಂಬಿ  ಮುಕ್ತಿಯನ್ನು ಕರುಣಿಸುತ್ತಾಳೆ.

Anākalita-sādṛśya-cibuka-śrī-virājitā अनाकलित-सादृश्य-चिबुक-श्री-विराजिता (29)

೨೯. ಅನಾಕಲಿತ-ಸಾದೃಶ್ಯ-ಚಿಬುಕ-ಶ್ರೀ-ವಿರಾಜಿತಾ

        ದೇವಿಗೆ ಅತ್ಯಂತ ಸುಂದರವಾದ ಗದ್ದವಿದೆ. ಸೌಂದರ್ಯಲಹರಿಯ ೬೭ನೇ ಶ್ಲೋಕವು, "ನಿನ್ನ ಅಸದೃಶ ಗದ್ದವು ಶಿವನ ಮುಂಗೈಯ್ಯಿಂದ ಪದೇ ಪದೇ ಎತ್ತಿ ಹಿಡಿಯಲ್ಪಟ್ಟು, ನಿನ್ನ ಕೆಳದುಟಿಯ ಅದರಾಮೃತವನ್ನು ಸವಿಯ ಬಯಸುವ ಅವನ ಆತುರತೆಯನ್ನು ತೋರಿಸುತ್ತದೆ." ಎಂದು ಹೇಳುತ್ತದೆ.

Kāmeśa-baddha-māṅgalya-sūtra-śobhita-kandharāकामेश-बद्ध-माङ्गल्य-सूत्र-शोभित-कन्धरा (30)

೩೦. ಕಾಮೇಶ-ಬದ್ಧ-ಮಾಂಗಲ್ಯ-ಸೂತ್ರ-ಶೋಭಿತ-ಕಂಧರಾ

       ದೇವಿಯ ಕುತ್ತಿಗೆಯು ಕಾಮೇಶ್ವರನು ಕಟ್ಟಿದ ಮಾಂಗಲ್ಯ ಸೂತ್ರದಿಂದ ಅಲಂಕೃತವಾಗಿದೆ. ಸೌಂದರ್ಯ ಲಹರಿಯ ೬೯ನೇ ಶ್ಲೋಕವು ಹೀಗೆ ವರ್ಣಿಸುತ್ತದೆ, "ನಿನ್ನ ಕುತ್ತಿಗೆಯ ಮೇಲಿರುವ ಮೂರು ಗೆರೆಗಳು ಎಲ್ಲೆ(ಗಡಿ/ಅಂಚು)ಗಳಂತೆ ಹೊಳೆಯುತ್ತಾ ನಿನ್ನ ಮದುವೆಯ ಸಮಯದಲ್ಲಿ ಕಟ್ಟಿದ ಮಂಗಳ ಸೂತ್ರದ ಎಳೆಗಳ ಸಂಖ್ಯೆಯನ್ನು ಸೂಚಿಸುತ್ತವೆ; ಅದರೊಂದಿಗೆ ಸಂಗೀತದ ಪೂರ್ಣಸ್ವರಶ್ರೇಣಿಯ ಭಂಡಾರ ಅಥವಾ ವಿವಿಧ ಇಂಪಾದ ರಾಗಗಳ ಖಜಾನೆಯ ಎಲ್ಲೆಯನ್ನು ಇಲ್ಲವಾಗಿಸುತ್ತದೆ”.

       ಮಂಗಳಸೂತ್ರವನ್ನು ಕಟ್ಟುವ ಪದ್ಧತಿಯು ವೇದಗಳಲ್ಲಿ ಚರ್ಚಿತವಾಗದ ಕಾರಣ ಈ ಪದ್ಧತಿಯು ಕಾಲಾನಂತರದಲ್ಲಿ ಸೇರ್ಪಡೆಯಾಗಿರಬಹುದು. ಸಾಮುದ್ರಿಕ ಶಾಸ್ತ್ರ(ದೇಹ ರಚನೆಯನ್ನು ವಿಶ್ಲೇಷಿಸುವ ಶಾಸ್ತ್ರ)ದ  ಪ್ರಕಾರ ಮೂರು ಸೂಕ್ಷ್ಮ ಗೆರೆಗಳನ್ನು ಹಣೆ, ಕಣ್ಣುಗಳು ಅಥವಾ ಸೊಂಟದ ಮೇಲೆ ಹೊಂದಿರುವುದು ಸಮೃದ್ಧಿಯ ಸಂಕೇತವಾಗಿದೆ.

Kanakāṅgada-keyūra-kamanīya-bhujanvitā कनकाङ्गद-केयूर-कमनीय-भुजन्विता (31)

೩೧. ಕನಕಾಂಗದ-ಕೇಯೂರ-ಕಮನೀಯ-ಭುಜಾನ್ವಿತ

        ಕನಕ-ಬಂಗಾರದ; ಅಂಗದ – ಬಳೆ ಅಥವಾ ಕಡಗ; ಕೇಯೂರ-ತೋಳುಗಳಲ್ಲಿ ಧರಿಸುವ ಒಂದು ವಿಧವಾದ ಆಭರಣ. ದೇವಿಯು ಬಂಗಾರದ ಬಳೆ ಮತ್ತು ಕೇಯೂರಗಳನ್ನು ಧರಿಸಿದ್ದಾಳೆ. ಬಹುಶಃ ಅದು ಈ ಕೆಳಗಿನದನ್ನು ಸೂಚಿಸಬಹುದು. ಇವೆರಡೂ ಆಭರಣಗಳು ಬಂಗಾರದಿಂದ ಮಾಡಲ್ಪಟ್ಟು ಕೈಗಳಲ್ಲಿ ಧರಿಸಲ್ಪಡುತ್ತವೆ; ಅವು ಮೇಲ್ನೋಟಕ್ಕೆ ವಿವಿಧ ಆಕಾರಗಳನ್ನು ಹೊಂದಿದ್ದರೂ ಕೂಡಾ ಅವುಗಳ ಅಂತಃಸತ್ವವು ಒಂದೇ ವಸ್ತುವಿನಿಂದ (ಬಂಗಾರದಿಂದ) ಮಾಡಲ್ಪಟ್ಟಿದೆ. ಜೀವಿಗಳ ಆಕಾರವು ವಿವಿಧ ರೀತಿಯದಾಗಿದ್ದರೂ ಕೂಡಾ ಅವೆಲ್ಲವುಗಳಲ್ಲಿ ಅಂತರ್ಗತವಾಗಿರುವ ಪರಬ್ರಹ್ಮವು ಒಂದೇ ಆಗಿದೆ. 

*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 26-31 http://www.manblunder.com/2009/07/lalitha-sahasranamam-26-31.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (2 votes)

Comments

Submitted by makara Fri, 05/03/2013 - 21:14

ಶುದ್ಧ ವಿದ್ಯಾ ಬಗ್ಗೆ ಮತ್ತಷ್ಟು ವಿಚಾರಗಳು:

ಇದು ಶಿವನಿಂದ ಪ್ರಾರಂಭಿಸಿ ಲೆಕ್ಕ ಮಾಡಿದಾಗ ಹದಿನೈದನೆಯ ತತ್ವವಾಗಿದೆ - ತಪ್ಪು;
ಇದು ಶಿವನಿಂದ ಪ್ರಾರಂಭಿಸಿ ಲೆಕ್ಕ ಮಾಡಿದಾಗ ಐದನೆಯ ತತ್ವವಾಗಿದೆ - ಒಪ್ಪು

Submitted by rasikathe Fri, 05/03/2013 - 23:19

ನಮಸ್ಕಾರ‌, ನಾನು ಅಗ್ಗಾಗ್ಗೆ ಲಲಿತಾ ಸಹಸ್ರನಾಮ‌ ಕೇಳುತ್ತೇನೆ. ನಿಮ್ಮ‌ ಬರಹಕ್ಕೆ ಧನ್ಯವಾದಗಳು!. ನಾನು ಇದನ್ನು ನಿಧಾನವಾಗಿ ಓದಿ ಸವಿಯಬೇಕು ಸಮಯವಿದ್ದಾಗ‌. ಲೀಷರ್ ಟೈಮ್ ಗೆ ಒಳ್ಳೆಯ‌ ಓದು ಲೇಖನ‌. ಚೆನ್ನಾಗಿದೆ. ಯಾರು ಭಾವರ್ಥ‌ ಮಾಡಿರುವುದು? ನೀವೇನಾ/ ಆಧಾರಿತ‌? ಒಳ್ಳೆಯ‌ ಲೇಖನಕ್ಕೆ ಧನ್ಯವಾದಗಳು!
ಮೀನಾ

Submitted by makara Sat, 05/04/2013 - 07:46

In reply to by rasikathe

ನಿಮ್ಮ ತುಂಬು ಹೃದಯದ ಮೆಚ್ಚುಗೆಗೆ ಧನ್ಯವಾದಗಳು ಡಾ! ಮೀನಾ ಅವರೆ. ನಾನು ಕೇವಲ ಈ ಸರಣಿಯ ಅನುವಾದಕನಷ್ಟೇ. ಇದರ ಮೂಲ ಲೇಖಕರು ಶ್ರೀಯುತ ವಿ. ರವಿ, ಚನ್ನೈ. ಈ ಲೇಖನದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ರಚಿಸಿರುವ LALITHA SAHASRANAMA - A Comprehensive Treatise ಎನ್ನುವುದು ಈ ಸರಣಿಗೆ ಆಧಾರ ಗ್ರಂಥವಾಗಿದೆ. ಇದನ್ನು ಅವರು ಹಲವಾರು ಕಂತುಗಳಲ್ಲಿ ತಮ್ಮ ಸ್ವಂತ ಬ್ಲಾಗ್ Manblunder.comನಲ್ಲಿಯೂ ಪ್ರಕಟಿಸಿದ್ದಾರೆ. ಇದನ್ನೇ ನಾನು ಲೇಖನದ ಕಡೆಯಲ್ಲಿ ವಿ.ಸೂ.: ಅಡಿಯಲ್ಲಿ ಉಲ್ಲೇಖಿಸುತ್ತಿದ್ದೇನೆ. ಅದನ್ನು ಹಿಡಿದು ಹೊರಟರೆ ನೀವು ಹಿಂದೂ ಧರ್ಮದ ವಿಶ್ವಕೋಶಕ್ಕೇ ಲಗ್ಗೆ ಇಡಬಹುದು. ಶ್ರೀಯುತ ವಿ. ರವಿಯವರು ನಾನು ಇದನ್ನು ಅನುವಾದಿಸಲು ಅಪ್ಪಣೆ ಕೇಳಿದಾಗ ತಕ್ಷಣವೇ ಪ್ರತಿಕ್ರಿಯಿಸುವುದಲ್ಲದೇ ತಮ್ಮ ಸ್ವಂತ ಖರ್ಚಿನಿಂದ LALITHA SAHASRANAMA - A Comprehensive Treatise ಪುಸ್ತಕವನ್ನು ಮತ್ತು ಶಿವ-ಶಕ್ತಿಯರ ಐಕ್ಯರೂಪದ ಪಟವನ್ನೂ ಕಳುಹಿಸಿ ಕೊಟ್ಟಿರುತ್ತಾರೆ. ಎಲ್ಲರಿಗೂ ಆಧ್ಯಾತ್ಮ ದಾನ ಮಾಡುತ್ತಿರುವ ಅಂತಹವರ ಸಂತತಿ ಸಾಸಿರವಾಗಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Sat, 05/04/2013 - 07:46

In reply to by rasikathe

ನಿಮ್ಮ ತುಂಬು ಹೃದಯದ ಮೆಚ್ಚುಗೆಗೆ ಧನ್ಯವಾದಗಳು ಡಾ! ಮೀನಾ ಅವರೆ. ನಾನು ಕೇವಲ ಈ ಸರಣಿಯ ಅನುವಾದಕನಷ್ಟೇ. ಇದರ ಮೂಲ ಲೇಖಕರು ಶ್ರೀಯುತ ವಿ. ರವಿ, ಚನ್ನೈ. ಈ ಲೇಖನದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ರಚಿಸಿರುವ LALITHA SAHASRANAMA - A Comprehensive Treatise ಎನ್ನುವುದು ಈ ಸರಣಿಗೆ ಆಧಾರ ಗ್ರಂಥವಾಗಿದೆ. ಇದನ್ನು ಅವರು ಹಲವಾರು ಕಂತುಗಳಲ್ಲಿ ತಮ್ಮ ಸ್ವಂತ ಬ್ಲಾಗ್ Manblunder.comನಲ್ಲಿಯೂ ಪ್ರಕಟಿಸಿದ್ದಾರೆ. ಇದನ್ನೇ ನಾನು ಲೇಖನದ ಕಡೆಯಲ್ಲಿ ವಿ.ಸೂ.: ಅಡಿಯಲ್ಲಿ ಉಲ್ಲೇಖಿಸುತ್ತಿದ್ದೇನೆ. ಅದನ್ನು ಹಿಡಿದು ಹೊರಟರೆ ನೀವು ಹಿಂದೂ ಧರ್ಮದ ವಿಶ್ವಕೋಶಕ್ಕೇ ಲಗ್ಗೆ ಇಡಬಹುದು. ಶ್ರೀಯುತ ವಿ. ರವಿಯವರು ನಾನು ಇದನ್ನು ಅನುವಾದಿಸಲು ಅಪ್ಪಣೆ ಕೇಳಿದಾಗ ತಕ್ಷಣವೇ ಪ್ರತಿಕ್ರಿಯಿಸುವುದಲ್ಲದೇ ತಮ್ಮ ಸ್ವಂತ ಖರ್ಚಿನಿಂದ LALITHA SAHASRANAMA - A Comprehensive Treatise ಪುಸ್ತಕವನ್ನು ಮತ್ತು ಶಿವ-ಶಕ್ತಿಯರ ಐಕ್ಯರೂಪದ ಪಟವನ್ನೂ ಕಳುಹಿಸಿ ಕೊಟ್ಟಿರುತ್ತಾರೆ. ಎಲ್ಲರಿಗೂ ಆಧ್ಯಾತ್ಮ ದಾನ ಮಾಡುತ್ತಿರುವ ಅಂತಹವರ ಸಂತತಿ ಸಾಸಿರವಾಗಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by partha1059 Sun, 05/05/2013 - 22:08

ಮಕರರವರಿಗೆ ನಮಸ್ಕಾರಗಳು ಮೂವತ್ತನೆ ಸಾಲನ್ನು ವರ್ಣಿಸುವಾಗ ಮಂಗಲ್ಯ ಕಟ್ಟುವ ಪದ್ದತಿ ವೇದಗಳಲ್ಲಿ ಚರ್ಚಿತವಾಗಿಲ್ಲ ಎನ್ನುವಿರಿ, ಹೌದು ಅದು ಹಾಗೆ ಇತ್ತೀಚೆಗೆ ಮುಸಲ್ಮಾನರು ಭಾರತಕ್ಕೆ ಬಂದ ನಂತರ ಪ್ರಾರಂಬಿಸಿದ ಪದ್ದತಿ ಎಂಬ ವಾದವನ್ನು ಕೇಳಿದ್ದೇನೆ. ಹಾಗಿರುವಾಗ ಒಂದು ಸಹಹ ಅನುಮಾನ , 'ಶ್ರೀ ಲಲಿತ ಸಹಸ್ರನಾಮ ' ರಚನೆಯಾದ ಕಾಲಮಾನ ಯಾವುದಿರಬಹುದು, ವೇದಗಳ ಪೂರ್ವವೊ, ವೇದಗಳ ನಂತರವೊ ಅಥವ ತೀರ ಇತ್ತೀಚೆಗೆ ರಚಿತವೊ ಎನ್ನುವ ದ್ವಂದ್ವ ಕಾಡುತ್ತದೆ

Submitted by makara Sun, 05/05/2013 - 23:19

In reply to by partha1059

ಪಾರ್ಥ ಸರ್,
ತಾಳಿ ಕಟ್ಟುವ ಪದ್ಧತಿ ವೇದಗಳಲ್ಲಿ ಚರ್ಚಿತವಾಗದೇ ಇರುವುದರಿಂದ ಅದು ವೇದೋತ್ತರ ಕಾಲದ್ದು ಎಂದು ೩೦ನೇ ನಾಮದ ವಿವರಣೆಯಲ್ಲಿಯೇ ಹೇಳಲಾಗಿದೆ. ಆದರೆ ಅದು ಖಂಡಿತ ಮುಸಲ್ಮಾನರು ಇಲ್ಲಿಗೆ ಬಂದ ನಂತರ ನಾವು ರೂಢಿಸಿಕೊಂಡ ಪದ್ಧತಿಯಲ್ಲ. ಏಕೆಂದರೆ, ಮುಸಲ್ಮಾನರು ನಮ್ಮ ದೇಶಕ್ಕೆ ಲಗ್ಗೆ ಇಟ್ಟದ್ದೇ ೧೧ನೇ ಶತಮಾನದಲ್ಲಿ. ಆದರೆ ಲಲಿತಾ ಸಹಸ್ರನಾಮವು ಆದಿ ಶಂಕರರ ಕಾಲಮಾನವಾದ ೭ನೇ ಶತಮಾನಕ್ಕಿಂತಲೂ ಮೊದಲೇ ರಚಿಸಲ್ಪಟ್ಟಿತ್ತು. (ಇದಕ್ಕೆ ನಿಮಗೆ ವಿವರಣೆಯು ೪೩ನೇ ನಾಮದ ಚರ್ಚೆಯಲ್ಲಿ ಸಿಗುತ್ತದೆ) ಏಕೆಂದರೆ, ೪೩ನೇ ನಾಮವಾದ ’ಕೂರ್ಮ-ಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ’ ಅಂದರೆ ಕಮಾನಿನಂತಿರುವ ಅವಳ ಪಾದಗಳ ವಕ್ರತೆಯು ಆಮೆಯ ಕವಚಕ್ಕಿಂತ ಹೆಚ್ಚು ಅಂದ ಮತ್ತು ಡೊಂಕುಳ್ಳದ್ದಾಗಿದೆ. ಆದರೆ ಶಂಕರರು ಅವಳ ಪಾದಗಳನ್ನು ಗಟ್ಟಿಯಾದ ಆಮೆಯ ಚಿಪ್ಪಿಗೆ ಹೋಲಿಸಿದ್ದಕ್ಕೆ ತಮ್ಮ ಕೋಪವನ್ನು ತೋರಿಸಿದ್ದಾರೆ. ಸೌಂದರ್ಯ ಲಹರಿಯ ೮೮ನೇ ಶ್ಲೋಕವು, ನಿನ್ನ ಕಾಲ್ಬೆರಳುಗಳು ಈ ಜಗತ್ತನ್ನು ನಿಯಂತ್ರಿಸುವವಾಗಿವೆ (ಅವರು ಪೂರ್ತಿ ಪಾದವನ್ನೂ ಸಹ ವರ್ಣಿಸುತ್ತಿಲ್ಲ ಆದರೆ ಕೇವಲ ಬೆರಳುಗಳ ಬಗ್ಗೆಯಷ್ಟೇ ಹೇಳುತ್ತಿದ್ದಾರೆ). ಸ್ವಾಮಿ ಶಿವನಿಗೆ ಮಾತ್ರ ನಿನ್ನ ಪಾದಗಳ ಮೃದುತ್ವವು ಗೊತ್ತು ಆದ್ದರಿಂದ ಅವನು ನಿನ್ನ ಕಾಲುಗಳನ್ನು ಬಹಳ ಜಾಗ್ರತೆಯಿಂದ ನಿಮ್ಮ ಮದುವೆಯ ಸಮಯದಲ್ಲಿ ಎತ್ತಿ ಹಿಡಿದಿದ್ದಾನೆ. ಅವರಿಗೆ (ವಾಗ್ದೇವಿಗಳಿಗೆ) ಇಂತಹ ಮೃದುವಾದ ಪಾದಗಳನ್ನು ಆಮೆಯ ಚಿಪ್ಪಿಗೆ ಹೋಲಿಸಲು ಅದೆಷ್ಟು ಧೈರ್ಯವಿರಬೇಕು?" ಎನ್ನುತ್ತದೆ. ಇದರಿಂದ ಸಹಸ್ರನಾಮವು ಸೌಂದರ್ಯಲಹರಿಗಿಂತ ಬಹಳ ಪುರಾತನವಾದದ್ದು ಎಂದು ತಿಳಿದು ಬರುತ್ತದೆ. ಆದ್ಧರಿಂದ ಸಹಜವಾಗಿಯೇ ಮಾಂಗಲ್ಯ ಕಟ್ಟುವ ಪದ್ಧತಿಯು ಆದಿ ಶಂಕರರ ಕಾಲಕ್ಕಿಂತಲೂ ಹಿಂದಿನದೆಂದು ನಾವು ಕಡಾಖಂಡಿತವಾಗಿ ಹೇಳಬಹುದು. ಇದರ ಬಗೆಗೆ ಹೆಚ್ಚಿನ ವಿವರಣೆಗಳನ್ನು ಶ್ರೀಯುತ ರವಿಯವರನ್ನೂ ಕೇಳಿ ನೋಡೋಣ.

Submitted by ಗಣೇಶ Sun, 05/05/2013 - 23:50

In reply to by makara

ಶ್ರೀಧರ್‌ಜಿ, ಊರಿಗೆ ಹೋಗಿದ್ದರಿಂದ ಕೆಲದಿನ ನಿಮ್ಮ ಕ್ಲಾಸ್‌ಗೆ ಬರಲಾಗಲಿಲ್ಲ.:) ಆಗಲೇ ೩೧ ಶ್ಲೋಕ ಮುಗಿಸಿ, ಶ್ರೀಚಕ್ರ, ಶ್ರೀವಿದ್ಯಾದ ವಿವರಣೆವರೆಗೆ ತಲುಪಿದ್ದೀರಿ.ಎಲ್ಲವನ್ನೂ ಈದಿನ ಓದಿದೆ. ಇಂಗ್ಲೀಷ್, ಸಂಸ್ಕೃತ,ಹಾಗೂ ಕನ್ನಡದಲ್ಲಿ ಶ್ಲೋಕವನ್ನ ಬರೆದುದು ಅನೇಕರಿಗೆ ಉಪಯೋಗವಾಗುವುದು. ಅರ್ಥ ವಿವರಣೆಯೂ ಚೆನ್ನಾಗಿದೆ. ಓದುಗರು ಎತ್ತಿದ ಪ್ರಶ್ನೆಗಳಿಗೆ ಎಲ್ಲಾ ಸಮಯದಲ್ಲೂ ಉತ್ತರಿಸಲು ತಯಾರಿರುವ ತಮ್ಮ ಗುಣ ನನಗೆ ಇಷ್ಟವಾಯಿತು. ಮೇಲಿನ ಶ್ಲೋಕದಲ್ಲಿ>>>ಕಮಾನಿನಂತಿರುವ ಅವಳ ಪಾದಗಳ ವಕ್ರತೆಯು ಆಮೆಯ ಕವಚಕ್ಕಿಂತ ಹೆಚ್ಚು ಅಂದ ಮತ್ತು ಡೊಂಕುಳ್ಳದ್ದಾಗಿದೆ-ಪಾದದ ಕಮಾನನನ್ನು ಹೋಲಿಸಿದಲ್ಲವಾ? ಪಾದದ ಮೃದುತ್ವ ಅಲ್ವಲ್ಲಾ? ಶಂಕರರು ಯಾಕೆ ಕೋಪಗೊಂಡರು?

Submitted by makara Mon, 05/06/2013 - 07:48

In reply to by ಗಣೇಶ

ನಿಮ್ಮಂತಹ ವಿಶೇಷ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವುದರಿಂದ ವಿನಾಯಿತಿ ಕೊಡಲಾಗಿದೆ, ಗಣೇಶರೆ. ಹಾಗೆಂದು ಶೇಖಡಾ ೬೦ಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಪರೀಕ್ಷೆಗೆ ಅನರ್ಹಗೊಳಿಸಲಾಗುವುದು :))
ನಿಮ್ಮ ಮಾತು ನಿಜ, ವಾಗ್ದೇವಿಗಳು ಪಾದದ ವಕ್ರತೆಯನ್ನು ಆಮೆಯ ಚಿಪ್ಪಿಗೆ ಹೋಲಿಸಿದ್ದಾರೆ ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಶಂಕರರು ಅವರ ಮೇಲೆ ಕೋಪಿಸಿಕೊಂಡಿದ್ದಾರೆ. ನನಗೂ ನಿಮಗೆ ಬಂದ ಅನುಮಾನವೇ ಬಂದಿತ್ತು, {ಬಹುಶಃ ದೊಡ್ಡವರಿಗೆ ಇತರರು ಏನು ಹೇಳುತ್ತಿದ್ದಾರೆಂದು ಕೇಳುವ ವ್ಯವಧಾನವಿಲ್ಲದೇ ತಮ್ಮ ಅಭಿಪ್ರಾಯವನ್ನಷ್ಟೇ ಮಂಡಿಸುತ್ತಾರೆಂದುಕೊಳ್ಳುತ್ತೇನೆ? :(( ಆದರೆ, ಶಂಕರರ ಉದ್ದೇಶ ದೇವಿಯ ಪಾದಗಳು ಎಷ್ಟು ಮೃದುವಾಗಿವೆ ಎಂದು ಹೇಳುವ ಉದ್ದೇಶವಿದ್ದದ್ದರಿಂದ ಅವರು ಬಹುಶಃ ಅದನ್ನು ಹಾಗೆ ಜೋಡಿಸಿರಬೇಕಷ್ಟೆ! }

ಕನ್ನಡಿಗರದು ತ್ರಿಭಾಷಾ ಸೂತ್ರವಲ್ಲವೇ? ಹಾಗಾಗಿ ಇಂಗ್ಲೀಷ್ ಹಾಗೂ ಸಂಸ್ಕೃತಗಳಲ್ಲಿನ ಶ್ಲೋಕದ ಸಾಲುಗಳನ್ನು ಹಾಗೆಯೇ ಉಳಿಸಿದ್ದೇನೆ :))

Submitted by makara Tue, 05/07/2013 - 15:54

ಪಾರ್ಥರೆ, ನೀವು ಎತ್ತಿದ ಮಾಂಗಲ್ಯ ಕಟ್ಟುವ ಪದ್ಧತಿಯ ಕಾಲಮಾನದ ಕುರಿತು ಎತ್ತಿದ ಪ್ರಶ್ನೆಗೆ ಶ್ರೀಯುತ ರವಿಯವರು ತಮ್ಮ ಸೌಂದರ್ಯ ಲಹರಿಯ ೬೯ನೇ ಸ್ತೋತ್ರದ ವಿವರಣೆಯ ಕೊಂಡಿಯನ್ನು ಕೊಟ್ಟಿದ್ದಾರೆ; http://www.manblunder.com/2013/05/saundaryalahari-verse-69.html. ಅವರ ಪ್ರಕಾರ ಎರಡು ರೀತಿಯ ವಿವಾಹ ಪದ್ಧತಿಗಳು ರೂಢಿಯಲ್ಲಿವೆ ಅವುಗಳಲ್ಲಿ ಒಂದು ವೇದೋಕ್ತವಾದರೆ ಮತ್ತೊಂದು ಪುರಾಣೋಕ್ತ. ವೇದೋಕ್ತ ಪದ್ಧತಿಯಲ್ಲಿ ಕನ್ಯಾದಾನ ಮತ್ತು ಸಪ್ತಪದಿ ಮುಖ್ಯವಾದ ಕ್ರಿಯೆಗಳು. ತಾಳಿ ಕಟ್ಟುವ ಕ್ರಿಯೆಯು ಪುರಾಣೋಕ್ತ/ಶಾಸ್ತ್ರಗಳು/ಸ್ಮೃತಿಗಳು ವಿಧಿಸಿದ ಆಚರಣೆಯಾಗಿರಬಹುದು; ಅದಕ್ಕೆ ಪ್ರಸಿದ್ಧವಾದ "ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ, ಸಂತೇ ಭದ್ರಾಣಿ ಶುಭಗೇ" ಮಂತ್ರವೇ ಇದೆ. ಹಿಂದೂ ಮ್ಯಾರೇಜ್ ಆಕ್ಟ್ ಪ್ರಕಾರ ಸಪ್ತಪದಿಯಾದ ನಂತರವೇ ವಿವಾಹವನ್ನು ಮಾನ್ಯ ಮಾಡಬೇಕೆಂದು ಹೇಳುತ್ತದೆ; ಇಲ್ಲಿ ತಾಳಿ ಕಟ್ಟಿದ ಮಾತ್ರಕ್ಕೆ ವಿವಾಹವು ಊರ್ಜಿತವಾಗುವುದಿಲ್ಲ. ಆದ್ದರಿಂದ ತಾಳಿ ಕಟ್ಟುವ ಸಂಪ್ರದಾಯ ವೇದೋತ್ತರವಾದದ್ದೆಂದು ಹೇಳಬಹುದು.
ಇನ್ನು ಲಲಿತಾ ಸಹಸ್ರನಾಮದ ಉಲ್ಲೇಖವು ಬ್ರಹ್ಮಾಂಡ ಪುರಾಣದಲ್ಲಿ ಬರುತ್ತದೆ. ಈ ಸರಣಿಯ ಲಲಿತಾ ಸಹಸ್ರನಾಮದ ಪೂರ್ವಭಾಗ http://sampada.net/blog/%E0%B3%AC-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE%E0%B2%A6-%E0%B2%AA%E0%B3%82%E0%B2%B0%E0%B3%8D%E0%B2%B5%E0%B2%AD%E0%B2%BE%E0%B2%97/20-4-2013/40692 ಲೇಖನವನ್ನು ನೋಡಿ. ಇದರ ಹೊರತು ಲಲಿತಾ ಸಹಸ್ರನಾಮದ ಉಲ್ಲೇಖವು ಇನ್ನೆಲ್ಲಿಯೂ ಇಲ್ಲವೆಂದು ಶ್ರೀಯುತ ವಿ. ರವಿಯವರು ತಿಳಿಸಿರುತ್ತಾರೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 01/26/2014 - 16:18

ಶ್ರೀಧರರೆ, "೧೪. ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯ ರೂಪ ತಮ್ಮ ಪರಿಷ್ಕರಣೆಗೆ :-)
.
ಲಲಿತಾ ಸಹಸ್ರನಾಮ ೨೬ರಿಂದ ೩೧
__________________________________
.
೨೬. ಕರ್ಪೂರವೀಟಿಕಾಮೋಧ-ಸಮಾಕರ್ಷಿ-ದಿಗಂತರಾ
.
ಜ್ಞಾನಿಜನ ಭಕ್ತಿ ಮುಖೇನ, ಅಮಾಯಕರ ಅಜ್ಞಾನ ಘನ
ಕರ್ಪೂರವೀಟಿಕಾಸುಗಂಧವ, ದೇವಿ ಪಸರಿಸಿ ಆಕರ್ಷಣ
ಕೇಸರಿ ಏಲಕ್ಕೀ ಲವಂಗ ಕಸ್ತೂರಿ ಜಾಪತ್ರೆ ಜಾಕಾಯಿಗೆ
ಕಲ್ಲುಸಕ್ಕರೆಪುಡಿ ತಾಂಬೂಲದೆ ಪರಿಮಳಿಸೊ ತಾಯಿಗೆ ||
.
೨೭. ನಿಜ-ಸಲ್ಲಾಪ-ಮಾಧುರ್ಯ-ವಿನಿರ್ಭರ್ತ್ಸಿತ-ಕಚ್ಛಪೀ 
.
ಆಲಿಸುತಿಹ ಭಕ್ತ ಕೋಟಿಗೆ, ಸುಶ್ರಾವ್ಯ ಮಧುರ ಕರ್ಣಾನಂದ
ಕಲಾಧಿದೇವತೆ ಸರಸ್ವತಿ ಕಚ್ಛಪಿ ವೀಣೆಗೂ ಮೀರಿದ ಸುನಾದ
ಲಲಿತೆಯನೋಲೈಸಲೆ ಶಿವಲೀಲೆ ನುಡಿಸಿದರು ವೀಣಾಪಾಣಿ
ದೇವಿನುಡಿ ಝೇಂಕಾರಕೆ ನಾಚಿ ಸಂದೂಕ ಸೇರಿಸುವಳೆ ವಾಣಿ ||
.
೨೮. ಮಂದಸ್ಮಿತ-ಪ್ರಭಾಪೂರ-ಮಜ್ಜತ್ಕಾಮೇಶ-ಮಾನಸಾ 
.
ಕಿರುನಗೆಯ ಮಂದಸ್ಮಿತ, ಅಜ್ಞಾನಿಗಾಕರ್ಷಿಸಿ ನೀಡೆ ಜ್ಞಾನ
ಲಲಿತೆಯ ಸಮ್ಮೋಹಕ ನಗೆಯಲಿ, ಪರಶಿವನೆ ಆಗಿ ಲೀನ
ಕಾಮೇಶ್ವರನ ಕಾಮೇಶ್ವರಿ ಲಲಿತೆ, ಕೂತಳೆ ಶಿವನೆಡತೊಡೆ
ಮನಸಾಗಿ ಆಸೆಯೆಲ್ಲದರ ಮೂಲ, ಭಕ್ತರಾಶೆಯಾಗಿ ಕಾಡೆ ||
.
೨೯. ಅನಾಕಲಿತ-ಸಾದೃಶ್ಯ-ಚಿಬುಕ-ಶ್ರೀ-ವಿರಾಜಿತಾ 
.
ಸೌಂದರ್ಯದ ಅಧಿದೇವತೆ, ದೇವಿ ಲಲಿತೆಯ ಸ್ಪರ್ಶ
ಕಾತುರತೆಯಲಿ ಶಿವನ ಮುಂಗೈ, ಗದ್ದವನ್ಹಿಡಿದ ದೃಶ್ಯ 
ಆಧರಾಮೃತ ಲಹರಿ, ಸಮ್ಮೋಹನಗೊಳಿಸುವಾ ಪರಿ
ಶರಣಾಯ್ತೆ ಪುರುಷಾ ಪ್ರಕೃತಿ, ಸಮನ್ವಯದ ಕುಸುರಿ ||
.
೩೦. ಕಾಮೇಶ-ಬದ್ಧ-ಮಾಂಗಲ್ಯ-ಸೂತ್ರ-ಶೋಭಿತ-ಕಂಧರಾ 
.
ದೇವಿ ಕೊರಳನಲಂಕರಿಸಿದ ಮಂಗಳ ಸೂತ್ರ
ಪ್ರಿಯಕಾಮೇಶ್ವರ ದೇವಿಗದೆಷ್ಟು ಪ್ರೀತಿ ಪಾತ್ರ
ಸೂಕ್ಷ್ಮಗೆರೆಯಂಚು ಕತ್ತಿನಾ ನತ್ತಾಗಿ ಮೂರೆಳೆ
ಎಲ್ಲೆ ಮೀರಿದಿಂಪು ರಾಗಭಂಡಾರ ಸುರಿಮಳೆ ||
.
೩೧. ಕನಕಾಂಗದ-ಕೇಯೂರ-ಕಮನೀಯ-ಭುಜಾನ್ವಿತ
.
ಬಂಗಾರದ ಬಳೆ ಕಡಗ ತೋಳ್ಬಂದಿ ಆಭರಣಗಳ ಸಹಿತ
ಉಜ್ವಲ ಮೈಕಾಂತಿಸಮೇತ ಸುವರ್ಣಕಾಂತಿ ರಾರಾಜಿತ
ಹೊಳೆವ ಆಕಾರಗಳನೇಕ ಅಂತಃಸತ್ವವಾದಂತೇ ಏಕೈಕ
ಜೀವಿಗಳನೇಕ ಅಂತರ್ಗತ, ಪರಬ್ರಹ್ಮವೇಕವೆನ್ನೆ ಸಾಧಕ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು