೩೩. ಶ್ರೀ ಲಲಿತಾ ಸಹಸ್ರನಾಮ ೮೩ ಮತ್ತು ೮೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೮೩-೮೪
Brahamopendra-mahendrādi-devasaṃstuta-vaibhavā ब्रहमोपेन्द्र-महेन्द्रादि-देवसंस्तुत-वैभवा (83)
೮೩. ಬ್ರಹ್ಮೋಪೇಂದ್ರ-ಮಹೇಂದ್ರಾದಿ-ದೇವಸಂಸ್ತುತ-ವೈಭವಾ
ವಿಜಯಶಾಲಿಯಾದ ಶ್ರೀ ಲಲಿತೆಯನ್ನು ಬ್ರಹ್ಮ, ವಿಷ್ಣು (ಉಪೇಂದ್ರನೆಂದರೆ ವಿಷ್ಣುವೇ - ವಿಷ್ಣು ಸಹಸ್ರನಾಮ ೫೭ನೇ ನಾಮಾವಳಿಯನ್ನು ನೋಡಿ) ಮತ್ತು ಮಹೇಂದ್ರ (ಶಿವನ ಒಂದು ರೂಪ) ಮತ್ತು ಇತರೇ ದೇವತೆಗಳಾದ ಇಂದ್ರ ಮೊದಲಾದವರು ಸ್ತುತಿಸಿದರು (ಹೊಗಳಿದರು). ಲಲಿತೆಯು ಪರಮೋನ್ನತ ಶಕ್ತಿಯಾಗಿರುವುದರಿಂದ ಬ್ರಹ್ಮ, ವಿಷ್ಣು, ಶಿವ ಮೊದಲಾದ ದೇವತೆಗಳು ಅವಳನ್ನು ಸ್ತುತಿಸುತ್ತಾರೆ. ಸಂಸ್ತುತ ಎಂದರೆ ಹೊಗಳಿಕೆ ಮತ್ತು ಸಂಸ್ತುತ ಎಂದರೆ ಆಂತರ್ಯದಲ್ಲಿ ಎಂದೂ ಅರ್ಥ. ವೈಭವ ಎಂದರೆ ವಿಶ್ವ ವ್ಯಾಪಕವಾದದ್ದೆಂದು ಅರ್ಥ. ದೇವಿಯು ಪರಮಾತ್ಮಳೆಂದು ಕರೆಯಲ್ಪಡುವುದರಿಂದ ಅವಳು ಎಲ್ಲರಿಂದಲೂ ಪೂಜೆಗೊಳ್ಳುತ್ತಾಳೆ. ದೇವಿಯು ಸರ್ವಾಂತರ್ಯಾಮಿ ಆಗಿರುವುದರಿಂದ ಅವಳ ಇರುವಿಕೆಯನ್ನು ಆಂತರಿಕವಾಗಿ (ಮಾನಸಿಕವಾಗಿ) ಮತ್ತು ಬ್ಯಾಹ್ಯವಾಗಿ (ಇಂದ್ರಿಯಗಳ ಮೂಲಕ) ವಿವರಿಸಿಲಾಗಿದೆ. ಬ್ರಹ್ಮವು ಸರ್ವತ್ರ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಇರುತ್ತದೆ. ಈ ಅಂಶವನ್ನು ಮುಂದಿನ ನಾಮದಲ್ಲಿಯೂ ಚರ್ಚಿಸಲಾಗಿದೆ. ಚಲನಶೀಲ (ಕ್ರಿಯಾ ಶೀಲ)ಶಕ್ತಿಯನ್ನು ಇಲ್ಲಿ ವಿವರಿಸಲಾಗಿದೆ.
Haranetrāgni-sandagdha-kāmasaṃjīvanauṣadhīḥ हरनेत्राग्नि-सन्दग्ध-कामसंजीवनौषधीः (84)
೮೪. ಹರನೇತ್ರಾಗ್ನಿ-ಸಂದಗ್ಧ-ಕಾಮಸಂಜೀವನೌಷಧೀಃ
ಪ್ರೇಮದ ಅಧಿದೇವತೆಯಾದ ಕಾಮನು ಶಿವನ ಮೂರನೇ ಕಣ್ಣಿನಿಂದ ಸುಡಲ್ಪಟ್ಟಿದ್ದನು. ಶಕ್ತಿಯು ಮನ್ಮಥನನ್ನು ಪುನರುತ್ಥಾನಗೊಳಿಸಿದಳು. ಸಂಜೀವಿನಿ ಎನ್ನುವುದು ಮರುಜೀವ ಕೊಡುವ ಒಂದು ಔಷದೀಯ ಸಸ್ಯವಾಗಿದೆ. ಆದ್ದರಿಂದ ಅವಳನ್ನು ಕಾಮನನ್ನು ಬದುಕಿಸಿದ ಸಂಜೀವಿನಿ ಎಂದು ಹೊಗಳಿದ್ದಾರೆ. ಶ್ರೀ ಲಲಿತೆಯ ತಾಯ್ತನದ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ. ಮನ್ಮಥನು ಶಿವ ಮತ್ತು ಶಕ್ತಿಯರ ಮಗ. ಯಾವಾಗ ತಂದೆಯು ಮಗನ ಮೇಲೆ ಕೋಪಗೊಳ್ಳುತ್ತಾನೆಯೋ ಆಗ ತಾಯಿಯು ಮಗನ ರಕ್ಷಣೆಗೆ ಓಡಿ ಬರುತ್ತಾಳೆ. ಯಾವಾಗ ಶಿವನು ಮನ್ಮಥನ ಮೇಲೆ ಕೋಪಗೊಂಡನೋ ಆಗ ಲಲಿತಾಂಬಿಕೆಯು ಅವನ ರಕ್ಷಣೆಗೆ ಬಂದಳು. ಶಿವನು ಶಿಸ್ತಿನ ಸಿಪಾಯಿಯಾಗಿದ್ದಾನೆ.
ಒಂದು ಹೇಳಿಕೆಯಿದೆ, ಅದೇನೆಂದರೆ ಶಿವನು ಕೋಪಗೊಂಡರೆ ಗುರುವು ಕಾಯುತ್ತಾನೆ; ಆದರೆ ಗುರುವೇ ಕೋಪಗೊಂಡರೆ ಶಿವನಿಂದ ಅದು ಸಾಧ್ಯವಿಲ್ಲ ಮತ್ತು ಅವನು ಅದನ್ನು ಮಾಡುವುದಿಲ್ಲ. ಹರ ಕೊಲ್ಲಲ್ ಗುರು ಕಾಯ್ವನು, ಗುರು ಕೊಲ್ಲಲ್ ಹರ ಕಾಯ್ವನೇ?. ಇಲ್ಲಿ ಶ್ರೀ ಲಲಿತೆಯು ಗುರುವಿನ ರೂಪದಲ್ಲಿದ್ದಾಳೆ ಇದಕ್ಕೆ ೬೦೩ನೇ ನಾಮವು ಪೂರಕವಾಗಿದೆ. ಶಿವನು ಮನ್ಮಥನ ಮೇಲೆ ಕೋಪಗೊಂಡು ಅವನನ್ನು ಭಸ್ಮ ಮಾಡಿದನು. ಆದರೆ ಲಲಿತೆಯು ಗುರುವಾಗಿ ಮನ್ಮಥನನ್ನು ಸಂರಕ್ಷಿಸಿದಳು. ಈ ವ್ಯಾಖ್ಯಾನವು ಸಾಮಾನ್ಯ ಹೇಳಿಕೆಯಾದ, ಪರಮಶಿವನು ಪರಮಗುರು ಅಥವಾ ಆದಿ ಗುರು ಎನ್ನುವ ಹೇಳಿಕೆಗೆ ವ್ಯತಿರಿಕ್ತವಾಗಿದೆ. ಆದರೆ ಶಿವನು ಶ್ರೀ ಚಕ್ರದ ಗುರುಮಂಡಲದಲ್ಲಿ”ಪರಮಶಿವ - ಆನಂದನಾಥ’ ನಾಗಿ ಪೂಜಿಸಲ್ಪಡುತ್ತಾನೆ.
ಹರ ಎಂದರೆ ಆತ್ಮದ ನೈಜ ಸ್ವಭಾವ ಎನ್ನುವ ಅರ್ಥವೂ ಇದೆ. ನೇತ್ರ ಎಂದರೆ ದಾರಿ ತೋರಿಸುವುದು ಎಂದೂ ಅರ್ಥವಿದೆ. ಅಗ್ನಿ ಎಲ್ಲಾ ಕಡೆಯೂ ಇದ್ದು ಅದು ವಿನಾಶವನ್ನೂ ಉಂಟುಮಾಡುತ್ತದೆ (ಸೃಷ್ಟಿಯ ಜೊತೆಗೆ ವಿನಾಶವು ಅಗ್ನಿಯ ಒಂದು ಕ್ರಿಯೆಯಾಗಿದೆ). ಶಿವ ಸೂತ್ರವು, ಯೋಗಿಯ ಚಿತ್ತವು ಯಾವಾಗಲೂ ಒಳಮುಖವಾಗಿ ಮತ್ತು ಹೊರಮುಖವಾಗಿ ಎರಡೂ ರೀತಿಯಲ್ಲಿರುತ್ತದೆ ಎಂದು ಹೇಳಿ ಕೊನೆಗೊಳ್ಳುತ್ತದೆ. ಅಗ್ನಿಯೂ ಕೂಡಾ ಯಾವಾಗಲೂ ಒಳಮುಖವಾಗಿ ಮತ್ತು ಹೊರಮುಖವಾಗಿ ಇರುತ್ತದೆ. ಅಗ್ನಿಯು ದೇವರ ಮೂರೂ ಕ್ರಿಯೆಗಳಲ್ಲಿ ಇರುತ್ತದೆ. ಆದ್ದರಿಂದ ಹರನೇತ್ರಾಗ್ನಿ ಎಂದರೆ ಯಾವುದು ಆತ್ಮಸಾಕ್ಷಾತ್ಕಾರದ ದಾರಿಯನ್ನು ತೋರಿಸುತ್ತದೋ ಮತ್ತು ಸಾಕ್ಷಾತ್ಕಾರಕ್ಕೆ ತೊಡಕಾಗಿರುವ ಕಾಮವನ್ನು (ಆಸೆಗಳನ್ನು) ಸುಡುತ್ತದೆಯೋ ಅದು. ಅಗ್ನಿಯು ಸರ್ವಾಂತರ್ಯಾಮಿ ಎನ್ನುವುದರಿಂದ ಅಜ್ಞಾನವು ಎಲ್ಲಾ ಕಡೆ ಇದೆ ಎಂದರ್ಥ; ಏಕೆಂದರೆ ಅಜ್ಞಾನವಿರುವುದರಿಂದ ಅಗ್ನಿಯ ಇರುವಿಕೆಯು ಅದನ್ನು ತೊಡೆದು ಹಾಕುತ್ತದೆ. ಅಜ್ಞಾನವನ್ನು ಕತ್ತಲೆಗೆ ಹೋಲಿಸಲಾಗಿದ್ದು, ಅಗ್ನಿಯು ಆ ಕತ್ತಲೆಯನ್ನು ಹೋಗಲಾಡಿಸುತ್ತದೆ.
ಇಲ್ಲಿನ ಗೂಡಾರ್ಥವೇನೆಂದರೆ, ಅಜ್ಞಾನ ಅಥವಾ ಅವಿದ್ಯೆಯನ್ನು ಹೋಗಲಾಡಿಸುಕೊಳ್ಳುವುದರಿಂದ ಅಂತರಾತ್ಮದ ತಿಳುವಳಿಕೆಯುಂಟಾಗಿ ಮುಕ್ತಿ ಎನ್ನುವುದರ ಅರಿವುಂಟಾಗುತ್ತದೆ. ಯಾವಾಗ ಅಜ್ಞಾನವು ತೊಡೆದು ಹಾಕಲ್ಪಡುತ್ತದೆಯೋ ಆಗ ಕೇವಲ ಜ್ಞಾನ ಅಥವಾ ವಿದ್ಯೆ ಮಾತ್ರ ಉಳಿಯುತ್ತದೆ. ಆದ್ದರಿಂದ ಶ್ರೀ ಲಲಿತೆಯ ಉಪಾಸನೆಯನ್ನು ’ಶ್ರೀ ವಿದ್ಯಾ’ ಎಂದು ಕರೆದಿದ್ದಾರೆ. ಮನ್ಮಥನನ್ನು ಭಸ್ಮ ಮಾಡುವುದು ಅವಿದ್ಯೆಯನ್ನು ನಾಶಗೊಳಿಸುವುದಾದರೆ, ಅವನಿಗೆ ಮರುಹುಟ್ಟು ನೀಡುವುದು ವಿದ್ಯೆಯಾಗಿದೆ. ಮನ್ಮಥನು ಸಾಯುವುದಕ್ಕೆ ಮುಂಚೆ ಅಹಂಕಾರದಿಂದ ಕೂಡಿದ ಅವಿದ್ಯೆಯ ಮೂರ್ತರೂಪವಾಗಿದ್ದ, ಮರು ಜೀವ ಪಡೆದ ಮನ್ಮಥನು ಶುದ್ಧ ಜ್ಞಾನವನ್ನು ಪಡೆದವನಾದ. ಅವನ ಅಹಂಕಾರವು ಶಿವನಿಂದ ಭಸ್ಮ ಮಾಡಲ್ಪಟ್ಟರೆ ಅವನಿಗೆ ಜ್ಞಾನವನ್ನು ಶಕ್ತಿಯು ಪ್ರಸಾದಿಸಿದಳು.
ಈ ನಾಮವು ಬಹುಶಃ ಮೂರನೆಯ ಕಣ್ಣಾದ ಆಜ್ಞಾ ಚಕ್ರದ ಶಕ್ತಿಯ ಕುರಿತಾಗಿ ಇರಬಹುದು ಏಕೆಂದರೆ ಇದರ ಮೂಲಕ ಪರಮಗುರುವಾದ ಶಿವನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಹಾನ್ ಋಷಿ ಮುನಿಗಳ ಮೂಲಕ ತನ್ನ ಭಕ್ತರಿಗೆ ಆತ್ಮಸಾಕ್ಷಾತ್ಕಾರದ ಕುರಿತಾಗಿ ಆಜ್ಞೆಯನ್ನು ಕೊಡುತ್ತಾನೆ. ಒಬ್ಬನು ನೇತ್ರದ ಉಪಯೋಗಕ್ಕೆ ಮಹತ್ವವನ್ನು ಕೊಟ್ಟರೆ ಅದು ಖಂಡಿತವಾಗಿ ಮೂರನೆಯ ಕಣ್ಣು ಅಥವಾ ಆಜ್ಞಾ ಚಕ್ರದ ಕುರಿತಾಗಿರುತ್ತದೆ. ಆಜ್ಞಾ ಚಕ್ರದಲ್ಲಿ ಎರಡು ನಾಡಿಗಳಾದ ಇಡಾ ಮತ್ತು ಪಿಂಗಳ ನಾಡಿಗಳು ಸುಷುಮ್ನ ನಾಡಿಯನ್ನು ಸಂಧಿಸುತ್ತವೆ. ಸುಷುಮ್ನವನ್ನು ಬ್ರಹ್ಮನಾಡಿಯೆಂದು ಪರಿಗಣಿಸಲಾಗಿದೆ. ಇಡಾ ಮತ್ತು ಪಿಂಗಳಗಳು ಜೀವಿ ಅಥವಾ ಆತ್ಮನನ್ನು ಸೂಚಿಸಬಹುದು. ಆತ್ಮವು ಪರಮಾತ್ಮನೊಂದಿಗೆ ಲೀನವಾಗುವುದನ್ನು ಆತ್ಮ ಸಾಕ್ಷಾತ್ಕಾರವೆನ್ನುತ್ತಾರೆ. ಈ ನಾಮದಲ್ಲಿ ಆತ್ಮಸಾಕ್ಷಾತ್ಕಾರದ ಬಗ್ಗೆ ಹೇಳಲ್ಪಟ್ಟಿದೆ.
ಸೌಂದರ್ಯ ಲಹರಿಯು (ಶ್ಲೋಕ ೧) ಹೀಗೆ ಪ್ರಾರಂಭವಾಗುತ್ತದೆ, "ಶಿವನು ಈ ಪ್ರಪಂಚವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಅವನು ಶಕ್ತಿಯೊಂದಿಗೆ ಸಂಯೋಗ ಹೊಂದಿದಾಗ ಮಾತ್ರ ಸಾಧ್ಯವಾಗುತ್ತದೆ ಇಲ್ಲವಾದರೆ ಅವನಿಂದ ಸಂವೇದನೆಯನ್ನು ವ್ಯಕ್ತಪಡಿಸಲೂ ಸಾಧ್ಯವಾಗದು". ಈ ನಾಮದೊಂದಿಗೆ ಭಂಡಾಸುರನೊಂದಿಗಿನ ಯುದ್ಧವು ಅಂತ್ಯಗೊಳ್ಳುತ್ತದೆ. ಶ್ರೀ ಲಲಿತೆಯ ಮಂತ್ರ ರೂಪದ ವಿವರಣೆಯು ಮುಂದಿನ ನಾಮಗಳಿಂದ ಪ್ರಾರಂಭವಾಗುತ್ತದೆ.
******
Comments
ಶ್ರೀಧರರೆ, ನಾ ಗ್ರಹಿಸಿದ ಪಾಮರ
ಶ್ರೀಧರರೆ, ನಾ ಗ್ರಹಿಸಿದ ಪಾಮರ ಸಾರಾಂಶ : (ಅರ್ಧ ವಿರಾಮವೆಂದರೆ, ಮುಂದಿನ ಸಾಲೆಂದು ಕಲ್ಪಿಸಿಕೊಳ್ಳುತ್ತ)
ಭಸ್ಮವಾಗಲೆ ಶಿವನಿಂದ ಕಾಮನ ಅವಿದ್ಯೆ,
ಮರು ಜನ್ಮವೆ ಮನ್ಮಥಗೆ ದೇವಿಯ ವಿದ್ಯೆ,
ಸುಟ್ಟುರಿದ ಮೇಲೆಲ್ಲಿ ಅಹಂಕಾರ ಅವಿದ್ಯೆ,
ಹೊಸ ಅರಿವಾಗಿ ಹುಟ್ಟಿತೆ ಜ್ಞಾನದ ಮಧ್ಯೆ!
ಆಜ್ಞಾ ಚಕ್ರದ ನಾಡಿ ಇಳಾ ಪಿಂಗಳ ಜೋಡಿ,
ಸಂಧಿಸಿದಾಗ ಸುಷುಮ್ನ ಜತೆಗೆ ಬ್ರಹ್ಮ ನಾಡಿ,
ಲೀನವಾಗೆ ಆತ್ಮ ಪರಮಾತ್ಮದೊಳಗೆ ಸಾರ,
ಇದು ತಾನೆ ಬೆಳಕಾಗೊ ಆತ್ಮ ಸಾಕ್ಷಾತ್ಕಾರ!
ಸೃಷ್ಟಿಯಾಗೆ ಪ್ರಪಂಚ ಶಿವ ತಾನೆ ಪುರುಷ,
ಪ್ರಕೃತಿ ಶಕ್ತಿ ಜತೆ ಸಂಯೋಗಾ ಪೀಯೂಷ,
ಘಟಿಸದಿರೆ ಸಂಕಲ್ಪ ಸಂವೇದನೆಗು ಅವ್ಯಕ್ತ,
ಸೃಷ್ಟಿಗೆ ಚಿತ್ತ ಶಿವ ಶಕ್ತಿಯಾಗಿದ್ದರೆ ಸಂಯುಕ್ತ!
-ನಾಗೇಶ ಮೈಸೂರು, ಸಿಂಗಪುರದಿಂದ
In reply to ಶ್ರೀಧರರೆ, ನಾ ಗ್ರಹಿಸಿದ ಪಾಮರ by nageshamysore
೮೩ ಮತ್ತು ೮೪ನೇ ನಾಮದ ಸಾರಂಶವ
೮೩ ಮತ್ತು ೮೪ನೇ ನಾಮದ ಸಾರಂಶವ ಹಿಡಿದಿಟ್ಟಿದ್ದೀರ ಸೊಗಸಿನಲಿ ನಿಮ್ಮ ಕಾವ್ಯದಲಿ,
ಕಾಣುತಿಹುದು ಒಂದು ಸಣ್ಣ ಕಾಗುಣಿತ ದೋಷ? ಎರಡನೇ ಪಂಕ್ತಿಯ ಈ ಮೊದಲ ಸಾಲಿನಲಿ;
ಆಜ್ಞಾ ಚಕ್ರದ ನಾಡಿ ಇಳಾ ಪಿಂಗಳ ಜೋಡಿ, ಅದು ಆಗಲಿ ಆಜ್ಞಾ ಚಕ್ರದಿ ನಾಡಿ ಇದಾ ಪಿಂಗಳಾ ಜೋಡಿ,
ನಾಗೇಶರೆ, ಪ್ರತಿಕ್ರಿಯೆಯೊಡನೆ ಹೀಗೆಯೇ ಸಾಗಲಿ ನಿಮ್ಮ ರಸಾನುಭೂತಿಯ ಕಾವ್ಯ ಮೋಡಿ :))
In reply to ೮೩ ಮತ್ತು ೮೪ನೇ ನಾಮದ ಸಾರಂಶವ by makara
ಶ್ರೀಧರರವರೆ, ತಪ್ಪು ತಿದ್ದಿದ
ಶ್ರೀಧರರವರೆ, ತಪ್ಪು ತಿದ್ದಿದ ಅವತರಣಿಕೆ ಇಲ್ಲಿದೆ - ಮೂಲದಲ್ಲಿ ಇಡಾ ಎಂದಿರುವುದರಿಂದ ಅದನ್ನೆ ಬಳಸಿದ್ದೇನೆ ( ನಿಮ್ಮ ಸಲಹೆಯಲ್ಲಿ ಇದಾ ಆಗಿತ್ತು - ಯಥಾರೀತಿ ಕಾಗುಣಿತದ ಕುಣಿತವೆಂದು ಕಾಣುತ್ತದೆ !) - ನಾಗೇಶ ಮೈಸೂರು, ಸಿಂಗಪುರದಿಂದ
ಭಸ್ಮವಾಗಲೆ ಶಿವನಿಂದ ಕಾಮನ ಅವಿದ್ಯೆ,
ಮರು ಜನ್ಮವೆ ಮನ್ಮಥಗೆ ದೇವಿಯ ವಿದ್ಯೆ,
ಸುಟ್ಟುರಿದ ಮೇಲೆಲ್ಲಿ ಅಹಂಕಾರ ಅವಿದ್ಯೆ,
ಹೊಸ ಅರಿವಾಗಿ ಹುಟ್ಟಿತೆ ಜ್ಞಾನದ ಮಧ್ಯೆ!
ಆಜ್ಞಾ ಚಕ್ರದಿ ನಾಡಿ ಇಡಾ ಪಿಂಗಳ ಜೋಡಿ,
ಸಂಧಿಸಿದಾಗ ಸುಷುಮ್ನ ಜತೆಗೆ ಬ್ರಹ್ಮ ನಾಡಿ,
ಲೀನವಾಗೆ ಆತ್ಮ ಪರಮಾತ್ಮದೊಳಗೆ ಸಾರ,
ಇದು ತಾನೆ ಬೆಳಕಾಗೊ ಆತ್ಮ ಸಾಕ್ಷಾತ್ಕಾರ!
ಸೃಷ್ಟಿಯಾಗೆ ಪ್ರಪಂಚ ಶಿವ ತಾನೆ ಪುರುಷ,
ಪ್ರಕೃತಿ ಶಕ್ತಿ ಜತೆ ಸಂಯೋಗಾ ಪೀಯೂಷ,
ಘಟಿಸದಿರೆ ಸಂಕಲ್ಪ ಸಂವೇದನೆಗು ಅವ್ಯಕ್ತ,
ಸೃಷ್ಟಿಗೆ ಚಿತ್ತ ಶಿವ ಶಕ್ತಿಯಾಗಿದ್ದರೆ ಸಂಯುಕ್ತ!
-ನಾಗೇಶ ಮೈಸೂರು, ಸಿಂಗಪುರದಿಂದ
In reply to ಶ್ರೀಧರರವರೆ, ತಪ್ಪು ತಿದ್ದಿದ by nageshamysore
ಇಡಾ ಅಥವಾ ಇದಾ? ನನಗೂ ಈ ಎರಡು
ಇಡಾ ಅಥವಾ ಇದಾ? ನನಗೂ ಈ ಎರಡು ಪ್ರಯೋಗಗಳ ಬಗ್ಗೆ ಸ್ವಲ್ಪ ಗೊಂದಲವಿದೆ. ನೋಡುತ್ತೇನೆ ಅದರ ವಿವರಗಳು ಯಾವುದಾದರೂ ಕನ್ನಡ ಗ್ರಂಥಗಳಲ್ಲಿ ಸಿಕ್ಕರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ. ಏಕೆಂದರೆ ಇಂಗ್ಲೀಷಿನಲ್ಲಿ Ida ಎಂದಾಗ ಅದು ಇದಾ ಅಥವಾ ಇಡಾ ಎರಡೂ ಆಗಬಹುದು! ಇದನ್ನು ಬದಗಿರಿಸಿದರೆ, ಕಾವ್ಯದ ಆಶಯಕ್ಕೆ ಯಾವುದೇ ದಕ್ಕೆಯಾಗುವುದಿಲ್ಲವೆಂದುಕೊಳ್ಳುತ್ತೇನೆ. ಒಟ್ಟಾರೆಯಾಗಿ ಕಾವ್ಯ ಚೆನ್ನಾಗಿ ಮೂಡಿ ಬಂದಿದೆ, ಅಭಿನಂದನೆಗಳು ನಾಗೇಶರೆ.
In reply to ಇಡಾ ಅಥವಾ ಇದಾ? ನನಗೂ ಈ ಎರಡು by makara
ಇಡಾನೇ ಸರಿ. ಶ್ರೀಧರ್ಜಿ, ಫಸ್ಟ್
ಇಡಾನೇ ಸರಿ. ಶ್ರೀಧರ್ಜಿ, ಫಸ್ಟ್ ಬೆಂಚಿನ ಬುದ್ಧಿವಂತ ವಿದ್ಯಾರ್ಥಿ ನಿಮ್ಮ ಪಾಠ ಮುಗಿಯುವುದರೊಳಗೆ ಅದಕ್ಕೆ ತಕ್ಕ ಕವನನೂ ಬರೆದಾಯಿತು! ನಾನಿನ್ನೂ ೧೦ ಪಾಠ ಹಿಂದೇ ಇದ್ದೇನೆ:(
In reply to ಇಡಾನೇ ಸರಿ. ಶ್ರೀಧರ್ಜಿ, ಫಸ್ಟ್ by ಗಣೇಶ
ಗಣೇಶ ಜಿ, ನಿಮ್ಮದು ಸ್ಲೊ &
ಗಣೇಶ ಜಿ, ನಿಮ್ಮದು ಸ್ಲೊ & ಸ್ಟೆಡಿ ರೇಸು - ಆಮೆ, ಮೊಲದ ಕಥೆ ತರ ಕೊನೆಗೆ ಫಸ್ಟ್ ಬರೋದು ನೀವೆ. ಫಸ್ಟ್ ಬೆಂಚ್ ಸ್ಟೂಡೆಂಟು ಕಥೆ ' ಅವಸರವೆ ಅಪಘಾತಕ್ಕೆ ಕಾರಣ ' ಅನ್ನೊ ಹಾಗೆ ಆಗದಿದ್ರೆ ಸಾಕು! ಶ್ರೀಧರ ಟೀಚರ್ ಬೊಂಬೋಟ್ ಇರೋದ್ರಿಂದ, ಇಬ್ಬರನ್ನು ಪಾಸ್ ಮಾಡಿಸ್ತಾರೆ ಅನ್ಕೊಂಡಿದೀನಿ!! - ನಾಗೇಶ ಮೈಸೂರು, ಸಿಂಗಪುರದಿಂದ
@ಗಣೇಶ್. ಜಿ & @ ನಾಗೇಶ್
@ಗಣೇಶ್. ಜಿ & @ ನಾಗೇಶ್
ಎಲ್ಲಿ ಕುಳಿತುಕೊಳ್ತಾರೆ ಅನ್ನೋದು ಮುಖ್ಯ ಅಲ್ಲಾ ಎಷ್ಟು ತಿಳ್ಕೋತಾರೆ ಅನ್ನೋದು ಮುಖ್ಯ ಅಲ್ವಾ! ಶ್ರೀಧರ್ ಮಾಸ್ತರು ಒಂದು ಕೈಮರ ಅಷ್ಟೇ! ದಾರಿಯನ್ನು ಕ್ರಮಿಸಬೇಕಾದವರು ನೀವೇ ಆದ್ದರಿಂದ ಪಾಸಾಗುವುದು ನಿಮ್ಮ ಕೈಯ್ಯಲ್ಲೇ ಇದೆ. ಜಗನ್ಮಾತೆಯ ಕೃಪೆ ನಿಮ್ಮ ಮೇಲಿರಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to @ಗಣೇಶ್. ಜಿ & @ ನಾಗೇಶ್ by makara
ಇಡಾದ ಸರಿಯಾದ ರೂಪವನ್ನು ತಿಳಿಸಿ
ಇಡಾದ ಸರಿಯಾದ ರೂಪವನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು, ಗಣೇಶ್..ಜಿ.
ಇಡಾ ಪಿಂಗಳ ಇತ್ಯಾದಿ ನಾಡಿ ಹಾಗು
ಇಡಾ ಪಿಂಗಳ ಇತ್ಯಾದಿ ನಾಡಿ ಹಾಗು ಚಕ್ರಗಳು
ಇಡಾ ಪಿಂಗಳ ಇತ್ಯಾದಿ ನಾಡಿ ಹಾಗು ಚಕ್ರಗಳು
In reply to ಇಡಾ ಪಿಂಗಳ ಇತ್ಯಾದಿ ನಾಡಿ ಹಾಗು by partha1059
<a href="http://kn.wikipedia
ಇಡಾ ಪಿಂಗಳ ಚಕ್ರ ನಾಡಿ ಇತ್ಯಾದಿ
In reply to <a href="http://kn.wikipedia by partha1059
ನೀವು ಸೂಚಿಸಿರುವ ಎರಡೂ ಕೊಂಡಿಗಳು
ನೀವು ಸೂಚಿಸಿರುವ ಎರಡೂ ಕೊಂಡಿಗಳು ತೆರೆದುಕೊಳ್ಳುತ್ತಿಲ್ಲ; ಆದರೇನಂತೆ ಇಡಾ ಎನ್ನುವುದು ಸರಿಯಾದ ರೂಪವೆನ್ನುವುದನ್ನು ಸ್ಪಷ್ಟ ಪಡಿಸಿದ್ದಕ್ಕೆ ಧನ್ಯವಾದಗಳು, ಪಾರ್ಥ ಸರ್.